ಸಿದ್ದರಾಮಯ್ಯ ಪೂರ್ಣಾವಧಿ ಸಿಎಂ ಆಗಲು ಘೊಷಣೆಗೆ ಆಗ್ರಹ

Pratheek
2 Min Read

ಪಬ್ಲಿಕ್ ಅಲರ್ಟ್

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಖ್ಯಮಂತ್ರಿ ಅವಧಿ ಪೂರ್ಣಗೊಳಿಸಲು ಕಾಂಗ್ರೆಸ್ ಹೈಕಮಾಂಡ್ ಅವಕಾಶ ನೀಡಬೇಕು ಎಂದು ರಾಜ್ಯ ದಲಿತ ಹಿಂದುಳಿದ ಅಲ್ಪಸಂಖ್ಯಾತ ವೇದಿಕೆ ಆಗ್ರಹಿಸಿದೆ.
ಮೈಸೂರಿನ ಜೆಎಸ್‌ಎಸ್ ವಿದ್ಯಾಪೀಠದ ಮುಂಭಾಗವಿರುವ ಬಸವ ಪುತ್ಥಳಿ ಆವರಣದಲ್ಲಿ ರಾಜ್ಯ ದಲಿತ ಹಿಂದುಳಿದ ಅಲ್ಪಸಂಖ್ಯಾತ ವೇದಿಕೆ ವತಿಯಿಂದ ವಿವಿಧ ಸಮುದಾಯದ ಮುಖಂಡರ ಸಭೆ ನಡೆಸಿ, ಈ ವೇಳೆ ಸಿದ್ದರಾಮಯ್ಯ ಅವರಿಗೆ ೫ ವರ್ಷ ಮುಖ್ಯಮಂತ್ರಿಯಾಗಿ ಪೂರ್ಣಗೊಳಿಸಲು ಅವಕಾಶ ಕಲ್ಪಿಸಬೇಕೆಂದು ಒತ್ತಾಯಿಸಿದರು.
ಈ ವೇಳೆ ಮಾಧ್ಯಮಗಳೊಂದಿಗೆ ವೇದಿಕೆ ಅಧ್ಯಕ್ಷ ಪಿ.ಜಯರಾಜ್ ಹೆಗಡೆ ಮಾತನಾಡಿ, ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಕಾಂಗ್ರೆಸ್ ಶಾಸಕರು, ವಿರೋಧ ಪಕ್ಷದ ನಾಯಕರು ನಿತ್ಯವೂ ಹೇಳಿಕೆ ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ವರಿಷ್ಠರು ಈ ಎಲ್ಲಾ  ಗೊಂದಲಕ್ಕೆ ತೆರೆ ಎಳೆದು ಸಿದ್ದರಾಮಯ್ಯ ಅವರನ್ನು ಪೂರ್ಣ ಅವಧಿಗೆ ವಿಸ್ತರಿಸಬೇಕು. ಸದ್ಯದಲ್ಲಿಯೇ ರಾಜ್ಯ ಪ್ರವಾಸ ಕೈಗೊಂಡಿರುವ  ರಾಹುಲ್ ಗಾಂಧಿ ಅವರಿಗೆ ಈ ಬಗ್ಗೆ ವೇದಿಕೆ ಮನವಿ ಸಲ್ಲಿಸಲಾಗುತ್ತದೆ.  ಎಂದರು.
ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ನಂತರ ಸಿದ್ದರಾಮಯ್ಯ ಅವರು ರಾಜ್ಯದಲ್ಲಿರುವ ಎಲ್ಲಾ ಸಮುದಾಯಗಳನ್ನು ಗಣನೆಗೆ ತೆಗೆದುಕೊಂಡು ವಿಶೇಷ ಅನುದಾನ, ನಿಗಮ ಮಂಡಳಿಗಳನ್ನು