ಬಾನು ಮುಷ್ತಾಕ್ ಬರುತ್ತಿರುವುದು ನಾಡಹಬ್ಬ ದಸರಾ ಉದ್ಘಾಟನೆಗೆ, ಬಿಜೆಪಿಯವರ ಮನೆ ಹಬ್ಬಕ್ಕಲ್ಲ: ಎಂ.ಲಕ್ಷ್ಮಣ್

Pratheek
4 Min Read

ಪಬ್ಲಿಕ್ ಅಲರ್ಟ್


ಮೈಸೂರು: ಸಾಹಿತಿ ಬಾನು ಮುಷ್ತಾಕ್ ಬರುತ್ತಿರುವುದು ನಾಡಹಬ್ಬ ಮೈಸೂರು ದಸರಾ ಉದ್ಘಾಟನೆಗೆ ಹೊರತು ಬಿಜೆಪಿ ಅವರ ಮನೆ ಹಬ್ಬಕ್ಕಲ್ಲ, ಇದನ್ನು ವಿರೋಧಿಸುವವರರ ವಿರುದ್ಧ ನಾವು ಪ್ರತಿ ಹೋರಾಟ ಮಾಡಬೇಕಾಗುತ್ತದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಎಚ್ಚರಿಕೆ ನೀಡಿದರು.


ನಗರದ ಪೊಲೀಸ್ ಆಯುಕ್ತರ ಕಚೇರಿಗೆ ಕಾಂಗ್ರೆಸ್ ಮುಖಂಡರುಗಳೊಂದಿಗೆ ತೆರಳಿ ಸಿಎಂ ಸಿದ್ಧರಾಮಯ್ಯ ಅವರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿರುವ ಬೆಂಗಳೂರಿನ ಅರ್ಚಕ ಹಾಗೂ ಸಿಎಂ, ಡಿಸಿಎಂ ವಿರುದ್ಧ ಟೀಕೆ ಮಾಡಿ ಮಾಧ್ಯಮಗಳ ಮುಂದೆ ಬಂದು ಕೋಮು ಗಲಭೆ ಸೃಷ್ಟಿಯಾಗುವಂತ ಹೇಳಿಕೆಗಳನ್ನು ನೀಡುತ್ತಿರುವ ಮಾಜಿ ಸಂಸದ ಪ್ರತಾಪ್ ಸಿಂಹ ಹಾಗೂ ಬಿಜೆಪಿ ರಾಜ್ಯ ವಕ್ತಾರ ಎಂ.ಜಿ.ಮಹೇಶ್ ವಿರುದ್ಧ ಡಿಸಿಪಿ ಅವರಿಗೆ ದೂರು ಸಲ್ಲಿಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.

ಬಾನು ಮುಷ್ತಾಕ್ ಬರುತ್ತಿರುವುದು ನಾಡಹಬ್ಬ ಮೈಸೂರು ದಸರಾ ಉದ್ಘಾಟನೆ ಮಾಡಲು, ಅವರು ನವರಾತ್ರಿ ಪೂಜೆ ಮತ್ತು ಬಿಜೆಪಿ ಅವರ ಮನೆ ಹಬ್ಬ ಉದ್ಘಾಟನೆಗೆ ಬರುತ್ತಿಲ್ಲ. ಆದರೆ ಬಿಜೆಪಿಯ ಕೆಲವರು ಬಾನು ಮುಷ್ತಾಕ್ ಅವರನ್ನು ಟೀಕೆ ಮಾಡುತ್ತಿದ್ದಾರೆ. ನಾಡಹಬ್ಬ ಎಂಬ ಪರಿಜ್ಞಾನ ಇಲ್ಲದೆ  ಅಂತರಾಷ್ಟ್ರೀಯ ಮಟ್ಟದಲ್ಲಿ ಮೈಸೂರು ಮಾನವನ್ನು ಹರಾಜು ಹಾಕುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣರಾಜ ಒಡೆಯರ್ ಒಂದು ಸಾರಿ ಬಾನು ಮುಷ್ತಾಕ್ ಅವರು ದಸರಾ  ಉದ್ಘಾಟನೆ ಮಾಡುವುದನ್ನು ಸ್ವಾಗತಿಸುತ್ತಾರೆ.‌ನಂತರ ವಿರೋಧಿಸುತ್ತಾರೆ.‌ಒಬ್ಬ ರಾಜವಂಶಸ್ಥ ರಾದವರು ಬೆಳಿಗ್ಗೆ ಒಂದು ಸಂಜೆ ಒಂದು  ಮಾತನಾಡುವುದಲ್ಲ ಎಂದು ಕಿಡಿಕಾರಿದರು.

