ಮನುವಾದಿಗಳಿಂದ ಸಮಾನತೆಗೆ ವಿರೋಧ
ಬೌದ್ಧ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ

Pratheek
5 Min Read

ಪಬ್ಲಿಕ್ ಅಲರ್ಟ್

ಮೈಸೂರು: ಸಮಾಜದಲ್ಲಿ ಜಾತಿ ವ್ಯವಸ್ಥೆ ಆಳವಾಗಿ ಬೇರೂರಿದ್ದು, ಜಾತಿ ವ್ಯವಸ್ಥೆ ಬದಲಾಗಬಾರದು ಎಂದು ಪಟ್ಟಭದ್ರ ಹಿತಾಸಕ್ತಿಗಳು ಕೆಲಸ ಮಾಡುತ್ತಿದ್ದು, ಮನುವಾದಿಗಳು ಈ ಕೆಲಸ ಮಾಡುತ್ತಿದ್ದಾರೆ. ಆ ಮೂಲಕ ಸಮಾನತೆಗೆ ವಿರುದ್ಧವಾಗಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಕರ್ನಾಟಕ ರಾಜ್ಯ ಭಿಕ್ಷು ಸಂಘ, ಬೌದ್ಧ ಸಂಘ ಸಂಸ್ಥೆಗಳು ಹಾಗೂ ರಾಜ್ಯ ಅಂಬೇಡ್ಕರ್ ವಾದಿ ಸಂಘ ಸಂಸ್ಥೆಗಳು ಮತ್ತು ವಿಶ್ವ ಮೈತ್ರಿ ಬುದ್ಧ ವಿಹಾರ  ಸಂಯುಕ್ತಶ್ರಯದಲ್ಲಿ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಎರಡು ದಿನಗಳ ಬೌದ್ಧ ಮಹಾ ಸಮ್ಮೇಳನ ಮತ್ತು ಮಾನವ ಮೈತ್ರಿಯ ಪಯಣ-2025 ಅಂತಾರಾಷ್ಟ್ರೀಯ ಬೌದ್ಧ ಸಾಂಸ್ಕೃತಿಕ ಸಂಗಮ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಇಂತಹ ಒಂದು ಕಾರ್ಯಕ್ರಮವನ್ನು ಮಾಡಿ ಮೈಸೂರು ನಗರದಲ್ಲಿ ಬಹುಶಃ ಇದೇ ಮೊದಲ ದೊಡ್ಡ ಪ್ರಮಾಣದ ಕಾರ್ಯಕ್ರಮವಾಗಿದೆ. ಇದರ ಉದ್ದೇಶ ಹೆಚ್ಚು ಜನರಿಗೆ ಬುದ್ಧ, ಬಸವ, ಅಂಬೇಡ್ಕರ್‌ ಗೊತ್ತಾಗಬೇಕು. ಅವರ ತತ್ವ ಆದರ್ಶ ಗೊತ್ತಾಗಬೇಕು. ಆಗ ಮಾತ್ರ ಸಮಾಜದಲ್ಲಿ ಬದಲಾವಣೆ ಆಗಲು ಸಾಧ್ಯ. ನಮ್ಮ ಸಾಮಾಜಿಕ ವ್ಯವಸ್ಥೆ ಜಡ್ಡು ಗಟ್ಟಿದ ಸಮಾಜವಾಗಿದೆ. ಸುಲಭವಾಗಿ ಬದಲಾವಣಿ ಆಗಲ್ಲ. ಬುದ್ಧ ೨೫೦೦ ವರ್ಷಗಳ ಹಿಂದೆಯೇ ಸಮಾಜದ ಪರಿವರ್ತನೆಗೆ ಪ್ರಯತ್ನಿಸಿದರು. ಅಹಿಂಸೆ, ಸತ್ಯ ಮತ್ತು ಶಾಂತಿಯನ್ನು ಅಂದೇ ಬೋಧಿಸಿದರು. ಸಮಾಜದಲ್ಲಿ ಜಾತಿ, ವರ್ಗ ರಹಿತ ಸಮಾಜ ನಿರ್ಮಾಣ ಆಗಬೇಕು. ಬಸವ ೧೨ನೇ ಶತಮಾನದಲ್ಲಿ ಪ್ರಯತ್ನ ಮಾಡಿದರು.
