ಪಬ್ಲಿಕ್ ಅಲರ್ಟ್
ಮೈಸೂರು: ನಗರ ಪೊಲೀಸರಿಂದ ಅಂತರರಾಜ್ಯ ಡಕಾಯಿತರ ಬಂಧಿಸಿ 16ಕೆ.ಜಿ. ಬೆಳ್ಳಿ, 1 ಥಾರ್ ಕಾರು, 1 ಕ್ರೆಟಾ ಕಾರು, 1 ಪಿಸ್ತೂಲು, 9 ಜೀವಂತ ಗುಂಡುಗಳ ವಶಕ್ಕೆ ಪಡೆದು ಈವರೆಗೆ 22 ಸ್ವತ್ತು ಕಳವು ಪ್ರಕರಣಗಳಲ್ಲಿ ೧ಕೋಟಿಗೂ ಅಧಿಕ ಮೌಲ್ಯದ ಕಳುವು ಮಾಲುಗಳು ವಶ ಪಡಿಸಿಕೊಂಡಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿದ ನಗರ ಪೊಲೀಸ್ ಆಯುಕ್ತೆ ಸೀಮಾಲಾಟ್ಕರ್ ಮಾತನಾಡಿ, ದೇವರಾಜ ಪೊಲೀಸ್ ಠಾಣೆಯಲ್ಲಿ ಒಬ್ಬ ಆರೋಪಿಯನ್ನು ಬಂಧಿಸಿ, 01 ಮನೆ ಕಳ್ಳತನ ಪ್ರಕರಣವನ್ನು ಪತ್ತೆ ಮಾಡಿ 18,20,000ರೂ. ಮೌಲ್ಯದ 260 ಗ್ರಾಂ ಚಿನ್ನಾಭರಣಗಳನ್ನು ಪತ್ತೆ ಮಾಡಿರುತ್ತಾರೆ. ಒಬ್ಬ ಆರೋಪಿಯನ್ನು ಬಂಧಿಸಿ 1 ಸಾಮಾನ್ಯ ಕಳುವು ಪ್ರಕರಣ ಪತ್ತೆ ಮಾಡಿ 78,000ರೂ. ಮೌಲ್ಯದ 7 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿರುತ್ತಾರೆ. ಇಬ್ಬರು ಆರೋಪಿಗಳನ್ನು ಬಂಧಿಸಿ 1 ಕನ್ನ ಕಳುವು, 2 ವಾಹನ ಕಳುವು ಪ್ರಕರಣಗಳಿಗೆ ಸಂಬಂಧಪಟ್ಟಂತೆ 1,10,000ರೂ. ಮೌಲ್ಯದ 2 ದ್ವಿ ಚಕ್ರ ವಾಹನ ಮತ್ತು 1 ಎಲ್.ಇ.ಡಿ. ಟಿ.ವಿ.ಯನ್ನು ವಶಪಡಿಸಿಕೊಂಡಿರುತ್ತಾರೆ.
ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಇಬ್ಬರು ಆರೋಪಿಗಳನ್ನು ದಸ್ತಗಿರಿ ಮಾಡಿ 1 ಸರಗಳ್ಳತನ, 1 ದೇವಸ್ಥಾನ ಕಳ್ಳತನ, 2 ದ್ವಿ ಚಕ್ರ ವಾಹನ ಕಳ್ಳತನ ಪ್ರಕರಣಗಳನ್ನು ಪತ್ತೆ ಮಾಡಿ 2.65,000ರೂ. ಮೌಲ್ಯದ 23 ಗ್ರಾಂ ಚಿನ್ನಾಭರಣ, 2 ದ್ವಿ ಚಕ್ರ ವಾಹನಗಳನ್ನು ವಶಪಡಿಸಿಕೊಂಡಿರುತ್ತಾರೆ. ಒಬ್ಬ ಮಹಿಳಾ ಆರೋಪಿತೆಯನ್ನು ದಸ್ತಗಿರಿ ಮಾಡಿ 3,20,000ರೂ. ಮೌಲ್ಯದ 40 ಗ್ರಾಂ ತೂಕದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿರುತ್ತಾರೆ ಎಂದು ಹೇಳಿದರು.
