ಪಬ್ಲಿಕ್ ಅಲರ್ಟ್
ಮೈಸೂರು: ಜಾತಿ ಸಮೀಕ್ಷೆಯಲ್ಲಿ ಕಾರ್ಯ ನಿರತರಾಗಿರುವ ಶಿಕ್ಷಕರಿಗೆ ಒತ್ತಡ ನೀಡಿದರೆ ಅಂತಹ ಅಧಿಕಾರಿ ಕಚೇರಿ ಮುಂದೆ ಉಪವಾಸ ಸತ್ಯಾಗ್ರಹ ಮಾಡಬೇಕಾಗುತ್ತದೆ ಎಂದು ವಿಧಾನ ಪರಿಷತ್ತು ಸದಸ್ಯ ಕೆ.ವಿವೇಕಾನಂದ ಎಚ್ಚರಿಕೆ ನೀಡಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಣತಿ ನೆಪದಲ್ಲಿ ಶಿಕ್ಷಕರಿಗೆ ತೊಂದರೆ ಕೊಡಬೇಡಿ. ಶಿಕ್ಷಕರಿಗೆ ಒತ್ತಡ ಹೇರುವುದನ್ನು ನಿಲ್ಲಿಸದಿದ್ದರೆ ರಾಜ್ಯಪಾಲರಿಗೆ ದೂರು ಕೊಡುತ್ತೇನೆ ಎಂದರು.
ಮೈಸೂರು, ಹಾಸನ, ಚಾಮರಾಜನಗರ ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಕರ್ತವ್ಯ ನಿರತ ಶಿಕ್ಷಕರು ಸಮೀಕ್ಷೆ ಕಾರ್ಯದಿಂದ ತಮಗಾಗುತ್ತಿರುವ ಸಮಸ್ಯೆಗಳನ್ನು ಹಂಚಿಕೊಂಡಿದ್ದಾರೆ. ತೀವ್ರ ಒತ್ತಡದಲ್ಲಿ ಕೆಲಸ ಮಾಡಲಾಗದೆ ಅನಾರೋಗ್ಯ ಸಮಸ್ಯೆಗಳಿಗೆ ಸಿಲುಕಿದ್ದಾರೆ ಎಂದು ತಿಳಿಸಿದರು.
ಮೈಸೂರು ಜಿಲ್ಲೆಯ ತಾಲೂಕು ಕೇಂದ್ರಗಳಲ್ಲಿ ಕರ್ತವ್ಯ ನಿರ್ವಹಿಸುವ ಶಿಕ್ಷಕರನ್ನು ಮೈಸೂರು ನಗರದಲ್ಲಿ ಸಮೀಕ್ಷೆಗೆ ನಿಯೋಜಿಸಿದ್ದಾರೆ. ಪ್ರತಿನಿತ್ಯ ೩೦ ಮನೆ ಸಮೀಕ್ಷೆ ಮಾಡಬೇಕೆಂದು ಗುರಿ ನಿಗದಿ ಮಾಡಿದ್ದಾರೆ. ಮೈಸೂರು ನಗರದ ಬಡಾವಣೆಗಳ ಪರಿಚಯವೇ ಇಲ್ಲದ ಶಿಕ್ಷಕರು ಬಹಳ ಕಷ್ಟ ಅನುಭವಿಸುತ್ತಿದ್ದಾರೆ. ಹಾಗಾಗಿ ಶಿಕ್ಷಕರನ್ನು ಆಯಾಯ ತಾಲೂಕು ವ್ಯಾಪ್ತಿಯಲ್ಲಿ ಸಮೀಕ್ಷೆಗೆ ನಿಯೋಜಿಸಬೇಕು ಎಂದು ಜಿಲ್ಲಾಡಳಿತವನ್ನು ಒತ್ತಾಯಿಸಿದರು.
ಈವರೆಗೆ ೬೦೦ ಶಿಕ್ಷಕರು ನೋಟಿಸ್ ಕೊಡಲಾಗಿದೆ. ೧೨ ಶಿಕ್ಷಕರನ್ನು ಸಸ್ಪೆಂಡ್ ಮಾಡಲಾಗಿದೆ. ಇತರೆ ಇಲಾಖೆಯವರಿಗೆ ಇಲ್ಲದ ಶಿಕ್ಷೆ ಶಿಕ್ಷಕರಿಗೆ ಮಾತ್ರ ಯಾಕೆ? ದಸರಾ ರಜೆ ಕಡಿತವಾಯಿತು. ಗಣತಿಯಿಂದಲೇ ಶಿಕ್ಷಕರನ್ನು ಕೈ ಬಿಡುವಂತೆ ಒತ್ತಾಯ ಮಾಡುತ್ತೇನೆ ಎಂದು ಹೇಳಿದರು.
೫೦-೫೫ ವರ್ಷ ಮೇಲ್ಪಟ್ಟ ಶಿಕ್ಷಕರಲ್ಲಿ ಕೆಲವರಿಗೆ ಮೊಬೈಲ್ ಬಳಸಲು ಬರುವುದಿಲ್ಲ. ಆ್ಯಪ್‌ನಲ್ಲಿ ಯಾವ ರೀತಿ ಮಾಹಿತಿ ದಾಖಲಿಸುತ್ತಾರೆ. ಸರ್ವರ್ ಸಮಸ್ಯೆಯೂ ಇದೆ. ನಾನಾ ಅನಾರೋಗ್ಯದಿಂದ ಬಳಲುತ್ತಿರುವ ಶಿಕ್ಷಕರು ತುಂಬಾ ಒತ್ತಡದಲ್ಲಿ ಕೆಲಸ ಮಾಡಬೇಕಾಗಿದೆ ಎಂದರು.
ಶಿಕ್ಷಕರಿಗೆ ಒತ್ತಡ ಹೇರಿದರೆ ಉಪವಾಸ ಸತ್ಯಾಗ್ರಹ: ಎಂಎಲ್ಸಿ ವಿವೇಕಾನಂದ ಎಚ್ಚರಿಕೆ
Leave a Comment
Leave a Comment
