ಉತ್ತಮರನ್ನು ಆಯ್ಕೆಮಾಡಿ ಪ್ರಜಾಪ್ರಭುತ್ವ ಉಳಿಸಿ

admin
2 Min Read


-ವರದಿ : ಪ್ರತಿಕ್ ಗೌಡ ಎಂ ಆರ್.-
ಮೈಸೂರು: ನಾವು ಆಯ್ಕೆ ಮಾಡುವ ಪ್ರತಿನಿಧಿ ಐದು ವರ್ಷದಲ್ಲಿ ಏನೆಲ್ಲ ಅಭಿವೃದ್ಧಿ ಮಾಡುತ್ತಾನೆ ಅಥವಾ ಭ್ರಷ್ಟಾಚಾರ ಮಾಡುತ್ತಾನಾ ಎಂಬ ವಿಚಾರವನ್ನು ತಿಳಿದು ಮತ ಚಲಾಯಿಸಬೇಕು. ಉತ್ತಮ ವ್ಯಕ್ತಿಗಳನ್ನು ಆಯ್ಕೆ ಮಾಡುವ ಮೂಲಕ ಪ್ರಜಾಪ್ರಭುತ್ವ ಉಳಿಸಲು ಮುಂದಾಗಬೇಕು ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಡಾ.ಮುಖ್ಯಮಂತ್ರಿ ಚಂದ್ರು ತಿಳಿಸಿದರು.
ಮೈಸೂರಿನ ಶಾರದಾ ವಿಲಾಸ ಪದವಿಪೂರ್ವ ಕಾಲೇಜಿನಲ್ಲಿ ದಾರಿ ಫೌಂಡೇಶನ್ ಮೈಸೂರು ವತಿಯಿಂದ  ಮಂಗಳವಾರ ಆಯೋಜಿಸಿದ್ದ ‘ಭವಿಷ್ಯದಲ್ಲಿ ಪ್ರಜಾಪ್ರಭುತ್ವದ ರಕ್ಷಣೆ ಜವಾಬ್ದಾರಿ ಯುವ ಶಕ್ತಿಯ ಕೈಯಲ್ಲಿ’ ಮುಕ್ತ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬದುಕಿಗಾಗಿ ಒಂದು ಉದ್ಯೋಗ ಪಡೆಯುವ ಜೊತೆಗೆ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು. ಕನ್ನಡಾಭಿಮಾನವನ್ನು ಮೈಗೂಡಿಸಿಕೊಂಡು ದೇಶದ ಭವಿಷ್ಯ ರೂಪಿಸಲು ಸ್ವಲ್ಪ ಆಲೋಚಿಸಬೇಕು. ಮುಖ್ಯವಾಗಿ ಸಂವಿಧಾನ ಉಳಿಸಲು, ಪ್ರಜಾಪ್ರಭುತ್ವ ರಕ್ಷಿಸಲು ಉತ್ತಮ ಜನ ಪ್ರತಿನಿಧಿ ಆಯ್ಕೆ ಮಾಡಬೇಕು. ನಾವು ಆಯ್ಕೆ ಮಾಡುವ ಪ್ರತಿನಿಧಿ ಐದು ವರ್ಷದಲ್ಲಿ ಏನೆಲ್ಲ ಅಭಿವೃದ್ಧಿ ಮಾಡುತ್ತಾನೆ ಅಥವಾ ಭ್ರಷ್ಟಾಚಾರ ಮಾಡುತ್ತಾನಾ ಎಂಬ ವಿಚಾರವನ್ನು ತಿಳಿದು ಮತ ಚಲಾಯಿಸಬೇಕು ಎಂದರು.
ಪ್ರಪಂಚದಲ್ಲೇ ಭಾರತದಲ್ಲಿ ದೊಡ್ಡ ಸಂವಿಧಾನ ಇದೆ. ವಿವಿಧತೆಯಲ್ಲಿ ಏಕತೆ ಕಂಡಿರುವ ದೇಶ ನಮ್ಮದು. ಅನೇಕ ಧರ್ಮ, ಜಾತಿ, ಸಂಪ್ರದಾಯ, ಸಮಸ್ಯೆ, ಭಾಷೆ, ಅನ್ಯಾಯ ಎಲ್ಲವನ್ನು ಒಳಗೊಂಡು ಬದುಕುತ್ತಿದ್ದೇವೆ. ನಮ್ಮ ಒಕ್ಕೂಟ ವ್ಯವಸ್ಥೆ ಉತ್ತಮ ಚೌಕಟ್ಟಿನಲ್ಲಿ ನಡೆಸಲು ಡಾ.ಬಿ.ಆರ್.