ಪಬ್ಲಿಕ್ ಅಲರ್ಟ್ ನ್ಯೂಸ್:-ಎಚ್.ವಿ.ರಾಜೀವ್ ಜನ್ಮ ದಿನ: ಸೆ.16ರಿಂದ 19ರವರೆಗೆ ಸೇವಾ ಕಾರ್ಯ
ಮೈಸೂರು, ಸೆ.12: ಕೆಪಿಸಿಸಿ ಸದಸ್ಯ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್ ಅವರ ಹುಟ್ಟಹಬ್ಬದ ಹಿನ್ನೆಲೆಯಲ್ಲಿ ಸೆ.16ರಿಂದ 19ರವರೆಗೆ ಕೃಷ್ಣರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವಿವಿಧ ಸೇವಾ ಕಾರ್ಯ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಮೇಯರ್ ಬಿ.ಎಲ್.ಭೈರಪ್ಪ ತಿಳಿಸಿದರು.
ಅಗ್ರಹಾರದಲ್ಲಿರುವ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಚ್.ವಿ.ರಾಜೀವ್ ಸ್ನೇಹ ಬಳಗ ಹಲವು ವರ್ಷಗಳಿಂದ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ. ಎಚ್.ವಿ.ರಾಜೀವ್ ಅವರ ಜನ್ಮ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲು ನಾಲ್ಕು ದಿನ ಸೇವಾ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ ಎಂದರು.
ಸೆ.16ರಂದು ಬೆಳಗ್ಗೆ 9ರಿಂದ ಮಧ್ಯಾಹ್ನ 2ರವರೆಗೆ ವಿದ್ಯಾರಣ್ಯಪುರಂ ಭೂತಾಳೆ ಮೈದಾನದಲ್ಲಿ ಬೃಹತ್ ಉಚಿತ ಆರೋಗ್ಯ ಶಿಬಿರ ಆಯೋಜಿಸಲಾಗಿದೆ. ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಿಂದ ಹೃದ್ರೋಗ, ಭಾರತ್ ಕ್ಯಾನ್ಸರ್ ಆಸ್ಪತ್ರೆಯಿಂದ ಕ್ಯಾನ್ಸರ್, ಮೈಸೂರು ರೇಸ್ ಕ್ಲಬ್ ಕಣ್ಣಿನ ಆಸ್ಪತ್ರೆಯಿಂದ ಕಣ್ಣು, ಜೆ.ಎಸ್.ಎಸ್. ಆಸ್ಪತ್ರೆಯಿಂದ ದಂತ, ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯಿಂದ ವಾಕ್ ಮತ್ತು ಶ್ರವಣ ದೋಷಗಳು ಸೇರಿದಂತೆ ಎಲ್ಲ ರೀತಿಯ ಆರೋಗ್ಯ ತಪಾಸಣೆ ನಡೆಯಲಿದೆ. ಅದೇ ಸ್ಥಳದಲ್ಲಿ ರಕ್ತದಾನ ಶಿಬಿರವನ್ನೂ ಆಯೋಜಿಸಿದ್ದು, ಸಂಗ್ರಹವಾಗುವ ರಕ್ತವನ್ನು ಜಯದೇವ ಮತ್ತು ಕೆ.ಆರ್. ಆಸ್ಪತ್ರೆಗಳಿಗೆ ನೀಡಲಾಗುವುದು.
