ಪಬ್ಲಿಕ್ ಅಲರ್ಟ್
ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ೨೦೨೫ರ ಕವಿಗೋಷ್ಠಿಯನ್ನು ವಿಶೇಷವಾಗಿ ಆಯೋಜಿಸಲಾಗಿದ್ದು, ಸೆ.೨೩ ರಿಂದ ೨೭ರವರೆಗೆ ೫ದಿನಗಳ ಕಾಲ ಜನತೆಗೆ “ಪಂಚ ಕಾವ್ಯದೌತಣ” ಉಣಬಡಿಸಲಿದೆ ಹಾಗೂ ನಾಡಗೀತೆಗೆ ೧೦೦ ವರ್ಷ ಪೂರೈಸಿರುವ ಹಿನ್ನೆಲೆ ಈ ಬಾರಿ ಕವಿಗೋಷ್ಠಿಯ ಮೊದಲ ದಿನ “ನಾಡಗೀತೆಗೆ ನೂರರ ಸಂಭ್ರಮ ಸಾವಿರಾರು ಸ್ವರಗಳ ಸಂಗಮ” ಎಂಬ ಶೀರ್ಷಿಕೆಯಡಿಯಲ್ಲಿ ಸಾವಿರಾರು ವಿದ್ಯಾರ್ಥಿಗಳು, ಪ್ರಸಿದ್ಧ ಸಂಗೀತಗಾರ ಕಂಠದಲ್ಲಿ ಏಕಕಾಲದಲ್ಲಿ ನಾಡಗೀತೆ ಮೊಳಗಲಿದೆ ಎಂದು ಮೈಸೂರು ವಿಶ್ವ ವಿದ್ಯಾನಿಲಯದ ಕುಲಸಚಿವೆ ಎಂ.ಕೆ.ಸವಿತಾ ತಿಳಿಸಿದರು.
ನಗರದ ಮಾನಸ ಗಂಗೊತ್ರಿಯ ಬಯಲು ರಂಗಮAದಿರದಲ್ಲಿ ಶನಿವಾರ ಮೈಸೂರು ದಸರಾ ಕವಿಗೋಷ್ಠಿ ಉಪಸಮಿತಿ ಮತ್ತು ಮೈಸೂರು ವಿಶ್ವ ವಿದ್ಯಾನಿಲಯದ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಪಂಚ ಕಾವ್ಯದೌತಣ ಎಂಬ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದ ಅವರು, ನಾಡಗೀತೆಗೆ ೧೦೦ ವರ್ಷದ ಸಂಭ್ರಮದ ಹಿನ್ನೆಲೆಯಲ್ಲಿ ಮಾನಸ ಗಂಗೋತ್ರಿಯನ್ನು ಉತ್ತುಂಗಕ್ಕೆ ತೆಗೆದುಕೊಂಡು ಹೋಗಿರುವ ರಾಷ್ಟ್ರಕವಿ ಕುವೆಂಪು ರವರ ಸ್ಮರಣಾರ್ಥವಾಗಿ ಸೆಪ್ಟೆಂಬರ್ ೨೩ ರಂದು “ನಾಡಗೀತೆಗೆ ನೂರರ ಸಂಭ್ರಮ ಸಾವಿರಾರು ಸ್ವರಗಳ ಸಂಗಮ ಎಂಬ ಘೋಷವಾಕ್ಯದಲ್ಲಿ ೧೦೦ ಪ್ರಖ್ಯಾತ ಸಂಗೀತ ಕಲಾತಂಡಗಳೊAದಿಗೆ ವಿವಿಧ ಕಾಲೇಜುಗಳಿಂದ ಸುಮಾರು ೧೫ ರಿಂದ ೨೦ ಸಾವಿರಾರು ವಿದ್ಯಾರ್ಥಿಗಳು, ಪ್ರಸಿದ್ಧ ಸಂಗೀತಗಾರರು ಸಾಮೂಹಿಕವಾಗಿ ನಾಡಗೀತೆಯನ್ನು ಹಾಡುವುದರ ಮೂಲಕ ರಾಷ್ಟ್ರಕವಿ ಕುವೆಂಪುರವರಿಗೆ ನಮನ ಸಲ್ಲಿಸಲಾಗುವುದು ಎಂದರು.
