ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌ಗೆ ರಾಜ್ಯೋತ್ಸವ ಪ್ರಶಸ್ತಿ  

Pratheek
3 Min Read

ಪಬ್ಲಿಕ್ ಅಲರ್ಟ್


ಮೈಸೂರು: ಮೈಸೂರಿನ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌ ಅವರು ರಾಜ್ಯ ಸರ್ಕಾರದ 2025ನೇ ಸಾಲಿನ ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.

  ಕಳೆದ ನಾಲ್ಕು ದಶಕಗಳಿಂದಲೂ  ಮೈಸೂರು ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.  ಇನ್ನೂ ವಿದ್ಯಾರ್ಥಿಯಾಗಿದ್ದಾಗಲೇ ಎಂಭತ್ತರ ದಶಕದಲ್ಲಿ ಪತ್ರಿಕೋದ್ಯಮ ಪ್ರವೇಶಿಸಿದ ಅವರು ‘ಆಂದೋಲನ’ ಪತ್ರಿಕೆಯ ಮೂಲಕ ಪ್ರಸಿದ್ಧಿಗೆ ಬಂದವರು.  ಸತ್ಯದೇವ್     ಕೊಲೆ ಪ್ರಕರಣ,  ವೀರಪ್ಪನ್   ಕುಕೃತ್ಯಗಳ ವರದಿಗಳು ಮಾತ್ರವಲ್ಲದೇ ರಾಜಕೀಯ, ಸಾಂಸ್ಕೃತಿಕ, ಸಾಹಿತ್ಯ, ಕೃಷಿ ಸೇರಿದಂತೆ ಎಲ್ಲಾ ವಿಷಯಗಳ ಬಗ್ಗೆ ಅವರು ಮಾಡುತ್ತಿದ್ದ ವರದಿಗಳು ಬಹುಬೇಗ ಅವರನ್ನು ಜನಪ್ರಿಯಗೊಳಿಸಿದವು.   ಕಳೆದ ಮೂವತ್ತೊಂದು ವರ್ಷಗಳಿಂದ  ನಾಡಿನ ಪ್ರಭಾವಿ ಪತ್ರಿಕೆಯಾದ  ‘ಕನ್ನಡಪ್ರಭ’  ಮೈಸೂರು ವಿಭಾಗದ ಮುಖ್ಯಸ್ಥರಾಗಿ, ಪ್ರಸ್ತುತ ಕಾರ್ಯನಿರ್ವಾಹಕ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ.

ಮೈಸೂರು ವಿಶ್ವವಿದ್ಯಾನಿಲಯ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದಲ್ಲಿ ಅತಿಥಿ ಉಪನ್ಯಾಸಕರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಕರ್ನಾಟಕ ಮುಕ್ತ ವಿವಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಸಂಪರ್ಕ ತರಗತಿಗಳನ್ನು ನಡೆಸಿಕೊಟ್ಟಿದ್ದಾರೆ.

ಮೂರು ವರ್ಷ ಮೈಸೂರು ವಿಶ್ವವಿದ್ಯಾನಿಲಯ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಅಧ್ಯಯನ ಮಂಡಳಿ [ಬಿಒಎಸ್] ಸದಸ್ಯರಾಗಿದ್ದರು. ನಂತರ  ಕರ್ನಾಟಕ ರಾಜ್ಯ ರಾಜ್ಯ ಮುಕ್ತ ವಿವಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಅಧ್ಯಯನ ಮಂಡಳಿಯಲ್ಲೂ ಮೂರು ವರ್ಷ ಸೇವೆ ಸಲ್ಲಿಸಿದರು.  ಪ್ರಸ್ತುತ  ಮೈಸೂರು ವಿಶ್ವವಿದ್ಯಾನಿಲಯ ಕ್ರೀಡಾ ಮಂಡಳಿ,  ಜೆಎಸ್ಎಸ್   ಮಹಾವಿದ್ಯಾಪೀಠದ ‘ಜೆಎಸ್ಎಸ್ ವಾರ್ತಾಪತ್ರ’ ಸಂಪಾದಕೀಯ ಮಂಡಳಿಯ ಸದಸ್ಯರಾಗಿದ್ದಾರೆ.

ಈವರೆಗೆ ಕರ್ನಾಟಕ ಮಾಧ್ಯಮ ಅಕಾಡೆಮಿ  ಪ್ರಶಸ್ತಿ, ರಾಜ್ಯ ಸರ್ಕಾರದ  ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ, ಮೈಸೂರು ಜಿಲ್ಲಾಡಳಿತದ ರಾಜ್ಯೋತ್ಸವ ಪ್ರಶಸ್ತಿ, ಹಳೆಯ ಮೈಸೂರು ಜಿಲ್ಲೆಗಳ ವ್ಯಾಪ್ತಿಯ ಸಾಧಕರಿಗೆ ಜಿಲ್ಲಾಡಳಿತ ನೀಡುವ ನಾಲ್ವಡಿ ಕೃಷ್ಣರಾಜ ಒಡೆಯರ್      ಪ್ರಶಸ್ತಿ,  ಬೆಂಗಳೂರು ಪ್ರೆಸ್               ಕ್ಲಬ್‌ನಿಂದ  ಜೀವಮಾನ ಸಾಧನೆ ಪ್ರಶಸ್ತಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಡಿವಿಜಿ ಪ್ರಶಸ್ತಿ, ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ ಅಲುಮ್ನಿ ಅಸೋಸಿಯೇನ್‌ನ ಕೃಷಿ ಮಾಧ್ಯಮ ಪ್ರಶಸ್ತಿ ಸೇರಿದಂತೆ  75 ಪ್ರಶಸ್ತಿಗಳು ಸಂದಿವೆ.  ಈ ಬಾರಿಯ ರಾಜ್ಯ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿಯು 75 ನೇಯದು.

