ಕ್ರೌರ್ಯವನ್ನು ಕಲಾತ್ಮಕವಾಗಿಸಿದ ಮೊಗಳ್ಳಿ ಗಣೇಶ್

Pratheek
2 Min Read

ಪಬ್ಲಿಕ್ ಅಲರ್ಟ್

ಮೈಸೂರು: ಕ್ರೌರ್ಯದ ಕತೆಯನ್ನು ಕಲಾತ್ಮಕವಾಗಿ ಬರೆದ ಕತೆಗಾರ ಮೊಗಳ್ಳಿ ಗಣೇಶ್. ಆತನ ಪ್ರತಿಭೆ ಮಹಾ ಆತ್ಮ ಪ್ರತ್ಯಯ ಎಂದು ಜಾನಪದ ವಿದ್ವಾಂಸ ಕೃಷ್ಣಮೂರ್ತಿ ಹನೂರು ಹೇಳಿದರು.
ಮೈಸೂರು ವಿವಿಧ ರಂಗ ಸಂಘಟನೆಗಳ ಒಕ್ಕೂಟ, ಡಾ.ಮೊಗಳ್ಳಿ ಗಣೇಶ್ ಸಾಹಿತ್ಯಾಭಿಮಾನಿ ಬಳಗ, ಮೈಸೂರು ವಿ.ವಿ ಜಾನಪದ ಅಧ್ಯಯನ ವಿಭಾಗದ ಸಹಯೋಗದಲ್ಲಿ ರಂಗಾಯಣದ ಶ್ರೀರಂಗ ವೇದಿಕೆಯಲ್ಲಿ ಆಯೋಜಿಸಿದ್ದ ಡಾ.ಮೊಗಳ್ಳಿ ಗಣೇಶ್ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಯುದ್ಧರಂಗದಲ್ಲಿ ಎಲ್ಲ ಸಾವು, ನೋವು, ಕ್ರೌರ್ಯ ನೋಡುತ್ತ; ಅಲ್ಲೆಲ್ಲಾ ಅಡ್ಡಾಡುವ ಅಶಾಂತ ಸೈನಿಕ ಮೊಗಳ್ಳಿ ಗಣೇಶ್. ಅದೆಲ್ಲವನ್ನು ಅಕ್ಷರ ರೂಪಕ್ಕೆ ತಂದ ಸೃಜನಶೀಲ ಬರಹಗಾರ. ಕುಮಾರವ್ಯಾಸ ಸಾವು ನೋವಿನಿಂದ ತಪ್ಪಿಸಿಕೊಳ್ಳಬೇಕಾದರೆ ತಾಯಿಯ ಗರ್ಭದೊಳಗೆ ಹೋಗಬೇಕು ಎನ್ನುತ್ತಾನೆ. ಇದೇ ಮಾತನ್ನು ಮೊಗಳ್ಳಿ ಗಣೇಶ್ ಆಡಿದ್ದಾರೆ. ಮಹಾಕವಿಯೊಂದಿಗಿನ ಸಂವಾದಿ ಆಶ್ಚರ್ಯವಾಗುತ್ತದೆ ಎಂದು ಹೇಳಿದರು.
ಬುಗುರಿ ಸರ್ವಶ್ರೇಷ್ಠ ಕತೆ. ಬುಗುರಿ ಸುತ್ತಣ ಕ್ರೌರ್ಯವನ್ನು ದಾಖಲಿಸಿದ. ಅದನ್ನು ದಲಿತ ಕತೆ ಎನ್ನಬಾರದು. ಶತಮಾನಗಳಿಂದ ಕ್ರೌರ್ಯ ನಡೆದು ಬಂದಿದೆ. ಸಾಹಿತ್ಯದೊಳಗೂ ಗುಂಪಿದೆ. ದಲಿತ ಕತೆಗಾರ ಬ್ರಾಹ್ಮಣ ಕತೆಗಾರ ಎಂದು ವಿಂಗಡಿಸಲಾಗುತ್ತದೆ. ವಿಂಗಡಿಸುವ ಬುದ್ಧಿ ಗುಂಪಿನಿಂದ ಬರುತ್ತದೆ ಎಂದು ವಿಷಾದಿಸಿದರು.
