ಪಬ್ಲಿಕ್ ಅಲರ್ಟ್
ಮೈಸೂರು: ನಾಡ ಅಧಿದೇವತೆ ಚಾಮುಂಡಿ ತಾಯಿಯ ಸನ್ನಿಧಿಯಲ್ಲಿ ಪುಷ್ಪಾರ್ಚನೆ ಮೂಲಕ ನಾಡಹಬ್ಬ ದಸರಾಗೆ ಅಧಿಕೃತ ಚಾಲನೆ ಸಿಗಲಿದ್ದು, ಈ ಹಿನ್ನೆಲೆ ನಾಡ ಅಧಿದೇವತೆಯ ಉತ್ಸವ ಮೂರ್ತಿಗೆ ಅಲಂಕಾರ ಮಾಡಿ ಸಿದ್ಧಗೊಳಿಸಲಾಗಿದೆ. ಈ ಬಗ್ಗೆ ದೇವಸ್ಥಾನದ ಪ್ರಧಾನ ಅರ್ಚಕ ಶಶಿಶೇಖರ್ ದೀಕ್ಷಿತ್ ಮಾತನಾಡಿ, ನವರಾತ್ರಿಯ ಸಂದರ್ಭದಲ್ಲಿ ಚಾಮುಂಡಿಬೆಟ್ಟದಲ್ಲಿ ನಡೆಯುವ ಧಾರ್ಮಿಕ ಕಾರ್ಯಗಳು, ನಾಡ ಅಧಿದೇವತೆಗೆ ಪ್ರತಿದಿನ ಯಾವ ರೀತಿ ಅಲಂಕಾರವಿರುತ್ತದೆ ಎಂಬ ಬಗ್ಗೆ ಮಾಹಿತಿ ನೀಡಿದರು.
“ಪ್ರತೀ ವರ್ಷವೂ ನವರಾತ್ರಿ ಬಹಳ ವಿಶೇಷ. ಅದೇ ರೀತಿ ಎಂದಿನಂತೆ ಬೆಳಗ್ಗೆ ರುದ್ರಾಭಿಷೇಕ ಹಾಗೂ ಪಂಚಾಮೃತ ಅಭಿಷೇಕ ಆಗಿದೆ. ಇಂದಿನ ಅಮಾವಾಸ್ಯೆ ಪೂಜೆ ಎಲ್ಲವೂ ಮುಗಿದಿದೆ ಹಾಗೂ ದಸರಾ ಮೆರವಣಿಗೆ ಸಿದ್ಧತೆಯಾಗಿದೆ. ನವರಾತ್ರಿಯ ಸಂದರ್ಭದಲ್ಲಿ ವಿಶೇಷವಾಗಿ ನವದುರ್ಗೆಯರ ಆಹ್ವಾನ ಮಾಡಿ, ಪೂಜೆ ಮಾಡಬೇಕು ಎಂದು ಶಾಸ್ತ್ರಗಳು ಹೇಳುತ್ತವೆ. ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಿ, ಕೂಷ್ಮಾಂಡೆ, ಸ್ಕಂದಮಾತಾ, ಕಾತ್ಯಾಯಿನಿ, ಕಾಳರಾತ್ರಿ, ಮಹಾಗೌರಿ ಮತ್ತು ಸಿದ್ಧಿಧಾತ್ರಿ ನವದುರ್ಗೆಯರ ಆಹ್ವಾನಿಸಿ ಪೂಜೆ ಮಾಡುವಂತಹದ್ದು ಪದ್ಧತಿಯಾಗಿದೆ. “ಅಲಂಕಾರದಲ್ಲಿ ಬ್ರಾಹ್ಮಿ, ಮಾಹೇಶ್ವರಿ, ಕೌಮಾರಿ, ವೈಷ್ಣವಿ, ವಾರಾಹಿ, ಇಂದ್ರಾಣಿ, ಚಾಮಲಾ ಸಪ್ತಮಾತೃಕ ಎಂದು ಅಲಂಕಾರಗಳನ್ನು ಮಾಡುವುದು ವಿಶೇಷ. ಅದೇ ರೀತಿ ಅವರವರ ಸಂಪ್ರದಾಯದಂತೆ, ಕೆಲವರ ಮನೆಯಲ್ಲಿ ಕಳಶ ಇಟ್ಟು ಪೂಜೆ ಮಾಡುತ್ತಾರೆ. ಕೆಲವು ದೇವಾಲಯಗಳಲ್ಲಿ ಯಂತ್ರಾರ್ಚನೆ ಮಾಡುವುದು, ಶ್ರೀಚಕ್ರಾರ್ಚನೆ ಪೂಜೆ ಮಾಡುವುದು, ಹಾಗೇ ಅವರವರ ಸಂಪ್ರದಾಯದಂತೆ ಉತ್ಸುವಾದಿಗಳನ್ನು ಮಾಡುವುದು ವಿಶೇಷ. ಹೆಚ್ಚು ಒತ್ತುಕೊಟ್ಟಿರುವ ಮಾಸವೆಂದರೆ ಶರತ್ ಕಾಲಾಯನ ಪೂಜೆ. ಶರತ್ ಕಾಲದಲ್ಲಿ ಪೂಜೆ ಮಾಡಿದಾಗ ಒಂದು ವರ್ಷ ನಾವು ಏನೂ ಮಾಡದಿದ್ದರೆ ಈ 9 ದಿನದಲ್ಲಿ ಮಾಡಿದಾಗ ಅದರ ಪ್ರತಿಫಲಗಳನ್ನು ಪಡೆಯಬಹುದು ಎಂದು ಶಾಸ್ತ್ರ ಹೇಳುತ್ತದೆ” ಎಂದರು.
