ಕರ್ನಾಟಕ ಪ್ರಾಚೀನ ದೇವಾಲಯಗಳು” ಕುರಿತ ಛಾಯಾಚಿತ್ರ ಪ್ರದರ್ಶನ

admin
1 Min Read


– ವರದಿ : ವಿ ಲತಾ.-

ಮೈಸೂರು: ವಿಶ್ವ ಛಾಯಾಗ್ರಾಹಕರ ದಿನಾಚರಣೆ ಅಂಗವಾಗಿ ಮೈಸೂರಿನ ಕಲಾಮಂದಿರದ ಸುಚಿತ್ರಾ ಕಲಾ ಗ್ಯಾಲರಿಯಲ್ಲಿ ವಾರ್ತಾ ಇಲಾಖೆ ನಿವೃತ್ತ ಅಧಿಕಾರಿ ಟಿ.ಕೆಂಪಣ್ಣ ಅವರು ಏರ್ಪಡಿಸಿರುವ “ಕರ್ನಾಟಕ ಪ್ರಾಚೀನ ದೇವಾಲಯಗಳು” ಕುರಿತ ಛಾಯಾಚಿತ್ರ ಪ್ರದರ್ಶನವನ್ನು ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷ ಪ.ಸ.ಕುಮಾರ್ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು,  ಟಿ.ಕೆಂಪಣ್ಣ ಅವರ ಛಾಯಾಚಿತ್ರಗಳನ್ನು ಮೂರು ದಶಕಗಳಿಂದ ಗಮನಿಸುತ್ತಾ ಬಂದಿದ್ದೇನೆ. ಅವರ ಹಳ್ಳಿಯ ಜೀವನ ಕುರಿತ ಚಿತ್ರಗಳು ಅದ್ಭುತ. ಚಿತ್ರಗಳನ್ನು ಗಮನಿಸಿದಾಗ ಮಣ್ಣಿನ ವಾಸನೆ, ಜನಜೀವನ ಕಂಡು ಬರುತ್ತದೆ. ಈ ರೀತಿಯ ಚಿತ್ರಗಳನ್ನು ತೆಗೆಯುವುದು ಕಷ್ಟದ ಕೆಲಸ. ಇದಕ್ಕೆ ಬದ್ಧತೆ ಬೇಕು ಎಂದರು. ಕಲೆ ಮತ್ತು ಛಾಯಾಚಿತ್ರ ಪರಸ್ಪರ ಅಂತರ್ಗತವಾದವು. ಕಲಾವಿದರು ಮತ್ತು ಛಾಯಾಚಿತ್ರಕಾರರಿಗೆ ಬೆಳಕು ಮುಖ್ಯ. ಹಾಗೇ ಕಲೆ ಸೃಜನಾತ್ಮಕವಾದುದು. ಛಾಯಾಚಿತ್ರ ಆ ಕ್ಷಣಕ್ಕೆ ಕ್ಲಿಕ್ಕಿಸುವಂಥದ್ದು. ಕಲಾವಿದರಿಗೆ ಕ್ಯಾನ್ವಾಸ್, ಛಾಯಾಗ್ರಾಹಕರಿಗೆ ಕ್ಯಾಮರಾ ಮುಖ್ಯ ಎಂದು ತಿಳಿಸಿದರು.
ಕೆಂಪಣ್ಣ ಅವರು ಈಗ ಏರ್ಪಡಿಸಿರುವ ಪ್ರಾಚೀನ ದೇವಾಲಯಗಳ ಛಾಯಾಚಿತ್ರಗಳು ನಮ್ಮ ಇತಿಹಾಸ, ಸಂಸ್ಕೃತಿ, ಸಂಪ್ರದಾಯವನ್ನು ಪ್ರತಿಬಿಂಬಿಸುತ್ತವೆ. ಈಗ ಕದಂಬರು, ಚಾಲುಕ್ಯರು, ಹೊಯ್ಸಳರು ಇಲ್ಲ. ಆದರೆ ಅವರ ಕಾಲದ ದೇವಸ್ಥಾನಗಳಿವೆ. ಸ್ವಾತಂತ್ರ್ಯ ನಂತರ ನಾವು ಆ ಕಾಲದ ರೀತಿಯ ದೇವಾಲಯಗಳನ್ನು  ನಿರ್ಮಿಸಲಾಗಿಲ್ಲ. ಆ ರೀತಿಯ ಶಿಲ್ಪಕಾರರು ಇಲ್ಲ.  ಈಗ ಕೃತಕ ಬುದ್ಧಿಮತ್ತೆ (ಎಐ) ಬಂದಿದ್ದರೂ ಅದಕ್ಕೆ ನಿರ್ದೇಶನ ನೀಡುವುದು ಮನುಷ್ಯರೇ. ಹೀಗಾಗಿ ಎಐನಿಂದ ಕಲೆಗೆ ತೊಂದರೆಯಾಗದು ಎಂದರು. ವಿಶ್ವ ಪತ್ರಿಕಾ ಛಾಯಾಗ್ರಾಹಕರ ದಿನಾಚರಣೆ ಅಂಗವಾಗಿ ಹಿರಿಯ ಛಾಯಾಗ್ರಾಹಕರಾದ ಎಸ್. ರಾಮಪ್ರಸಾದ್, ಎಸ್.ಎಂ.ಜಂಬುಕೇಶ್ವರ, ಪ್ರಗತಿ ಗೋಪಾಲಕೃಷ್ಣ, ಜಗದೀಶ್ ಅವರನ್ನು ಸನ್ಮಾನಿಸಲಾಯಿತು. ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮುಖ್ಯಅತಿಥಿಯಾಗಿದ್ದರು. ಮೈಸೂರು ಪಾಲಿಮರ್ಸ್  ಸಿಇಒ ಜಿ. ರಾಜಗೋಪಾಲಯ್ಯ,  ವೆಂಕಟರಾಮ್ ಕುಪ್ಯಾ, ಸಿರಿಗಂಧ ಶ್ರೀನಿವಾಸಮೂರ್ತಿ ಉಪಸ್ಥಿತರಿದ್ದರು.

Share This Article
Leave a Comment