ಪೌರ ಕಾರ್ಮಿಕರ ಸಮಸ್ಯೆಗಳನ್ನು ಅಳಿಸಲು ಆಯೋಗ ನಿಮ್ಮ ಬಳಿಗೆ ಬಂದಿದೆ

latha prabhukumar
3 Min Read

ಪಬ್ಲಿಕ್ ಅಲರ್ಟ್ ನ್ಯೂಸ್:-ಪೌರ ಕಾರ್ಮಿಕರ ಸಮಸ್ಯೆಗಳನ್ನು ಅಳಿಸಲು ಆಯೋಗ ನಿಮ್ಮ ಬಳಿಗೆ ಬಂದಿದೆ
ಪೌರ ಕಾರ್ಮಿಕರು ತಮ್ಮ ಸಮಸ್ಯೆಗಳನ್ನು ಮುಕ್ತವಾಗಿ ಹೇಳಿಕೊಳ್ಳಿ : ಪಿ ರಘು

ಮೈಸೂರು ಜನವರಿ 22 (ಕರ್ನಾಟಕ ವಾರ್ತೆ) ಪೌರ ಕಾರ್ಮಿಕರ ಸಮಸ್ಯೆಗಳನ್ನು ಅಳಿಸಲು ಆಯೋಗ ತಮ್ಮ ಬಳಿಗೆ ಬಂದಿದ್ದು, ಪೌರ ಕಾರ್ಮಿಕರು ತಮ್ಮ ಸಮಸ್ಯೆಗಳನ್ನು ಮುಕ್ತವಾಗಿ ಹೇಳಿಕೊಳ್ಳಿ ಎಂದು ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರಾದ ಪಿ ರಘು ಅವರು ತಿಳಿಸಿದರು.

ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮೈಸೂರು ಮಹಾನಗರ ಪಾಲಿಕೆ, ಜಿಲ್ಲಾ ನಗರಾಭಿವೃದ್ಧಿ ಕೋಶ, ಸಮಾಜ ಕಲ್ಯಾಣ ಇಲಾಖೆ ಮೈಸೂರು ಇವರ ಸಹಯೋಗದೊಂದಿಗೆ ಮೈಸೂರು ಜಿಲ್ಲೆಯ ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಪೌರ ಕಾರ್ಮಿಕರು ಹಾಗೂ ಸ್ವಚ್ಛತಾ ಸಿಬ್ಬಂಗಳೊಂದಿಗೆ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪೌರ ಕಾರ್ಮಿಕರು ಎಲ್ಲರಿಗಿಂತ ಮೊದಲು ಎದ್ದು ಸಮಾಜವನ್ನು ಸ್ವಚ್ಛಗೊಳಿಸುವ ಕೆಲಸ ಮಾಡುತ್ತಿದ್ದೀರಿ. ಯಾವುದಕ್ಕೂ ಅಂಜದೇ ಹಿಂಜರಿಯದೆ ತಮ್ಮ ತಮ್ಮ ಸಮಸ್ಯೆಗಳನ್ನು ತಾವು ಇಲ್ಲಿ ಹೇಳಿಕೊಳ್ಳಿ. ತಮ್ಮ ಸಮಸ್ಯೆಗಳನ್ನು ಪ್ರಾಮಾಣಿಕವಾಗಿ ಪರಿಹರಿಸಲು ಕ್ರಮವಹಿಸಲಾಗುವುದು. ಯಾವುದೇ ಹೋಟೆಲ್ ಗಳಲ್ಲಿ ಪೌರ ಕಾರ್ಮಿಕರು ಶೌಚಾಲಯಗಳನ್ನು ಬಳಸಲು ಮುಕ್ತ ಅವಕಾಶವಿದ್ದು, ಹೋಟೆಲ್ ಮಾಲೀಕರು ಅಡ್ಡಿಪಡಿಸುವಂತಿಲ್ಲ. ಪೌರ ಕಾರ್ಮಿಕರಿಗೆ ಕಳಪೆ ಗುಣಮಟ್ಟದ ಆಹಾರ ನೀಡುತ್ತಿರುವ ಕುರಿತು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಪರಿಹರಿಸಲಾಗುವುದು ಎಂದರು.

ಪೌರ ಕಾರ್ಮಿಕರು ತಮ್ಮ ಮಕ್ಕಳನ್ನು ಪೌರ ಕಾರ್ಮಿಕರನ್ನು ಮಾಡುವ ಆಲೋಚನೆ ಮಾಡಬೇಡಿ. ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ. ಮುರಾರ್ಜಿ ದೇಸಾಯಿ ವಸತಿ ಶಾಲೆಗಳು, ಇಂದಿರಾ ಗಾಂಧಿ ವಸತಿ ಶಾಲೆಗಳು ಹಾಗೂ ನವೋದಯ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸಿ ಶಿಕ್ಷಣ ಕೊಡಿಸಿ. ಮುಂದೆ ಪೌರ ಕಾರ್ಮಿಕರ ಕೆಲಸಗಳನ್ನು ಮಾಡಲು ಯಂತ್ರೋಪಕರಣಗಳು ಬರುತ್ತವೆ ಎಂದು ತಿಳಿಸಿದರು

