ವರದಿ: ವಿ.ಲತಾ
ಮೈಸೂರು: ನಾಡದೇವತೆ, ಶಕ್ತಿ ದೇವತೆ ಹೀಗೆಲ್ಲಾ ಕರೆಸಿಕೊಳ್ಳುವ ಸಾಂಸ್ಕೃತಿಕ ನಗರಿ ಮೈಸೂರಿನ ಚಾಮುಂಡಿ ಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಿ ಇಡೀ ನಾಡಿನಲ್ಲೇ ಪೊಲೀಸರಿಂದ ಧ್ವಜ ಒಂದನೆ ಸ್ವೀಕರಿಸುವ ಏಕೈಕ ದೇವತೆ ಎಂಬ ವಿಚಾರ ಎಷ್ಟೋ ಮಂದಿಗೆ ಗೊತ್ತೇ ಇಲ್ಲ. ಹೌದು ನಿತ್ಯವೂ ನಾಡದೇವತೆ ಚಾಮುಂಡಿಗೆ ಪೊಲೀಸ್ ಸೆಲ್ಯೂಟ್ ಹಾಕುತ್ತಿದ್ದು, ಅದರ ವಿಶೇಷ ಇತಿಹಾಸ ಎನೆಂಬುದಕ್ಕೆ ಈ ಸ್ಟೋರಿ ಓದಿ..
ಹೌದು ಮೈಸೂರಿನ ಚಾಮುಂಡಿ ಬೆಟ್ಟದ ಮೇಲೆ ೧೦೦೧ ಮೆಟ್ಟಿಲು ಹತ್ತಿದಾಗ ಕಾಣಸಿಗುವ ಶ್ರೀ ಚಾಮುಂಡೇಶ್ವರಿ ದೇವಾಲಯ ವರ್ಷಪೂರ್ತಿ ಭಕ್ತರಿಂದಲೇ ತುಂಬಿ ತುಳುಕುತ್ತಿರುತ್ತದೆ. ಅದು ಪ್ರವಾಸಿ ತಾಣವಾಗಿ ಎನ್ನುವುದಕ್ಕಿಂತಲೂ ಹೆಚ್ಚಾಗಿ ಅದೊಂದು ಧಾರ್ಮಿಕ ಶಕ್ತಿ ಕೇಂದ್ರವಾಗಿಯೇ ಪ್ರಸಿದ್ಧಿ ಪಡೆದಿದೆ. ರಾಜಕೀಯ ನಾಯಕರಿಂದ ಹಿಡಿದು ಗಣ್ಯಾತೀಗಣ್ಯರೇ ಇಲ್ಲಿಗೆ ಭೇಟಿ ನೀಡಿದ ಅನಂತರವಷ್ಟೇ ತಮ್ಮ ಬದುಕಿನ ಕಾರ್ಯ ಮುನ್ನಡೆಸುವು ಪದ್ಧತಿ ಬೆಳೆದು ಬಂದಿದೆ.

ತಾಯಿ ಹಿನ್ನೆಲೆ: ಚಾಮುಂಡೇಶ್ವರಿ ಇಲ್ಲಿ ನೆಲೆಸಲು ಪ್ರಮುಖ ಕಾರಣವೆಂದರೆ ಪರಮ ತಪಸ್ವಿಯಾದ ಮಹಿಷ ಶಿವನಿಂದ ತನಗೆ ಯಾವುದೇ ಗಂಡು, ಹೆಣ್ಣು, ಪ್ರಾಣಿಗಳಿಂದಲೂ ತನಗೆ ಮರಣಬಾರದು ಎಂಬ ವರವನ್ನು ಪಡೆಯುತ್ತಾನೆ. ಆತನ ಕಿರುಕುಳಕ್ಕೆ ಒಳಗಾದ ಋಷಿಮುನಿಗಳು ಪಾರ್ವತಿಯ ಬಳಿಗೆ ಹೋಗಿ ಸಮಸ್ಯೆ ಪರಿಹರಿಸುವಂತೆ ಕೇಳುತ್ತಾರೆ.
