ಪಬ್ಲಿಕ್ ಅಲರ್ಟ್
ಮೈಸೂರು: ಪೌರಕಾರ್ಮಿಕರ ಮಕ್ಕಳು ಪೌರಕಾರ್ಮಿಕರೇ ಆಗದೇ ಅಧಿಕಾರಿಗಳಾಗುವಂತೆ ಶಿಕ್ಷಣ ಕೊಡಿ ಎಂದು ನಗರಪಾಲಿಕೆ ಆಯುಕ್ತ ಶೇಕ್ ತನ್ವೀರ್ ಆಸಿಫ್ ತಿಳಿಸಿದರು.
ನಗರದ ಕಲಾಮಂದಿರದಲ್ಲಿ ಮೈಸೂರು ನಗರಪಾಲಿಕೆವತಿಯಿಂದ ನಡೆದ ಪೌರಕಾರ್ಮಿಕರ ದಿನಾಚರಣೆಯಲ್ಲಿ ಮಾತನಾಡಿದ ಅವರು, ಗ್ರಾಮ, ನಗರ, ರಾಜ್ಯ ಮತ್ತು ದೇಶ ಸುಂದರವಾಗಿ, ಸ್ವಚ್ಛವಾಗಿ ಇರಬೇಕಾದರೆ ಪೌರಕಾರ್ಮಿಕರ ಸೇವೆ ಮಹತ್ತರವಾದುದು. ಮೊದಲೆಲ್ಲಾ ಪ್ಲಾಸ್ಟಿಕ್ ಇರಲಿಲ್ಲ. ಪಾತ್ರೆಗಳಲ್ಲಿ ಹಾಲನ್ನು ತರಲಾಗುತ್ತಿತ್ತು. ಈಗ ಪ್ಲಾಸ್ಟಿಕ್ ಬಳಕೆಯಿಂದ ಪ್ರಕೃತಿ ನಾಶ ಮಾಡಲಾಗುತ್ತಿದೆ. ಪೌರಕಾರ್ಮಿಕರು ನಗರವನ್ನು ಸುಂದರವಾಗಿರಿಸಿ ನಮ್ಮೆಲ್ಲರ ಆರೋಗ್ಯ ಕಾಪಾಡುವಲ್ಲಿ ಗಟ್ಟಿಯಾಗಿ ನಿಂತಿರುವ ಆಧಾರ ಸ್ತಂಭಗಳಾಗಿದ್ದಾರೆ. ತಮ್ಮ ಜೀವವನ್ನು ಲೆಕ್ಕಿಸದೆ ನಗರವನ್ನು ಕಾಪಾಡುತ್ತಿದ್ದಾರೆ. ಇದರ ಜೊತೆಗೆ ಪೌರಕಾರ್ಮಿಕರು ತಮ್ಮ ಜೀವನವನ್ನು ಕಾಪಾಡಿಕೊಳ್ಳಬೇಕು. ನಿಮ್ಮ ಕುಟುಂಬಕ್ಕೆ ಸಮಯಕೊಡಿ. ನಿಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣಕೊಟ್ಟು ಉನ್ನತ ಸ್ಥಾನಗಳಿಗೆ ತಲುಪುವಂತೆ ಮಾಡಿ. ಪೌರಕಾರ್ಮಿಕರ ಮಕ್ಕಳು ಪೌರಕಾರ್ಮಿಕರೇ ಆಗಬಾರದು. ಅಧಿಕಾರಿಗಳಾಗಬೇಕು ಎಂದು ಕಿವಿಮಾತು ಹೇಳಿದರು.