ಗಣೇಶ್‌ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಬರಲಿಲ್ಲ. ಏನೇನೋ ವ್ಯವಸ್ಥೆ ಇರುತ್ತೆ. ಪ್ರಶಸ್ತಿ ಬಗ್ಗೆ ತಾತ್ಸಾರವೂ ಇತ್ತು. ಲೇಖಕನಿಗೆ ಇರಬೇಕು. ಮೊಗಳ್ಳಿ ಕತೆ ಇಂಗ್ಲಿಷ್‌ಗೆ ಅನುವಾದವಾದರೆ ಬೂಕರ್ ಪ್ರಶಸ್ತಿ ಬರುವುದಿಲ್ಲ. ಜಾಗತಿಕ ಪ್ರಶಸ್ತಿ ಕೊಡುವವರಿಗೆ ಮೊಗಳ್ಳಿಯ ಸಂವೇದನೆ ಅರ್ಥವಾಗುವುದಿಲ್ಲ. ಹಾಗಾಗಿ ಪ್ರಶಸ್ತಿಯೂ ಬರುವುದಿಲ್ಲ ಎಂದು ಹೇಳಿದರು.
ವಿಚಾರವಾದಿ ಬಂಜಗೆರೆ ಜಯಪ್ರಕಾಶ್ ಮಾತನಾಡಿ, ಮೊಗಳ್ಳಿ ಗಣೇಶ್ ನಿಧನ ಅಘಾತಕಾರಿ. ಆತನ ವ್ಯಕ್ತಿತ್ವದಲ್ಲಿ ಹಿಂಜರಿಕೆ ಇತ್ತು. ಸೃಜನಶೀಲ ಮತ್ತು ಓದಿನ ವಿಷಯದಲ್ಲಿ ಮೇಲರಿಮೆ ಇತ್ತು. ತನ್ನ ಅತ್ಯುತ್ತಮ ಕಥೆಗಳನ್ನು ಹಠದಲ್ಲಿಯೇ ಬರೆದ. ಆತನಿಗೆ ಸಮಾಜದ ಜತೆ ವ್ಯವಹರಿಸಲು ಬರಲಿಲ್ಲ. ಸಣ್ಣಪುಟ್ಟ ಸಂಭ್ರಮದಲ್ಲೂ ಭಾಗಿಯಾಗದೆ ತನ್ಮಯತೆಯಿಂದ ಕತೆಗಳನ್ನು ಬರೆಯುತ್ತಿದ್ದ. ಕತೆಗಾರನಾಗಿ ಗಣೇಶ್ ಸದಾ ಸ್ಮರಣೀಯ ಎಂದು ಹೇಳಿದರು.
ಯುರೋಪ್ ಏಕಾಂಕಿ ವ್ಯಕ್ತಿತ್ವದವರು ಕೀರ್ತಿವಂತರಾಗುತ್ತಾರೆ. ಭಾರತದಲ್ಲಿ ಅದು ಸಾಧ್ಯವಿಲ್ಲ. ಕೂಡುಕುಟುಂಬದ ಪದ್ಧತಿಯ ಭಾರತದಲ್ಲಿ ಏಕಾಂಕಿಯಾಗಿರುವುದು ಜಂಭ ಅಹಂಕಾರ ಎಂದು ಪರಿಗಣಿಸುತ್ತಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೊಗಳ್ಳಿ ಗಣೇಶ್ ಅವರ ಚಿಕಿತ್ಸೆಗೆ ವಿಶೇಷ ಪ್ರಕರಣವೆಂದು ಪರಿಗಣಿಸಿ ೨೫ ಲಕ್ಷö ರೂ. ನೀಡಿದರು ಎಂದರು.
