ಪಬ್ಲಿಕ್ ಅಲರ್ಟ್
ಮೈಸೂರು : ಈ ಜಗತ್ತು ಶಾಂತಿಯುತವಾಗಿರಲು ಯುದ್ಧ ಬೇಡ, ಬುದ್ಧ ಬೇಕು ಎಂದು ಬೀದರ್ ಜಿಲ್ಲೆಯ ಅಣದೂರು ಬುದ್ಧ ವಿಹಾರದ ವರಜ್ಯೋತಿ ಬಂತೇಜಿ ಹೇಳಿದರು.
ವಿಜಯನಗರ ಒಂದನೇ ಹಂತದ ಡಿ.ಸಂಜೀವಯ್ಯ ಸ್ಮಾರಕ ಶಿಕ್ಷಣ ಸಂಸ್ಥೆ ಆವರಣದಲ್ಲಿರುವ ಸಿದ್ದಾರ್ಥ ಬುದ್ಧ ವಿಹಾರದಲ್ಲಿ ಹಮ್ಮಿಕೊಂಡಿದ್ದ ಬುದ್ದವಂದನಾ ಕಾರ್ಯಕ್ರಮದಲ್ಲಿ ಭಗವಾನ್ ಬುದ್ಧರ ಮೂರ್ತಿಗೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.
ಮನಸ್ಸು ಶಾಂತಚಿತ್ತದಿಂದ ಮತ್ತು ಏಕಾಗ್ರತೆಯಿಂದಿರಲು ಧ್ಯಾನ ಅತ್ಯಗತ್ಯ. ಎಲ್ಲಿ ಬುದ್ಧರು ಉದಯಿಸುತ್ತಾರೋ, ಪ್ರತಿಷ್ಠಾಪನೆಗೊಳ್ಳುತ್ತಾರೋ ಅಲ್ಲಿ ಸುಖ-ಶಾಂತಿ, ನೆಮ್ಮದಿ ಇರುತ್ತದೆ. ಇದು ಎಲ್ಲೋ ಸಿಗುವ ವಸ್ತುವಲ್ಲ, ಧ್ಯಾನದಿಂದ ಇದಕ್ಕೆ ಸಿದ್ಧ ಔ ಷಧ ಸಿಗುತ್ತದೆ ಎಂದರು.
ಆಸ್ಪತ್ರೆಗಳು ರೋಗಿಗಳಿಗೆ ಎಷ್ಟು ಮುಖ್ಯವೋ ಹಾಗೆ ಕೂಡ ಮನುಷ್ಯನಿಗೆ ಶಾಂತಿ, ನೆಮ್ಮದಿ ತಂದು ಕೊಡುವ ಬುದ್ಧ ವಿಹಾರಗಳು ಅಷ್ಟೇ ಮುಖ್ಯ. ಆಸ್ಪತ್ರೆಗಳು ರೋಗಗಳನ್ನು ನಿಯಂತ್ರಿಸುವ ಕೇಂದ್ರಗಳಾದರೆ, ಬುದ್ಧ ವಿಹಾರಗಳು ಮಾನಸಿಕ ಪ್ರಜ್ಞೆಯನ್ನು ತಂದು ಕೊಡುವ ಕೇಂದ್ರಗಳಾಗಿವೆ. ಹಾಗಾಗಿ ದೇಶ, ವಿದೇಶಗಳಲ್ಲಿ ಬುದ್ಧ ವಿಹಾರಗಳು ತಲೆ ಎತ್ತುತ್ತಿದ್ದು, ಧ್ಯಾನದ ಮೂಲಕ ಮನಸ್ಸನ್ನು ಪರಿಶುದ್ಧಗೊಳಿಸುವ ಕೆಲಸ ಮಾಡುತ್ತಿವೆ. ಕಲುಷಿತ ಗೊಂಡಿರುವ ಇಂದಿನ ಸಮಾಜವನ್ನು ಸರಿದಾರಿ ಕಡೆಗೆ ತರಲು ಬುದ್ಧರ ಬೋಧನೆಗಳು ಅನಿವಾರ್ಯವಾಗಿ ಬೇಕಿದೆ ಎಂದರು.
ಎಲ್ಲ ಜೀವ ಸಂಕುಲಗಳಿಗೂ ಒಳ್ಳೆಯದಾಗಲಿ ಎಂದು ಹಾರೈಸಿದ ಮಹಾನ್ ಮಾನವತಾವಾದಿ, ಮಾರ್ಗದಾತ ಭಗವಾನ್ ಬುದ್ಧರು ಎಂದು ಬಣ್ಣಿಸಿದರು.
ಸಮಿತಿಯ ಅಧ್ಯಕ್ಷ ಪ್ರೊ.ಡಿ.ನಂಜುಂಡಯ್ಯ, ಸಹ ಕಾರ್ಯದರ್ಶಿ ಎಚ್. ಶಿವರಾಜ್, ಉಪಾಧ್ಯಕ್ಷ ಪಿ. ಮಹದೇವ್, ಎಂ. ಸಾವಕಯ್ಯ, ಆರ್. ನಟರಾಜ್, ನಿಸರ್ಗ ಸಿದ್ದರಾಜು, ಲಿಂಗಣ್ಣಯ್ಯ, ಗಂಗಾಧರ್, ಡಾ. ನಂಜುಂಡ ಸ್ವಾಮಿ, ಬಿ. ಆರ್.ಪುನೀತ್, ಎಸ್. ಆನಂದ್, ಮಹೇಶ್, ಸುರೇಶ್ ಕಂದೇಗಾಲ, ವಿಜಯ್ ಇನ್ನಿತರರು ಹಾಜರಿದ್ದರು.
ಬಾಕ್ಸ್…
ಸಂಸ್ಕಾರವಿಲ್ಲದ ಶಿಕ್ಷಣ ಫಲ ಕೊಡದ ಮರವಿದ್ದಂತೆ. ಈ ಜಗತ್ತಿಗೆ ಬುದ್ಧ, ಬಾಬಾ ಸಾಹೇಬ್ ಅಂಬೇಡ್ಕರ್ ಅನಿವಾರ್ಯವಾಗಿದ್ದು, ಇಂದಿನ ಯುವ ಪೀಳಿಗೆಗೆ ಬುದ್ಧ ಧಮ್ಮದ ಸಂಸ್ಕಾರ ಬೇಕಿದೆ. ಅನ್ಯ ಧರ್ಮಗಳನ್ನು ಗೌರವಿಸೋಣ, ಅಂಬೇಡ್ಕರ್ ತೋರಿಸಿದ ಬುದ್ಧ ಧಮ್ಮವನ್ನು ಆರಾಧಿಸೋಣ.
-ವರಜ್ಯೋತಿ ಬಂತೇಜಿ, ಅಣದೂರು ಬುದ್ಧ ವಿಹಾರ, ಬೀದರ್
*’ಆಸ್ಪತ್ರೆಗಳಷ್ಟೇ ಬೌದ್ಧ ವಿಹಾರಗಳು ಅತ್ಯಗತ್ಯ’*

Leave a Comment
Leave a Comment