ಅಂಬೇಡ್ಕರ್ ಮತ್ತು ತಂಡದವರು  ಸಂವಿಧಾನ ನೀಡಿದ್ದಾರೆ. ಸಮಾಜವನ್ನು ಕಾಪಾಡಿದರೆ ದೇಶವನ್ನು ಉಳಿಸಿದಂತೆ, ದೇಶವನ್ನು ಉಳಿಸಿದಾಗ ಸಂವಿಧಾನವನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಸಾಧ್ಯ. ಪ್ರಜಾಪ್ರಭುತ್ವ ಉಳಿಸಲು, ಸಂವಿಧಾನ ರಕ್ಷಿಸಲು ಶಾಸಕಾಂಗ, ನ್ಯಾಯಾಂಗ ಹಾಗೂ ಕಾರ್ಯಾಂಗಗಳು ಬಹಳ ಮುಖ್ಯ. ಈ ಮೂರು ಅಂಗಗಳ ಜತೆಗೆ ಪತ್ರಿಕಾಂಗವೂ ಮುಖ್ಯ. ಆದರಿಂದು ಸಮಾಜ ಕೆಡಲು ಈ ಎಲ್ಲ ಅಂಗಗಳು ಕಾರಣವಾಗಿದೆ. ರಾಜಕಾರಣದಲ್ಲಿ ಧರ್ಮ ಇರಬೇಕು ಹೊರೆತು ಧರ್ಮವೇ ರಾಜಕಾರಣ ಆಗಬಾರದು. ಇಂದು ಧರ್ಮಸ್ಥಳ ವಿಚಾರದಲ್ಲಿ ಅದೇ ಆಗಿದೆ. ಧರ್ಮಸ್ಥಳದ ಪ್ರಕರಣವನ್ನು ಸಂಪೂರ್ಣ ವೈಭವಿಕರಿಸಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಮದ್ಯಪಾನ ಕೆಟ್ಟದು. ಅದನ್ನು ತಡೆಯಲು ಸರ್ಕಾರ ಒಂದು ಮಂಡಳಿ ಸ್ಥಾಪಿಸಿದೆ. ಆದರೆ, ಅದೇ ಸರ್ಕಾರ ಮತ್ತೊಂದು ಇಲಾಖೆಯಿಂದ ಮದ್ಯ ಮಾರಾಟ ಮಾಡಿಸುತ್ತಿದೆ ಇದು ಪ್ರಜಾಪ್ರಭುತ್ವದ ವಿಪರ್ಯಾಸ.  ಸಮಾಜವಾದ ಎಂದರೆ ಕಟ್ಟಕಡೆ ಮನುಷ್ಯರು ಅಭಿವೃದ್ಧಿ ಆಗಬೇಕು. ಆದರೀಗ ಬಡವರ ಮಕ್ಕಳು ಡಾಕ್ಟರ್, ಇಂಜಿನಿಯರ್, ಲಾಯರ್ ಆಗಲು ಸಾಧ್ಯನಾ? ಅವರಿಗೆ ಅಪಾರ ಜ್ಞಾನ ಇದ್ದರೂ ಶಿಕ್ಷಣ ಸಂಸ್ಥೆಗಳಿಗೆ ಹಣ ಕಟ್ಟಲು ಆಗುತ್ತಿಲ್ಲ. ಇಂತಹ ವ್ಯವಸ್ಥೆಯನ್ನು ಎಲ್ಲಿಂದ ಸರಿಪಡಿಸಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಎಂ.ಆರ್.ಸತ್ಯನಾರಾಯಣ, ಕಸಾಪ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್, ಪ್ರಾಂಶುಪಾಲರಾದ ಡಾ.ಎಂ.ದೇವಿಕಾ, ನವೀನ್, ಮಹೇಶ್, ದಾರಿ ಫೌಂಡೇಶನ್ ಅಧ್ಯಕ್ಷ ಎಲ್.ರಂಗಯ್ಯ, ಪದಾಧಿಕಾರಿಗಳಾದ ಸಕಲೇಶ್ಪುರ ಗುಂಡಪ್ಪ ಸೀತಾರಾಮ್, ರವಿಕುಮಾರ್, ವಿರೇಶ್ ಕುಮಾರ್ ಉಪಸ್ಥಿತರಿದ್ದರು.

Share This Article
Leave a Comment