ಇದಕ್ಕೆ ಪೂರಕವಾಗಿ ಪಾರ್ವತಿ ಎಲ್ಲಾ ದೇವತೆಗಳಿಂದ ಪಡೆದ ಹದಿನೆಂಟು ಆಯುಧಗಳಾದ ಕಮಲ, ಅಕ್ಷರಮಾಲೆ, ಬಾಣ, ಖಡ್ಗ, ವಜ್ರ, ಗದೆ, ತ್ರಿಶೂಲ, ಚಕ್ರ, ಪರಶು, ಘಂಟೆ, ಪಾಶ, ಶಕ್ತಿ, ದಂಡ, ಚರ್ಮ, ಧನಸ್ಸು, ಪಾನಪಾತ್ರೆ, ಕಮಂಡಲಗಳೊಡನೆ ದಿವ್ಯಾಭರಣಗಳಿಂದ ಅಲಂಕೃತಳಾಗಿ ಹಿಮವಂತ ನೀಡಿದ ಸಿಂಹವನ್ನೇರಿ ಉಗ್ರಸ್ವರೂಪಿಣಿಯಾಗಿ ಬಂದು ಮಹಿಷಾಸುರವನ್ನು ಸಂಹಾರ ಮಾಡಿ ಆ ಕ್ಷಣದಿಂದ ಮಹಿಷಾಸುರ ಮರ್ಧಿನಿ ಎಂಬ ಹೆಸರು ಪಡೆದು ಮಹಿಷ ಮಂಡಲದ ಬೆಟ್ಟದಲ್ಲಿ ನೆಲೆಸಿದಳು. ಆತನನ್ನು ವಿಜಯಿಸಿದ ದಿನವೇ ಮುಂದೆ ವಿಜಯದಶಮಿ ಆಯಿತು ಎಂಬುದು ಕಥೆಪುರಾಣ ಪ್ರಸಿದ್ಧಿ.
ಯದುವಂಶರ ಕುಲದೇವತೆ: ಮತ್ತೊಂದೆಡೆ ಮೈಸೂರನ್ನಾಳಿದ ಯದುವಂಶಸ್ಥರಾದ ಮೈಸೂರು ಮಹಾರಾಜರು ತಮ್ಮ ಕುಲದೇವತೆಯಾಗಿ ಚಾಮುಂಡೇಶ್ವರಿಯನ್ನು ಸ್ವೀಕರಿಸಿದ್ದರು. ಚಾಮುಂಡೇಶ್ವರಿ ದೇವಸ್ಥಾನ ಚೌಕಾಕೃತಿಯ ದ್ರಾವಿಡ ಶೈಲಿಯದ್ದಾಗಿದ್ದು, ಹೆಬ್ಬಾಗಿಲು, ಪ್ರವೇಶದ್ವಾರ, ನವರಂಗ, ಒಳಾಂಗಣ, ಗರ್ಭಗುಡಿ ಮತ್ತು ಇತರ ಪ್ರಕಾರಗಳನ್ನು ಹೊಂದಿದೆ. ಮಹಾದ್ವಾರದ ಮೇಲೆ ಸುಂದರವಾದ ಗಗನಚುಂಬಿ ಗೋಪುರ ಮತ್ತು ಗರ್ಭಗುಡಿಯ ಮೇಲೆ ವಿಮಾನ ಶಿಖರ ಇರುವುದು ದೇವಾಲಯದ ವಿಶೇಷ.
ಗೋಪುರದ ಮೇಲೆ ಏಳು ಚಿನ್ನದ ಕಳಶ
ಇದು ಏಳು ಅಂತಸ್ತುಗಳುಳ್ಳ ಗೋಪುರವಾಗಿದ್ದು ೧೯ನೇ ಶತಮಾನದಲ್ಲಿ ಪಿರಮಿಡ್ ಆಕಾರದಲ್ಲಿ ದ್ರಾವಿಡ ಶೈಲಿಯಲ್ಲಿ ನರ‍್ಮಾಣಗೊಂಡಿದ್ದು ಗೋಪುರದ ಮೇಲೆ ಏಳು ಚಿನ್ನದ ಕಳಶಗಳಿವೆ.
೧೮೨೭ರಲ್ಲಿ ಮೈಸೂರು ಮಹಾರಾಜ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು ಸಾವಿರ ವರ್ಷಕ್ಕೂ ಹಿಂದಿನ ಇತಿಹಾಸವುಳ್ಳ ಈ ದೇವಸ್ಥಾನವನ್ನು ಆಸಕ್ತಿಯಿಂದ ಜಿರ್ಣೋದ್ದಾರ ಮಾಡಿ ಮಹಾದ್ವಾರದ ಮೇಲೆ ಏಳು ಚಿನ್ನದ ಕಳಸವನ್ನು ಏಳು ಗೋಪುರದ ಮೇಲೆ ಕಟ್ಟಿಸಿದರು. ಚಾಮುಂಡಿ ತಾಯಿಗೆ ಚೆಂದದ ಸಿಂಹವಾಹನವೊಂದನ್ನು ಮರದಲ್ಲಿ ನಿರ್ಮಿಸಿ ಇತಿಹಾಸ ಬರೆದರು. ಆ ರಥವನ್ನೇ ಇಂದಿಗೂ ಚಾಮುಂಡೇಶ್ವರಿ ರಥೋತ್ಸವ ಸಂದರ್ಭದಲ್ಲಿ ಬಳಸಲಾಗುತ್ತಿದೆ.
