ಪಬ್ಲಿಕ್ ಅಲರ್ಟ್


ಮೈಸೂರು: ಚಾಮುಂಡೇಶ್ವರಿ ದೇವಾಲಯ ಹಿಂದೂ ದೇವಾಲಯವೋ ಅಥವಾ ಇಲ್ಲವೋ ಎಂಬುದನ್ನು ೨೪ ತಾಸಿನಲ್ಲಿ ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಬೇಕು. ಇಲ್ಲದಿದ್ದರೆ ಪಕ್ಷದಿಂದ ವ್ಯವಸ್ಥಿತ ಹೋರಾಟ ನಡೆಸುವ ತೀರ್ಮಾನ ಕೈಗೊಳ್ಳಲಾಗುವುದು ಎಂದು ರಾಜ್ಯ ಬಿಜೆಪಿ ವಕ್ತಾರ ಎಂ.ಜಿ.ಮಹೇಶ್ ಎಚ್ಚರಿಕೆ ನೀಡಿದರು.
ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹಳೆ ಮೈಸೂರು ಭಾಗದ ಜನರಿಗೆ ತಾಯಿ ಚಾಮುಂಡೇಶ್ವರಿ ಎಂದರೆ ನೂರಾರು ವರ್ಷದ ಕೊಂಡಿ ಬೆಸೆದುಕೊಂಡಿದೆ. ಈ ಬಗ್ಗೆ ಡಿ.ಕೆ.ಶಿವಕುಮಾರ್ ಅವರು ಚಾಮುಂಡಿ ಬೆಟ್ಟದ ಬಗ್ಗೆ ಅದು ಹಿಂದೂಗಳ ದೇವಾಲಯ ಅಲ್ಲ ಎಂದಿದ್ದಾರೆ. ಇದು ಕೇವಲ ಉಡಾಫೆ ಮಾತಲ್ಲ, ಇದು ಕಾಂಗ್ರೆಸ್‌ನ ಟೂಲ್ ಕಿಟ್‌ನ ಮಾತಾಗಿದೆ. ಇಂತಹ ವ್ಯಕ್ತಿಗಳನ್ನು ಬಳಸಿಕೊಂಡು ಪದೇ ಪದೇ ಹಿಂದೂಗಳನ್ನು ಅವಮಾನಿಸುವ ಕೆಲಸ ಮಾಡುತ್ತಿದ್ದಾರೆ. ಸಿದ್ದರಾಮಯ್ಯನವರೇ ಡಿ.ಕೆ.ಶಿವಕುಮಾರ್ ಹೇಳಿಕೆಯನ್ನು ಸಮರ್ಥಿಸಿಕೊಳ್ಳುತ್ತೀರಾ? ಇದು ಮುಜರಾಯಿ ಇಲಾಖೆಗೆ ಒಳಪಟ್ಟಿದಿಯೋ ಇಲ್ಲವೋ ತಿಳಿಸಬೇಕು ಎಂದು ಆಗ್ರಹಿಸಿದರು.
ಪಕ್ಕದ ಕೇರಳದಲ್ಲಿ ಕಮ್ಯುನಿಸ್ಟ್ ಸರ್ಕಾರವಿದ್ದರೂ ಜಾಫರ್ ಗುರುವಾಯುರು ದೇವಾಲಯದ ಕೊಳಕ್ಕೆ ಕಾಲು ಬಿಟ್ಟಿದ್ದಕ್ಕೆ ಆರು ದಿನ ದೇವಾಲಯ ಶುದ್ಧೀಕರಣ ಮಾಡಿದರು, ಅದೇ ಕೇರಳದಲ್ಲಿ ಮುಸ್ಲಿಂ ಒಣ ಆಚರಿಸಬಾರದು ಎಂದು ಆ ಭಾಗದ ಜನತೆ ತಡೆದರು. ಹೀಗಿರುವಾಗ ರಾಜ್ಯದಲ್ಲಿ ಒಲೈಕೆಗಾಗಿ ದೇವಾಲಯವನ್ನೇ ಹಿಂದೂಗಳದ್ದಲ್ಲ ಎನ್ನಲೂ ಹೊರಟಿದ್ದಾರೆ. ಚಾಮುಂಡಿ ದೇವಾಲಯದ ಬಗ್ಗೆ ಸಿಎಂ ಸಿದ್ದರಾಮ್ಮಯ ಒಂದು ದಿನದೊಳಗೆ ಸ್ಪಷ್ಟನೆ ನೀಡಬೇಕು. ಇಲ್ಲದಿದ್ದರೆ ಈ ಭಾಗದ ಮಠಾಧೀಶರು, ಚಿಂತಕರನ್ನು ಒಳಗೊಂಡಂತೆ ಚರ್ಚಿಸಿ ಅಗತ್ಯ ಬಿದ್ದರೆ ಹೋರಾಟಕ್ಕೂ ತಯಾರಿ ಮಾಡುತ್ತೇವೆ. ಡೋಂಗಿಗಳನ್ನು ಮೆಚ್ಚಿಸಲಿಕ್ಕೆ ಭಾನುಮುಸ್ತಾಕ್ ಅವರನ್ನು ಆಹ್ವಾನಿಸಿದ್ದೀರಿ. ನವರಾತ್ರಿ ೧೦ ದಿನವೂ ಪುರೋಹಿತರ ಅಣತಿಯಂತೆ ಪೂಜೆಗಳು ನಡೆಯುತ್ತದೆ. ದೇಶದಲ್ಲಿ ಗಂಗೆ, ಗೋವು, ಭುವನೇಶ್ವರಿ ಎಲ್ಲರೂ ನಮಗೆ ಮಾತೆಯರೇ ಆಗಿದ್ದಾರೆ. ಮುಸ್ಲಿಂರು ಮೂರ್ತಿ ಪೂಜೆ ವಿರೋಧ ಮಾಡುವ ಕಾರಣಕ್ಕೆ ಭಾನುಮುಸ್ತಾಕ್ ಅವರು ಭುವನೇಶ್ವರಿಯನ್ನು ವಿರೋಧಿಸಿದ್ದಾರೆ. ನಾವು ಅವರನ್ನು ಮುಸ್ಲಿಂ ಎಂದು ವಿರೋಧಿಸುತ್ತಿಲ್ಲ. ಅವರು ನಮ್ಮ ಧರ್ಮವನ್ನು ಒಪ್ಪದ ಕಾರಣಕ್ಕೆ ನಾವು ಅವರನ್ನು ವಿರೋಧಿಸುತ್ತಿದ್ದೇವೆ. ಹಿಂದೂ ಧರ್ಮ ಅವಹೇಳನ ಮಾಡುವುದು ಕಾಂಗ್ರೆಸ್‌ನ ನೀತಿ. ನಿಮ್ಮ ಅವಿವೇಕದ ಮಾತಿಗೆ ಬಹುದೊಡ್ಡ ಹೋರಾಟದ ಭೂಮಿಕೆ ಮಾಡಲಾಗುವುದು, ಅಗತ್ಯ ಬಿದ್ದರೆ ಬಲಿದಾನಕ್ಕೂ ಸಿದ್ದರಿದ್ದೇವೆ. ಚಾಮುಂಡಿ, ಮಹದೇಶ್ವರ, ನಂಜುಂಡೇಶ್ವರ ನಿಮ್ಮ ದೇವರಲ್ಲವೇ? ಎಂದು ಪ್ರಶ್ನಿಸಿದರು.
ಹಿಂದೂಗಳಿಗೆ ನೋವು ಮಾಡಿ ಸಂತಸ ಪಡುವ ಕಾಂಗ್ರೆಸಿಗರಾಗಿದ್ದಾರೆ. ಗುರುವಾಯುರುವಿನಲ್ಲಿ ಹಿಂದೂ ಹೊರತಾಗಿ ಬೇರೆಯವರಿಗೆ ಪ್ರವೇಶವಿಲ್ಲ, ಸ್ವತಃ ಇಂದಿರಾಗಾಂಧಿಯನ್ನೇ ಬಿಡಲಿಲ್ಲ. ಡಿ.ಕೆ.ಶಿವಕುಮಾರ್ ಅವರು ಆರ್‌ಎಸ್ ಎಸ್ ಗೀತೆ ಹಾಡಿ ಈಗ ವಿವಾದ ಹುಟ್ಟು ಹಾಕುವ ನಾಟಕ ಆಡುತ್ತಿದ್ದಾರೆ. ಅದಕ್ಕಾಗಿ ಸಿಎಂ ಈ ಬಗ್ಗೆ ಸ್ಪಷ್ಟಪಡಿಸಬೇಕು. ಇಲ್ಲದಿದ್ದರೆ ದಸರಾ ಸಂದರ್ಭದಲ್ಲೇ ದೊಡ್ಡ ಹೋರಾಟ ನಡೆಸುವ ಬಗ್ಗೆ ಪಕ್ಷ ತೀರ್ಮಾನಿಸಲಿದೆ ಎಂದರು.
