ಬೆಟ್ಟದತ್ತ ಪರ-ವಿರೋಧ ನಡಿಗೆ
ಇಂದು ಪರ-ವಿರೋಧ ಪ್ರತಿಭಟನೆಗೆ ಸಜ್ಜು, ಪೊಲೀಸರ ನಿಷೇಧ

Pratheek
2 Min Read

ಪಬ್ಲಿಕ್ ಅಲರ್ಟ್


ಮೈಸೂರು: ನಾಡಹಬ್ಬ ದಸರೆ ಅತ್ತ ಸಂಪೂರ್ಣ ಅಧಿಕಾರಿವರ್ಗ ಸಂಭ್ರಮದಲ್ಲೇ ತಯಾರಿ ನಡೆಸುತ್ತಿದ್ದರೆ ಮತ್ತೊಂದೆಡೆ ದಸರಾ ಉದ್ಘಾಟಕರ ಆಯ್ಕೆ ವಿಚಾರದ ಪರ-ವಿರೋಧ ಚರ್ಚೆಗಳು ಈಗ ಚಾಮುಂಡಿ ಬೆಟ್ಟದತ್ತ ಅಖಾಢಕ್ಕೆ ಸಜ್ಜಾಗಿದ್ದು ಪೊಲೀಸರ ವಿರೋಧ ನಡುವೆಯೂ ಒಂದೆಡೆ ಚಾಮುಂಡಿ ಚಲೋ ಮತ್ತೊಂದೆಡೆ ಚಾಮುಂಡಿಯೆಡೆಗೆ ನಡಿಗೆ ನಡೆಸಲು ಮುಂದಾಗಿವೆ.
ನಾಡಹಬ್ಬ ದಸರೆ ಉದ್ಘಾಟನೆಗೆ ಬೂಕರ್‌ ಪ್ರಶಸ್ತಿ ವಿಜೇತೆ ಭಾನು ಮುಷ್ತಾಕ್‌ ಅವರನ್ನು ಆಯ್ಕೆ ಮಾಡಿರುವ ಸಂಬಂಧ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಅದರಲ್ಲೂ ಅವರು ಪ್ರಮುಖವಾಗಿ ಹಿಂದಿನ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ತಾಯಿ ಭುವನೇಶ್ವರಿಯ ಕುಂಕುಮದ ಕುರಿತು ಆಡಿರುವ ಮಾತು ಎಲ್ಲರ ವಿರೋಧಕ್ಕೆ ಕಾರಣವಾಗಿದೆ. ಈ ಮಧ್ಯೆ ಮಾಜಿ ಸಂಸದ ಪ್ರತಾಪಸಿಂಹ ಕಾನೂನು ಹೋರಾಟಕ್ಕೂ ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ವಿಶ್ವಹಿಂದೂ ಪರಿಷತ್‌ ಭಾನುಮುಸ್ತಾಕ್‌ ಆಯ್ಕೆ ವಿರೋಧಿಸಿ ಚಾಮುಂಡಿಯೆಡೆಗೆ ನಮ್ಮ ನಡಿಗೆ ಕಾರ್ಯಕ್ರಮಕ್ಕೆ ಮುಂದಾಗಿದ್ದಾರೆ.
ಚಾಮುಂಡೇಶ್ವರಿಯನ್ನು ರಾಜಕೀಯಗೊಳಿಸದಿರಿ ಹಾಗೂ ಕೋಮುಗಲಭೆ ಸೃಷ್ಠಿಸದಿರಿ ಎಂದು ದಲಿತಾ ಮಹಸಭಾ ಬೆಳಿಗ್ಗೆ ೭.೩೦ಕ್ಕೆ ಚಾಮುಂಡಿ ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ತೆರಳಲು ನಿರ್ಧರಿಸಿದೆ. ಇದಕ್ಕಾಗಿ ಎರಡು ಸಂಘಟನೆಗಳು ಈಗಾಗಲೇ ನಗರ ಪೊಲೀಸ್‌ ಆಯುಕ್ತರಿಗೆ ಪ್ರತ್ಯೇಕವಾಗಿ ಮನವಿಯನ್ನು ನೀಡಿದ್ದಾರೆ. ಎರಡು ಮನವಿ ಆಲಿಸಿದ  ಕೃಷ್ಣರಾಜ ಠಾಣೆಯ ಪೊಲೀಸರು ನಗರದಲ್ಲಿ ಶಾಂತಿ ಕಾಪಾಡುವ ದೃಷ್ಠಿಯಿಂದ ಸೆ.೯ರಂದು ಚಾಮುಂಡಿ ಬೆಟ್ಟ ಹಾಗೂ ಬೆಟ್ಟದ ಸಮೀಪ ಯಾವುದೇ ಪ್ರತಿಭಟನೆ, ಮೆರವಣಿಗೆ ಇತ್ಯಾದಿಗಳಿಗೆ ಅವಕಾಶ ನೀಡಿಲ್ಲ. ಮಾತ್ರವಲ್ಲದೆ, ಯಾವುದೇ ಮೆರವಣಿಗಗಳಿಗೂ ನಿಷೇಧ ವಿಧಿಸಿದ್ದಾರೆನ್ನಲಾಗಿದೆ. ಇದನ್ನೂ ಮೀರಿ ಪ್ರತಿಭಟಿಸಲು ಮುಂದಾಗುವವರ ವಿರುದ್ಧ ಕ್ರಮಕ್ಕೆ ಮುಂದಾಗಲು ಆಯಾ ಆಯಕಟ್ಟಿನಲ್ಲಿ ತಡರಾತ್ರಿಯಿಂದಲೇ ಚಾಮುಂಡಿ ಬೆಟ್ಟದ ರಸ್ತೆಗಳಲ್ಲಿ ಹೆಚ್ಚುವರಿ ಬ್ಯಾರಿಕೇಡ್‌ ನಿರ್ಮಿಸಿ ಬಿಗಿ ಪೊಲೀಸ್‌ ಬಂದೋಬಸ್ತ್‌ ವ್ಯವಸ್ಥೆ ಕಲ್ಪಿಸಲು ಪೊಲೀಸರು ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಎರಡು ಸಂಘಟನೆಗಳ ಸೆ.೯ರ ಹೋರಾಟ ಯಾವ ರೂಪ ಪಡೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ. 

