ಪಬ್ಲಿಕ್ ಅಲರ್ಟ್
ಮೈಸೂರು: ನಾಡಹಬ್ಬ ದಸರೆ ಸಂಭ್ರಮ ಎಲ್ಲೆಡೆ ಪಸರಿಸಿದ್ದು, ವಿಜಯದಶಮಿಯ ಜಂಬೂ ಸವಾರಿ ಸಿದ್ಧತೆಗಳು ಅಂತಿಮ ಹಂತದಲ್ಲಿದ್ದು, ಇಂದು ಜಂಬೂಸವಾರಿಯಲ್ಲಿ ಭಾಗವಹಿಸುವ ಗಜಪಡೆ ಹಾಗೂ ಅಶ್ವದಳಕ್ಕೆ ಅಂತಿಮ ಹಂತದ ಸಿಡಿಮದ್ದು ತಾಲೀಮನ್ನು ನಡೆಸಲಾಯಿತು. ಎಲ್ಲಾ ಗಜಪಡೆ ಹಾಗೂ ಅಶ್ವದಳ ಸಿಡಿಮದ್ದಿನ ಶಬ್ಧಕ್ಕೆ ಹೆದರದೆ ಜಂಬೂಸವಾರಿಗೆ ರೆಡಿಯಾಗಿದ್ದೇವೆ ಎಂದು ಸಾಬೀತುಪಡಿಸಿದವು.
ಅ.೨ರಂದು ನಡೆಯುವ ವಿಶ್ವ ವಿಖ್ಯಾತ ಜಂಬೂಸವಾರಿಯಲ್ಲಿ ಭಾಗವಹಿಸುವ ಅಭಿಮನ್ಯು ನೇತೃತ್ವದ ಗಜಪಡೆ ಹಾಗೂ ೩೦ಕ್ಕೂ ಹೆಚ್ಚು ಅಶ್ವದಳ ಇಂದು ವಸ್ತು ಪ್ರದರ್ಶನದ ಆವರಣದಲ್ಲಿ ನಡೆದ ಅಂತಿಮ ಹಾಗೂ ಮೂರನೇ ಸುತ್ತಿನ ಸಿಡಿಮದ್ದು ತಾಲೀಮಿನಲ್ಲಿ ಭಾಗವಹಿಸಿ, ಕುಶಾಲತೋಪು ಹಾಗೂ ಜಂಬೂಸವಾರಿ ಶಬ್ಧಕ್ಕೆ ಹೊಂದಿಕೊಂಡಿವೆ ಎಂಬುದನ್ನು ನಿರೂಪಿಸಿದವು.
ಗಜಪಯಣದ ಮೂಲಕ ಆ.೪ರಂದು ಅಭಿಮನ್ಯು ನೇತೃತ್ವದ ೯ಆನೆಗಳು ಹಾಗೂ ಎರಡನೇ ಹಂತದಲ್ಲಿ ಸುಗ್ರೀವ ನೇತೃತ್ವದ ೫ ಆನೆಗಳು ಅರಮನೆಗೆ ಆಗಮಿಸಿ ಅರಮನೆಯ ಆವರಣದಲ್ಲಿ ವಾಸ್ತವ್ಯ ಹೂಡಿವೆ. ಪ್ರತಿದಿನ ಅರಮನೆಯಿಂದ ಬನ್ನಿಮಂಟಪದವರೆಗೆ ತಾಲೀಮು, ವಿಶೇಷ ಆಹಾರ, ಮಜ್ಜನ ಹಾಗೂ ಭಾರ ಹೊರುವ ಎರಡನೇ ತಾಲೀಮಿನ ಜೊತೆಗೆ ಮರದ ಅಂಬಾರಿ ಹೊರುವ ತಾಲೀಮನ್ನು ಮಾಡಿಸಲಾಗಿದೆ. ಜಂಬೂಸವಾರಿಗೆ ಗಜಪಡೆಯ ಹಾಗೂ ಅಶ್ವದಳದ ಪೂರ್ವಾಭ್ಯಾಸವನ್ನು ಸಹ ನಡೆಸಲಾಗಿದೆ.
ಈ ಮಧ್ಯೆ ಜಂಬೂಸವಾರಿಯ ದಿನ ಪುಷ್ಪರ್ಚನೆ ಮಾಡಿ ಜಂಬೂಸವಾರಿ ಮೆರವಣಿಗೆಗೆ ಚಾಲನೆ ನೀಡುವ ಸಂದರ್ಭದಲ್ಲಿ ರಾಷ್ಟ್ರಗೀತೆಯನ್ನು ನುಡಿಸುತ್ತಾರೆ. ಆ ಸಂದರ್ಭದಲ್ಲಿ ೫೨ ಸೆಕೆಂಡ್ಗಳಲ್ಲಿ ೨೧ ಕುಶಾಲತೋಪುಗಳನ್ನು ಸಿಡಿಸುತ್ತಾರೆ. ಇದರ ಶಬ್ಧಕ್ಕೆ ಬೆದರದಂತೆ ಈಗಾಗಲೇ ಗಜಪಡೆ ಹಾಗೂ ಅಶ್ವದಳಕ್ಕೆ ಮೂರು ಸುತ್ತು ಸಿಡಿಮದ್ದು ತಾಲೀಮನ್ನು ನಡೆಸಲಾಗಿದ್ದು, ಇಂದು ಜಂಬೂಸವಾರಿಯ ದಿನ ಬಳಸುವ ಸಿಡಿಮದ್ದಿನ ಪ್ರಮಾಣವನ್ನೇ ಹಾಕಿ ಅಂತಿಮ ಹಂತದ ಸಿಡಿಮದ್ದು ತಾಲೀಮನ್ನು ನಡೆಸಲಾಯಿತು.