ಬಿಜೆಪಿ ನಗರಾಧ್ಯಕ್ಷ ಎಲ್.ನಾಗೇಂದ್ರ ಮಾತನಾಡಿ, ಸೌಜನ್ಯ ಹತ್ಯೆ ಪ್ರಕರಣ ಬೆಳಕಿಗೆ ಬಂದಾಗಿನಿಂದಲೂ ಧರ್ಮಸ್ಥಳದ ಬಗ್ಗೆ ನಿರಂತರವಾಗಿ ಅಪಪ್ರಚಾರ ಮಾಡಿಕೊಂಡು ಬಂದಿದ್ದಾರೆ. ಏಕಾಎಕಿ ಎಸ್‌ಐಟಿ ರಚನೆ ಮಾಡಿದರು. ರಚನೆ ಮಾಡಿ ೧೪ ದಿನ ಕಳೆದರೂ ಯಾವುದೇ ಸುಳಿವು ಸಿಕ್ಕಿಲ್ಲ. ಈ ಬಗ್ಗೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿ, ನಾನಾ ಕಡೆ ಸಾರ್ವಜನಿಕರು ಹೋರಾಟ ಮಾಡುತ್ತಿದ್ದಾರೆ. ಈ ವೇಳೆ ಸರ್ಕಾರದ ಹುನ್ನಾರ ಹಾಗೂ ಎಸ್ ಐಟಿ ತನಿಖೆ ಖಂಡಿಸಿದ್ದಾರೆ. ವಿಜಯೇಂದ್ರ, ಆರ್.ಆಶೋಕ್ ನೇತೃತ್ವದಲ್ಲಿ ಧರ್ಮಸ್ಥಳ ಚಲೋ ಮಾಡಿ ಧರ್ಮಾಧಿಕಾರಿಗಳಿಗೆ ಬೆಂಬಲ ಸೂಚಿಸಿ, ಧರ್ಮದ ಪರವಾಗಿ ನಿಲ್ಲುವ ಕೆಲಸ ಮಾಡಿದ್ದೇವೆಂದು ಹೇಳಿದರು.
ಎಡಪಂಥಿಯರ ತಂಡವೊಂದು ಹಿಂದೂತ್ವದ ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಮಾಡುವ ಮೂಲಕ ಧರ್ಮವನ್ನು ಹತ್ತಿಕ್ಕುವ ಪ್ರಯತ್ನ ನಡೆಸುತ್ತಿರುವುದನ್ನು ಯಾವ ಹಿಂದೂವು ಸಹಿಸಲು ಸಾಧ್ಯವಿಲ್ಲ. ಹೀಗಾಗಿ ಇವರ ಮೇಲೆಲ್ಲ ಸೂಕ್ತ ತನಿಖೆ ಆಗಬೇಕಿದೆ. ಈ ಹಿನ್ನೆಲೆಯಲ್ಲಿ ಸೆ.೧ರಂದು ಬಿಜೆಪಿಯಿಂದ ನೇರವಾಗಿ ಧರ್ಮಸ್ಥಳಕ್ಕೆ ಕಾರ್ಯಕರ್ತರು ಹಾಗೂ ಧರ್ಮಸ್ಥಳದ ಭಕ್ತರು ಮ.೧.೩೦ಕ್ಕೆ ದೊಡ್ಡ ಮಟ್ಟದ ಸಭೆ ನಡೆಸಲಾಗುವುದು. ಇದಕ್ಕೆ ಮೈಸೂರಿನಿಂದ ಪ್ರತಿ ವಿಧಾನಸಭಾ ಕ್ಷೇತ್ರದಿಂದ ೧ಸಾವಿರ ಮಂದಿ ಹೋಗುತ್ತಿದ್ದೇವೆ. ರಾಜ್ಯದ ಎಲ್ಲಾ ಕ್ಷೇತ್ರದಿಂದ ಬರುತ್ತಿದ್ದಾರೆ ಎಂದು ತಿಳಿಸಿದರು. ರಾಜ್ಯ ಮೈನಾರಿಟಿ ಮೋರ್ಚಾ ಅನಿಲ್ ಥಾಮಸ್, ನಗರ ಕಾರ್ಯದರ್ಶಿ ಗಿರಿಧರ್, ಒಬಿಸಿ ಅಧ್ಯಕ್ಷ ರಾಜೇಶ್, ಮಧ್ಯಮ ಸಂಚಾಲಕ ಮಹೇಶ್ ರಾಜೇ ಅರಸ್ ಉಪಸ್ಥಿತರಿದ್ದರು.