ಅಂಬೇಡ್ಕರ್‌ ಅವರು ಪ್ರಯತ್ನ ಮಾಡಿದರು. ಯಾಕೆ ಅವರು ಬೌದ್ಧ ಸೇರಿದರು. ಹಿಂದೂ ಧರ್ಮ ಸುಧಾರಣೆ ಮಾಡಲು ಪ್ರಯತ್ನ ಮಾಡಿದರು. ಆ ಪ್ರಯತ್ನದಲ್ಲಿ ವಿಫಲರಾದರು. ಅದಕ್ಕಾಗಿಯೇ ಹುಟ್ಟು ನನ್ನ ಕೈಯಲ್ಲಿ ಇರಲಿಲ್ಲ. ಆದರೆ, ಸಾವು ನನ್ನ ಕೈಯಲ್ಲಿ ಇದೆ. ನನ್ನ ಕೈಯಲ್ಲಿ ಇಲ್ಲದ ಹಿನ್ನೆಲೆಯಲ್ಲಿ ನಾನು ಹಿಂದೂ ಧರ್ಮದಲ್ಲಿ ಹುಟ್ಟಿದ್ದೇನೆ. ಆದರೆ, ಸಾವು ನನ್ನ ಕೈಯಲ್ಲಿ ಇರುವುದರಿಂದ ನಾನು ಹಿಂದೂ ಧರ್ಮದಲ್ಲಿ ಸಾಯಲಾರೆ ಎಂದು ಅಂಬೇಡ್ಕರ್‌ ಹೇಳಿದರು. ಯಾಕೆಂದರೆ ಇಡೀ ಸಮಾಜ ಅಸಮಾನತೆಯಿಂದ ಕೂಡಿದ ಸಮಾಜವಾಗಿದೆ. ಅಸಮಾನತೆ ಇಲ್ಲದಿದ್ದರೆ ಅವರು ಹೋರಾಟ ಮಾಡುತ್ತಿರಲಿಲ್ಲ. ಎಲ್ಲರಿಗೂ ಸಮಾನ ಅವಕಾಶ ಸಿಗದಿರುವುದೇ ಅಸಮಾನತೆ ನಿರ್ಮಾಣಕ್ಕೆ ಸಾಧ್ಯವಾಯಿತು. ಅದಕ್ಕೆ ಅಂಬೇಡ್ಕರ್‌ ಪ್ರತಿಯೊಬ್ಬರೂ ಕೂಡ ಆರ್ಥಿಕ, ಸಾಮಾಜಿಕವಾಗಿ ಶಕ್ತಿ ಬಂದಾಗ ಮಾತ್ರ ಭಾರತದಲ್ಲಿ ಹುಟ್ಟುವುದಕ್ಕೆ ಸಾರ್ಥಕವಾಗುತ್ತದೆ. ಇಲ್ಲದಿದ್ದರೆ ಸಾರ್ಥಕವಾಗಲ್ಲ. ನಮ್ಮ ಸಮಾಜ ಜಾತಿ ವ್ಯವಸ್ಥೆಯಿಂದ ಕೂಡಿದ ಸಮಾಜವಾಗಿದೆ. ಅನೇಕ ಜಾತಿ, ಧರ್ಮ ಇವೆ. ಅಂಬೇಡ್ಕರ್‌ ಸಂವಿಧಾನದಲ್ಲಿ ಪರಧರ್ಮ ಸಹಿಷ್ಣುತೆ ಮತ್ತು ಸಹಬಾಳ್ವೆ ಇದನ್ನು ಪ್ರತಿಯೊಬ್ಬರು ಮೈಗೂಡಿಸಿಕೊಂಡಾಗ ಮಾತ್ರ  ದೇಶದಲ್ಲಿ ಶಾಂತಿ, ನೆಮ್ಮದಿ, ಅಹಿಂಸೆ, ಸತ್ಯ ನೆಲಸಲು ಸಾಧ್ಯವಾಗುತ್ತದೆ ಎಂದರು.

