ಪಬ್ಲಿಕ್ ಅಲರ್ಟ್
ಮೈಸೂರು: ಇಂದಿನ ಯುವಪೀಳಿಗೆ ಮತ್ತೊಬ್ಬರ ಹಾಡು, ರಿಲ್ಸಿಗೆ ಕುಣಿಯುವುದು ನಿಲ್ಲಿಸಿ ಸ್ವತಃ ನೀವೇ ಕವನ, ಕಥೆ ರಚಿಸಿ ಕುಣಿಯುವ ಕವಿ, ಕಲಾವಿದರಾಗಬೇಕಿದೆ ಎಂದು ಹಿರಿಯ ಸಾಹಿತಿ ಪ್ರೊ.ಅರವಿಂದ ಮಾಲಗತ್ತಿ ಅಭಿಪ್ರಾಯಪಟ್ಟರು.
ನಗರದ ಮಾನಸಗಂಗೋತ್ರಿ ಬಯಲು ರಂಗಮಂದಿರದಲ್ಲಿ ಮೈಸೂರು ದಸರಾ ಕವಿಗೋಷ್ಠಿ ಉಪಸಮಿತಿ ಆಯೋಜಿಸಿದ್ದ ನಾಡಗೀತೆಗೆ ನೂರರ ಸಂಭ್ರಮ-ಸಾವಿರಾರು ಸ್ವರಗಳ ಸಂಗಮ ಮತ್ತು ಪಂಚಕಾವ್ಯದೌತಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಈಗ ಕವಿಗಳ ಕಾಲವಲ್ಲ. ಕುಣಿಯುವ ಕಾಲ. ಕವಿಗಳ ಹಾಡಿಗೆ, ಗಾಯನಕ್ಕೆ ಯುವ ಸಮೂಹ ಡ್ಯಾನ್ಸ್ ಮಾಡುವುದನ್ನು ನೋಡಿದರೇ ಅವರಿಗೆಲ್ಲ ಕವಿ ಮನಸ್ಸು ಇದೇ ಎನ್ನುವುದು ಗೊತ್ತಾಗಲಿದೆ. ಆದರೆ, ಅವರು ಮನಸ್ಸು ಮಾಡುತ್ತಿಲ್ಲ. ಕವಿ ಮತ್ತು ಕಲಾವಿದರಾಗಲು ಯುವ ಮನಸ್ಸುಗಳು ಮನಸ್ಸು ವಾಡಬೇಕು. ರೀಲ್ಸ್‌ಗಳ ರೀಲು ಬಿಡುವುದನ್ನು ಬಿಟ್ಟು ಮಾತುಗಳನ್ನು ಅಭಿವ್ಯಕ್ತಿಗೊಳಿಸುವಂತಹ ದಾಖಲು ಮಾಡಿ. ಬೇರೆ-ಬೇರೆ ಹಾಡಿಗೆ ಕುಣಿಯುವುದು, ಧ್ವನಿಯಾಗುವುದನ್ನು ಬಿಟ್ಟು ನಿಮ್ಮ ಹಾಡಿಗೆ ನೀವೇ ಭಾಗಿಯಾಗಬೇಕು. ನೀವೆ ಕುಣಿಯುವಂತೆ ಆಗಬೇಕು ಎಂದು ಆಶಯ ವ್ಯಕ್ತಪಡಿಸಿದರು.
