ವಿಶ್ವದಾಖಲೆ ಬರೆದ ಆಕರ್ಷಕ ಡ್ರೋಣ್‌ ಪ್ರದರ್ಶನ
೨೦ ನಿಮಿಷಗಳ ಯಶಸ್ವಿ ಮನರಂಜನೆ, 

Pratheek
2 Min Read

ಪಬ್ಲಿಕ್ ಅಲರ್ಟ್


ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಅತ್ಯಾಕರ್ಷಕ ಡ್ರೋನ್ ಪ್ರದರ್ಶನ ಹೊಸ ಮೆರುಗು ನೀಡಿತು. 3,000 ಡ್ರೋನ್ಗಳು ಬಾನಂಗಳದಲ್ಲಿ ಬಣ್ಣಬಣ್ಣದ ಚಿತ್ತಾರಗಳನ್ನು ಬಿಡಿಸಿ ಹೊಸ ಲೋಕ ಸೃಷ್ಟಿಸಿದವು. 2,983 ಡ್ರೋನ್ಗಳನ್ನು ಬಳಸಿ ರಾಷ್ಟ್ರೀಯ ಪ್ರಾಣಿ ಹುಲಿಯ ಕಲಾಕೃತಿ ರಚಿಸಿ ಗಿನ್ನಿಸ್ ವಿಶ್ವದಾಖಲೆ‌ ನಿರ್ಮಿಸುವ ಮೂಲಕ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ(ಸೆಸ್ಕ್) ಮೈಸೂರಿನ ಹಿರಿಮೆಯನ್ನು ಹೆಚ್ಚಿಸಿದೆ.
ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಭಾನುವಾರ ರೋಮಾಂಚನಕಾರಿ ಡ್ರೋನ್ ಪ್ರದರ್ಶನ ಆಯೋಜಿಸಲಾಗಿತ್ತು. ನೋಡುಗರನ್ನು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದ ಪ್ರದರ್ಶನ ಮಹೋತ್ಸವದ ರಂಗು ಹೆಚ್ಚಿಸಿತು.
ಈ ಬಾರಿಯ ಡ್ರೋನ್ ಪ್ರದರ್ಶನದಲ್ಲಿ ಒಟ್ಟು 2,983 ಡ್ರೋನ್ಗಳನ್ನು ಬಳಸಿಕೊಂಡು ಬಾನಂಗಳದಲ್ಲಿ ಬೃಹದಾಕಾರದ ಹುಲಿ ಕಲಾಕೃತಿ ನಿರ್ಮಾಣ ಮಾಡುವ ಮೂಲಕ ಹೊಸ ಗಿನ್ನಿಸ್ ವಿಶ್ವದಾಖಲೆ‌ ನಿರ್ಮಿಸಲಾಯಿತು. ಈ ಮೊದಲು 1985 ಡ್ರೋನ್ಗಳನ್ನು ಬಳಸಿಕೊಂಡು ಹುಲಿಯ ಕಲಾಕೃತಿ ರಚಿಸುವ ಮೂಲಕ ದಾಖಲೆ ನಿರ್ಮಿಸಲಾಗಿತ್ತು.
3,000 ಡ್ರೋನ್ಗಳ ಚಿತ್ತಾರ: ಕಳೆದ ವರ್ಷ ನಡೆದ ಪ್ರದರ್ಶನದಲ್ಲಿ 1,500 ಡ್ರೋನ್ಗಳ ಮೂಲಕ ಆಕರ್ಷಕ ಪ್ರದರ್ಶನ ನೀಡಲಾಗಿತ್ತು. ಆದರೆ ಈ ಬಾರಿಯ ಪ್ರದರ್ಶನವನ್ನು ಮತ್ತಷ್ಟು ಆಕರ್ಷಣೀಯವಾಗಿಸುವ ಸಲುವಾಗಿ ಒಟ್ಟು 3,000 ಡ್ರೋನ್ ಬಳಸಿಕೊಂಡು ನಡೆಸಲಾದ ಪ್ರದರ್ಶನ ಪ್ರೇಕ್ಷಕರನ್ನು ರಂಜಿಸಿತು. ಏಕಕಾಲದಲ್ಲಿ ಬಾನೆತ್ತರ ಹಾರಿದ ಡ್ರೋನ್ಗಳು ಬಣ್ಣಬಣ್ಣದ ದೀಪಗಳಿಂದ ಮಿನುಗುತ್ತಾ ಆಕರ್ಷಕ ಕಲಾಕೃತಿಗಳನ್ನು ಸೃಷ್ಟಿಸಿದವು.