ನಿತ್ಯವೂ ಪೊಲೀಸ್ ಸೆಲ್ಯೂಟ್:
ಮಹಾರಾಜರ ಕುಲದೇವತೆಯಾಗಿದ್ದರಿಂದ ಅಂದಿನ ಅರಮನೆ ಆಸ್ತಾನಿಕರು ಪ್ರತಿನಿತ್ಯವೂ ಬೆಳಿಗ್ಗೆ ಹಾಗೂ ಸಂಜೆ ದೇವತೆಗೆ ಬಂದು ಅರಮನೆ ಪರವಾಗಿ ನಮಿಸಿ ಹೋಗುವ ಪದ್ಧತಿ ರೂಢಿಯಲ್ಲಿತ್ತು. ಮಾತ್ರವಲ್ಲದೆ, ಅರಮನೆಯ ಯಾವುದೇ ಶುಭ ಸಮಾರಂಭಕ್ಕೂ ಮುನ್ನ ಚಾಮುಂಡೇಶ್ವರಿಯ ದರ್ಶನ, ಆಶೀರ್ವಾದ ಕಡ್ಡಾಯವಾಗಿತ್ತು. ಅದನ್ನು ಈಗಲೂ ಮುಂದುವರೆಸಿಕೊಂಡು ಹೋಗಲಾಗುತ್ತಿದೆ.
ಹೀಗಿರುವಾಗ ಮಹಾರಾಜರ ಪದ್ಧತಿಯಿಂದ ಪ್ರಜಾಪ್ರಭುತ್ವ ಪದ್ಧತಿಗೆ ಬಂದ ಬಳಿಕ ಅಂದಿನ ಆಸ್ತಾನಿಕರ ಬದಲಿಗೆ ಈಗಿ ಕೃಷ್ಣರಾಜ ಠಾಣೆಯ ವ್ಯಾಪ್ತಿಯ ಪೊಲೀಸರು ಬೆಳ್ಳಿಗ್ಗೆ ೯.೩೦ ಹಾಗೂ ರಾತ್ರಿ ೯.೩೦ರ ಮಹಾ ಮಂಗಳಾರತಿ ಸಂಧರ್ಭಕ್ಕೆ ಸರಿಯಾಗಿ ಆಗಮಿಸಿ ತಮ್ಮ ಬಂದೂಕು ಹಿಡಿದು ಧ್ವಜ ವಂದನೆ ಸಲ್ಲಿಸುವ ಸಂಪ್ರದಾಯವನ್ನು ಮುಂದುವರೆಸಿದ್ದಾರೆ. ಆ ಮೂಲಕ ದೇಶದಲ್ಲೇ ಖಾಕಿ ಪೊಲೀಸರಿಂದ ವಂದನೆ ಸ್ವೀಕರಿಸುವ ಏಕೈಕ ಶಕ್ತಿ ದೇವತೆ ಎಂಬ ಖ್ಯಾತಿಯೂ ಚಾಮುಂಡೇಶ್ವರಿಯದ್ದಾಗಿದೆ.
ಇನ್ನೂ ನಿತ್ಯವೂ ಧ್ವಜ ವಂದನೆ ನೀಡುವ ಕೆಲಸವನ್ನು ಪೊಲೀಸ್ ಸಿಬ್ಬಂದಿಗಳು ಸಂತಸ ಹಾಗೂ ಗೌರವದಿಂದಲೇ ಪೂರ್ಣಗೊಳಿಸುತ್ತಿದ್ದು, ಸದ್ದಿಲ್ಲದೆ ತಾಯಿ ಚಾಮುಂಡಿಗೆ ನಿತ್ಯವೂ ಪೊಲೀಸರ ಸೆಲ್ಯೂಟ್ ಅರ್ಪಿಸಲಾಗುತ್ತಿದೆ.
