ಪಬ್ಲಿಕ್ ಅಲರ್ಟ್ ನ್ಯೂಸ್:-ಮೇ 31ರಂದು ಅರಮನೆ ಅಂಗಳದಲ್ಲಿ ಯೋಗಾಭ್ಯಾಸ
ಮೈಸೂರು: ಮೈಸೂರು ಯೋಗ ಫೆಡರೇಷನ್ ವತಿಯಿಂದ ೧೨ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಮೇ ೩೧ರಂದು ನಗರದ ಅರಮನೆ ಆವರಣದಲ್ಲಿ ಯೋಗಾಭ್ಯಾಸ ಹಾಗೂ ಮಹಾ ಸಂಕಲ್ಪ ದಿವಸ್ ಆಯೋಜಿಸಲಾಗಿದೆ ಎಂದು ಜಿಎಸ್‌ಎಸ್ ಸಮೂಹ ಸಂಸ್ಥೆಗಳ ಮುಖ್ಯಸ್ಥ ಡಿ.ಶ್ರೀಹರಿ ದ್ವಾರಕನಾಥ್ ತಿಳಿಸಿದರು.
ಅಂದು ಬೆಳಗ್ಗೆ ೫.೩೦ಕ್ಕೆ ಕಾರ್ಯಕ್ರಮ ಆರಂಭವಾಗಲಿದ್ದು, ಸುಮಾರು ಸಾವಿರ ಮಂದಿ ಯೋಗಾಸಕ್ತರು ಪಾಲ್ಗೊಳ್ಳುವರು. ಇದೇ ವೇಳೆ ನಗರದ ವಿವಿಧ ಅಪಾರ್ಟ್‌ಮೆಂಟ್, ಶಾಲಾ ಕಾಲೇಜು, ಉದ್ಯಾನಗಳು ಸೇರಿದಂತೆ ೧೨೦ ಕೇಂದ್ರಗಳಲ್ಲಿ ಸುಮಾರು ೧.೨೦ ಲಕ್ಷ ಮಂದಿ ಯೋಗಾಸನದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ನೇತೃತ್ವ ವಹಿಸಲಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಯೋಗದ ಮೂಲಕ ಆರೋಗ್ಯಕರ, ಶಾಂತಿಯುತ, ಶಿಸ್ತುಬದ್ಧ ಸಮಾಜ ನಿರ್ಮಾಣದ ಸಂಕಲ್ಪದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿದೆ. ಇದರೊಡನೆ ಜಿಲ್ಲೆಯ ಎಲ್ಲ ತಾಲೂಕುಗಳಲ್ಲೂ ಯೋಗದ ಪ್ರಚಾರ ಮತ್ತು ಪ್ರಸಾರ ಮಾಡಲು ಇದೇ ರೀತಿಯ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ವಿವರಿಸಿದರು.
ಯೋಗ ಸಂಸ್ಥೆಗಳ ಪ್ರಮುಖರಾದ ಶಶಿಕುಮಾರ್, ಜಿ.ನಂಜುಂಡಸ್ವಾಮಿ, ದೇವರಾಜ್, ಅನಂತ್ ಹಾಗೂ ರಂಗನಾಥ್ ಗೋಷ್ಠಿಯಲ್ಲಿದ್ದರು.