ಪೌರ ಕಾರ್ಮಿಕರು ತಮ್ಮ ಸಮಸ್ಯೆಗಳನ್ನು ಹೇಳುತ್ತಾ, ಹೊರಗುತ್ತಿಗೆ ನೇರ ಪಾವತಿ ಪೌರ ಕಾರ್ಮಿಕರು ಅಕಾಲಿಕ ಮರಣಕ್ಕೆ ತುತ್ತಾದರೆ ಅವರ ಕುಟುಂಬದವರಿಗೆ ಯಾವುದೇ ಸೌಲಭ್ಯಗಳು ದೊರೆಯುತ್ತಿಲ್ಲ. ಅವರ ಕುಟುಂಬದವರಿಗೆ ಕೆಲಸ ನೀಡಬೇಕು. ಪೌರ ಕಾರ್ಮಿಕರ ನೇಮಕಾತಿಯಲ್ಲಿ ರೋಸ್ಟರ್ ಪದ್ದತಿ ರದ್ದಾಗಬೇಕು. ಅರ್ಹ ಪೌರ ಕಾರ್ಮಿಕರಿಗೆ ಆಶ್ರಯ ಯೋಜನೆಯಡಿ ವಸತಿ ಸೌಲಭ್ಯ ದೊರಕಿಸಿಕೊಡಬೇಕು.
ಪೌರ ಕಾರ್ಮಿಕರ ಖಾಯಂ ವಿಚಾರದಲ್ಲಿ ತಾರತಮ್ಯ ಆಗುತ್ತಿದ್ದು, ಬೆಳಗಿನ ಉಪಹಾರ ಕಳಪೆ ಗುಣಮಟ್ಟದಿಂದ ಕೂಡಿರುತ್ತದೆ. ಪೌರ ಕಾರ್ಮಿಕರ ವೇತನ ಪ್ರತಿ ತಿಂಗಳ 5 ತಾರೀಖಿನ ಒಳಗೆ ದೊರೆಯುತ್ತಿಲ್ಲ ಎಂದು ತಿಳಿಸಿದರು.

ಮ್ಯಾನುಯಲ್ ಸ್ಕ್ಯಾವೆಂಜರ್ ಎಂದು ಗುರುತಿಸಿರುವ ವ್ಯಕ್ತಿಗಳಿಗೆ ಯಾವುದೇ ವಸತಿ ಸೌಲಭ್ಯ ಕಲ್ಪಿಸಿಲ್ಲ. ಮ್ಯಾನುಯಲ್ ಸ್ಕ್ಯಾವೆಂಜರ್ ಗಳಿಗೆ ಲೋಡರ್ಸ್ ಹಾಗೂ ಕ್ಲೀನರ್ ಆಗಿ ಪರ್ಯಾಯ ಹುದ್ದೆ ಕಲ್ಪಿಸಬೇಕು. ಮಹಾನಗರ ಪಾಲಿಕೆಯಿಂದ ದಸರಾ ಸಂದರ್ಭದಲ್ಲಿ ಈ ಮೊದಲು ದಸರಾ ಅಡ್ವಾನ್ಸ್ ನೀಡಲಾಗುತ್ತಿತ್ತು ಆದರೆ ಈ ಬಾರಿ ನೀಡಿಲ್ಲ. ದಸರಾಗೆ ಯೂನಿಫಾರ್ಮ್ ನೀಡಿಲ್ಲ ಎಂದು ಮನವಿ ಮಾಡಿದರು.

ಆರೋಗ್ಯ ತಪಾಸಣೆಗೆ ಕೆಲವು ಆಸ್ಪತ್ರೆಗಳನ್ನು ಮಾತ್ರ ಉಚಿತವಾಗಿ ನೀಡಲಾಗಿದೆ. ಮೈಸೂರು ಜಿಲ್ಲೆಯ ಎಲ್ಲಾ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆಗೆ ಅವಕಾಶ ಕಲ್ಪಿಸಬೇಕು.

ಪೌರ ಕಾರ್ಮಿಕರನ್ನು ನೀಡಿರುವ ಟೆಂಡರ್ ದಾರರು ಕಾರ್ಮಿಕ ಇಲಾಖೆಗೆ ತಲಾ 50 ರೂ ಪಾವತಿಸಿ ಇನ್ಸೂರೆನ್ ಮಾಡಿಸಿದರೆ ಕಾರ್ಮಿಕ ಇಲಾಖೆಯಿಂದ ಹಲವಾರು ಸೌಲಭ್ಯಗಳು ದೊರೆಯುತ್ತವೆ. ಮಹಾನಗರ ಪಾಲಿಕೆಯಲ್ಲಿರುವ ಎಲ್ಲಾ ಪೌರ ಕಾರ್ಮಿಕರ ಹುದ್ದೆಗಳನ್ನು ನೇಮಕಾತಿ ಮಾಡಬೇಕು ಎಂದು ಮನವಿ ಮಾಡಿದರು.

ಗ್ರಾಮ ಪಂಚಾಯತ್ ಮಟ್ಟದಲ್ಲಿ ಪೌರ ಕಾರ್ಮಿಕರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ದೊರೆಯುತ್ತಿಲ್ಲ. ಪೌರ ಕಾರ್ಮಿಕರಿಗೆ ನಿವೇಶನ ಸೌಲಭ್ಯ ದೊರೆಯುತ್ತಿಲ್ಲ. ಗ್ರಾಮ ಪಂಚಾಯತಿ ಪೌರ ಕಾರ್ಮಿಕರನ್ನು ಖಾಯಂ ಮಾಡಬೇಕು ಎಂದು ಮನವಿ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ರಂಗೇಗೌಡ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಪ್ರಿಯದರ್ಶಿನಿ ಅವರು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಪೌರ ಕಾರ್ಮಿಕರು ಉಪಸ್ಥಿತರಿದ್ದರು.

Share This Article
Leave a Comment