ಪಬ್ಲಿಕ್ ಅಲರ್ಟ್
ಮೈಸೂರು: ವೃದ್ಧ ಕುಟುಂಬದ ಬಹಿಷ್ಕಾರ ಹಾಕಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸದಿದ್ದರೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ಪ್ರಜಾ ಪಾರ್ಟಿ ಅಧ್ಯಕ್ಷರಾದ ಡಾ.ಬಿ.ಶಿವಣ್ಣ ಎಚ್ಚರಿಕೆ ನೀಡಿದರು.
ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಸರಗೂರು ತಾಲ್ಲೂಕು, ಸಾಗರೆ ಗ್ರಾಮದ ಎಸ್.ಎಂ.ನಂಜೇಗೌಡ ಮತ್ತು ದೊಡ್ಡತಾಯಮ್ಮ ಎಂಬವರ ಕುಟುಂಬಕ್ಕೆ ಸಾಗರೆ ಗ್ರಾಮದ ಮುಖಂಡರುಗಳಾದ ಶಿವಲಿಂಗೇಗೌಡ, ಎಸ್.ಬಿ. ನಾಗೇಶ, ಎಸ್.ಎನ್.ಪ್ರತಾಪ, ಸೋಮೇಗೌಡ, ಜಯಪ್ಪ, ಎಸ್.ಎಸ್.ಸ್ವಾಮಿ ಮತ್ತು ಕರಿನಾಯಕ ಎಂಬುವವರು ಬಹಿಷ್ಕಾರ ಹಾಕಿದ್ದು, ಜಿಲ್ಲಾಡಳಿತ ಕೂಡಲೇ ಬಹಿಷ್ಕಾರ ಹಾಕಿದ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು, ಪೊಲೀಸರು ಕೂಡಲೇ ಇವರನ್ನು ಬಂಧಿಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಇವರ ಮೇಲೆ ಸುಳ್ಳು ಆಪಾದನೆಗಳನ್ನು ಮಾಡಿ ಕೆಲವು ಸುಳ್ಳು ದಾಖಲಾತಿಗಳನ್ನು ಸೃಷ್ಟಿ ಮಾಡಿಕೊಂಡು ಸಂವಿಧಾನಕ್ಕೆ ವಿರುದ್ಧವಾಗಿ ಗ್ರಾಮದಲ್ಲಿ ಅಕ್ರಮ ಕೂಟವನ್ನು ಕರೆದು ಸಾಗರೆ ಗ್ರಾಮದಲ್ಲಿ ಎಸ್.ಎಂ ನಂಜೇಗೌಡ ಮತ್ತು ದೊಡ್ಡತಾಯಮ್ಮ ಅವರು ನಿರ್ಮಾಣ ಮಾಡಿರುವ ಮನೆಯ ಜಾಗವು ಸರ್ಕಾರಿ ಖರಾಬು ಆಗಿದ್ದು, ಮುಂದಿನ ಮೂರು ತಿಂಗಳ ಒಳಗಾಗಿ ಮನೆಯನ್ನು ಖಾಲಿ ಮಾಡಬೇಕು, ಇಲ್ಲದಿದ್ದ ಪಕ್ಷದಲ್ಲಿ ನಾವುಗಳೇ ಜೆ.ಸಿ.ಬಿ ಯಂತ್ರವನ್ನು ತಂದು ನಿಮ್ಮ ಮನೆಯನ್ನು ಕೆಡವಿ ಹಾಕುತ್ತೇವೆಂದು ಬೆದರಿಕೆ ಹಾಕಿ ಅವರನ್ನು ಹೆದರಿಸಿ, ಇದು ಪಂಚಾಯಿತಿಯ ತೀರ್ಮಾನವಾಗಿದೆ ಎಂದು ಬೆದರಿಕೆ ಒಡ್ಡಿರುತ್ತಾರೆ. ಕಾನೂನಿಗೆ ವಿರುದ್ಧವಾಗಿ ನಂಜೇಗೌಡ ಕುಟುಂಬಕ್ಕೆ ಸಾಮಾಜಿಕ ಬಹಿಷ್ಠಾರವನ್ನು ಹಾಕಿರುತ್ತಾರೆ ಇದರಿಂದ ಈ ಕುಟುಂಬ ಮಾನಸಿಕ ಖಿನ್ನತೆಗೆ ಒಳಗಾಗಿದೆ. ಈ ಬಗ್ಗೆ ಶಾಸಕರಾದ ಅನಿಲ್ ಚಿಕ್ಕಮಾದು, ತಾಲ್ಲೂಕು ಆಡಳಿತ ಮತ್ತು ಪೊಲೀಸರಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕಿಡಿಕಾರಿದರು.
