ಪಬ್ಲಿಕ್ ಅಲರ್ಟ್ ನ್ಯೂಸ್:-ಒತ್ತಡ ನಿವಾರಣೆಗೆ ಕ್ರೀಡೆ ಸಹಕಾರಿ: ಜಿಲ್ಲಾ ಪಂಚಾಯತ್ ಸಿಇಒ ಎಸ್.ಯುಕೇಶ್ ಕುಮಾರ್
ಮೈಸೂರು,ಫೆ.12 (ಕರ್ನಾಟಕ ವಾರ್ತೆ):- ಜನರಿಗೆ ತುಂಬಾ ಹತ್ತಿರದಲ್ಲಿದ್ದುಕೊಂಡು ಕೆಲಸ ಮಾಡುವ ಇಲಾಖೆ ನಮ್ಮದು. ಆದ್ದರಿಂದ ಜನರಿಗೂ ನಮ್ಮ ಮೇಲಿನ ನಿರೀಕ್ಷೆ ಹೆಚ್ಚಿರುತ್ತದೆ. ಅದರಂತೆ ಒತ್ತಡವೂ ಇರುತ್ತದೆ. ಅದರ ನಿವಾರಣೆಗಾಗಿ ಆಯೋಜಿಸಿರುವ ಕ್ರೀಡಾಕೂಟದಲ್ಲಿ ಪ್ರತಿಯೊಬ್ಬರೂ ಭಾಗವಹಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಕ ಅಧಿಕಾರಿ ಎಸ್.ಯುಕೇಶ್ ಕುಮಾರ್ ಅವರು ತಿಳಿಸಿದರು.
ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮೈಸೂರು ಜಿಲ್ಲಾ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು ಹಾಗೂ ನೌಕರರ ಸಹಯೋಗದಲ್ಲಿ ಗುರುವಾರ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ “ಮೈಸೂರು ಜಿಲ್ಲಾ ಆರ್.ಡಿ.ಪಿ.ಆರ್ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು” ಉದ್ಘಾಟಿಸಿದ ಬಳಿಕ ಅವರು ಮಾತನಾಡಿದರು.
ಆರ್ಡಿಪಿಆರ್ ಕುಟುಂಬ ಬಹಳ ದೊಡ್ಡದಿದೆ. ಸರ್ಕಾರದ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವುದು ನಮ್ಮ ಕರ್ತವ್ಯ ಮತ್ತು ಜವಾಬ್ದಾರಿ. ಪ್ರತಿನಿತ್ಯದ ಕಾರ್ಯದೊತ್ತಡ ಮರೆತು ಕ್ರೀಡೆಯಲ್ಲಿ ಪಾಲ್ಗೊಳ್ಳಿ. ಎಲ್ಲಾ ನೌಕರರು ತಮ್ಮ ಆರೋಗ್ಯ ಮತ್ತು ಕೌಟಂಬಿಕ ಜೀವನದ ಕಡೆಗೆ ಹೆಚ್ಚಿನ ಕಾಳಜಿವಹಿಸಿ ಎಂದು ಸಲಹೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಗರ ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸೀಫ್ ಅವರು, ಸಹಬಾಳ್ವೆ ಮತ್ತು ಸೌಹಾರ್ದಯುತ ಬದುಕಿಗೆ ಕ್ರೀಡೆ ಉಪಯುಕ್ತ. ನಾವು ಮಾಡುವ ಕೆಲಸಕ್ಕೆ ಕ್ರೀಡೆಯು ಹೆಚ್ಚಿನ ಉತ್ಸಾಹ ಮತ್ತು ಸ್ಪೂರ್ತಿ ತಂದುಕೊಡುತ್ತದೆ ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅವರು ಮಾತನಾಡಿ, ಪ್ರತಿಯೊಬ್ಬರೂ ಉತ್ಸಾಹದಿಂದ ಕ್ರೀಡೆಯಲ್ಲಿ ಭಾಗವಹಿಸಬೇಕು. ಗ್ರಾಮ ಪಂಚಾಯಿತಿಯ ಎಲ್ಲಾ ವಯೋಮಾನದವರು ಪಾಲ್ಗೊಂಡಿರುವುದು ಸಂತೋಷದ ಸಂಗತಿ. ಅವರ ವಯಸ್ಸು ಹಾಗೂ ಫಿಟ್ನೇಸ್ಗೆ ತಕ್ಕಂತೆ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಿ. ಕ್ರೀಡಾ ಚಟುವಟಿಕೆಯಲ್ಲಿ ಭಾಗವಹಿಸದವರು ಕೂಡ ಕ್ರೀಡಾಂಗಣದಲ್ಲಿದ್ದು ಕ್ರೀಡಾಪಟುಗಳಿಗೆ ಉತ್ಸಾಹ ತುಂಬಬೇಕು ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಪಿಡಿಒ ಸಂಘದ ಜಿಲ್ಲಾಧ್ಯಕ್ಷ ಕೆ.ರುಕ್ಮಾಂಗದ ಅವರು, ಪ್ರತಿಯೊಬ್ಬ ವ್ಯಕ್ತಿಗೂ ದೈಹಿಕ ಶಕ್ತಿಯ ಜೊತೆಗೆ ಮಾನಸಿಕ ಶಕ್ತಿ ಮುಖ್ಯ. ಅದಕ್ಕೆ ಕ್ರೀಡೆ ಮತ್ತು ಮನರಂಜನೆ ಸಹಕಾರಿ. ಈ ಉದ್ದೇಶದಿಂದ ನಮ್ಮ ಸಿಇಒ ಅವರ ನೇತೃತ್ವದಲ್ಲಿ ಬಹಳ ಅಚ್ಚುಕಟ್ಟಾಗಿ ಕ್ರೀಡಾಕೂಟ ಆಯೋಜಿಸಲಾಗಿದೆ. ಇದರ ಜೊತೆಗೆ ಗ್ರಾಮ ಪಂಚಾಯಿತಿಯಲ್ಲಿ ನಾವೆಲ್ಲರೂ ಹೆಚ್ಚಿನ ಕಾರ್ಯಕ್ಷಮತೆಯಿಂದ ಕೆಲಸ ನಿರ್ವಹಿಸೋಣ ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಉಪಕಾರ್ಯದರ್ಶಿಗಳಾದ ಬಿ.ಎಂ.ಸವಿತಾ, ಭೀಮಪ್ಪ ಕೆ.ಲಾಳಿ, ಮುಖ್ಯಲೆಕ್ಕಾಧಿಕಾರಿ ಸಿದ್ದಗಂಗಮ್ಮ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕುಮಾರಸ್ವಾಮಿ, ಕಾರ್ಯನಿರ್ವಾಹಕ ಅಧಿಕಾರಿಗಳಾದ ಧರಣೀಶ್, ಪ್ರೇಮ್ ಕುಮಾರ್, ಕುಲದೀಪ್, ರವಿ, ಹೊಂಗಯ್ಯ, ಸಿ.ಕೃಷ್ಣ, ಸುನೀಲ್ ಕುಮಾರ್, ರಂಗಸ್ವಾಮಿ, ಜೆರಾಲ್ಡ್ ರಾಜೇಶ್, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಭಾಸ್ಕರ್ ನಾಯ್ಕ್, ಕಾರ್ಯಪಾಲಕ ಅಭಿಯಂತರರಾದ ಶೋಭಾ, ರಂಗಸ್ವಾಮಿ ಸೇರಿದಂತೆ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳ ಪಿಡಿಒ, ಕಾರ್ಯದರ್ಶಿ, ಎಸ್ಡಿಎಎ, ಡಿಇಒ ಗಳು, ನರೇಗಾ ಸಿಬ್ಬಂದಿ, ಜಿಲ್ಲಾ ಸಂಘದ ಪದಾಧಿಕಾರಿಗಳು ಹಾಜರಿದ್ದರು.