  300ಕ್ಕೂ ಹೆಚ್ಚು  ಸಂಘ, ಸಂಸ್ಥೆಗಳು


ಸನ್ಮಾನಿಸಿವೆ.

ಪತ್ರಿಕೋದ್ಯಮದ ಜೊತೆ ಜೊತೆಗೆ ಲೇಖಕರಾಗಿ  ‘ಅನ್ನದಾತರ ಆತ್ಮಕಥೆ’, ‘ಮೈಸೂರು ಚಾಮರಾಜನಗರ ರಾಜಕೀಯ ಇತಿಹಾಸ’, ‘ಮೈಸೂರು ರಾಜರು ಮತ್ತು ದಸರಾ’, ‘ಮೈಸೂರೆಂಬ ಪ್ರವಾಸಿ ಸ್ವರ್ಗ’, ‘ಕಾಡಿನ ಜಾತ್ರೆ’, ‘ಕಾಡುಜೀವನ’, ‘ಅನುಭವ ಮಂಟಪ’, ‘ಸುತ್ತೂರು ಶ್ರೀಕ್ಷೇತ್ರ ದರ್ಶನ’, ‘ಸಾಹಿತ್ಯ ಸಾಂಗತ್ಯ’, ‘ಸಾಹಿತ್ಯ ಸಂಗಮ’, ‘ಸಾಹಿತ್ಯ ಸಂಪದ’, ‘ ಮೈಸೂರು ಸುತ್ತಮುತ್ತ ನೂರೊಂದು ಪ್ರವಾಸಿತಾಣಗಳು’        ಸೇರಿದಂತೆ  26 ಕೃತಿಗಳನ್ನು ಪ್ರಕಟಿಸಿದ್ದಾರೆ. ಇನ್ನೂ ಹಲವು ಕೃತಿಗಳು ಪ್ರಕಟಣೆಗೆ ಸಿದ್ಧವಾಗುತ್ತಿವೆ. ಇದಲ್ಲದೇ ಇತರೆ 100 ಕ್ಕೂ ಹೆಚ್ಚು ಕೃತಿಗಳು, ವಿಶೇಷ ಸಂಚಿಕೆಗಳಲ್ಲಿ ಅವರ ಲೇಖನಗಳು ಪ್ರಕಟವಾಗಿವೆ.

ಎರಡು ಬಾರಿ ದಸರಾ ಕವಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದಾರೆ. ಹಲವಾರು ಸಮ್ಮೇಳನಗಳು, ವಿಚಾರ ಸಂಕಿರಣಗಳು, ಕಾರ್ಯಾಗಾರಗಳು, ತರಬೇತಿ ಶಿಬಿರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದಾರೆ.  ನೂರಾರು ಉಪನ್ಯಾಸಗಳನ್ನು ನೀಡಿದ್ದಾರೆ. ಇದಲ್ಲದೇ ಆರು ಸಾವಿರಕ್ಕೂ ಹೆಚ್ಚು ಲೇಖನಗಳನ್ನು ಬರೆದಿದ್ದಾರೆ.





                      ಪ್ರತಿಕ್ರಿಯೆ

ಪತ್ರಿಕೋದ್ಯಮ ಕ್ಷೇತ್ರದಲ್ಲಿ ನಾನು ಸಲ್ಲಿಸಿರುವ ಸೇವೆಯನ್ನು ಗುರುತಿಸಿ ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿ ನೀಡಿರುವುದಕ್ಕೆ ರಾಜ್ಯ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ. ಈ ಬಾರಿ ಯಾವುದೇ ಅರ್ಜಿ ಆಹ್ವಾನಿಸದೇ ವಿವಿಧ ಕ್ಷೇತ್ರಗಳ ತಜ್ಞರನ್ನೊಳಗೊಂಡ ಆಯ್ಕೆ ಸಮಿತಿಯೇ ನೇರವಾಗಿ ಅರ್ಹರನ್ನು ಗುರುತಿಸಿರುವುದು, ಮುಖ್ಯಮಂತ್ರಿಗಳ ನೇತೃತ್ವದ ಉನ್ನತ ಸಮಿತಿಯು ಅದನ್ನು ಪುರಸ್ಕರಿಸಿರುವುದು ಅತ್ಯುತ್ತಮವಾದುದು.

ಈ ಪ್ರಶಸ್ತಿಯು ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆಯಲ್ಲದೇ ಮತ್ತಷ್ಟು ಕೆಲಸ ಮಾಡಲು ಪ್ರೇರಣೆ ನೀಡಿದೆ. ನಾನು ಇಲ್ಲಿಯವರೆಗೆ ತಲುಪಲು ಕಾರಣರಾದ ಪ್ರತಿಯೊಬ್ಬರಿಗೂ ವಂದನೆಗಳು.

– ಅಂಶಿ ಪ್ರಸನ್ನಕುಮಾರ್‌

Share This Article
Leave a Comment