ಸ್ಥಾಪಿಸುವ ಮೂಲಕ ಸಮುದಾಯದ ಏಳಿಗೆಗೆ ಶ್ರಮಿಸಿದ್ದಾರೆ. ಮತ್ತೊಂದೆಡೆ  ಗ್ಯಾರಂಟಿ ಯೋಜನೆಗಳನ್ನು  ನೀಡಿ  ಹಣಕಾಸನ್ನು ಸರಿದೂಗಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ೨೦೨೮ರ ಚುನಾವಣೆ ನಂತೆ  ಡಿ.ಕೆ.ಶಿವಕುಮಾರ್  ಅವರು ಮುಖ್ಯಮಂತ್ರಿ ಆಗಲಿ. ಅವರು ಸಹ ಪಕ್ಷ ಅಧಿಕಾರಕ್ಕೆ ತರುವಲ್ಲಿ ಶ್ರಮಿಸಿದ್ದಾರೆ ಎಂದು ತಿಳಿಸಿದರು.
ವೇದಿಕೆ ಪ್ರಧಾನ ಕಾರ್ಯದರ್ಶಿ ಕಂಸಾಳೆ ರವಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಕೆಳಗೆ ಇಳಿಸಿದ ನಂತರ  ಕಾಂಗ್ರೆಸ್ ಕಷ್ಟದ ಪರಿಸ್ಥಿಗೆ ತಲುಪಲಿದೆ. ಈ ಸಂಬಂಧ ಪಕ್ಷದ ವರಿಷ್ಠರಿಗೆ ಗಮನ ಸೆಳೆಯಲು ಶೀಘ್ರದಲ್ಲಿಯೇ ದೆಹಲಿ ಚಲೋ ಮಾಡಲು ವೇದಿಕೆ ನಿರ್ಧರಿಸಿದೆ ಎಂದರು.
ಬಿಹಾರ್ ಚುನಾವಣೆ ಸನಿಹದಲ್ಲಿದೆ ಈ ಸಂದರ್ಭದಲ್ಲಿ ಸಿಎಂ ಬದಲಾವಣೆಯಾದರೆ, ಬಹಳ ಕಷ್ಟವಾಗಲಿದೆ. ಸಿದ್ದರಾಮಯ್ಯ ಅವರಿಗೆ ಅಹಿಂದ ಮತದಾರರ ಬೆಂಬಲ ರಾಜ್ಯದಲ್ಲಿ ಮಾತ್ರವಲ್ಲ, ಹೊರ ರಾಜ್ಯಗಳಲ್ಲಿಯೂ ಇದೆ. ಅವರ ಸುಧೀರ್ಘ ರಾಜಕೀಯ ಪಯಣದಲ್ಲಿ ಒಂದು ಕಪ್ಪು ಚುಕ್ಕಿ ಇಲ್ಲ. ಈ ಎಲ್ಲಾ ಅಂಶಗಳಿಂದ ಅವರು ಐದು ವರ್ಷ ಪೂರ್ಣಗೊಳಿಸಿದರೆ, ರಾಜ್ಯದ ಅಹಿಂದ ವರ್ಗಕ್ಕೆ ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಮಡಿವಾಳ ಸಂಘದ ಅಧ್ಯಕ್ಷ ಸತ್ಯನಾರಾಯಣ್, ಯಾದವ ಗೊಲ್ಲ ಯುವ ಸಮಿತಿಯ ಶ್ರೀಕಾಂತ, ಅಲೆಮಾರಿ, ಅರೆ ಅಲೆಮಾರಿ ಸಮಿತಿ ಜಿಲ್ಲಾಧ್ಯಕ್ಷ ರಾಮಕೃಷ್ಣ, ಪೌರಕಾರ್ಮಿಕರ ಮಹಾಸಂಘದ ಅರ್ಟಿಸ್ಟ್ ನಾಗರಾಜು ಮತ್ತಿತರರು ಉಪಸ್ಥಿತರಿದ್ದರು.

Share This Article
Leave a Comment