ಹಿರಿಯ ಸಾಹಿತಿ ಜಿ.ಪಿ. ಬಸವರಾಜು ಮಾತನಾಡಿ, ಗಣೇಶ್ ಎರಡು ಗುಣ ಹುಟ್ಟು ಮತ್ತು ಸಿಟ್ಟು. ದಮನಿತರ ದನಿಯಾಗಿ ನೋವು ಅಪಮಾನಗಳನ್ನು ಶೋಷಣೆಯ ನಾನಾಮುಖಗಳನ್ನು ಕಂಡು ನೊಂದು ಬೆಂದು ಬರೆಯುತ್ತಿದ್ದರು. ಸಾಹಿತ್ಯ ಗುಂಪುಗಾರಿಕೆ ಪರಂಪರೆ ಬಗ್ಗೆ ಸಿಟ್ಟಿತ್ತು. ಹಾಗೇ ಪರಂಪರೆಯಲ್ಲಿ ಜಾನಪದ ಇಟ್ಟು ನೋಡಿದರು.
ಪತ್ರಕರ್ತ ರವಿಕುಮಾರ್  ಮಾತನಾಡಿ, ಮೊಗಳ್ಳಿ ಗಣೇಸ್ ಅವರು ದಲಿತ ತಾತ್ವಿಕತೆ ಮತ್ತು ದಲಿತ ಅಸ್ಮಿತೆಯನ್ನು ಕಟ್ಟಿಕೊಟ್ಟಿದ್ದು ಬಹಳ ಮೌಲಿಕವಾದದ್ದು. ಅವರ ಅಪಾರ ಸಾಹಿತ್ಯ ಕೊಡುಗೆಯನ್ನು ಸಾಹಿತ್ಯ ಲೋಕ ನಿರೀಕ್ಷಿತ ಮಟ್ಟದಲ್ಲಿ ಸ್ಪಂದಿಸಲಿಲ್ಲ. ಸತ್ತ ಮೇಲೆ ಹಪಾಹಪಿಸುತ್ತಿದ್ದಾರೆ. ನಿಷ್ಠುರವಾಗಿ ಬದುಕಿ ಹೋಗಿದ್ದಾರೆ. ಅಷ್ಟು ನಿಷ್ಠುರತೆ ಬೇಕಾಗಿಲ್ಲ. ಯಾವತ್ತೂ ಪ್ರಭುತ್ವ ಒಲೈಕೆ ಮಾಡಲಿಲ್ಲ. ನಿಷ್ಠುರತೆಯಿಂದ ಕಳೆದುಕೊಂಡಿದ್ದಾರೆ. ಕಡು ದುಃಖಿ ಲೇಖಕ ಎಂದರು.
ಕಾರ್ಯಕ್ರಮದಲ್ಲಿ ಸಾಹಿತಿ ಪ್ರೊ.ಕಾಳೇಗೌಡ ನಾಗವಾರ, ಹಿರಿಯ ಪತ್ರಕರ್ತ ಸ್ವಾಮಿ ಆನಂದ್, ರಂಗಾಯಣದ ನಿರ್ದೇಶಕ ಸತೀಶ್ ತಿಪಟೂರು, ಮೊಗಳ್ಳಿ ಗಣೇಶ್, ಈ. ಧನಂಜಯ ಎಲಿಯೂರು, ಹಿರಿಯ ರಂಗಕರ್ಮಿ ಸಿ.ಬಸವಲಿಂಗಯ್ಯ, ಮೈಸೂರು ವಿವಿ ಪ್ರಸಾರಾಂಗದ ನಿರ್ದೇಶಕ ಡಾ.ನಂಜಯ್ಯ ಹೊಂಗನೂರು ಮತ್ತಿತರರು ಉಪಸ್ಥಿತರಿದ್ದರು.

Share This Article
Leave a Comment