೧೯೪೯ರ ಸಂವಿಧಾನ ಸಭೆಯಲ್ಲಿ ನ.೨೫ರಲ್ಲಿ ಅಂಬೇಡ್ಕರ್‌ ಸಂವಿಧಾನ ಅಂಗೀಕಾರಕ್ಕೂ ಒಂದು ದಿನ ಮುನ್ನ ಭಾಷಣ ಮಾಡಿದ್ದು, ಅದು ಐತಿಹಾಸಿಕ ಭಾಷಣವಾಗಿದೆ. ಸಂವಿಧಾನ ಜಾರಿಗೆ ಬರುವ ದಿನ ನಾವು ವೈರುದ್ಯತೆ ಇರುವ ಕಡೆ ಕಾಲಿಡುತ್ತಿದ್ದೇವೆ. ಸಾಮಾಜಿಕ, ಆರ್ಥಿಕ ಅಸಮಾನತೆಯಿದೆ. ಇದು ಮುಂದುವರೆಯುತ್ತದೆಯೂ ಅಲ್ಲಿಯವರೆಗೆ ದೇಶದ ಬದಲಾವಣೆ ತರಲು ಸಾಧ್ಯವಿಲ್ಲ. ಆರ್ಥಿಕ, ರಾಜಕೀಯ, ಸಾಮಾಜಿಕ ಸ್ವಾತಂತ್ರ್ಯ ಬರಲ್ಲ. ಅಸಮಾನತೆಯ ಸಂಕೋಲೆಯಿಂದ ನರಳುವವರು, ನೋವು ಅನುಭವಿಸುವವರು ಸ್ವಾತಂತ್ರ್ಯದ ಸೌಧವನ್ನೇ ಧ್ವಂಸ ಮಾಡುತ್ತಾರೆ ಎಚ್ಚರಿಕೆಯಿಂದರಿ ಎಂದು ಹೇಳಿದ್ದಾರೆಂದರು.
ಅಂಬೇಡ್ಕರ್ ಅವರು ಹಿಂದೂ ಧರ್ಮದ ಅಸಮಾನತೆ ನಿವಾರಿಸಲು ಬಹಳ ಪ್ರಯತ್ನಪಟ್ಟರು ಸಾಧ್ಯವಾಗಲಿಲ್ಲ. ಸಮಾಜದಲ್ಲಿ ಜಾತಿ ವ್ಯವಸ್ಥೆ ಅತ್ಯಂತ ಆಳವಾಗಿ ಬೇರುಬಿಟ್ಟಿದ್ದು, ಜಾತಿ ವ್ಯವಸ್ಥೆ ಬದಲಾಗದಂತೆ ಪಟ್ಟಭದ್ರ ಹಿತಾಸಕ್ತಿಗಳು ಕೆಲಸ ಮಾಡುತ್ತಿವೆ, ಮನುವಾದಿಗಳು ಈ ಕೆಲಸ ಮಾಡುತ್ತಿವೆ‌.
ಪ್ರಿಯಾಂಕ್‌ ಖರ್ಗೆ ನನಗೆ ಪತ್ರ ಬರೆದಿದ್ದು, ಅದಕ್ಕಾಗಿ ಪ್ರಿಯಾಂಕ್‌ ಖರ್ಗೆ ಅವರಿಗೆ ಬೆದರಿಕೆ ಕರೆಗಳು ಬರುತ್ತಿವೆ. ಈ ರೀತಿಯಾಗಿ ಬದಲಾವಣೆ ಮಾಡಲು ಪ್ರಯತ್ನಿಸುವವರಿಗೆಲ್ಲಾ ಬೆದರಿಕೆ ಕರೆಗಳು ಬರುತ್ತವೆ‌ ಎಂದು ಕಳವಳ ವ್ಯಕ್ತಪಡಿಸಿದರು.