ದಸರೆಯ ಅಂಗವಾಗಿ ನಡೆಯುವ ಕವಿಗೋಷ್ಠಿಯು ವಿಶ್ವವಿಖ್ಯಾತ ಎನ್ನುವ ವಾಡಿಕೆ ಉಂಟು ಆದರೆ, ಅದು ವಿಶ್ವಮಾನ್ಯವಾಗಬೇಕಾದರೇ ವಿಶ್ವದ ಕವಿಗಳನ್ನು ಗೋಷ್ಠಿಗೆ ಆಹ್ವಾನಿಸಬೇಕು. ದಸರೆ ಕವಿಗೋಷ್ಠಿಯಲ್ಲಿ ಈಗ ಹಮ್ಮಿಕೊಂಡಿರುವ ಪಂಚ ಕವಿಗೋಷ್ಠಿಗಳು ಕೂಡಾ ಬಹಳ ಉತ್ತಮವಾದ ಗೋಷ್ಠಿಗಳೇ. ಆದರೆ ದಸರೆಯ ವಿಖ್ಯಾತಿ ವಿಶ್ವಮಟ್ಟಕೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ತಲುಪಬೇಕು. ಅದಕ್ಕಾಗಿ ಪ್ರತಿವರ್ಷ ವಿಶ್ವ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿರುವ ಬೇರೆ-ಬೇರೆ ದೇಶದ, ನಮ್ಮ ದೇಶದ ಸುಮಾರು ಏಳೆಂಟು ಮಂದಿಯನ್ನು ಆಹ್ವಾನಿಸಿ ಕವಿಗೋಷ್ಠಿಯಲ್ಲಿ ಭಾಗವಹಿಸುವಂತೆ ಮಾಡಬೇಕು ಎಂದರು.
ಸರ್ಕಾರದಿಂದ ನಾಡಗೀತೆ ನೂರಾರ ಸಂಭ್ರಮ ಆಯೋಜಿಸಿ: ರಾಷ್ಟ್ರಕವಿ ಕುವೆಂಪು ಅವರ ಜನ್ಮಶತಮಾನೋತ್ಸವ ಅಂಗವಾಗಿ ಕರ್ನಾಟಕ ರಾಜ್ಯ ಸರ್ಕಾರವು ಅವರು ರಚನೆ ಮಾಡಿರುವ ಗೀತೆಯನ್ನು ಅಧಿಕೃತ ನಾಡಗೀತೆಯಾಗಿ ಘೋಷಣೆ ಮಾಡಿದೆ. ನಾಡಗೀತೆಗೆ ನೂರು ವರ್ಷ ತುಂಬಿರುವುದರಿಂದ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಮತ್ತು ಮುಖ್ಯಮಂತ್ರಿ ಚರ್ಚಿಸಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಮನವಿಯನ್ನು ಮಾಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಮಾತನಾಡಿ, ಯುವ ಸಮೂಹವು ಮೊಬೈಲ್ ಬಳಕೆಯನ್ನು ಕಡಿಮೆ ಮಾಡಿ, ಆ ಸಮಯದಲ್ಲಿ ಉತ್ತಮ ಪುಸ್ತಕ, ಗ್ರಂಥಗಳನ್ನು ಓದಬೇಕು. ಮೈಸೂರು ವಿಶ್ವವಿದ್ಯಾನಿಲುಂದಲ್ಲಿ ಇರುವ ಹಳೇ ತಾಳೆಗರಿಗಳ ವಿಷಯಗಳನ್ನು ಡಿಜಿಟಲೀಕರಣ ಮಾಡುವುದಕ್ಕೆ ಸರ್ಕಾರವು ಒಂದು ಕೋಟಿ ರೂಪಾಯಿ ಅನುದಾನವನ್ನು ಬಿಡುಗಡೆಗೊಳಿಸಿದೆ ಎಂದರು.
