ಪಬ್ಲಿಕ್ ಅಲರ್ಟ್ ನ್ಯೂಸ್:-ಸರ್ಕಾರಿ ಶಾಲೆಗಳು ಇಂದು ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುತ್ತಿವೆ: ಟಿ.ಶ್ರೀವತ್ಸ
ಮೈಸೂರು,ಜೂ.01(ಕರ್ನಾಟಕ ವಾರ್ತೆ):-
ಸರ್ಕಾರಿ ಶಾಲೆ ಎಂದರೆ ಮೂಗು ಮುರಿಯುವ ಕಾಲ ಈಗ ದೂರವಾಗಿದೆ. ಗುಣಮಟ್ಟದ ಶಿಕ್ಷಣ ಮತ್ತು ಅತ್ಯಾಧುನಿಕ ಸೌಲಭ್ಯಗಳ ಮೂಲಕ ಸರ್ಕಾರಿ ಶಾಲೆಗಳು ಇಂದು ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುತ್ತಿವೆ” ಎಂದು ಕೃಷ್ಣರಾಜ ಕ್ಷೇತ್ರದ ಶಾಸಕ ಟಿ.ಶ್ರೀವತ್ಸ ಹೇಳಿದರು.
ಇಂದು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯದ ವತಿಯಿಂದ ಮೈಸೂರು ದಕ್ಷಿಣ ವಲಯದ ವ್ಯಾಪ್ತಿಯಲ್ಲಿ ತಾಲ್ಲೂಕು ಮಟ್ಟದ ಶಾಲಾ ಪ್ರಾರಂಭೋತ್ಸವ ಮತ್ತು ಮಹಾ ಪೋಷಕ ಸಭೆಯನ್ನು ಕರ್ನಾಟಕ ಪಬ್ಲಿಕ್ ಶಾಲೆ ಕುವೆಂಪುನಗರದಲ್ಲಿ ಕೃಷ್ಣರಾಜ ಕ್ಷೇತ್ರದ ಶಾಸಕರಾದ ಟಿ. ಶ್ರೀವತ್ಸ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸರ್ಕಾರಿ ಶಾಲೆಯಲ್ಲಿ 2023ರಲ್ಲಿ ಎಸ್.ಎಸ್.ಎಲ್.ಸಿಯಲ್ಲಿ 620 ಅಂಕ ಪಡೆದ ವಿದ್ಯಾರ್ಥಿಗಳ ಸಂಖ್ಯೆ ಕೇವಲ 4 ಇತ್ತು. ಇದು ಏರಿಕೆಯಾಗುತ್ತಿದ್ದು, ಗುಣಾತ್ಮಕ ಶಿಕ್ಷಣಕ್ಕೆ ಸರ್ಕಾರಿ ಶಾಲೆಗಳು ಸಹ ಸಾಕ್ಷಿಯಾಗುತ್ತಿದೆ ಎಂದು ಹೇಳಿದರು.
ಸರ್ಕಾರಿ ಶಾಲೆಗಳಲ್ಲಿ ಇಂದು ಹೊಸ ಕಟ್ಟಡಗಳು, ಅತ್ಯಾಧುನಿಕ ಶೌಚಾಲಯಗಳು ಮತ್ತು ಪೂರಕವಾದ ಶೈಕ್ಷಣಿಕ ವಾತಾವರಣ ನಿರ್ಮಾಣವಾಗಿದೆ. ಖಾಸಗಿ ಸಹಭಾಗಿತ್ವದಲ್ಲಿ ಸರ್ಕಾರಿ ಶಾಲೆಗಳಲ್ಲಿ ‘ಸ್ಟೆಮ್ ಲ್ಯಾಬ್ ಗಳ ಸ್ಥಾಪನೆಯಾಗಿದ್ದು, ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಜ್ಞಾನ ಲಭ್ಯವಾಗುತ್ತಿದೆ ಎಂದರು.
ಕಾರ್ಯಕ್ರಮಕ್ಕೆ ಶಿಕ್ಷಕರು ಬಹಳ ಉತ್ಸಾಹದಿಂದ ಮತ್ತು ವರ್ಣರಂಜಿತವಾಗಿ ಆಗಮಿಸಿದ್ದಾರೆ, ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಶ್ರಮ ಅನನ್ಯ ಎಂದರು.
“ಉತ್ತಮ ಕಲಿಕೆ, ಉಜ್ಜಲ ಭವಿಷ್ಯ” ಘೋಷವಾಕ್ಯದಡಿ ನಡೆಯಲಿರುವ ಪ್ರಾರಂಭೋತ್ಸವದಲ್ಲಿ ಮುಖ್ಯಶಿಕ್ಷಕರು, ಶಿಕ್ಷಕರು, ಎಸ್‌ಡಿಎಂಸಿ ಪದಾಧಿಕಾರಿಗಳು, ಪೋಷಕರು ಹಾಗೂ ಸಾರ್ವಜನಿಕರು ಭಾಗವಹಿಸಿದರು.
ಜಾಗೃತಿ ಮೆರವಣಿಗೆ: ಸೇರಿರಿ ಸೇರಿರಿ ಸರ್ಕಾರಿ ಶಾಲೆಗೆ ಸೇರಿ’, ‘ವಿದ್ಯೆಯೇ ಜೀವನದ ಆಧಾರ’ ಎಂಬ ಫಲಕಗಳನ್ನು ಹಿಡಿದು ವಿದ್ಯಾರ್ಥಿಗಳು ಜಾಗೃತಿ ಮೂಡಿಸಿದರು
ಕಾರ್ಯಕ್ರಮದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಸಿಬ್ಬಂದಿ ವರ್ಗ ಮತ್ತಿತರರು ಉಪಸ್ಥಿತರಿದ್ದರು.
