ಸಾಧಕರಿಗೆ ಧ್ವನಿಕೊಟ್ಟ ಧಣಿ ಪ್ರಶಸ್ತಿ ಪ್ರಧಾನ 

Pratheek
2 Min Read

ಪಬ್ಲಿಕ್ ಅಲರ್ಟ್


ಮೈಸೂರು: ಬೆಂಗಳೂರಿನ ವಿಶ್ರಾಂತ ಪ್ರಾಧ್ಯಾಪಕಿ ಭ್ರಮರ ಬಹದ್ದೂರ್, ಮಂಡ್ಯ ಜಿಲ್ಲೆ ಕರ್ನಾಟಕ ಕರಾವಳಿ ಸಾಂಸ್ಕೃತಿಕ ಒಕ್ಕೂಟ ಸ್ಥಾಪಕ ಜಗನ್ನಾಥ ಶೆಟ್ಟಿ, ಮಂಗಳೂರು ಹಿರಿಯ ಯೋಗ ಶಿಕ್ಷಕ ಜಗದೀಶ್ ಶೆಟ್ಟರ್, ಮೈಸೂರಿನ ಹಿರಿಯ ಪತ್ರಿಕಾ ಛಾಯಾಗ್ರಾಹಕ ಲಕ್ಷ್ಮಿನಾರಾಯಣ ಯಾದವ್, ಕೊಪ್ಪಳ ಜಿಲ್ಲೆಯ ಗೋವಾ ಚಳವಳಿಗಾರ ಗಿರಿಜಾಶಂಕರ್ ಪಾಟೀಲ ಮತ್ತು ಕೊಡಗು ಇನ್ಸಿಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಸಹ ಪ್ರಾಧ್ಯಾಪಕ ಡಾ.ಆನಂದ್ ಅವರಿಗೆ ಧ್ವನಿ ಕೊಟ್ಟ ದಣಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ನಗರದ ಎಂಜಿನಿಯರುಗಳ ಸಂಸ್ಥೆಯ ಸಭಾಂಗಣದಲ್ಲಿ ಅನ್ವೇಷಣಾ ಸೇವಾ ಟ್ರಸ್ಟ್, ಅರಸು ಜಾಗೃತಿ ಅಕಾಡೆಮಿ ಚಾರಿಟಬಲ್ ಟ್ರಸ್ಟ್ ಸಂಯುಕ್ತವಾಗಿ ಶುಕ್ರವಾರ ಆಯೋಜಿಸಿದ್ದ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸ್ ಅವರ 110ನೇ ಹುಟ್ಟಹಬ್ಬದ ಸಂಭ್ರಮ ಹಾಗೂ ಧ್ವನಿ ಕೊಟ್ಟ ದಣಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ವಿಧಾನಪರಿಷತ್ತು ಸದಸ್ಯ ಡಾ.ಡಿ.ತಿಮ್ಮಯ್ಯ ಉದ್ಘಾಟಿಸಿ ಅವರು ಮಾತನಾಡಿದರು. ಡಿ. ದೇವರಾಜ ಅರಸು ಅವರು ತಬ್ಬಲಿ, ಅಸಹಾಯಕರನ್ನು ಕಂಡರೇ ಬಹಳ ಕರುಣೆ ತೋರುತ್ತಿದ್ದರು. ಅವರು ಸಮಾಜದಲ್ಲಿ ನಿಜವಾಗಿಯೂ ಧ್ವನಿ ಇಲ್ಲದವರಿಗೆ ಧ್ವನಿ ಕೊಟ್ಟವರು. ದೇವರಾಜ ಅರಸು ಅವರ ನೇತೃತ್ವದಲ್ಲಿ 70ರ ದಶಕದಲ್ಲಿ 217 ಸ್ಥಾನಗಳ ಪೈಕಿ 165 ಸ್ಥಾನವನ್ನು ಕಾಂಗ್ರೆಸ್ ಜಯ ಸಾಧಿಸಿತ್ತು. ಇದರಲ್ಲಿ 93 ಜನ ಅಸಹಾಯಕ, ಶೋಷಿತ, ಸಣ್ಣ ಸಣ್ಣ ಜಾತಿಯ, ಕೆಳ ಸಮುದಾಯದವರು ಇದ್ದರು. ಕೆಳ ಸಮುದಾಯದವರನ್ನು ಕಂಡರೇ ಅರಸು ಅವರಿಗೆ ಪ್ರೀತಿ ಜಾಸ್ತಿ. ಕಷ್ಟದಲ್ಲಿ ಇದ್ದವರಿಗೆ ಸಹಾಯ ಮಾಡುತ್ತಿದ್ದ ತಾಯಿಕರುಳು ಹೊಂದಿದ್ದರು. ಜೀತ ಪದ್ಧತಿ ರದ್ದುಗೊಳಿಸಿ 1.50 ಲಕ್ಷ ಜೀತದಾಳುಗಳನ್ನು ಬಿಡುಗಡೆಗೊಳಿಸಿದರು. ಉಳುವವನೇ ಭೂ ಒಡೆಯ ಕಾನೂನು ಮೂಲಕ ನೊಂದವರ ನಂದಾದೀಪವಾದರು ಎಂದು ಹೇಳಿದರು.
ಈಗಿನ ರಾಜಕಾರಣಿಗಳು ಕೋಟ್ಯಂತರ ರೂಪಾಯಿ ಸಂಪಾದಿಸುತ್ತಿದ್ದಾರೆ. ಬೆಂಗಳೂರು, ದೆಹಲಿ, ದುಬೈನಲ್ಲಿ ಮನೆ ಮಾಡಿದ್ದಾರೆ. ಆದರೆ, ದೇವರಾಜ ಅರಸು ಅವರಿಗೆ ಬೆಂಗಳೂರು, ಮೈಸೂರಿನಲ್ಲಿ ಸ್ವಂತ ಮನೆ ಇಲ್ಲ. ಅವರ ಹುಟ್ಟೂರಿನಲ್ಲಿ ಮಾತ್ರ ಮನೆ ಇದೆ ಎಂದು ಹೇಳುವ ಮೂಲಕ ಬಾವುಕರಾದರು. ಕಂಠೀರವ ಸ್ಪುಡಿಯೋ ಮಾಜಿ ಅಧ್ಯಕ್ಷೆ ವಿಜಯಲಕ್ಷ್ಮಿ ಅರಸ್ ಅಧ್ಯಕ್ಷತೆ ವಹಿಸಿದ್ದರು. ವಿಶ್ರಾಂತ ಕುಲಪತಿ ಡಾ.ವೈ.ಎಸ್. ಸಿದ್ದೇಗೌಡ, ಅನ್ವೇಷಣಾ ಸೇವಾ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಅಮರ್ ನಾಥರಾಜೇ ಅರಸ್, ಅರಸು ಜಾಗೃತಿ ಅಕಾಡೆಮಿ ಚಾರಿಟಬಲ್ ಟ್ರಸ್ಟ್ ಉಪಾಧ್ಯಕ್ಷರಾದ ಕೆಪಿಸಿಸಿ ವಕ್ತಾರ ಎಚ್.ಎ. ವೆಂಕಟೇಶ್, ಗೌರವ ಕಾರ್ಯದರ್ಶಿ ಡಾ.ಎಂ.ಜಿ.ಆರ್. ಅರಸ್ ಮೊದಲಾದವರು ಇದ್ದರು.

Share This Article
Leave a Comment