ಸಭಾ ಕಾರ್ಯಕ್ರಮವನ್ನು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಅಂತಾರಾಷ್ಟ್ರೀಯ ಕ್ರೀಡಾಪಟು ಡಾ.ಕೆ.ಎಸ್.ರಾಜಣ್ಣ ಉದ್ಘಾಟಿಸುವರು. ಕಾಂಗ್ರೆಸ್ ನಗರಾಧ್ಯಕ್ಷ ಆರ್.ಮೂರ್ತಿ ಸೇರಿದಂತೆ ಪ್ರಮುಖರು ಪಾಲ್ಗೊಳ್ಳುವರು. ವೇದಿಕೆಯಲ್ಲಿ ಕೆ.ಆರ್. ಆಸ್ಪತ್ರೆಗೆ 10 ವೀಲ್ ಚೇರ್ಗಳು ಹಾಗೂ 2 ಬ್ಯಾಟರಿ ಆಪರೇಟರ್ಗಳ ವೀಲ್ ಚೇರ್ಗಳ ವಿತರಣೆ ಮಾಡಲಾಗುವುದು. ಬೀದಿ ಬದಿ ವ್ಯಾಪಾರಿಗಳಿಗೆ ಪ್ರತಿ ವಾರ್ಡಿಗೆ ಒಂದರಂತೆ ಒಟ್ಟು 20 ಮೇಲು ಹೊದಿಕೆಯುಳ್ಳ ತಳ್ಳುಗಾಡಿಗಳನ್ನು ಹಸ್ತಾಂತರ ಮಾಡಲಾಗುವುದು.
ಕಿವುಡು ಮತ್ತು ಮೂಗ ವಿದ್ಯಾರ್ಥಿಗಳಿಗೆ ಅಂಬಾರಿ ವಾಹನದಲ್ಲಿ ಮೈಸೂರು ನಗರ ಪ್ರದಕ್ಷಿಣೆ ವ್ಯವಸ್ಥೆ ಮಾಡಲಾಗಿದೆ. ಕನಕಗಿರಿ ಸರ್ಕಾರಿ ಶಾಲೆಗೆ 100 ಚೇರ್ಗಳ ವಿತರಣೆ ಮಾಡಲಾಗುವುದು ಎಂದು ವಿವರಿಸಿದರು.
ವಿದ್ಯಾರ್ಥಿಗಳಿಗೆ ಬಾಟಲಿ ವಿತರಣೆ: ಸೆ.17ರಂದು ಮಧ್ಯಾಹ್ನ 3 ಗಂಟೆಗೆ ಕುವೆಂಪು ನಗರದ ಕರ್ನಾಟಕ ಪಬ್ಲಿಕ್ ಶಾಲೆಯ 650 ವಿದ್ಯಾರ್ಥಿಗಳಿಗೆ ಸ್ಟೇನ್ಲೆಸ್ ಸ್ಟೀಲ್ ನೀರಿನ ಬಾಟಲ್ ವಿತರಣೆ ಮಾಡಲಾಗುವುದು. ಜೆಎಸ್ಎಸ್ ಶಾಲೆಯ ಸಂಯೋಜನಾಧಿಕಾರಿ ತ್ರಿಪುರಾಂತಕ ಮಕ್ಕಳ ಕುರಿತು ಮಾತನಾಡಲಿದ್ದಾರೆ.
ಮನೆ ಮನೆಗೆ ಹಸಿರು: ಸೆ.18ರಂದು ಬೆಳಗ್ಗೆ 11.30ಕ್ಕೆ ಪ್ಲಾಸ್ಟಿಕ್ ಮುಕ್ತ ಮೈಸೂರು ಆಶಯದೊಂದಿಗೆ ಅದಮ್ಯ ಚೇತನ ಮತ್ತು ಲಯನ್ಸ್ ಫ್ಲೇಟ್ ಬ್ಯಾಂಕ್ ಸಂಸ್ಥೆ ವತಿಯಿಂದ ಜೆ.ಪಿ.ನಗರದ ಅಕ್ಕಮಹಾದೇವಿ ಪ್ರತಿಮೆ ಬಳಿ ಸ್ಥಾಪಿಸಲಾಗಿರುವ ಪ್ಲೇಟ್ ಬ್ಯಾಂಕ್ಗೆ 1000 ತಟ್ಟೆ ಮತ್ತು ಲೋಟಗಳ ನೀಡಲಾಗುವುದು.