ಬಳಿಕ ಕವಿಗೋಷ್ಟಿ ಉಪ ಸಮಿತಿಯ ಕಾರ್ಯದರ್ಶಿ ಲೋಲಾಕ್ಷಿ ಮಾತನಾಡಿ, ಈ ಬಾರಿಯ ದಸರಾ ಕವಿಗೊಷ್ಠಿಯನ್ನು “ಪಂಚ ಕಾವ್ಯದೌತಣ” ಪರಿಕಲ್ಪನೆಯಡಿಯಲ್ಲಿ ೫ ದಿನಗಳ ಕಾಲ ಮಾನಸಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಬಿ.ಎಂ.ಶ್ರೀ ಸಭಾಂಗಣದಲ್ಲಿ ಕವಿಗೊಷ್ಠಿ ನಡೆಯಲಿದ್ದು ಸೆಪ್ಟೆಂಬರ್ ೨೩ ರಂದು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರು ಘನ ಉಪಸ್ಥಿತರಿರುವ ಬಗ್ಗೆ ತಿಳಿಸಿದರು.
ಸೆ.೨೩ರಂದು ಪ್ರಭಾತ ಎಂಬ ಪರಿಕಲ್ಪನೆಯಲ್ಲಿ ಕವಿಗೊಷ್ಠಿ ನಡೆಯಲಿದ್ದು, ಪ್ರೊ. ಅರವಿಂದ ಮಾಲಗತ್ತಿ ಉದ್ಘಾಟಿಸಲಿದ್ದು, ಮೈಸೂರು ವಿಭಾಗದ ಪ್ರಾದೇಶಿಕ ಜಿಲ್ಲೆಗಳಾದ ಮೈಸೂರು, ಹಾಸನ, ಮಂಡ್ಯ, ಕೊಡಗು ಹಾಗೂ ಚಾಮರಾಜನಗರ ಜಿಲ್ಲೆಗಳ ಪ್ರತಿಭಾವಂತ ಮಕ್ಕಳು, ಮಹಿಳೆಯರು, ಹಿರಿಯ ಕವಿಗಳು, ಯುವಕವಿಗಳ ಭಾವ ಸಮ್ಮಿಲನ, ನವರಸಗಳ ಆಸ್ವಾದನ ಗೋಷ್ಠಿಯಾಗಿದ್ದು, ನವರಸವೇ ಜೀವನ, ಸಮರಸವೇ ಚೇತನ ಎಂಬುದನ್ನು ಬಿಂಬಿಸುವ ವೇದಿಕೆಯಾಗಿರುತ್ತದೆ. ಸೆ.೨೪ ರಂದು ಪ್ರಚುರ ಪರಿಕಲ್ಪನೆಯಲ್ಲಿ ನಡೆಯಲಿರುವ ಕವಿಗೋಷ್ಠಿಯನ್ನು ಖ್ಯಾತ ಗೀತ ರಚನಾಕಾರ ಜೋಗಿ ಪ್ರೇಮ್ ಉದ್ಘಾಟಿಸಲಿದ್ದು, “ಕನ್ನಡ ಅಸ್ತಿತ್ವ” ಕುರಿತು ಕವಿಗಳಿಂದ ನಾಡು-ನುಡಿ ಚಿಂತನೆಗೆ ವೇದಿಕೆಯಾಗಲಿದ್ದು, ಅನಾಥಾಶ್ರಮ, ವಿಶೇಷಚೇನತ, ಲಿಂಗತ್ವ ಅಲ್ಪಸಂಖ್ಯಾತರು, ಪೌರಕಾರ್ಮಿಕರು ಸೇರಿದಂತೆ ಅಂಚಿಗೆ ಸರಿದಿದ್ದ ಕವಿಗಳು ತಮ್ಮ ಅನುಭವಗಳನ್ನು ಹಂಚಿಕೊಳ್ಳಲು ಅವಕಾಶ ನೀಡಲಾಗಿರುತ್ತದೆ. ಸೆ.೨೫ ರಂದು ಪ್ರಜ್ವಲ ಪರಿಕಲ್ಪನೆಯಲ್ಲಿ ನಡೆಯಲಿರುವ ಕವಿಗೋಷ್ಠಿಯನ್ನು ಗೀತ ರಚನಾಕಾರ ಪ್ರಮೋದ ಮರವಂತೆ ಉದ್ಘಾಟಿಸಲಿದ್ದು, ಅಂದು ಚುಟುಕ ಕವನಗಳ ಜುಗಲ್‌ಬಂಧಿ ಇದ್ದು, ವಿಡಂಬನಾತ್ಮಕ ಹಾಸ್ಯವನ್ನು ಐದು ವಿಷಯಗಳೊಂದಿಗೆ ಐದು ಸುತ್ತುಗಳಲ್ಲಿ ಕವಿಗಳು ಹಾಸ್ಯದೌತಣವನ್ನು ಉಣಬಡಿಸಲಿದ್ದಾರೆ.