ಹಿಂದುಳಿದ ಸಮುದಾಯಗಳಿಗೆ ಆರ್ಥಿಕವಾಗಿ ಶಕ್ತಿ ಬರಬೇಕು ಎಂಬ ಕಾರಣಕ್ಕೆ ೨೦೧೩ರಲ್ಲಿ ಎಸ್‌ಇಪಿ ಟಿಎಸ್‌ ಪಿ ಯೋಜನೆಯನ್ನು ಆಂದ್ರ, ತೆಲಂಗಾಣ ಹೊರತು ಪಡಿಸಿ ದೇಶದಲ್ಲೇ ಮೊದಲ ಬಾರಿಗೆ ರಾಜ್ಯದಲ್ಲಿ ಯೋಜನೆ ಜಾರಿಗೆ ತಂದೆನು. ಕೆಲವು ರಾಜಕೀಯ ಪಕ್ಷಗಳು ಈ ಕಾಯಿದೆಗೆ ವಿರುದ್ಧವಾಗಿದ್ದಾರೆ. ಕಾಯಿದೆ ಬಳಿಕ ೧೫ಸಾವಿರ ಕೋಟಿ ಇತ್ತು. ಇಂದು ೪೨ಸಾವಿರ ಕೋಟಿ ಇದೆ. ಬಹಳ ಜನರಿಗೆ ಇದರ ಮಹತ್ವ ಅರಿವಾಗಿಲ್ಲ. ಕೇಂದ್ರದಲ್ಲಿ ಯಾಕೆ ಮಾಡಿಲ್ಲ. ಬೇರೆ ರಾಜ್ಯಗಳಲ್ಲಿ ಯಾಕ್‌ ಮಾಡಿಲ್ಲ. ಈ ಬಗ್ಗೆ ಎಲ್ಲಾ ಕೇಳುವುದಿಲ್ಲ. ಸುಮ್ಮನೆ ಸಮಾನತೆ ಬರುವುದಿಲ್ಲ. ಅಸಮಾನತೆ ಸುಮ್ಮನೆ ಹೋಗುವುದಿಲ್ಲ. ಸಮಾನತೆ ಸಮಾಜ ಆಗಬೇಕಾದರೆ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಶಕ್ತಿ ಬಾರದಿದ್ದರೆ ಬದಲಾವಣೆ ಆಗಲ್ಲ. ಸ್ವಾತಂತ್ರ್ಯ ಸಾರ್ಥಕ ಆಗಲ್ಲ, ಬದಲಾವಣೆ ಆಗಲ್ಲ ಎಂದರು.
ನಾನು ಗುತ್ತಿಗೆಯಲ್ಲಿ ಮೀಸಲಾತಿ ತಂದೆನೂ, ಬೇರೆ ರಾಜ್ಯದಲ್ಲಿ ಯಾಕಿಲ್ಲ. ನಾನು ಸಹ ಹಿಂದುಳಿದ ಜಾತಿಗೆ ಸೇರಿದವನು. ನಾನು ಸಹ ಅವಕಾಶದಿಂದ ವಂಚಿತನಾಗಿದ್ದೇನೆ. ಅನೇಕರು ಸಿದ್ದರಾಮಯ್ಯ ಸರ್ಕಾರ ದಲಿತರಿಗೆ ಏನು ಮಾಡಿತು ಎಂದು ಕೆಲವರು ಕೇಳುತ್ತಾರೆ. ಆದರೆ, ವರ್ಗಾವಣೆಯಲ್ಲಿ ಮೀಸಲಾತಿಯನ್ನು ನೀಡಿದ್ದು,  ಸಿದ್ದರಾಮಯ್ಯ. ಸಮಾನತೆ ಸುಮ್ಮನೆ ಬರುವುದಿಲ್ಲ‌‌‌, ಸರ್ಕಾರದ ಕಾರ್ಯಕ್ರಮದಿಂದ ಸಮಾನತೆ ತರಲು ಪ್ರಯತ್ನಿಸುತ್ತಿದ್ದೇವೆ. ವಿದ್ಯಾವಂತರು ಜಾತಿ ಬಗ್ಗೆ ಮಾತನಾಡುವುದನ್ನು ಹೆಚ್ಚು ಮಾಡಿದ್ದು, ಮೂಢನಂಬಿಕೆಯ ಆಚರಣೆಯನ್ನು ಹೆಚ್ಚಾಗಿ ಪಾಲಿಸುತ್ತಾ, ಹಣೆಬರಹ ಎಂದು ಕೂರುತ್ತಾರೆ ಎಂದು ವಾಸ್ತವತೆಯ ವಿರುದ್ಧ ಸಿಎಂ ಸಿದ್ದರಾಮಯ್ಯ ಕಿಡಿಕಾಡಿದರು.
