ಪಬ್ಲಿಕ್ ಅಲರ್ಟ್
ಮೈಸೂರು: ತಮ್ಮ ನಿರ್ದೇಶನದ ಮೂರನೇ ಚಿತ್ರವಾದ ದೊಡ್ಡಹಟ್ಟಿ ಬೋರೇಗೌಡ ರಾಜ್ಯ ವಾರ್ಷಿಕ ಚಲನಚಿತ್ರ ಪ್ರಶಸ್ತಿ ಘೋಷಣೆಯಲ್ಲಿ ಮೊದಲನೇ ಅತ್ಯುತ್ತಮ ಚಲನಚಿತ್ರವೆಂದು ಆಯ್ಕೆಯಾಗಿದೆ ಎಂದು ಕೆ.ಎಂ. ರಘು ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಡನೆ ಮಾತನಾಡಿ, ಈ ಚಿತ್ರಕ್ಕೆ ಅತ್ಯುತ್ತಮ ಚಿತರ, ಅತ್ಯುತ್ತಮ ಚಿತ್ರಕಥೆ, ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಗಳು ಸಹಾ ದೊರೆತಿವೆ. ೨೦೦೬ ರಲ್ಲಿ ಸಹಾಯಕ ನಿರ್ದೇಶಕನಾಗಿ ತಾವು ಚಿತ್ರರಂಗ ಪ್ರವೇಶಿಸಿದ್ದು, ಈ ಚಿತ್ರ ಕೇವಲ ೫೦ ಲಕ್ಷ ರೂ.ಗಳಲ್ಲಿ ನಿರ್ಮಾಣವಾಗಿದೆ. ದೊಡ್ಡ ದೊಡ್ಡ ಸ್ಟಾರ್ ನಟ, ನಟಿಯರು ಇಲ್ಲದೇ ಕೇವಲ ಮೈಸೂರು ಪ್ರತಿಭೆಗಳನ್ನೇ ಒಳಗೊಂಡು, ನಗರ ಹೊರ ವಲಯದ ಗದ್ದಿಗೆ ಭಾಗದಲ್ಲಿ ಸಂಪೂರ್ಣ ಚಿತ್ರೀಕರಣವಾಗಿದೆ. ಇದಕ್ಕಾಗಿ ಒಂದು ಮನೆಯನ್ನೇ ನಿರ್ಮಿಸಲಾಯಿತು. ಸರ್ಕಾರದಿಂದ ಮನೆ ಮಂಜೂರು ಮಾಡಿಸಿಕೊಳ್ಳಲು ವ್ಯಕ್ತಿಯೊಬ್ಬ ಪರದಾಡುವ ಕಥೆಯ ಚಿತ್ರ ಇದಾಗಿದೆ ಎಂದು ವಿವರಿಸಿದರು. ನಿರ್ಮಾಪಕ ಶಶಿಕುಮಾರ್, ಚಿತ್ರತಂಡದ ಶಿವಣ್ಣ, ಆನಂದ್, ಕಲಾವತಿ ಮಾದೇವ, ಮೈಸೂರು ಪ್ರೇಮಾ, ಕಾತ್ಯಾಯಿನಿ, ಗೀತಾ ರಂಗವಲ್ಲಿ ಇದ್ದರು.