ವಿಜಯನಗರ ಠಾಣಾ ಪೊಲೀಸರು 3 ಆರೋಪಿಗಳನ್ನು ದಸ್ತಗಿರಿ ಮಾಡಿ 1 ಮನೆ ಕಳ್ಳತನ ಪ್ರಕರಣವನ್ನು ಪತ್ತೆ ಮಾಡಿ 6,00,000ರೂ. ಮೌಲ್ಯದ 50ಗ್ರಾಂ ಚಿನ್ನಾಭರಣ, 1 ಮೊಬೈಲ್ ಫೋನ್, 1 ದ್ವಿ ಚಕ್ರ ವಾಹನ ಮತ್ತು 26,000ರೂ. ನಗದು ಹಣವನ್ನು ವಶಪಡಿಸಿಕೊಂಡಿರುತ್ತಾರೆ. ಆಲನಹಳ್ಳಿ ಪೊಲೀಸರು ಇಬ್ಬರು ಆರೋಪಿಗಳನ್ನು ದಸ್ತಗಿರಿ ಮಾಡಿ, 1 ಕನ್ನ ಕಳುವು ಪ್ರಕರಣವನ್ನು ಪತ್ತೆ ಮಾಡಿ 32,000 ರೂ ನಗದು ಹಣವನ್ನು ವಶಪಡಿಸಿಕೊಂಡಿರುತ್ತಾರೆ. ಕುವೆಂಪುನಗರ ಪೊಲೀಸರು ಒಬ್ಬ ಆರೋಪಿಯನ್ನು ದಸ್ತಗಿರಿ ಮಾಡಿ, 40,000 ಮೌಲ್ಯದ 2 ದ್ವಿ ಚಕ್ರ ವಾಹನ ಕಳ್ಳತನ ಪ್ರಕರಣ ಪತ್ತೆ ಮಾಡಿದ್ದು, ಮೇಟಗಳ್ಳಿ ಪೊಲೀಸರು 3 ಆರೋಪಿಗಳನ್ನು ದಸ್ತಗಿರಿ ಮಾಡಿ 1,24,000ರೂ. ಮೌಲ್ಯದ 3 ದ್ವಿ ಚಕ್ರ ವಾಹನಗಳನ್ನು ವಶಪಡಿಸಿಕೊಂಡಿರುತ್ತಾರೆ ಎಂದು ಮಾಹಿತಿ ನೀಡಿದರು.
ಅಂತರಾಜ್ಯ ಕಳ್ಳರ ಬಂಧನ
ಮೈಸೂರು: ನಗರದ ಹೆಬ್ಬಾಳು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ೧೬ಕೆಜಿ ಬೆಳ್ಳಿ ಕಳುವು ಪ್ರಕರಣದಲ್ಲಿ ೭ ಮಂದಿ ಅಂತರಾಜ್ಯ ಆರೋಪಿಗಳನ್ನ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಮೈಸೂರು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಹೆಬ್ಬಾಳು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಭದ್ರತಾ ಸಿಬ್ಬಂದಿಯನ್ನು ಕಟ್ಟಿಹಾಕಿ ದರೋಡೆಕೋರರು ೧೬ಕೆಜಿ ಬೆಳ್ಳಿಯನ್ನ ಕಳ್ಳತನ ಮಾಡಿದ್ದರು. ಬೆಳ್ಳಿ ಪದಾರ್ಥಗಳನ್ನು ಕಳೆದುಕೊಂಡಿದ್ದ ಮಾಲೀಕರ ಬಳಿ ವಾಹನ ಚಾಲಕನಾಗಿದ್ದ ಗುಜರಾತ್ ಮೂಲದ ವ್ಯಕ್ತಿಯ ನೆರವಿನೊಂದಿಗೆ ದರೋಡೆಕೋರರು ಬೆಳ್ಳಿಯ ಪದಾರ್ಥ ದೋಚಿಕೊಂಡು ಪರಾರಿಯಾಗಿದ್ದರು.
