ಪಬ್ಲಿಕ್ ಅಲರ್ಟ್
ಮೈಸೂರು: ತಂದೆಯವರು ಕೊಟ್ಟಿರುವ ಮಾಹಿತಿ ಪ್ರಕಾರ, ಹೈಕಮಾಂಡ್ ಆಗಲಿ ಅಥವಾ ಬೇರಾವುದೇ ನಾಯಕರಾಗಲಿ ನವೆಂಬರ್ ಬಳಿಕ ಅಧಿಕಾರಿ ಬಿಟ್ಟುಕೊಡಿ ಎಂದು ಹೇಳಿಲ್ಲ ಎಂದು ವಿಧಾನ ಪರಿಷತ್ತು ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.
ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿದ ಅವರು, ಈಗಿನ ಪರಿಸ್ಥಿತಿ ನೋಡಿದರೆ 5 ವರ್ಷ ಸಿದ್ದರಾಮಯ್ಯ ಅವರೇ ಸಿಎಂ ಆಗಿರುತ್ತಾರೆ. ಇದ್ದರೆ ರಾಜ್ಯಕ್ಕೆ ಒಳ್ಳೆಯ ಆಡಳಿತ ಕೊಡಬಹುದು ಎಂಬುದು ನಮ್ಮ ನಂಬಿಕೆ ಎಂದರು. ನನಗೆ ಕ್ರಾಂತಿ ಬಗ್ಗೆ ಗೊತ್ತಿಲ್ಲ. ಇವರೆಲ್ಲ ಯಾವ ಕ್ರಾಂತಿ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ನನಗೆ ಗೊತ್ತಿಲ್ಲ. ರಾಜಕೀಯದಲ್ಲಿ ಯಾವಾಗ ಏನು ಬೇಕಾದರೂ ಆಗಬಹುದು. ಈಗಿನ ಪರಿಸ್ಥಿತಿ ನೋಡಿದರೆ ನಮ್ಮ ತಂದೆಯೇ 5 ವರ್ಷವೂ ಸಿಎಂ ಆಗಿ ಇರುತ್ತಾರೆ. ಇದಕ್ಕೆ ಶಾಸಕರ ಬೆಂಬಲವೂ ಇದೆ. ಇಲ್ಲವಾದರೆ ಶಾಸಕರೆಲ್ಲ ಹೈಕಮಾಂಡ್‌ಗೆ ದೂರು ಕೊಡುತ್ತಿರಲಿಲ್ಲವೇ ಎಂದು ಪ್ರಶ್ನಿಸಿದರು.
ಸಂಪುಟ ಪುನಾರಚನೆ ಬಗ್ಗೆ ತಂದೆಯವರೊಂದಿಗೆ ಚರ್ಚೆ ಮಾಡಿಲ್ಲ. ತಂದೆಯೇ ಡಿಸೆಂಬರ್‌ನಲ್ಲಿ ಸಂಪುಟ ಪುನಾರಚನೆ ಮಾಡುವುದಾಗಿ ಹೇಳಿದ್ದಾರೆಂದು ಎಂದು ಮಾಹಿತಿ ನೀಡಿದರು.
ಜಿಬಿಎ ಸಭೆಗೆ ಹಾಜರ್: ನಾನು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಸಭೆಗೆ ಹೋಗಿದ್ದೆ. ವಿಧಾನ ಪರಿಷತ್ ಸ್ಥಾನಕ್ಕೆ ಬೆಂಗಳೂರಿನ ಖಾಯಂ ವಿಳಾಸ ಕೊಟ್ಟಿದ್ದೇನೆ. ಹೀಗಾಗಿ ನಾನು ಜಿಬಿಎ ಸದಸ್ಯನಾಗಿದ್ದೇನೆ. ಆದರೆ ನಾನು ವರುಣ ಕ್ಷೇತ್ರದ ಮತದಾರ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಬೆಂಗಳೂರು ಅಭಿವೃದ್ಧಿ ದೊಡ್ಡ ಸವಾಲಾಗಿದೆ. ಒಳ್ಳೆಯ ರಸ್ತೆಗಳನ್ನು ನಿರ್ಮಾಣ ಮಾಡುತ್ತಿದ್ದೇವೆ. ಇದು ನಿರಂತರವಾದ ಪ್ರಕ್ರಿಯೆ. ಐಟಿ ವ್ಯಕ್ತಿಗಳ ಟ್ವೀಟ್ ಅನ್ನು ನಮ್ಮ ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದೆ. ಒಂದು ಸಾವಿರ ಕೋಟಿ ರೂ. ಹಣವನ್ನು ಸಿಎಂ ಬಿಡುಗಡೆ ಮಾಡಿದ್ದಾರೆ. ನಗರ ಪ್ರದಕ್ಷಿಣೆ ಕೂಡ ಮಾಡುತ್ತಿದ್ದಾರೆ. ಡಿಸಿಎಂ 5 ಸಾವಿರ ಗುಂಡಿಗಳನ್ನು ಮುಚ್ಚಿರುವ ಬಗ್ಗೆ ಹೇಳಿದ್ದಾರೆ. ಸರ್ಕಾರ ತನ್ನ ಕೆಲಸವನ್ನು ಮಾಡುತ್ತಿದೆ. ಕೈಗಾರಿಕಾಕೋದ್ಯಮಿಗಳು ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡಲಿ. ಆದರೆ ಕೆಲವರು ಪಟ್ಟಭದ್ರ ಹಿತಾಸಕ್ತಿಗಳು ಬಿಜೆಪಿ ಸರ್ಕಾರ ಏನು ತಪ್ಪು ಮಾಡಿದರೂ ಕಣ್ಮುಚ್ಚಿ ಕುಳಿತುಕೊಂಡಿರುತ್ತಾರೆ. ಆದರೆ ಕಾಂಗ್ರೆಸ್ ಸರ್ಕಾರ ಎಲ್ಲದಕ್ಕೂ ಸ್ಪಂದಿಸುತ್ತಿದೆ. ಕೆಲವರು ಸಣ್ಣ ತಪ್ಪುಗಳನ್ನು ದೊಡ್ಡದಾಗಿ ಬಿಂಬಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಾಕ್ಸ್
ಪ್ರತಾಪ್ ಸಿಂಹ ಯಾರು ? ಅವರದ್ದೇ ಪಕ್ಷದದವರು ಅವರನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ. ದಾರಿಯಲ್ಲಿ ಹೋಗುವವರೆಲ್ಲ ಪ್ರಶ್ನೆ ಮಾಡಿದರೆ ಅದಕ್ಕೆ ಉತ್ತರ ಕೊಡಲು ಸಾಧ್ಯವಿಲ್ಲ.
– ಡಾ.ಯತೀಂದ್ರ ಸಿದ್ದರಾಮಯ್ಯ, ಎಂಎಲ್ಸಿ