ಅಂತಿಮ ತಾಲೀಮಿನ ಬಗ್ಗೆ ಡಿಸಿಎಫ್ ಪ್ರಭುಗೌಡ ಮಾತನಾಡಿ, ಜಂಬೂಸವಾರಿಗೆ ಈಗಾಗಲೇ ಎಲ್ಲಾ ರೀತಿಯ ತಾಲೀಮನ್ನು ನಡೆಸಲಾಗಿದ್ದು, ಎಲ್ಲವೂ ಯಶಸ್ವಿಯಾಗಿವೆ. ಮರದ ಅಂಬಾರಿ ತಾಲೀಮಿಗೆ ಒಂದು ದಿನ ಬಾಕಿಯಿದ್ದು, ಎಲ್ಲಾ ಆನೆಗಳು ಆರೋಗ್ಯವಾಗಿವೆ. ಮಾವುತರು ಹಾಗೂ ಕಾವಾಡಿಗಳು ನೀಡುವ ಸನ್ನೆಗಳಿಗೆ ಸ್ಪಂದಿಸುತ್ತಿವೆ. ಕಳೆದ ವಾರ ಯುವತಿಯೊಬ್ಬಳು ಅಕ್ರಮವಾಗಿ ರಾತ್ರಿ ಸಮಯದಲ್ಲಿ ಆನೆ ಶಿಬಿರಕ್ಕೆ ಹೋಗಿ ರೀಲ್ಸ್ ಮಾಡಿ ವೈರಲ್ ಮಾಡಿದ್ದಳು. ಆ ಯುವತಿಗೆ ನೋಟಿಸ್ ನೀಡಿದ್ದೇವೆ. ಎರಡು ದಿನ ಸಮಯಾವಕಾಶ ಕೇಳಿದ್ದು, ನೋಟಿಸ್ಗೆ ಉತ್ತರ ಕೊಟ್ಟ ನಂತರ ಕಾನೂನು ರೀತಿ ಕ್ರಮ ಕೈಗೊಳ್ಳುತ್ತೇವೆ ಎಂದರು.
ಸಂಜೆ ಸಮಯದ ದೀಪಾಲಂಕಾರದಲ್ಲಿ ಗಜಪಡೆಯ ತಾಲೀಮು ನಡೆಸಲಾಗುತ್ತದೆ. ಜನರು ದೂರದಿಂದಲೇ ನಿಂತು ಗಜಪಡೆಯನ್ನು ಕಣ್ತುಂಬಿಕೊಳ್ಳಿ. ಚೀರಾಟ ಮಾಡಿದರೆ ವನ್ಯಜೀವಿಗಳಾದ ಆನೆಗಳಿಗೆ ತೊಂದರೆಯಾಗುತ್ತದೆ ಎಂದು ಮನವಿ ಮಾಡಿದರು.
ಬಾಕ್ಸ್
ಶ್ರೀರಂಗಪಟ್ಟಣ ದಸರಾಗೆ ಮೂರು ಆನೆ ಆಯ್ಕೆ
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಸಾಂಪ್ರದಾಯಿಕ ದಸರಾ ಆಚರಿಸಿಕೊಂಡು ಬರಲಾಗುತ್ತಿದೆ. ಅದರಂತೆ ಇದೇ ತಿಂಗಳ ೨೫ರಂದು ಅಲ್ಲಿ ಜಂಬೂಸವಾರಿ ಮೆರವಣಿಗೆ ನಡೆಯಲಿದ್ದು, ಈ ಮೆರವಣಿಗೆಗೆ ಗಂಡು ಆನೆಯಾಗಿ ಮಹೇಂದ್ರ, ಹೆಣ್ಣು ಆನೆಗಳಾದ ಕಾವೇರಿ ಹಾಗೂ ಲಕ್ಷ್ಮಿ ಹೀಗೆ ಮೂರು ಆನೆಗಳನ್ನು ಆಯ್ಕೆ ಮಾಡಲಾಗಿದೆ. ನಾಳೆ (ಸೆ. ೨೪) ರಂದು ಸಂಜೆ ಶ್ರೀರಂಗಪಟ್ಟಣಕ್ಕೆ ಈ ಮೂರು ಆನೆಗಳು ಹೊರಡಲಿದ್ದು, ಬಳಿಕ ಸೆ.೨೫ ರಂದು ಶ್ರೀರಂಗಪಟ್ಟಣ ದಸರಾದಲ್ಲಿ ಭಾಗವಹಿಸಿ ವಾಪಸ್ ಮೈಸೂರಿಗೆ ಬರಲಿವೆ ಎಂದು ಡಿಸಿಎಫ್ ಪ್ರಭುಗೌಡ ತಿಳಿಸಿದರು.
