ಅದ್ವೈತ ಸಿದ್ಧಾಂತದ ಮೂಲಕ ಜಗತ್ತಿಗೆ ಮಾದರಿಯಾದವರು ಆದಿ ಶಂಕರಾಚಾರ್ಯರು: ಶಾಸಕ ಟಿ.ಎಸ್. ಶ್ರೀವತ್ಸ

latha prabhukumar
3 Min Read

ಪಬ್ಲಿಕ್ ಅಲರ್ಟ್ ನ್ಯೂಸ್:-ಅದ್ವೈತ ಸಿದ್ಧಾಂತದ ಮೂಲಕ ಜಗತ್ತಿಗೆ ಮಾದರಿಯಾದವರು ಆದಿ ಶಂಕರಾಚಾರ್ಯರು: ಶಾಸಕ ಟಿ.ಎಸ್. ಶ್ರೀವತ್ಸ

ಮೈಸೂರು ಏಪ್ರಿಲ್ 21 (ಕರ್ನಾಟಕ ವಾರ್ತೆ):- ಅದ್ವೈತ ಸಿದ್ಧಾಂತದ ಮೂಲಕ ಜಗತ್ತಿಗೆ ಮಾದರಿಯಾದವರು ಆದಿ ಶಂಕರಚಾರ್ಯರು ಎಂದು ಕೃಷ್ಣರಾಜ ಕ್ಷೇತ್ರದ ವಿಧಾನಸಭೆಯ ಶಾಸಕರಾದ ಟಿ.ಎಸ್ ಶ್ರೀವತ್ಸ ಅವರು ಹೇಳಿದರು.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮೈಸೂರು ಮಹಾನಗರ ಪಾಲಿಕೆ ಹಾಗೂ ಮೈಸೂರು ಶ್ರೀ ಶಂಕರಾಚಾರ್ಯ ಜಯಂತೋತ್ಸವ ಸಮಿತಿ ವತಿಯಿಂದ ಕರ್ನಾಟಕ ಕಲಾಮಂದಿರದ ಆವರಣದಲ್ಲಿ ಇರುವ ಕಿರುರಂಗಮoದಿರದಲ್ಲಿ ಆಯೋಜಿಸಲಾಗಿದ್ದ ಶ್ರೀ ಶಂಕರಚಾರ್ಯ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಶಂಕರಾಚಾರ್ಯರು ಅವರ ತಂದೆ-ತಾಯಿಗಳ ಸುದೀರ್ಘ ತಪಸ್ಸಿನ ಫಲವಾಗಿ ಜನಿಸಿದ ಅದ್ಭುತ ಬಾಲಕ. ಅವರು ದೇವರ ಅನುಗ್ರಹದಿಂದ ಜನಿಸಿದ ‘ಬಾಲ ಶಿವ’ ಎಂದರೆ ಅತಿಶಯೋಕ್ತಿಯಾಗಲಾರದು ಎಂದರು.

ಶಂಕರಾಚಾರ್ಯರು ಇಡೀ ಭಾರತವನ್ನು ಕಾಲ್ನಡಿಗೆಯಲ್ಲೇ ಸಂಚರಿಸಿ, ಅದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿದ ಅನೇಕ ಕಥೆಗಳನ್ನು ನಾವು ಕೇಳಿದ್ದೇವೆ. ಅವರು ಮುನ್ನೂರಕ್ಕೂ ಹೆಚ್ಚು ಶ್ಲೋಕಗಳನ್ನು ರಚಿಸಿದ್ದು, ಅವುಗಳಲ್ಲಿ ‘ಭಜಗೋವಿಂದಂ’ ಇದು ಅತ್ಯಂತ ಶ್ರೇಷ್ಠವಾದ ಶ್ಲೋಕ ಎಂದರು

