ಮನೆ ಮನೆ ಮಾದೇಗೌಡರಿಗೆ ಆತ್ಮೀಯ ಸನ್ಮಾನ

Pratheek
1 Min Read

ಪಬ್ಲಿಕ್ ಅಲರ್ಟ್


ಮೈಸೂರು: ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ವಿಧಾನ ಪರಿಷತ್‌ ಮಾಜಿ ಸದಸ್ಯ ಹಾಗೂ ಮನೆ ಮನೆ ಮಾದೇಗೌಡರೆಂದೆ ಖ್ಯಾತಿ ಪಡೆದ ಡಿ.ಮಾದೇಗೌಡರಿಗೆ ಬೆಂಗಳೂರು ವಿವಿ ಗೌರವ ಡಾಕ್ಟರೇಟ್‌ ಪಡೆದ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾ ಕನ್ನಡ ಚಳವಳಿಗಾರರ ಸಂಘದಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು. 
ಅತಿಥಿಗಳಾದ ಹಿರಿಯ ಸಾಹಿತಿ ಡಾ.ಸಿ.ಪಿ. ಕೃಷ್ಣಕುಮಾರ್‌ ಮಾತನಾಡಿ, ಇವರು ಈ ಹಿಂದೆ ಸಿಐಟಿಬಿ ಅಧ್ಯಕ್ಷರಾಗಿದ್ದ ವೇಳೆ ಮನೆ ಮನೆ ಸಮೀಕ್ಷೆ ನಡೆಸಿ, ನಿರ್ವಸಿತರು, ಬಡವರನ್ನು ಗುರುತಿಸಿ ನಿವೇಶನ ನೀಡಿದುದು ಚರಿತ್ರಾರ್ಹವಾಗಿದೆ. ಇದಲ್ಲದೆ, ನಗರದ ಹೃದಯ ಭಾಗದಲ್ಲಿ ಭವ್ಯ ವಿವೇಕ ಸ್ಮಾರಕ ನಿರ್ಮಾಣಕ್ಕಾಗಿ ನಡೆದ ದೊಡ್ಡ ಹೋರಾಟದ ನೇತೃತ್ವ ವಹಿಸಿದ್ದರು. ಶೀಘ್ರವೇ ಅದು ಲೋಕಾರ್ಪಣೆಗೊಳ್ಳಲಿದೆ. ಇತರರಿಗಾಗಿನ ಬದುಕು ಇವರದ್ದಾಗಿದೆ ಎಂದು ನುಡಿದರು.
ಹಿರಿಯ ಸಮಾಜ ಸೇವಕ ರಘುರಾಮ ವಾಜಪೇಯಿ ಮಾತನಾಡಿ, ಈ ಹಿಂದೆ ವಸತಿ ಹೀನರಿಗೆ ನಿವೇಶನ ನೀಡಬೇಕೆಂದಾಗ ಕ್ರಮ ಕೈಗೊಂಡುದು ಮಾತ್ರವಲ್ಲ, ಅರ್ಜಿಗಳನ್ನು  ಹೇಗೆ ಭರ್ತಿ ಮಾಡಬೇಕೆಂಬ ಪುಸ್ತಕವನ್ನೂ ವಿತರಿಸಿ, ನಿವೇಶನ ಪಡೆದುಕೊಳ್ಳುವ ಕೆಲಸ ಸುಲಭವನ್ನಾಗಿಸಿದರು. ಈಗಲೂ ಅಂತಹ ಬಡಾವಣೆಗಳಿಗೆ ಹೋದಲ್ಲಿ, ಹಲವರು ಮಾದೇಗೌಡರು ತಮಗೆ ನಿವೇಶನ ನೀಡಿದ ಕಾರಣ ಸೂರು ದೊರಕಿಸಿಕೊಂಡಿದ್ದೇವೆ ಎಂದು ಸ್ಮರಿಸುತ್ತಾರೆಂದರು.
ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ. ದೀಪಕ್ ಮಾತನಾಡಿ, ಸೂರು ನಿರ್ಮಿಸಿಕೊಳ್ಳುವುದು ಯಾವೊಬ್ಬ ಮನುಷ್ಯನ ಜೀವನದ ಮಹತ್ವದ ಮೈಲಿಗಲ್ಲು. ಡಿ. ಮಾದೇಗೌಡರು ಸಿಐಟಿಬಿ ಅಧ್ಯಕ್ಷರಾಗಿದ್ದ ವೇಳೆ ಈ ಕನಸು ನನಸಾಗಿಸಿದರು. ಇಂತಹ ವ್ಯಕ್ತಿ ದೇಶದ ರಾಜಕಾರಣದಲ್ಲಿ ಬೇರೊಬ್ಬರಲಿಲ್ಲ ಎಂದರು.
ಬಳಿಕ ಗಣ್ಯರು ಡಿ. ಮಾದೇಗೌಡರಿಗೆ ಪ್ರಶಸ್ತಿ ಪ್ರದಾನ ಮಾಡಿದರು.
ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ, ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಸಿ.ಜಿ.ಗಂಗಾಧರ್‌, ಜಿಲ್ಲಾ ಕನ್ನಡ ಚಳವಳಿಗಾರರ ಸಂಘದ ಅಧ್ಯಕ್ಷ ಬಿ.ಎ. ಶಿವಶಂಕರ್, ಕೆ.ರಘುರಾಮ್‌ ವಾಜಪೇಯಿ, ಆನಂದಗೌಡ ಇನ್ನಿತರರು ಇದ್ದರು.

Share This Article
Leave a Comment