ಪಬ್ಲಿಕ್ ಅಲರ್ಟ್
ಮೈಸೂರು: ನಾಯಕತ್ವದ ಮರುಪರಿಕಲ್ಪನೆಯ ಬಗ್ಗೆ ಚರ್ಚಿಸಿದ ಸುಶೀಮಾ ವಿ. ನಾಯಕನಾದವನು ವಿನೂತನ ಯೋಜನೆಗಳು, ಭವಿಷ್ಯತ್ತನ್ನು ಗಮನದಲ್ಲಿಟ್ಟುಕೊಂಡ ಅಭಿವೃದ್ಧಿ ಮಾದರಿಗಳನ್ನು ರೂಪಿಸಬೇಕು ಎಂದರು. ʼನಿಜವಾದ ನಾಯಕತ್ವವು ಜೋತೆಯಲ್ಲಿರುವವರಿಗೆ ಸ್ಫೂರ್ತಿಯನ್ನು, ಪ್ರೇರಣೆಯನ್ನು ನೀಡುವದರೊಂದಿಗೆ ಸ್ಥೈರ್ಯವನ್ನು ತುಂಬುತ್ತದೆ,ʼ ಎಂದು ಸೈಕೋಯಿ ಸಿಪಿಎಂಸಿ ಪ್ರೈ.ಲಿ. ನ ಕೋಫೌಂಡರ್ ಮತ್ತು ಜಾಯಿಂಟ್ ಮ್ಯಾನೇಜಿಂಗ್ ಡೈರೆಕ್ಟರ್ ವಿ.ಸುಶೀಮಾ ಹೇಳಿದರು.
ಮೈಸೂರಿನ ಪ್ರತಿಷ್ಠಿತ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಇನ್ಸ್‌ಟಿಟ್ಯೂಟ್ ಫಾರ್ ಮ್ಯಾನೇಜ್‌ಮೆಂಟ್ ಡೆವಲಪ್‌ಮೆಂಟ್‌ನಲ್ಲಿ ನಾಯಕತ್ವದ ಕುರಿತಾದ ಮೂರನೇ ಅಂತರಾಷ್ಟ್ರೀಯ ವಿಚಾರಸಂಕಿರಣವನ್ನು ಉದ್ಘಾಟಿಸಲಾಯಿತು. ʼಲೀಡಿಂಗ್ ಇನ್ ಡಿಸ್ರಪ್ಟೆಡ್ ವರ್ಲ್ಡ್: ರಿಇಮ್ಯಾಜಿನಿಂಗ್ ಲೀಡರ್‌ಶಿಪ್ ಫಾರ್ ಕಾಂಪ್ಲೆಕ್ಸಿಟಿ, ಸಸ್ಟೆನೇಬಿಲಿಟಿ ಅಂಡ್ ಹ್ಯೂಮನ್ ಸೆಂಟ್ರಿಕ್ ಇನ್ನೋವೇಶನ್ʼ ಎಂಬ ಕೇಂದ್ರ ವಿಷಯದಡಿಯಲ್ಲಿ ಈ ಬಾರಿಯ ವಿಚಾರ ಸಂಕಿರಣವು ಆಯೋಜನೆಗೊಂಡಿದ್ದು ವಿಚಾರ ಸಂಕಿರಣದ ದಿಕ್ಸೂಚಿ ಭಾಷಣವನ್ನು ಮಾಡಿದರು. ʼಫ್ರಂ ಲೀಡರ್‌ಶಿಪ್ ಟು ಎಕ್ಸ್‌ಪೊನೆನ್ಶಿಯಲ್ ಫ್ಯೂಚರ್ʼ ವಿಷಯ ಕುರಿತು ಮಾತನಾಡಿದ ಅವರು ತ್ವರಿತ ಗತಿಯಲ್ಲಿ ಬದಲಾಗುತ್ತಿರುವ ಅಂತರಾಷ್ಟ್ರೀಯ ವಿದ್ಯಮಾನಗಳು, ಅದರಿಂದಾಗಿ ವ್ಯವಹಾರ ಕ್ಷೇತ್ರದಲ್ಲಾಗುತ್ತಿರುವ ಅಡೆತಡೆಗಳ ಬಗ್ಗೆ ವಿವರಿಸಿದ ಅವರು ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವ್ಯವಹಾರ ತಂತ್ರಗಾರಿಕೆಯನ್ನು ಮರುವ್ಯಾಖ್ಯಾನಿಸಬೇಕಾದ ಅವಶ್ಯಕತೆಯ ಬಗ್ಗೆ ತಿಳಿಸಿದರು. ಶೀಘ್ರಗತಿಯಲ್ಲಿ ಬದಲಾಗುತ್ತಿರುವ ಜಾಗತಿಕ ಸ್ಥಿತ್ಯಂತರಗಳಿಗೆ ಅನುಗುಣವಾಗಿ ಒಬ್ಬ ನಾಯಕನು ಕ್ಷಿಪ್ರ ಕ್ಷಮತೆಯ ಕೌಶಲ್ಯವನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಉದ್ಘಾಟನಾ ಭಾಷಣವನ್ನು ಮಾಡಿದ ಎಸ್‌ಡಿಎಮ್‌ಐಎಮ್‌ಡಿಯ ನಿರ್ದೇಶಕ ಡಾ.ಎಸ್.ಎನ್.ಪ್ರಸಾದ್ ನಾಯಕತ್ವವೆಂದರೆ ಜವಾಬ್ದಾರಿಗಳನ್ನು ತೆಗೆದುಕೊಳ್ಳುವುದು. ಸಮಾಜದಲ್ಲಿ ಅರ್ಥಪೂರ್ಣ ಬದಲಾವಣೆಗಳನ್ನು ತರುವುದಾಗಿದೆ ಎಂದು ಅಭಿಪ್ರಾಯಪಟ್ಟರು. ಎಸ್‌ಡಿಎಮ್‌ಐಎಮ್‌ಡಿಯ ಸಹ ಪ್ರಾಧ್ಯಾಪಕ ಡಾ.ಎಲ್.ಗಾಂಧಿ ವಿಚಾರಸಂಕಿರಣದ ಉದ್ದೇಶಗಳನ್ನು ವಿವರಿಸುವುದರ ಜೊತೆಗೆ ಕಾನ್ಫರೆನ್ಸ್ ಬ್ರೀಫಿಂಗ್ ನೀಡಿದರು. ವಿಚಾರ ಸಂಕಿರಣದ ಭಾಗವಾಗಿ ʼಹ್ಯೂಮನ್ ಸೆಂಟರ್‌ಡ್ ಲೀಡರ್‌ಶಿಪ್ ಇನ್ ದಿ ಏಜ್ ಆಫ್ ಟೆಕ್ನಾಲಜಿʼ ವಿಷಯದ ಕುರಿತಂತೆ ಸಂವಾದ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
