ಅವೈಜ್ಞಾನಿಕ ನಿರ್ಮಾಣ, ದುರ್ಬಲ ಕಟ್ಟಡಗಳನ್ನು ಗುರುತಿಸಿ ನೋಟಿಸ್ ಜಾರಿ: ಡಿಸಿಎಂ

admin
1 Min Read



-ವರದಿ :ಕೆ. ಚೇತನ್.-
ಬೆಂಗಳೂರು: “ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿರುವ ಹಾಗೂ ದುರ್ಬಲಗೊಂಡಿರುವ ಕಟ್ಟಡಗಳನ್ನು ಮೊದಲು ಭದ್ರಗೊಳಿಸುವ ಕೆಲಸವಾಗಬೇಕು. ಇಂತಹ ಕಟ್ಟಡಗಳನ್ನು ಗುರುತಿಸಿ ನೋಟಿಸ್ ನೀಡುವಂತೆ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಲಾಗಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು.
ಧರ್ಮರಾಯಸ್ವಾಮಿ ದೇವಾಲಯದ ಬಳಿಯ ನಗರ್ತಪೇಟೆಯಲ್ಲಿ ಬೆಂಕಿ ಅವಘಡದಿಂದ ಹಾನಿಗೊಳಗಾದ ಸ್ಥಳಕ್ಕೆ ಡಿಸಿಎಂ ಶಿವಕುಮಾರ್ ಅವರು ಭಾನುವಾರ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು. ನಂತರ ಘಟನಾ ಸ್ಥಳ ಹಾಗೂ ಸದಾಶಿವನಗರದ ನಿವಾಸದ ಬಳಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.
“ಎರಡು, ಮೂರು ಮಹಡಿಗಳನ್ನು ಕಟ್ಟುವ ಕಡೆಗಳಲ್ಲಿ ಎಂಟತ್ತು ಮಹಡಿಗಳನ್ನು ನಿರ್ಮಾಣ ಮಾಡಲಾಗಿದೆ. ಹಲವಾರು ಕಟ್ಟಡಗಳು ವಾಸಕ್ಕೆ ಯೋಗ್ಯವಿಲ್ಲದಂತಾಗಿವೆ. ಇಂತಹ ಕಟ್ಟಡಗಳನ್ನು ಹೊಡೆದು ಹಾಕುವುದು ನಂತರದ ವಿಚಾರ. ಇದರ ಬಗ್ಗೆ ಮೊದಲು ಸಮೀಕ್ಷೆ ನಡೆಸಲಾಗುವುದು.‌ ಇದು ಒಂದೇ ದಿನಕ್ಕೆ ಮುಗಿಯುವ ಕೆಲಸವಲ್ಲ. ವರ್ಷಗಟ್ಟಲೆ ಹಿಡಿಯುತ್ತದೆ. ದೆಹಲಿ, ಮುಂಬೈನಲ್ಲೂ ಇದೇ ಪರಿಸ್ಥಿತಿ ಎದುರಾಗಿದೆ. ಒಳಗೆ ಬಂದು ನೋಡಿದಾಗ ನನಗೆ ಗಾಬರಿಯಾಯಿತು. ಇಂತಹ ಇಕ್ಕಟ್ಟಿನ ಜಾಗದಲ್ಲಿ ಬೆಂಕಿ ಅವಘಡ ನಡೆದರೆ ಜನ ಓಡಿ ಹೋಗುತ್ತಾರೆ, ಆಗ ಕಾಲ್ತುಳಿತ ಉಂಟಾಗಿಯೇ ಜನ ಸಾಯುತ್ತಾರೆ” ಎಂದರು.
ಮೃತರಿಗೆ ತಲಾ ಐದು ಲಕ್ಷ ಪರಿಹಾರ: ನಿರ್ಲಕ್ಷ್ಯ ವಹಿಸಿರುವ ಕಟ್ಟಡ ಮಾಲೀಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ.‌ ಅವಘಡ ನಡೆದ ಕಟ್ಟಡದ ಮಾಲೀಕರನ್ನೂ ಸಹ ಬಂಧಿಸಲಾಗಿದೆ. ಸೂಕ್ತ ಕಾನೂನು ಕ್ರಮ ಜರುಗಿಸಲು ಪೊಲೀಸರಿಗೆ ಮುಕ್ತ ಅವಕಾಶ ನೀಡಲಾಗಿದೆ. ಅವಘಡದಲ್ಲಿ ಮೃತಪಟ್ಟ ಪ್ರತಿ ವ್ಯಕ್ತಿಗಳ ಕುಟುಂಬಸ್ಥರಿಗೆ 5 ಲಕ್ಷ ರೂ. ಪರಿಹಾರ ನೀಡಲು ಸರ್ಕಾರ ತೀರ್ಮಾನಿಸಿದೆ” ಎಂದು ತಿಳಿಸಿದರು.
ಕೂಡಲೇ ದುರ್ಬಲ ಕಟ್ಟಡಗಳನ್ನು ಕೆಡವಲು ಹೋಗುವುದಿಲ್ಲ. ಮಾಲೀಕರು ಕೂಡಲೇ ದುರಸ್ಥಿಗೆ ಒಳಪಡಿಸಬೇಕು. ಇಲ್ಲದಿದ್ದರೆ ಕ್ರಮ ತೆಗೆದುಕೊಳ್ಳುತ್ತೇವೆ. ಏಕೆಂದರೆ ದುರ್ಬಲಗೊಂಡಿರುವ ಕಟ್ಟಡಗಳು ಕುಸಿತವಾಗಿ ದೊಡ್ಡ ಸಮಸ್ಯೆ ಎದುರಾಗುವುದು ಬೇಡ. ಭವಿಷ್ಯದಲ್ಲಿ ಈ ರೀತಿಯಾಗಿ ಕಟ್ಟಡಗಳ ನಿರ್ಮಾಣಕ್ಕೆ ಯಾವುದೇ ಕಾರಣಕ್ಕೂ ಅನುಮತಿ ನೀಡುವುದಿಲ್ಲ” ಎಂದು ಹೇಳಿದರು.

Share This Article
Leave a Comment