ಸೌರಮಂಡಲ, ವಿಶ್ವಭೂಪಟ, ದೇಶದ ಹೆಮ್ಮೆಯ ಸೈನಿಕ, ನವಿಲು, ರಾಷ್ಟ್ರೀಯ ಪ್ರಾಣಿ ಹುಲಿ, ಡಾಲ್ಫಿನ್, ಈಗಲ್, ಸರ್ಪದ ಮೇಲೆ ಶ್ರೀಕೃಷ್ಣ ನೃತ್ಯ ಮಾಡುವುದು, ಕಾವೇರಿ ಮಾತೆ, ಕರ್ನಾಟಕ ಭೂಪಟದೊಂದಿಗೆ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್, ಪಂಚ ಗ್ಯಾರಂಟಿ ಯೋಜನೆಗಳಿಂದ ಕೂಡಿದ್ದ ಕರ್ನಾಟಕ ಭೂಪಟ‌, ಅಂಬಾರಿ ಆನೆ, ನಾಡದೇವತೆ ಚಾಮುಂಡೇಶ್ವರಿ ಕಲಾಕೃತಿಗಳು ನೋಡುಗರಿಗೆ ಮನರಂಜನೆ ನೀಡಿದವು.
ಇದಕ್ಕೂ ಮುನ್ನ ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಅವರು ಜ್ಯೋತಿ ಬೆಳಗುವ ಮೂಲಕ ಪ್ರದರ್ಶನಕ್ಕೆ ಚಾಲನೆ ನೀಡಿದರು.
ಕುನಾಲ್ ಗಾಂಜಾವಾಲ ಹಾಡಿನ ಮೋಡಿ: ಡ್ರೋನ್ ಪ್ರದರ್ಶನ ಆರಂಭಕ್ಕೂ ಮುನ್ನ ಖ್ಯಾತ ಹಿನ್ನಲೆ ಗಾಯಕ ಕುನಾಲ್ ಗಾಂಜಾವಾಲ ಮತ್ತು ತಂಡದಿಂದ ಸಂಗೀತ ಕಾರ್ಯಕ್ರಮ ನಡೆಯಿತು. ವೇದಿಕೆಗೆ ಬರುತ್ತಿದ್ದಂತೆ ಮೊದಲಿಗೆ ಪುನೀತ್ ರಾಜ್‍ಕುಮಾರ್ ಅಭಿನಯದ “ನೀನೆ ನೀನೆ..” ಗೀತೆಯನ್ನು ಹಾಡಿ ರಂಜಿಸಿದರು. ಆ ನಂತರ ಕನ್ನಡದ “ಖುಷಿಯಾಗಿದೆ ಏಕೋ ನಿನ್ನಿಂದಲೆ…”, “ಒಂದೇ ಒಂದು ಸಾರಿ ಕಣ್ಮುಂದೆ ಬಾರೆ…”, “ನಿನ್ನ ಕಂಡ ಕ್ಷಣದಿಂದ…”, “ಹುಡುಗಿ ಹುಡುಗಿ ನಿನ್ನ ಕಂಡಾಗ”, “ಕಿವಿ ಮಾತೊಂದು ಹೇಳಲೆ ನಾನಿಂದು” ಹಾಗು ಹಿಂದಿಯ ಹಲವು ಗೀತೆಗಳನ್ನು ಹಾಡುವ ಮೂಲಕ ಪ್ರೇಕ್ಷಕರು ಹುಚ್ಚೆದ್ದು ಕುಣಿಯುವಂತೆ ಮಾಡಿದರು.
ಕಾರ್ಯಕ್ರಮದಲ್ಲಿ ಶಾಸಕ ತನ್ವೀರ್ ಸೇಠ್, ಎಂಎಲ್ಸಿ ಕೆ.ಶಿವಕುಮಾರ್, ಅಪರ‌ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ, ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ, ಜಿ.ಪಂ.ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎಸ್.ಯುಕೇಶ್ ಕುಮಾರ್, ಅಪರ‌ ಜಿಲ್ಲಾಧಿಕಾರಿ ಡಾ.ಪಿ. ಶಿವರಾಜ್, ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕರಾದ ಕೆ.ಎಂ.ಮುನಿಗೋಪಾಲ್ ರಾಜು, ತಾಂತ್ರಿಕ ‌ವಿಭಾಗದ ನಿರ್ದೇಶಕ ಡಿ.ಜೆ.ದಿವಾಕರ್, ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸೀಫ್, ಎಂಡಿಎ ಆಯುಕ್ತ ಕೆ.ಆರ್.ರಕ್ಷಿತ್, ಎಸ್ಪಿ ವಿಷ್ಣುವರ್ಧನ್, ಸೆಸ್ಕ್ ಅಧೀಕ್ಷಕ ಇಂಜಿನಿಯರ್ ಸುನೀಲ್, ದಸರಾ ದೀಪಾಲಂಕಾರ ಉಪ ಸಮಿತಿ(ಅಧಿಕಾರೇತರ) ಅಧ್ಯಕ್ಷ ರಾಘವೇಂದ್ರ ಸೇರಿ ಇನ್ನಿತರರು ಹಾಜರಿದ್ದರು.

Share This Article
Leave a Comment