ಬಾಕ್ಸ್‌
ಚಾಮುಂಡಿ ಪರವಾಗಿ ಯಾರೇ ಹೋರಾಟ ನಡೆಸಿದರೂ ಹಿಂದೂಗಳಾಗಿ ನಮ್ಮ ಬೆಂಬಲ ಅವರಿಗೆ ಇರಲಿದೆ. ಹೀಗಾಗಿ ನಾಳೆ ನಡೆಯುವ ಚಾಮುಂಡಿ ಚಲೋ ಅಥವಾ ಚಾಮುಂಡಿ ಎಡೆಗೆ ನಮ್ಮ ನಡಿಗೆ ಕಾರ್ಯಕ್ರಮದಲ್ಲಿ ನಾವು ಸಹ ಭಾಗವಹಿಸುತ್ತೇವೆ. 
-ಎಲ್‌.ನಾಗೇಂದ್ರ, ನಗರಾಧ್ಯಕ್ಷ ಬಿಜೆಪಿ.

ಬಾಕ್ಸ್‌
ಭಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿರುವುದನ್ನು ಬೆಂಬಲಿಸಿ ವಿವಿಧ ಸಂಘಟನೆಗಳು ಕರೆ ನೀಡಿರುವ ಸೆ.೯ರ ಚಾಮುಂಡಿಬೆಟ್ಟದತ್ತ ಸೌಹಾರ್ದಯುತ ನಡಿಗೆ ಕಾರ್ಯಕ್ರಮಕ್ಕೆ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಬೆಂಬಲ ನೀಡಿ ಪಾಲ್ಗೊಳ್ಳಲಿದೆ. ತಿಳಿಸಿದರು. ಬೆ.೭ಕ್ಕೆ ನಗರದ ಕುರುಬಾರಹಳ್ಳಿ ವೃತ್ತದಿಂದ ನಡಿಗೆ ಹೊರಡಲಿದೆ. ಬೆಟ್ಟ ತಲುಪಿ, ಕೋಮುವಾಗಿಗಳು, ದ್ವೇಷ ಬಿತ್ತುವವರಿಗೆ ಒಳ್ಳೆಯ ಬುದ್ಧಿ ನೀಡುವಂತೆ ಚಾಮುಂಡೇಶ್ವರಿಯಲ್ಲಿ ಪ್ರಾರ್ಥನೆ ಸಲ್ಲಿಸಲಾಗುವುದು.
-ಕೆ.ಎಸ್.ಶಿವರಾಮು, ಅಧ್ಯಕ್ಷ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ

ಬಾಕ್ಸ್‌
ಚಾಮುಂಡಿ ಬೆಟ್ಟ ನಮ್ಮ ಧಾರ್ಮಿಕ ಕೇಂದ್ರವಾಗಿದ್ದು, ದಸರಾ ಧಾರ್ಮಿಕ ಆಚರಣೆಯಾಗಿದೆ. ಹೀಗಾಗಿ ನಮ್ಮ ಧರ್ಮವನ್ನು ನಂಬದ ಭಾನುಮುಸ್ತಾಕ್‌ ಅವರಿಂದ ದಸರಾ ಉದ್ಘಾಟನೆ ಆಯ್ಕೆಯನ್ನು ನಾವು ವಿರೋಧಿಸುತ್ತಿದ್ದೇವೆ. ಈ ಬಗ್ಗೆ ಜಾಗೃತಿ ಮೂಡಿಸಲು ಚಾಮುಂಡಿಯೆಡೆಗೆ ನಡಿಗೆ ಆಯೋಜಿಸಿದ್ದೇವೆಂದು ಹಿಂದೂ ಜಾಗರಣ ವೇದಿಕೆ ತಿಳಿಸಿದೆ. 

Share This Article
Leave a Comment