ಕವಯಿತ್ರಿ ಪ್ರೊ.ಗೀತಾ ವಸಂತ ಮಾತನಾಡಿ, ಕಾವ್ಯ ಬರೀ ರಚನೆಯಲ್ಲ ಶೋಧನೆಯಾಗಿರಬೇಕು. ಕಾವ್ಯವು ಜಾತಿ, ಧರ್ಮ, ಲಿಂಗ ಭೇದಗಳ ಆಚೆಗೆ ಎಲ್ಲರನ್ನು ಒಗ್ಗೂಡಿಸಿ ಬೆಸೆಯುವ ಕೆಲಸವನ್ನು ಮಾಡುತ್ತದೆ. ಸಣ್ಣಕಾವ್ಯ, ಮಹಾಕಾವ್ಯ ಹಾಗೂ ಪ್ರಚೀನ ಕಾವ್ಯಗಳು ಜನರ ಆಶೋತ್ತರಗಳನ್ನು ಅಭಿವ್ಯಕ್ತಗೊಳಿಸುತ್ತದೆ. ಭಾವಕೋಶ, ಅನುಭವ ಕೋಶದಿಂದ ತಾತ್ವಿಕವಾಗಿ ಕಟ್ಟುವುದೇ ಕಾವ್ಯ ಎಂದ ಅವರು ಕುವೆಂಪು ರವರು ಹೇಳಿದಂತೆ ಕವಿಗಳು ವಿಶ್ವಮಾನವ ಪ್ರಜ್ಞೆಯನ್ನುಹೊಂದಬೇಕು ಎಂದು ತಿಳಿಸಿದರು.
ಗೀತ ರಚನಾಕಾರ ಕವಿರಾಜ್ ರವರು ಮಾತನಾಡಿ, ನಿಸರ್ಗವು ಕೆಲವು ವ್ಯಕ್ತಿಗಳಿಗೆ ಮಾತ್ರ ಬರೆವಣಿಗೆಯ ಸೃಜನಶೀಲತೆಯನ್ನು ನೀಡುತ್ತದೆ. ಕವಿತೆಯು ಸಮಾಜದಲ್ಲಿ ಸಣ್ಣ ಬದಲಾವಣೆಗೆ ಬೀಜ ಬಿತ್ತುತ್ತವೆ. ನಾವು ರಚಿಸಿರುವ 4 ಸಾಲುಗಳು ಯಾವೋದೋ ಒಂದು ಜೀವಕ್ಕೆ ಉಪಯೋಗವಾದರೆ ಸಾಕು. ಟ್ರೊಲ್ ಯುಗದಲ್ಲಿ ಸಮಚಿತ್ತವಾಗಿ ಮಾತನಾಡುವವರನ್ನು ಸಮಾಜ ಗಮನಿಸುವುದಿಲ್ಲ. ಹಾಗಾಗಿ ರಮ್ಯತೆಯಿಂದ ಆಚೆಗೆ ಬಂದು ಸಮಾಜದ ತಲ್ಲಣಗಳಿಗೆ ಈಗಿನ ಕವಿಗಳು ಧನಿಯಾಗುವಂತೆ ಸಲಹೆ ನೀಡಿದರು.
ಅಭಿಜ್ಞಾ ಪಿ.ಎಂ.ಗೌಡ ರವರು ” ಮತ್ತೊಮ್ಮೆ ಹುಟ್ಟಿ ಬಾ ಅಣ್ಣ ಬಸವಣ್ಣ” ಕೊಡಗು ಜಿಲ್ಲೆಯ ಅಯ್ಯಪ್ಪ ಎಂ. ರವರು ” “ಗಜವೀರ ಅಭಿಮನ್ಯು” ಕುರಿತು ಕವಿತೆ ವಾಚಿಸಿದರೆ, ಚಾಮರಾಜನಗರದ ಕೊಳ್ಳೆಗಾಲದವರಾದ ಖಾತ್ಯಾಯಿಣಿ ಪಿ. ರವರು ಅಕ್ಕ ತನ್ನ ತಂಗಿಗೆ ಧೈರ್ಯ ತುಂಬುವ ಕವಿತೆ ” ಭದ್ರೆ ಜೀವ ಭದ್ರ” ಯನ್ನು ವಾಚಿಸಿದರು. ಮಂಡ್ಯ ಜಿಲ್ಲೆಯ ರೈತಕವಿ ಕ್ರಾಂತಿವೀರ ಸಿಂಹ ರವರು “ಜೀತ” ಕುರಿತ ಕವಿತೆ ವಾಚಿಸಿದರೆ, ಹಾಸನ ಜಿಲ್ಲೆಯ ನಿವೃತ್ತ ಅಂಚೆ ಮಾಸ್ತರಾದ ಕವಿ ಕುಮಾರ ಛಲವಾದಿ ಅವರು ವೃದ್ಧಾಶ್ರಮದಲ್ಲಿ ಹಿರಿಯ ಜೀವಗಳ ತಳಮಳ ಕುರಿತ ” ವೃದ್ಧಾಶ್ರಮದ ಗೊಡೆಗಳಿಗೆ ಕಿವಿಗಳಿರಬೇಕಿತ್ತು” ಎಂಬ ಕವಿತೆ ವಾಚಿಸಿ ಎಲ್ಲರ ಗಮನ ಸೆಳೆದರು.