ಸೆ.೨೬ರಂದು ಪ್ರತಿಭಾ ಪರಿಕಲ್ಪನೆಯಲ್ಲಿ ನಡೆಯಲಿರುವ ಕವಿಗೋಷ್ಠಿಯನ್ನು ಖ್ಯಾತ ಜಾನಪದ ತಜ್ಞರಾದ ಪ್ರೋ.ನಂಜಯ್ಯ ಹೊಂಗನೂರು ರವರು ಉದ್ಘಾಟಿಸಲಿದ್ದು, ಮೊದಲ ಬಾರಿಕೆ ಈ ನೆಲದ ಮಣ್ಣಿನ ಮಕ್ಕಳು ಕಟ್ಟಿದ ಜಾನಪದ, ತತ್ವಪದಗಳ ಕಾವ್ಯವಾಚನ ಮತ್ತು ಗಾಯನ ಇರಲಿದ್ದು, ಕಂಸಾಳೆ, ತಂಬೂರಿ, ಬಸುರಿ ಬಯಕೆ ಪದ, ಜರಿವ ಪದ, ಸರಸ-ಸಲ್ಲಾಪ ಒಗಟುಪದ, ಗೀಗೀಪದ, ಸೊಬಾನೆ ಪದ, ಅನಕುಪದ, ಪಾಡ್ದನ ಸೇರಿದಂತೆ ತತ್ವಪದಗಳ ಅನುಭವದ ಹದಪಾಕವೇ ಇಲ್ಲಿ ಧರೆಗಿಳಿಯುತ್ತದೆ. ಸೆ.೨೭ ರಂದು ಪ್ರಬುದ್ಧ ಪರಿಕಲ್ಪನೆಯಲ್ಲಿ ನಡೆಯಲಿರುವ ಕವಿಗೋಷ್ಠಿಯನ್ನು ಖ್ಯಾತ ಕವಿಗಳಾದ ಸಿ.ಪಿ.ಕೃಷ್ಣಕುಮಾರ್ ಉದ್ಘಾಟಿಸಲಿದ್ದಾರೆ. ಈ ಗೊಷ್ಠಿಯು ೩೧ ಜಿಲ್ಲೆಗಳ ಕವಿ ಪ್ರತಿಭೆಯ ಬಹುತ್ವದ ಪ್ರತೀಕವಾಗಿದ್ದು, ಅಖಂಡ ಕರ್ನಾಟಕದ ಪಂಡಿತ ಮಂಡಳಿಯಿAದ ಕನ್ನಡ ಸಂಸ್ಕೃತಿಯ ಕಾವ್ಯ ಚಿತ್ರಣ, ಮೈಸುರು ಮಲ್ಲಿಗೆ ಊರಿನಲ್ಲಿ ಕಂಪು-ಪೆಂಪು ಬೀರುವ ಹೂರಣವಾಗಿರುತ್ತದೆ. ಪ್ರಬುದ್ಧ ಮನಸ್ಸಿನ ಪಕ್ವ ಚಿಂತನೆಯ ಕವಿಗಳು ಕಟ್ಟಿದ ಕಾವ್ಯದ ಬಹುಮುಖಿ ನೆಲೆಯ ಅನಾವರಣ ವಾಗಿದೆ ಎಂದು ತಿಳಿಸಿದರು.
ಈ ಬಾರಿಯ ದಸರಾ ಕವಿಗೋಷ್ಠಿಯ ಪ್ರಾಯೋಜಕತ್ವವನ್ನು ಕೆ.ಎಂ.ಎಫ್, ಬ್ಯಾಂಕ್ ಆಫ್ ಇಂಡಿಯಾ ಮತ್ತು ಗೋಕುಲಂ ಹೋಟೆಲ್ಸ್ ವಹಿಸಿಕೊಂಡಿರುತ್ತಾರೆ. ಡಿಜಿಟಲ್ ಪಾಲುದಾರರಾಗಿ ಕಾರ್ಯನಿರ್ವಹಿಸುತ್ತಾರೆಂದರು ಪತ್ರಿಕಾಗೋಷ್ಠಿಯಲ್ಲಿ ಉಪವಿಶೇಷಾಧಿಕಾರಿ ಜಿ.ಸೋಮಶೇಖರ್, ಸಮಿತಿ ಸದಸ್ಯರುಗಳಾದ ನಾಗರಾಜ್ ಬೇರಿ, ಪ್ರೊ.ಸಪ್ನ, ಪ್ರೊ. ಜ್ಯೋತಿ, ಪ್ರೊ. ನವಿತಾ ತಿಮ್ಮಯ್ಯ, ಪ್ರೋ.ಗೀತಾ ಹಾಗೂ ಪ್ರೊ.ಶುಭಾ ರವರು ಉಪಸ್ಥಿತರಿದ್ದುರು.