ಶಂಕರಾಚಾರ್ಯರು ಭಾರತದ ನಾಲ್ಕು ದಿಕ್ಕುಗಳಲ್ಲಿ ಚತುರ್ದಾಮ ಪೀಠಗಳನ್ನು (ಮಠಗಳನ್ನು) ಸ್ಥಾಪಿಸಿದರು. ಕೇವಲ 32 ವರ್ಷಗಳ ಅಲ್ಪಾಯುಷ್ಯದಲ್ಲೇ, ಮುಂಬರುವ ಹಲವಾರು ಪೀಳಿಗೆಗಳು ನೆನಪಿನಲ್ಲಿಟ್ಟುಕೊಳ್ಳುವಂತಹ ಅಭೂತಪೂರ್ವ ಸಾಧನೆಯನ್ನು ಮಾಡಿ ಜಗತ್ತಿಗೆ ಮಾದರಿಯಾಗಿದ್ದಾರೆ ಎಂದರು.

ಶ್ರೀ ರಾಮಕೃಷ್ಣ ಆಶ್ರಮದ ಕನ್ನಡ ಪುಸ್ತಕ ಪ್ರಕಟಣಾ ವಿಭಾಗದ ಸ್ವಾಮಿ ಸರ್ವಜಯಾನಂದಜಿ ಅವರು ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ ಶಂಕರರು ತಾವು ಜೀವಿಸಿದ ಅಲ್ಪ ಕಾಲಾವಧಿಯಲ್ಲಿ ಅಪಾರವಾದ ಸಾಧನೆಯನ್ನು ಮಾಡಿದ್ದಾರೆ. ಶಂಕರರ ಅದ್ವೈತ ತತ್ವವನ್ನು ಪ್ರತಿಪಾದಿಸಿದ್ದರು, ಅದನ್ನು ಸಾಮಾನ್ಯ ಜನರ ಜೀವನದಲ್ಲಿ, ಸೇವಾ ಕಾರ್ಯಗಳಲ್ಲಿ ಅನ್ವಯಿಸಬಹುದೆಂದು ಜನ ಸಾಮಾನ್ಯರಿಗೆ ಸರಳ ರೂಪದಲ್ಲಿ ತಲುಪಿಸಬೇಕಿದೆ ಎಂದರು.

ಆಚಾರ್ಯರ ಜೀವನ ಮಾರ್ಗ ನಮ್ಮ ಜೀವನದಲ್ಲಿ ನಾವು ನಡೆಯಬೇಕಾದ ಎಲ್ಲ ಮಾರ್ಗಗಳನ್ನು ತೋರಿಸಿಕೊಡುವ ಮಾರ್ಗವಾಗಿದೆ. ಆದಿ ಶಂಕರಾಚಾರ್ಯರು ಅದ್ವೈತ ವೇದಾಂತ ಪ್ರಚಾರಕ್ಕಾಗಿ ಮತ್ತು ಸನಾತನ ಧರ್ಮದ ರಕ್ಷಣೆಗಾಗಿ ಭಾರತದ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಪ್ರಮುಖ ಮಠಗಳನ್ನು ಸ್ಥಾಪಿಸಿದರು ಎಂದು ತಿಳಿಸಿದರು.