ವಿಶೇಷ ಉಡುಗೆ ತೊಡುಗೆಗಳನ್ನು ತೊಟ್ಟು ರಂಜಿಸಿದರು. ನಾಡಿನ ವಿವಿಧ ಸಂಸ್ಕೃತಿ ಸಂಪ್ರದಾಯದ ಧಿರಿಸುಗಳನ್ನು ಧರಿಸಿ ರ್ಯಾಂಪ್ ವಾಕ್ ಮಾಡಿ ನಿಬ್ಬೆರಗಾಗಿಸಿದರು. ಸ್ವಚ್ಛತೆಗೂ ಸೈ ಹಾಡಿ ನಲಿಯಲು ಸೈ ಎಂದು ಸಾರಿದರು. ರತ್ನ-ಪಳನಿ, ಮಂಜುಳ-ರಮೇಶ, ಪಲ್ಲವಿ-ಶಂಕರಪ್ಪ, ಲಕ್ಷ್ಮಣ-ಬನ್ನಮ್ಮ, ಮಂಜುಳಾ-ಚೆಲುವರಾಜು, ಭಾಗ್ಯ, ಗೌರಿ, ಶರತ್-ಪಾರ್ವತಿ, ಗೀತಾ ಅವರು ಕೊಡಗಿನ ಸಂಪ್ರದಾಯ ವೀರನಂತೆ, ಹಳ್ಳಿಯ ರೈತನ ಕಚ್ಚೆ ಪಂಚೆ, ಇಳಕಲ್ ಸೀರೆ, ಭುವನೇಶ್ವರಿ ದೇವಿ, ಭಾರತ ಮಾತೆ, ಮಲಯಾಳಿ ಸೀರೆ, ವಸ್ತ್ರಗಳನ್ನು ತೊಟ್ಟು ಒಂದೊಂದು ಹಾಡಿನ ತುಣುಕೆಗೆ ಹೆಜ್ಜೆ ಹಾಕಿ ರ್ಯಾಂಪ್ ವಾಕ್ ಮಾಡಿದರು. ಶರತ್-ಶಿವು ದಿಗ್ಗಜರು ಸಿನಿಮಾದ ‘ಓ ಗೆಳೆಯ ಜೀವದ ಗೆಳೆಯ’ ಹಾಡಿಗೆ ಕುಣಿದು ಕುಪ್ಪಳಿಸಿದರು.
ಪ್ರತಿಯೊಂದು ಜೋಡಿ ವೇದಿಕೆ ಮೇಲೆ ಬಂದಂತೆ ಶಿಳ್ಳೆ-ಚಪ್ಪಾಳೆ ಹರ್ಷೋದ್ಘಾರ ವ್ಯಕ್ತಪಡಿಸಿ ಕ್ಕಿಕ್ಕಿರಿದು ತುಂಬಿದ್ದ ಸಭಾಂಗಣ ಪ್ರೋತಾಹಿಸಿತು. ಬಳಿಕ ಗೌರಿ, ಬಾಬು, ದುರ್ಗಣ್ಣ, ಇಲಿಯಾಸ್ ಖಾನ್, ಮಂಜುನಾಥ, ಸುಹಾನ್ ತಂಡವೂ ‘ಅಣ್ಣಯ್ಯ ತಮ್ಮಯ್ಯ ನಂಜುಂಡೇಶ್ವರ ನಾನಯ್ಯ…’ ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು…’ ಎನ್ನುತ್ತ ಕನ್ನಡಾಭಿಮಾನ ಮೆರೆದರು. ಶಿವು ಏಕಾಂಗಿ ನೃತ್ಯ ಮಾಡಿ ರಂಜಿಸಿದರು.
೬೬ ಮಂದಿ ಪೌರಕಾರ್ಮಿಕರಿಗೆ ಉತ್ತಮ ಪೌರಕಾರ್ಮಿಕ ಎಂದು ಹಾರ ಹಾಕಿ, ಶಾಲು ಹೊದಿಸಿ ಅಭಿನಂದಿಸಲಾಯಿತು. ಪೌರಕಾರ್ಮಿಕರ ದಿನಾಚರಣೆಯ ಅಂಗವಾಗಿ ನಡೆದ ವಿವಿಧ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ಮತ್ತು ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಶಾಸಕ ಟಿ.ಎಸ್.ಶ್ರೀವತ್ಸ, ಹೆಚ್ಚುವರಿ ಆಯುಕ್ತರಾದ ಕುಸುಮ ಕುಮಾರಿ, ಆರೋಗ್ಯಾಧಿಕಾರಿ ಡಾ.ವೆಂಕಟೇಶ್, ಉಪ ಆಯುಕ್ತರಾದ ದಾಸೇಗೌಡ, ಮಂಜುನಾಥ್, ವಲಯ ಆಯುಕ್ತ ಗಿರೀಶ್, ಸಂದೀಪ್, ಧನುಷ್, ಎಇಇಗಳಾದ ಮೃತ್ಯುಂಜುಂ, ಮಧುಕರ್, ಪರಿಸರ ಇಂಜಿನಿಯರ್ ಗಳಾದ ಮೈತ್ರಿ, ಲೋಕೇಶ್ವರಿ, ಚಿನ್ಮಯಿ, ಶ್ರೀದೇವಿ, ಮಹದೇವಮ್ಮ, ಜ್ಯೋತಿ, ಕೃಷ್ಣಮೂರ್ತಿ, ನವೀನ್, ನಗರಪಾಲಿಕೆ ಪೌರಕಾರ್ಮಿಕರ ಸಂಘದ ಅಧ್ಯಕ್ಷ ಎನ್.ಮಾರ, ಪಳನಿ, ರಾಚಯ್ಯ, ಈಶ್ವರ್ ಇನ್ನಿತರರು ಹಾಜರಿದ್ದರು.
