ಪಬ್ಲಿಕ್ ಅಲರ್ಟ್
ಮೈಸೂರು: ಜ್ಯೋತಿಷಶಾಸ್ತ್ರವನ್ನು ತಿಳಿದು ಅರ್ಥ ಮಾಡಿಕೊಂಡವರು ಯಾವುದೇ ಕಾರಣಕ್ಕೂ ಜನರಲ್ಲಿ ಭಯ ಹುಟ್ಟಿಸುವುದಿಲ್ಲ ಎಂದು ಶ್ರೀರಂಗಪಟ್ಟಣದ ಬೇಬಿಮಠ ಮತ್ತು ಚಂದ್ರವನ ಆಶ್ರಮದ ಶ್ರೀ ತ್ರೀನೇತ್ರ ಮಹಂತ ಶಿವಯೋಗಿ ಸ್ವಾಮೀಜಿ ಹೇಳಿದರು.
ನಗರದ ಮುಕ್ತಗಂಗೋತ್ರಿ ಕಾವೇರಿ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ, ಕರ್ನಾಟಕ ರಾಜ್ಯ ಜ್ಯೋತಿಷರ ಮತ್ತು ಜ್ಯೋತಿಷ ಬೋಧನಾ ಸಂಸ್ಥೆಗಳ ಒಕ್ಕೂಟದ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಜ್ಯೋತಿರ್ ವಿಜ್ಞಾನ ಶಿಕ್ಷಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಜ್ಯೋತಿಷಶಾಸ್ತ್ರ ಸಮಾಜಕ್ಕೆ ಬೆಳಕು ನೀಡಬೇಕೇ ಹೊರತು, ಶೋಷಣೆ ಮಾಡಿ ಭಯ ಹುಟ್ಟಿಸಬಾರದು. ಬದಲಿಗೆ ಭರವಸೆ ಮೂಡಿಸುತ್ತಾರೆ. ಶೋಷಣೆ ಮಾಡಲ್ಲ. ಬದಲಿಗೆ ಪೋಷಣೆ ಮಾಡುತ್ತಾರೆ ಎಂದರು
ಇತ್ತೀಚಿಗೆ ಜ್ಯೋತಿಷಶಾಸ್ತ್ರ ಹೇಳುವವರು ಜನರಲ್ಲಿ ಆತಂಕ, ಭೀತಿ ಹುಟ್ಟಿಸುವುದರೊಂದಿಗೆ ಶೋಷಣೆ ಮಾಡುತ್ತಿದ್ದಾರೆ. ಇದು ಶಾಸ್ತ್ರವಲ್ಲ. ಅಧರ್ಮ. ಇದು ಸಮಾಜ, ಜನರನ್ನು ಎಚ್ಚರಿಸುವ ಮಾಧ್ಯಮವಾಗಬೇಕು ಎಂದು ಸಲಹೆ ನೀಡಿದರು.
ವಿದ್ಯಾರ್ಥಿಗಳ ಜೀವನ ಸಾರ್ಥಕವಾಗುವಲ್ಲಿ ವಿಶ್ವವಿದ್ಯಾಲಯ ಮಾತ್ರ ಇದೆ. ಅನ್ನ ಬಿತ್ತುವ ರೈತ, ಅಕ್ಷರ ಬಿತ್ತುವ ವಿಶ್ವವಿದ್ಯಾಲಯಗಳು ಸಂಕಷ್ಟಕ್ಕೆ ಸಿಲುಕಿಕೊಂಡರೆ ಇಡೀ ದೇಶವೇ ತೊಂದರೆಗೆ ಒಳಗಾಗಲಿದೆ. ಆದ್ದರಿಂದ ವಿಶ್ವವಿದ್ಯಾಲಯಗಳ ಕೆಲಸಗಳು ತ್ವರಿತಗತಿಯಲ್ಲಿ ಆಗುವ ಮೂಲಕ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಿಕೊಡಬೇಕಿದೆ ಎಂದರು.
ಕರಾಮುವಿ ಜ್ಯೋತಿರ್ ವಿಜ್ಞಾನದ ಡಿಪ್ಲೋಮಾ, ಸರ್ಟಿಫಿಕೇಟ್ ಕೋರ್ಸ್‌ಗಳ ಪಠ್ಯಕ್ರಮವನ್ನು ಬಿಡುಗಡೆಗೊಳಿಸಲಾಯಿತು.
ಇಸ್ರೋ ವಿಜ್ಞಾನಿ ಡಾ.ಎಸ್.ವಿ.ಶರ್ಮ, ತ್ರಿಸ್ಕಂದ ಜ್ಯೋತಿರ್ ವಿದ್ವಾನ್ ಡಾ.ಕೆ.ಜಿ.ಪುಟ್ಟು ಹೊನ್ನಯ್ಯ, ಜ್ಯೋತಿಷಿ ಭಾನು ಪ್ರಕಾಶ್ ಶರ್ಮ, ಒಕ್ಕೂಟದ ಅಧ್ಯಕ್ಷ ಬಿ.ಎನ್. ಅನಂತರಾಘವನ್, ಕುಲಪತಿ ಪ್ರೊಶರಣಪ್ಪ ವಿ.ಹಲಸೆ, ಕುಲಸಚಿವ ಪ್ರೊ.ಎಸ್.ಕೆ.ನವೀನ್‌ಕುಮಾರ್, ಪರೀಕ್ಷಾಂಗ ಕುಲಸಚಿವ ಡಾ.ಸಿ.ಎಸ್‌ಆನಂದಕುಮಾರ್, ಡೀನ್(ಶೈಕ್ಷಣಿಕ) ಪ್ರೊ.ಎಂ. ರಾಮನಾಥಂ ನಾಯ್ಡು, ಡೀನ್(ಅಧ್ಯಯನ ಕೇಂದ್ರ) ಡಾ.ಎನ್.ಆರ್.ಚಂದ್ರೇಗೌಡ, ಜ್ಯೋತಿರ್ ವಿಜ್ಞಾನ ಸಂಯೋಜನಾಧಿಕಾರಿ ಡಾ.ಎಸ್.ಕೇಶವ್ ಇದ್ದರು.
