ಟ್ರೋಲ್, ಕೀಳುತನದ ಮಾತು ಹೊಸದಲ್ಲ; ನನ್ನ ಮೇಲೆ ಹಲ್ಲೆ ಕೂಡ ಆಗಿತ್ತುʼ: ಸುಮಲತಾ ಅಂಬರೀಷ್‌

ನಟಿ ರಮ್ಯಾ ಅವರ ವಿರುದ್ಧ ಡಿ ಬಾಸ್ ಅಭಿಮಾನಿಗಳು ಅವಹೇಳನಕಾರಿ ಸಂದೇಶ ಕಳುಹಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸುಮಲತಾ ಅಂಬರೀಶ್, ಟ್ರೋಲ್ ಮತ್ತುಕೀಳು ಮನಸ್ಸಿನ ಮೆಸೇಜ್‌ ನಾನು ಎದುರಿಸುತ್ತಲೇ ಇರುತ್ತೇನೆ. ಇದಲ್ಲದೆ ನನ್ನ ಮೇಲೆ ಹಲ್ಲೆ ಆಗಿದೆ ಎಂದು ಹೇಳಿದ್ದಾರೆ. ಜೊತೆಗೆ ರಮ್ಯರಿಗೆ ಕೆಟ್ಟದಾಗಿ ಮೆಸೇಜ್‌ ಮಾಡಿದ್ದು ತಪ್ಪು. ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.

admin
2 Min Read

ಮಂಡ್ಯ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ತೀರ್ಪು ನೀಡಿದ ಸಂಬಂಧ ಇನ್‌ಸ್ಟಾಗ್ರಾಮ್‌ನಲ್ಲಿ ನಟಿ ರಮ್ಯಾ ಪೋಸ್ಟ್‌ ಹಂಚಿಕೊಂಡಿದ್ದರು. ಇದಕ್ಕೆ ಡಿ ಬಾಸ್‌ ಫ್ಯಾನ್ಸ್‌ ಅವಹೇಳನಾಕಾರಿ ಸಂದೇಶ ಕಳಿಸಿದ್ದರು. ಹೀಗಾಗಿ ರಮ್ಯ ಅವರ ವಿರುದ್ಧ ದೂರು ನೀಡಿದ್ದ ಕೇಸ್‌ ಭಾರಿ ಸಂಚಲನ ಮೂಡಿಸಿತ್ತು. ಸದ್ಯ ಈ ಬಗ್ಗೆ ಮಾಜಿ ಸಂಸದೆ ಸುಮಲತಾ ಅಂಬರೀಷ್‌ ಮಾತನಾಡಿದ್ದಾರೆ.

ಮಂಡ್ಯದಲ್ಲಿ ಮಾತನಾಡಿದ ಅವರು, ಟ್ರೋಲ್‌, ಕೀಳಾಗಿ ಮಾತನಾಡುವದನ್ನು ಎದುರಿಸುವುದು ನನಗೆ ಹೊಸದಲ್ಲ. ನನ್ನ ಮೇಲೆ ಹಲ್ಲೆಯೂ ಆಗಿದೆ ಎಂದು ಮಾಜಿ ಸಂಸದೆ ಮತ್ತು ಹಿರಿಯ ನಟಿ ಸುಮಲತಾ ಅಂಬರೀಷ್ ಹೇಳಿದ್ದಾರೆ.

ಹಲ್ಲೆ ಕೇಸ್‌ಗೆ ನ್ಯಾಯ ಸಿಗಲೇ ಇಲ್ಲ

ನಾನು ಆನ್‌ಲೈನ್ ಟ್ರೋಲ್‌ಗಳು ಮತ್ತು ಕೀಳು ಮಾತುಗಳನ್ನು ಹೊಸದಾಗಿ ಎದುರಿಸುತ್ತಿಲ್ಲ. ಕಳೆದ ಐದಾರು ವರ್ಷಗಳಿಂದ ನಾನು ಇಂತಹ ವಿಷಯಗಳನ್ನು ಅನುಭವಿಸುತ್ತಿದ್ದೇನೆ. ಕೆ.ಆರ್.ನಗರದಲ್ಲಿ ನನ್ನ ಮೇಲೆ ಹಲ್ಲೆ ಕೂಡ ಆಗಿತ್ತು. ಆಗ ನಾನು ಪೊಲೀಸ್ ಠಾಣೆಗೆ ದೂರು ನೀಡಿದ್ದೆ. ಆದರೆ, ಇಲ್ಲಿಯವರೆಗೆ ನನಗೆ ನ್ಯಾಯ ಸಿಕ್ಕಿಲ್ಲ. ಹಲ್ಲೆ ಮಾಡಿದವರನ್ನು ಪೊಲೀಸರು ಬಂಧಿಸಿಲ್ಲ ಎಂದು ಸುಮಲತಾ ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಯುವಕರು ಸೋಶಿಯಲ್ ಮೀಡಿಯಾವನ್ನು ಹೇಗೆ ಬಳಸಬೇಕೆಂದು ಯೋಚಿಸಬೇಕು. ಸೋಶಿಯಲ್ ಮೀಡಿಯಾವನ್ನು ಬೇರೆಯವರನ್ನು ಟಾರ್ಗೆಟ್ ಮಾಡುವ ಆಯುಧವಾಗಿ ಬಳಸಬಾರದು. ಅನಾಮಿಕರಾಗಿ ಪೋಸ್ಟ್ ಮಾಡುತ್ತಿದ್ದೇವೆ ಎಂದು ಅವರು ಅಂದುಕೊಂಡಿದ್ದಾರೆ. ಆದರೆ, ಅವರನ್ನು ಕಂಡುಹಿಡಿಯುವ ತಂತ್ರಜ್ಞಾನ ಈಗ ಮುಂದುವರಿದಿದೆ. ನಮ್ಮವರನ್ನು ಟಾರ್ಗೆಟ್ ಮಾಡಿದರೆ, ಭಾವಕರಾಗಿ ಕೆಟ್ಟದಾಗಿ ಕಮೆಂಟ್ ಮಾಡಿದರೆ ಅವರ ಬದುಕು ಹಾಳಾಗುತ್ತದೆ ಎಂದು ಸುಮಲತಾ ಅಸಮಾಧಾನ ವ್ಯಕ್ತಪಡಿಸಿದರು.