ಸಂಸ್ಕೃತಿ ಚಿಂತಕರು ಮತ್ತು ವಿಮರ್ಶಕರಾದ ಗಾ.ನಾ ಭಟ್ ಅವರು ಮಾತನಾಡಿ ಭಗವತ್ಪಾದ ಶಂಕರಾಚಾರ್ಯರು ಹಿಂದು ಧರ್ಮದ ಪುನರುತ್ಪಾದಕರು. ಭಾವುಕತೆ ಮತ್ತು ವೈಚಾರಿಕತೆಗಳೆರಡು ಒಬ್ಬರ ಮನಸ್ಸಿನಲ್ಲಿ ಸಂಗಮಿಸಿತ್ತು ಎಂದರೆ ಅದು ಶಂಕರರ ಮನದಲ್ಲಿ ಮಾತ್ರ. ಅವರು ತಮ್ಮ 8 ವಯಸ್ಸಿನಲ್ಲೇ ನಾಲ್ಕು ವೇದಗಳನ್ನು ಪಠಣ ಮಾಡಿದ್ದರು. ಗೋವಿಂದ ಭಗವತ್ಪಾದರ ಪರಮ ಶಿಷ್ಯರಾಗಿದ್ದರು. ದೇಶದ 4 ಸ್ಥಳಗಳಲ್ಲಿ ಮೂರ್ತಿಗಳನ್ನು ಸ್ಥಾಪಿಸಿ ಭಗವಂತನಿಗೆ ರೂಪವನ್ನು ಕೊಟ್ಟು ಪೂಜಿಸುವಂತೆ ಮಾಡಿದರು. ಜ್ಞಾನ ಮಾರ್ಗ ತಲುಪಲು ಒಂದು ಏಣಿಯಾಗಿ ಮೂರ್ತಿ ಪೂಜೆಯನ್ನು ತಂದವರು ಶಂಕಾಚಾರ್ಯರು ಎಂದು ಹೇಳಿದರು.

ಸನಾತನ ಭಾರತದ ಸಂಸ್ಕೃತಿಯನ್ನು ಜಗತ್ತಿಗೆ ಸಾರಿ ಹೇಳಿದ ಆಚಾರ್ಯತ್ರಯರಲ್ಲಿ ಶಂಕರಾಚಾರ್ಯರು ಮೊದಲಿಗರು. ಕೇವಲ 32 ವರ್ಷಗಳ ಕಾಲ ಜೀವಿಸಿದ್ದರು. ಶಂಕರಾಚಾರ್ಯರು, ಈ ಅಲ್ಪಾವಧಿಯಲ್ಲಿಯೇ ದೇಶದ ಮೂಲೆ ಮೂಲೆ ಗಳಿಗೆ ಸಂಚರಿಸಿ ಗೀತಾಚಾರ್ಯ ಶ್ರೀಕೃಷ್ಣನ ಸಿದ್ಧಾಂತ ವಾದ “ಅದ್ವೈತ” ತತ್ವವನ್ನು ಪ್ರತಿಪಾದಿಸುತ್ತ ಜಗತ್ತಿಗೆ ಸಾರಿ, ಹಲವಾರು ಮತಗಳಿಂದ ದಾಳಿಗೊಳಗಾಗುತ್ತಿದ್ದ ಸನಾತನ ಹಿಂದೂ ಧರ್ಮವನ್ನು ಪುನರುತ್ಥಾನಗೊಳಿಸಿದರು. ಶೈವ, ವೈಷ್ಣವ, ಶಾಕ್ತ, ಗಾಣಪತ್ಯ, ಸೌರ ಹಾಗೂ ಸ್ಕಂದ ಮತಗಳನ್ನು ಒಗ್ಗೂಡಿಸಿ, ಷಣ್ಮತ ಪ್ರತಿಷ್ಠಾಪಕರಾದರು. ಆದಿಶಂಕರರು ಭಗವದ್ಗೀತೆ, ಉಪನಿಷತ್ ಹಾಗು ಬ್ರಹ್ಮ ಸೂತ್ರಗಳಿಗೆ ಭಾಷ್ಯ ಬರೆದ ಮೊದಲ ಆಚಾರ್ಯರಾದರು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರಾದ ವಿ.ಎನ್ ಮಲ್ಲಿಕಾರ್ಜುನಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ.ಎಂ.ಡಿ ಸುದರ್ಶನ್, ಗಣ್ಯರಾದ ಜಿ.ಟಿ ಪ್ರಕಾಶ್ ಹಾಗೂ ಶ್ರೀಕಂಠ ಕುಮಾರ್ ಅವರು ಉಪಸ್ಥಿತರಿದ್ದರು.

Share This Article
Leave a Comment