ಸಾಲದ ಸುಳಿಗೆ ಸಿಲುಕಿದ್ದ ಡ್ರೈವರ್ ಗುಜರಾತ್ ನ ನಟೋರಿಯಸ್ ಕ್ರಿಮಿನಲ್ ನನ್ನು ಸಂಪರ್ಕಿಸಿರುವ ಸಂಗತಿ ಇದೀಗ ಪೊಲೀಸರ ತನಿಖೆಯ ವೇಳೆ ಬೆಳಕಿಗೆ ಬಂದಿದೆ. ಪ್ರಮುಖ ಆರೋಪಿಯನ್ನು ಸೆರೆ ಹಿಡಿದ ಬಳಿಕ ಡ್ರೈವರ್ ಕೂಡ ಕೈಜೋಡಿಸಿರುವ ಸಂಗತಿ ಬಯಲಾಗಿದೆ. ಈ ಮಧ್ಯೆ ವೈಜ್ಞಾನಿಕ ಮಾದರಿಯಲ್ಲಿ ಸಾಕ್ಷ್ಯಗಳನ್ನು ಸಂಗ್ರಹಿಸಿದ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ. ನಟೋರಿಯಸ್ ಕ್ರಿಮಿನಲ್ ಗುಜರಾತ್ ರಾಜ್ಯದ ಬನಸ್ಕಾಂತ ಜಿಲ್ಲೆಯ ದಿಶಾ ಗ್ರಾಮದಲ್ಲಿ ಅಡಗಿದ್ದುದನ್ನು ಪತ್ತೆ ಹಚ್ಚಿದ ಮೈಸೂರು ಪೊಲೀಸರು ಪ್ರಕರಣದಲ್ಲಿ ಭಾಗಿಯಾಗಿದ್ದ ಒಟ್ಟು ೭ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಪರಾರಿಯಾಗಿರುವ ಮತ್ತೋರ್ವ ಆರೋಪಿಯನ್ನು ಸೆರೆ ಹಿಡಿಯಲು ಪೊಲೀಸರು ಬಲೆ ಬೀಸಿದ್ದಾರೆ.
ಬಾಕ್ಸ್
೧೩.೯೩೦ ಕೆಜಿ ಗಾಂಜಾ ವಶ
ನಗರಾದ್ಯಾಂತ ಪಾರ್ಕ್, ಪಿ.ಜಿ.ಗಳು, ಲಾಡ್ಜ್‌ಗಳು ಮತ್ತು ಇತರೇ ಸಾರ್ವಜನಿಕರ ಸ್ಥಳಗಳಲ್ಲಿ ವಿಶೇಷ ತಪಾಸಣೆ ಕೈಗೊಂಡು ಸುಮಾರು 2400ಕ್ಕೂ ಅಧಿಕ ಅನುಮಾನಿತ ಗಾಂಜಾ ಸೇವನೆ ಮಾಡುವವರನ್ನು ಪತ್ತೆ ಮಾಡಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ಇವರಲ್ಲಿ ಮಾದಕ ಪದಾರ್ಥ ಸೇವನೆ ದೃಢಗೊಂಡ 316 ಆರೋಪಿಗಳ ವಿರುದ್ಧ ಒಟ್ಟು 303 ಪ್ರಕರಣಗಳನ್ನು ದಾಖಲಿಸಲಾಗಿರುತ್ತದೆ. ಅಲ್ಲದೇ ನಗರದ ವಿವಿಧ ಸ್ಥಳಗಳಲ್ಲಿ ವಿಶೇಷ ದಾಳಿಗಳನ್ನು ಕೈಗೊಂಡು ಮಾದಕ ಪದಾರ್ಥಗಳನ್ನು ಹೊಂದಿದ್ದ ಮೇರೆಗೆ ಒಟ್ಟು 23 ಪ್ರಕರಣಗಳನ್ನು ದಾಖಲಿಸಿ 24 ಆರೋಪಿಗಳನ್ನು ಬಂಧಿಸಲಾಗಿದ್ದು, 13 ಕೆ.ಜಿ 930ಗ್ರಾಂ ಗಾಂಜಾ, 149 ಗ್ರಾಂ 53 ಮಿ.ಗ್ರಾಂ ಸಿಂಥೆಟಿಕ್ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