ಸೋಶಿಯಲ್‌ ಮೀಡಿಯಾ ಬಳಕೆಯಲ್ಲಿರಲಿ ಎಚ್ಚರ

ಸೋಶಿಯಲ್ ಮೀಡಿಯಾದಲ್ಲಿ ಟಾರ್ಗೆಟ್ ಮಾಡುವ ಮೊದಲು ಯೋಚನೆ ಮಾಡಿ. ಪೋಸ್ಟ್ ಮಾಡುವುದರಿಂದ ಯಾವುದೇ ಉಪಯೋಗ ಇಲ್ಲ. ಸೋಶಿಯಲ್ ಮೀಡಿಯಾದಲ್ಲಿ ಏನನ್ನಾದರೂ ಬರೆಯುವ ಮೊದಲು ಅದರ ಬಗ್ಗೆ ತಿಳಿದುಕೊಳ್ಳುವುದು ಮುಖ್ಯ. ಸುಮ್ಮನೆ ಯಾರನ್ನೋ ಟಾರ್ಗೆಟ್ ಮಾಡುವುದು ತಪ್ಪು. ಇದರಿಂದ ಬೇರೆಯವರ ಜೀವನದಲ್ಲಿ ತೊಂದರೆಯಾಗುತ್ತದೆ.

ರಮ್ಯಗೆ ಕೆಟ್ಟ ಮೆಸೇಜ್‌ ಮಾಡಿದ್ದು ತಪ್ಪು

ನಟಿ ರಮ್ಯಗೆ ದರ್ಶನ್ ಅಭಿಮಾನಿಗಳಿಂದ ಕೆಟ್ಟ ಸಂದೇಶ ಕಳಿಸಿದ್ದು ತಪ್ಪು. ಹೆಣ್ಣು ಮಕ್ಕಳಿಗೆ ಕೆಟ್ಟ ರೀತಿಯ ಕಮೆಂಟ್ ಮಾಡಬಾರದು. ನಾನು ರಮ್ಯರ ಸೋಶಿಯಲ್ ಮೀಡಿಯಾ ನೋಡಿಲ್ಲ. ಅವರಿಗೆ ಯಾವ ರೀತಿಯ ಕಮೆಂಟ್ ಮಾಡಿದ್ದಾರೆ ಯಾರು ಮಾಡಿದ್ದಾರೆ ಎಂದು ಗೊತ್ತಿಲ್ಲ. ಮಾಧ್ಯಮಗಳಲ್ಲಿ ಅಷ್ಟೇ ನಾನು ಇದನ್ನು ನೋಡಿದ್ದೇನೆ ಅಷ್ಟೇ. ರಮ್ಯ ಅವರು ಪೊಲೀಸ್‌ಗೆ ದೂರು ನೀಡಿದ್ದಾರೆ. ಪೊಲೀಸ್ ತನಿಖೆ ಮಾಡಿ ತಪ್ಪು ಮಾಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತಾರೆ. ನಮ್ಮ ಸರ್ಕಾರ ಪೊಲೀಸ್ ಅವರು ರಮ್ಯಗೆ ಸ್ಪಂದಿಸುತ್ತಾರಾ?. ಜನರಿಗೂ ಹೀಗೆ ಸ್ಪಂದಿಸಿದರೆ ಸ್ವಾಗತ. ನ್ಯಾಯ ಅನ್ನೋದು ಪ್ರತಿಯೊಬ್ಬರಿಗೂ ಸಿಗಬೇಕು ಎಂದು ಸುಮಲತಾ ಅವರು ಹೇಳಿದರು.

Share This Article
Leave a Comment