ಮನೆ ಮನೆಗೆ ಹಸಿರು ಕಾರ್ಯಕ್ರಮದ ಮುಂದುವರಿದ ಭಾಗವಾಗಿ ಅಂದು ಸಂಜೆ 4.30ಕ್ಕೆ ಬೆಮೆಲ್ ಆರ್ಚ್ ಸಮೀಪದ ಲೀಸಾ ಸ್ಟೆಪ್ ಶಾಲೆ ಸಮೀಪ ನಾಗರಿಕರಿಗೆ 4000 ಗಿಡಗಳನ್ನು ವಿತರಣೆ ಮಾಡಲಾಗುವುದು.
ಹಿರಿಯ ನಾಗರಿಕರಿಗೆ ಸನ್ಮಾನ: ಸೆ.19ರಂದು ಬೆಳಗ್ಗೆ 11ಕ್ಕೆ ಜೆ.ಪಿ.ನಗರದ ಪುಟ್ಟರಾಜು ಗವಾಯಿಗಳ ಮೈದಾನದಲ್ಲಿ ಸುಮಾರು 300ಕ್ಕೂ ಹೆಚ್ಚು ಹಿರಿಯ ನಾಗರಿಕರಿಗೆ ʼಜೀವನೋತ್ಸಾಹʼ ಶೀರ್ಷಿಕೆಯಡಿ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿದೆ. ವಾಗ್ಮಿ ಚೇತನ್ ರಾಮರಾವ್ ಅವರು ಹಿರಿಯ ನಾಗರಿಕರ ಕುರಿತು ಮಾತನಾಡಲಿದ್ದಾರೆ.
ಅಂದು ಸಂಜೆ 4ಕ್ಕೆ ಅಭ್ಯುದಯ ಮಹಿಳಾ ಸಂಘ, ಅರಿವಿನ ಮನೆ ಮಹಿಳಾ ಬಳಗ, ಅಕ್ಕ ಮಹಾದೇವಿ ಮಹಿಳಾ ಬಳಗ, ಲಯನ್ಸ್ ಕ್ಲಬ್, ರೋಟರಿ ಕ್ಲಬ್, ವಿಶ್ವ ಒಕ್ಕಲಿಗರ ಸಂಘ, ಶರಣು ವೇದಿಕೆ, ಮುಟ್ಯಾಲ್ ಅಸೋಸಿಯೇಟ್ಸ್, ನಾಲ್ವಡಿ ಕೃಷ್ಣರಾಜ ಒಡೆಯರ್ ಕಬಡ್ಡಿ ಸಂಘ, ಬ್ರಹ್ಮಕುಮಾರಿ ಈಶ್ವರಿ ವಿಶ್ವ ವಿದ್ಯಾಲಯ, ಯೋಗ ಟ್ರಸ್ಟ್, ಅಂಬೇಡ್ಕರ್ ಫೌಂಡೇಶನ್, ರಮಾಬಾಯಿ ಅಂಬೇಡ್ಕರ್ ಸಂಘ, ರಾಮಮಂದಿರ ಟ್ರಸ್ಟ್, ಉಪ್ಪಾರರ ಸಂಘ, ಭೋವಿ ಸಂಘ ಮುಂತಾದ ಸಂಘಟನೆಗಳಿಗೆ ನಡೆಸಲಾಗಿರುವ ವಿವಿಧ ಸ್ಪರ್ಧೆಗಳ ಬಹುಮಾನ ವಿತರಣೆ ಮಾಡಲಾಗುವುದು ಎಂದು ವಿವರಿಸಿದರು.
ಮಹಾನಗರ ಪಾಲಿಕೆ ಮಾಜಿ ಸದಸ್ಯ ಕೆ.ವಿ.ಮಲ್ಲೇಶ್, ಎಚ್.ವಿ.ರಾಜೀವ್ ಸ್ನೇಹ ಬಳಗದ ಜಯಂತ್, ಮುರಳಿ, ಕೆ.ಎಸ್. ರಾಮ್ ಪ್ರಸಾದ್, ವಾಸು ಗೋಷ್ಠಿಯಲ್ಲಿದ್ದರು.