ನಂಜನಗೂಡಿನ ಯುವ ಕವಿ “ಕೊಲ್ಲುವುದಾದರೆ” ಜಾತಿ, ಧರ್ಮ, ಬಡತನ, ಬ್ರಷ್ಟಾಚಾರವನ್ನು ಕೊಲ್ಲಲಿ ಎಂಬ ಕವತಿ ವಾಚಿಸಿದರೆ. ಕೊಡಗಿನ ಜಲಜ ಶೇಖರ್ ಅವರು ಕಾರ್ಶೀರದಲ್ಲಿ ಉಗ್ರರ ನರಮೇದವನ್ನು ಕವಿತೆ ಮೂಲಕ ಭಾರತೀಯರ ನರಳಾಟವನ್ನು ಚಿತ್ರಿಸಿದರು.
ಹೆಚ್.ಡಿ.ಕೋಟೆಯ ಹೆಬ್ಬಲುಗುಪ್ಪೆಯ 11 ವರ್ಷದ ಧಾನ್ಯ ಜಿ.ಅರಸ್ ನಾಡು, ನುಡಿ, ಕನ್ನಡ ಕವಿಗಳ ಕುರಿತ “ನಮ್ಮ ನಾಡು” ಎಂಬ ಕವನ ವಾಚಿಸಿ ಗಮನ ಸೆಳೆದರೆ. 14 ವರ್ಷದ ನಿಶಾಂತ ಸಾಮಾಜಿತ ಜಾಲತಾಣಕ್ಕೆ ಅಂಟಿಕೊಂಡಿರುವ ಆಧುನಿಕ ಮಕ್ಕಳ ಜೀವನ ಶೈಲಿ, ಮೊಬೈಲ್ ಸ್ಕ್ರಾಲ್ ಮಾಡುತ್ತಾ ಬಾಲ್ಯ ಕಳೆಯುವ ಮಕ್ಕಳ ಕುರಿತು ” ಜೆನ್ಸಿ ಮಕ್ಕಳು” ಎಂಬ ಕವನವಾಚಿಸಿ ಎಲ್ಲರ ಚಪ್ಪಾಳೆಗೆ ಗಿಟ್ಟಿಸಿಕೊಂಡಳು.
ಶಾಸಕ ಕೆ.ಹರೀಶ ಗೌಡ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಟಿ.ಎಸ್.ಶ್ರೀವತ್ಸ, ಜಿ.ಟಿ.ದೇವೇಗೌಡ, ಡಿ.ರವಿಶಂಕರ್, ವಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್, ಕಸಪಾ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ, ಕವಿಗೋಷ್ಠಿ ಸಮಿತಿ ಉಪ ವಿಶೇಷಾಧಿಕಾರಿ ಜಿ.ಎಸ್.ಸೋಮಶೇಖರ್, ಕಾರ್ಯಾಧ್ಯಕ್ಷೆ ಪ್ರೊ.ಎನ್.ಕೆ.ಲೋಲಾಕ್ಷಿ, ಕಂದಾಯ ಇಲಾಖೆಯ ಉಪ ಆಯುಕ್ತ ಜಿ.ಎಸ್.ಸೋಮಶೇಖರ್, ಬೆಂಗಳೂರು ಕನ್ನಡ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಮುಕುಂದ ರಾಜ್ ಸೇರಿ ಮತ್ತಿತರರು ಹಾಜರಿದ್ದರು.