ರತ್ನ ಪ್ರಭಾ ಅವರ ನೇತೃತ್ವದಲ್ಲಿ ಸಮಿತಿ ರಚಿಸಿ ಮೀಸಲಾತಿಯಿಂದ ಮುಂಬಡ್ತಿ ನೀಡಿದ್ದೇನೆ. ಬೇರೆ ರಾಜ್ಯ ಹಾಗೂ ಕೇಂದ್ರದಲ್ಲಿ ಮಾಡಲಿಲ್ಲ. ಯಾಕೆ ಕೇಳಲಿಲ್ಲ. ನಮ್ಮಲ್ಲಿ ಜಾಗೃತಿ ಬರಬೇಕು. ಜತೆಗೆ ಕಾರ್ಯಕ್ರಮಗಳು ಇರಬೇಕು. ಇಲ್ಲದಿದ್ದರೆ ಆರ್ಥಿಕ, ಸಾಮಾಜಿಕವಾಗಿ ಶಕ್ತಿ ಬರುವುದಿಲ್ಲ. ಇಲ್ಲದಿದ್ದರೆ ಸಮಾನತೆ ಎಲ್ಲಿ ಬರುತ್ತದೆ. ವಿದ್ಯಾವಂತರೂ ಸಹ ಜಾತಿ ಮಾಡಲು ಶುರು ಮಾಡಿದ್ದಾರೆಂದು ಬೇಸರಿಸಿದರು.
ನನ್ನ ಅವಧಿಯಲ್ಲಿ ನೀಡಿದ ಭಾಗ್ಯಗಳೆಲ್ಲವೂ ಅಸಮಾನತೆ ಹೋಗಲಾಡಿಸುವ ಯೋಜನೆಗಳಾಗಿವೆ. ಈಗ ಗ್ಯಾರಂಟಿ ಯೋಜನೆಗಳು ಸಹ ಸಮಾನತೆ ತರಲಿದೆ ಎಂದರು. ಕಾರ್ಯಕ್ರಮದಲ್ಲಿ ಸಚಿವರಾದ ಡಾ.ಜಿ.ಪರಮೇಶ್ವರ್‌, ಡಾ.ಎಚ್‌.ಸಿ.ಮಹದೇವಪ್ಪ, ಸತೀಶ್‌ ಜಾರಕಿಹೊಳಿ, ಶಾಸಕರಾದ ರವಿಶಂಕರ್‌,ದರ್ಶನ್‌ ದ್ರುವನಾರಾಯಣ್‌,ಪುಟ್ಟರಂಗ ಶೆಟ್ಟಿ, ಎ.ಆರ್‌.ಕೃಷ್ಣಮೂರ್ತಿ, ಆರ್‌.ನರೇಂದ್ರಸ್ವಾಮಿ, ವಿಧಾನ ಪರಿಷತ್‌ ಸದಸ್ಯರಾದ ಡಾ.ಡಿ.ತಿಮ್ಮಯ್ಯ, ಡಾ.ಯತೀಂದ್ರಸಿದ್ದರಾಮಯ್ಯ, ಮಾಜಿ ಶಾಸಕ ಎಂ.ಕೃಷ್ಣಮೂರ್ತಿ, ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷೆ ಪುಷ್ಪ ಅಮರನಾಥ್‌, ಕೆಪಿಸಿಸಿ ಮಾದ್ಯಮ ವಕ್ತಾರ ಎಂ.ಲಕ್ಷ್ಮಣ್‌, ಸಮ್ಮೇಳನದ ಗೌರವಾಧ್ಯಕ್ಷ ಉರಿಲಿಂಗಿ ಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ, ಸರ್ವಾಧ್ಯಕ್ಷ ಪುರುಷೋತ್ತಮ್‌, ಮಾಜಿ ಶಾಸಕರಾದ ಎಚ್.‌ಕೆ.ಕುಮಾರಸ್ವಾಮಿ, ಎಂ.ಕೆ.ಸೋಮಶೇಖರ್‌ ಇನ್ನಿತರರು ಉಪಸ್ಥಿತರಿದ್ದರು.



ಬಾಕ್ಸ್‌
ಬಡವರಿಗೆ ಶಕ್ತಿ ಬರದಿದ್ದರೆ ಜಾತಿ ಹೋಗಲ್ಲ
ಮೈಸೂರು: ಮೇಲ ಜಾತಿ ಬಡವ ಬಂದರೆ ಬುದ್ಧಿ ಸ್ವಾಮಿ ಎನ್ನುತ್ತೇವೆ. ಒಬ್ಬ ದಲಿತ ಶ್ರೀಮಂತ, ಬುದ್ಧಿವಂತನಾಗಿದ್ದರೂ ಆತನನ್ನು ಏಕವಚನದಲ್ಲಿ ಮಾತನಾಡಿಸುತ್ತಾರೆ.ಮೌಡ್ಯ, ಕಂದಾಚಾರ, ಮೂಡನಂಬಿಕೆಗಳಿಗೆ ಒಂದು ಕಾನೂನು ತಂದೆನು. ಬಸವಣ್ಣ, ಬುದ್ಧ, ಅಂಬೇಡ್ಕರ್‌ ಮೌಢ್ಯ, ಕಂದಾಚಾರ ತೊಲಗಬೇಕು ಎಂದಿದ್ದಾರೆ. ಆದರೆ, ಅದನ್ನು ಮಾಡಲು ಆಯಿತೆ. ಎಲ್ಲಿಯವರಿಗೆ ನಮ್ಮಲ್ಲಿರುವ ಗುಲಾಮಗಿರಿ ತೊಡೆದು ಹಾಕುವುದಿಲ್ಲವೋ ಅಲ್ಲಿಯವರೆಗೂ ಸಮಾಜದ ಬದಲಾವಣೆ ಅಸಾಧ್ಯ. ಬುದ್ಧ ಹೇಳಿರುವಂತೆ ಮನುಷ್ಯ ಮನುಷ್ಯನನ್ನು ಪ್ರೀತಿಸಬೇಕು. ಮಾನವಧರ್ಮ, ಬಸವ, ಅಂಬೇಡ್ಕರ್‌, ಬೌದ್ಧನ ಮಾತಿಗೆ ವಿರುದ್ಧವಾಗಿರುವವ ಜತೆಗೆ ರಾಜಿ ಆಗಬಾರದು. ಅವರೊಟ್ಟಿಗೆ ಸಮರ್ಥನೆ ಮಾಡಿಕೊಳ್ಳಬಾರದು. ಯಾರು ಹೇಳುವುದು ಕೇಳಬೇಡಿ, ನನ್ನ ಮಾತು ಕೇಳಬೇಡಿ. ಬುದ್ಧ, ಬಸವ, ಅಂಬೇಡ್ಕರ್‌ ಮಾತು ಕೇಳಿ ಎಂದು ಹೇಳಿದರು. 

Share This Article
Leave a Comment