“ಬ್ರಾಹ್ಮಿ, ಮಾಹೇಶ್ವರಿ, ಕೌಮಾರಿ, ವೈಷ್ಣವಿ, ವಾರಾಹಿ, ಇಂದ್ರಾಣಿ, ಚಾಮುಂಡಿ, ಮಹಾಲಕ್ಷ್ಮೀ, ಮಹಾಸರಸ್ವತಿ ಹಾಗೂ ಮಹಾಕಾಳಿ ಈ ಸಂದರ್ಭದಲ್ಲಿ ವಿಶೇಷ. ಎಂದಿನಂತೆ ಮಹಾರುದ್ರಾಭಿಷೇಕ ಹಾಗೂ ಪ್ರತಿದಿನ ಉತ್ಸವಗಳು ನಡೆಯುತ್ತವೆ. ಹಾಗೇ ದರ್ಬಾರ್ ಸಹ ವಿಶೇಷವಾಗಿರುತ್ತದೆ. ಜೊತೆಗೆ ಅರಮನೆಯಲ್ಲಿ ಮಹಾರಾಜರು ದರ್ಬಾರ್ ಮಾಡುವಾಗ ಬಾಗಿನ ಕೊಡಿಸಿ ದರ್ಬಾರ್ ಮಾಡುವುದು ವಿಶೇಷ”. ಅರಮನೆ ಹಾಗೂ ಚಾಮುಂಡಿ ಬೆಟ್ಟಕ್ಕೂ ಅವಿನಾಭಾವ ಸಂಬಂಧವಿದೆ. ಅಲ್ಲಿ ನಡೆಯುವ ಪೂಜಾ ಪದ್ಧತಿಗಳಿಗೂ, ಇಲ್ಲಿ ನಡೆಯುವ ಪೂಜೆಗಳು ಒಂದೇ ರೀತಿ ಇರುತ್ತವೆ. ಸಂಪ್ರದಾಯಬದ್ಧವಾದ ದೇವಸ್ಥಾನ ಇದು. ಕುಲದೇವತೆಯಾಗಿ ಉಳಿದುಕೊಂಡು ಅವರ ಸಂಪ್ರದಾಯದಂತೆ ಪೂಜೆ ನಡೆಸಿಕೊಂಡು ಹೋಗುವಂತಹದ್ದು ಅರಮನೆಯ ಸಂಪ್ರದಾಯವಾಗಿದೆ. ಶುಕ್ರವಾರ ಲಲಿತಾ ಪಂಚಮಿ ಹಾಗೂ ಶನಿವಾರವೂ ಪಂಚಮಿ ಇರುವುದು. ಅವರವರ ಸಂಪ್ರದಾಯ ಹಾಗೂ ಆ ದೇವಸ್ಥಾನದ ಸಂಪ್ರದಾಯ ಎಂದು ಎರಡು ದಿನವೂ ಪೂಜೆ ಮಾಡುವುದು ವಿಶೇಷ. ಪೂಜೆಯಲ್ಲಿ ಯಾವುದೇ ವ್ಯತ್ಯಾಸ ಬರುವುದಿಲ್ಲ. ತಿಥಿಯಲ್ಲಿ ವ್ಯತ್ಯಾಸ ಬರುತ್ತದೆ ಎಂದು ಸರ್ವರಿಗೂ ಒಳಿತನ್ನು ಬಯಸುವುದೇ ವಿಶೇಷ ಎಂದು ಮಾಹಿತಿ ನೀಡಿದರು.