ಬೌದ್ಧವೃದ್ಯಾನ ಪದ ನಾಡಗೀತೆಗೆ ಸೇರಿಸಿ
ಮೈಸೂರು: ರಾಜ್ಯ ಸರ್ಕಾರವು ಅಧಿಕೃತಗೊಳಿಸಿರುವ ಕುವೆಂಪು ರಚಿತ ನಾಡಗೀತೆಯಲ್ಲಿ ಬೌದ್ಧರನ್ನು ಸೇರ್ಪಡೆ ಮಾಡಬೇಕು ಎಂದು ಹಿರಿಯ ಸಾಹಿತಿ ಪ್ರೊ.ಅರವಿಂದ ವಾಲಗತ್ತಿ ಮನವಿ ಮಾಡಿದರು.
ನಾಡಗೀತೆಗೆ ಸಂಬಂಧಿಸಿದಂತೆ ಸಾಕಷ್ಟು ವಾಗ್ವಾದ, ಭಿನ್ನಾಭಿಪ್ರಾಯಗಳಿವೆ. ಇಂತಹ ವಾಗ್ವಾದ, ಭಿನ್ನಾಭಿಪ್ರಾಯಗಳು ಎಲ್ಲಿವರೆಗೂ ಇರುತ್ತವೆಯೋ ಅಲ್ಲಿಯವರೆಗೂ ನಾವು ಜೀವಂತವಾಗಿರುತ್ತೇವೆ. ಕುವೆಂಪು ಅವರು ಹಲವು ಬಾರಿ ಈ ನಾಡಗೀತೆಯನ್ನು ತಿದ್ದುಪಡಿಗೆ ಒಳಪಡಿಸಿದ್ದಾರೆ. ಕುವೆಂಪು ಅವರು ಜೈನವೃದ್ಯಾನ ಎಂಬ ಮಾತನ್ನು ಬಳಸುವ ಮುನ್ನ ಬೌದ್ಧವೃದ್ಯಾನ ಎಂಬ ಮಾತನ್ನು ಬಳಸಿದ್ದರು. ಆದರೆ, ಆ ಶಬ್ದವನ್ನು ಯಾವ ಕಾರಣಕ್ಕೆ ೭೦ ದಶಕದಲ್ಲಿ ಕೈಬಿಟ್ಟರೋ ಗೊತ್ತಿಲ್ಲ. ಆದರೆ ಆ ಶಬ್ದವನ್ನು ಇದರ ಜತೆಗೆ ಜೋಡಿಸುವುದರಿಂದ ನಾಡಿಗೂ ಗೌರವವಾಗುತ್ತದೆ. ನಾಡಿನ ಸಂಕೇತಕ್ಕೆ ಸೂಚಕವಾಗಿ ನಿಂತುಕೊಳ್ಳುತ್ತದೆ ಎಂದರು.
ಬಾಕ್ಸ್
ದಾಖಲೆ ಸಮೂಹ ಗಾಯನ
ಕವಿಗೋಷ್ಠಿಗೂ ಮುನ್ನ ಬಯಲು ರಂಗಮಂದಿರದಲ್ಲಿ ಸೇರಿದ್ದ ಸಹಸ್ರಾರು ಮಂದಿ ಯುವ ಮನಸ್ಸುಗಳು ಸೇರಿ ನಾಡಗೀತೆ ನೂರರ ಸಂಭ್ರಮದ ಅಂಗವಾಗಿ ಸಾಮೂಹಿಕವಾಗಿ ನಾಡಗೀತೆಯನ್ನು ಹಾಡುವ ಮೂಲಕ ದಾಖಲೆ ಬರೆದರು. ಆ ಮೂಲಕ ಸಾವಿರಾರು ಮಂದಿ ಒಮ್ಮೆಲೆ ನಾಡಗೀತೆ ಹಾಡಿ ಗಮನ ಸೆಳೆದರು.