ನಾಡಹಬ್ಬವನ್ನು  ಮೈಸೂರಿನ ಜನತೆ ಸೇರಿದಂತೆ ರಾಜ್ಯ ಮತ್ತು ದೇಶದ ಜನ ಆಚರಣೆ ಮಾಡುತ್ತಾರೆ. ಅಂತಹದರಲ್ಲಿ ಬಾನು ಮುಷ್ತಾಕ್ ಅವರನ್ನು ಟೀಕೆ ಮಾಡುತ್ತಾರೆ. ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಬಾನು ಮುಷ್ತಾಕ್ ದನದ ಮಾಂಸ ತಿನ್ನುತ್ತಾರೆ ಎಂದು ಹೇಳುತ್ತಾರೆ. ಅವರು ತಿನ್ನುವುದನ್ನು ಇವರು ನೋಡಿದ್ದರ? ವಿರೋಧ ಪಕ್ಷದ ನಾಯಕರಾದವರು ಕೋಮು ಕಿಡಿ ಹತ್ತಿಸುವುದಲ್ಲ, ಗೋ ಮಾಂಸವನ್ನು ಅತೀ ಹೆಚ್ಚು  ರಫ್ತು ಮಾಡುತ್ತಿರುವ ಹತ್ತು ಜನರವ ಪಟ್ಟಿಯಲ್ಲಿ ಬಿಜೆಪಿ ಮುಖಂಡರುಗಳೇ ಇದ್ದಾರೆ. ಪ್ರಪಂಚಕ್ಕೆ ರಫ್ತು ಮಾಡುವ ಕಂಪನಿಗಳು ಇರುವುದೇ ಬಿಜೆಪಿ ಮುಖಂಡರ ಬಳಿ. ರಾತ್ರಿ ದನದ ಮಾಂಸ ತಿನ್ನುವುದು ಬೆಳಿಗ್ಗೆ ಕುಂಕುಮ ಇಟ್ಟುಕೊಂಡು ಶಾಲು ಹಾಕಿಕೊಂಡು ಬಂದು ಜನರ ಮುಂದೆ ಫೋಸ್ ಕೊಡುವ ಕಪಟ ನಾಟಕವಾಡುತ್ತಿದ್ದಾರೆ ಎಂದು ಹರಿಹಾಯ್ದರು.

ಬಿಜೆಪಿಯವರಿಗೆ ಕಿಡಿ ಹತ್ತಿಸಯವುದೇ ಕೆಲಸ, ಇತಿಹಾಸವನ್ನು ಓದಿಲ್ಲ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರೇ ಅವರ ಆಸ್ಥಾನದಲ್ಲಿ ದಿವಾನರಾಗಿದ್ದ ಮಿರ್ಜ ಇಸ್ಮಾಯಿಲ್ ಅವರನ್ನು ಆನೆ ಅಂಬಾರಿಯಲ್ಲಿ ತನ್ನ ಹಿಂದೆ ಕೂರಿಸಿಕೊಂಡು ಹೀಗಿದ್ದಾರೆ. ಅರಮನೆಯ ಒಳಗಡೆ ಆಲಿ ಶಾ ಎಂಬುವವರ ಸಮಾಧಿ ಇದೆ. ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವುದು ರಾಜಮನೆತನದಲ್ಲಿದೆ. ಆದರೆ ಬಿಜೆಪಿಯವರು ದಿಕ್ಕು ತಪ್ಪಿಸಿ ಕಿಡಿ ಹತ್ತಿಸಲು ಹೊರಟಿದ್ದಾರೆ ಎಂದರು.

ರಾಜ್ಯದ ಜನತೆಯನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿರುವ ಬಿಜೆಪಿಯವರಿಗೆ ನಮ್ಮ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಮೂಲಕ ಎಚ್ಚರಿಕೆ ಕೊಡುತ್ತಿದ್ದೇನೆ. ನಿಮ್ಮ ಹೇಳಿಕೆಗಳನ್ನು ಇಲ್ಲಿಗೆ ನಿಲ್ಲಿಸದಿದ್ದರೆ.  ನಮ್ಮ ಕಾಂಗ್ರೆಸ್ ಕಾರ್ಯಕರ್ತರು ನಾಳೆಯಿಂದಲೇ ಹೋರಾಟ ಮಾಡಲಿದ್ದಾರೆ. ಅಶಾಂತಿ ಸೃಷ್ಟಿಸು  ಹೇಳಿಕೆ ನೀಡುವ ಬಿಜೆಪಿ ನಾಯಕರುಗಳ ಮನೆ ಮುಂದೆ ಹೋಗಿ ಹೋರಾಟ ಮಾಡಿ ಜನತೆಗೆ ಸತ್ಯವನ್ನು ತಿಳಿಸುವ ಕೆಲಸವನ್ನು ಮಾಡುತ್ತೇವೆ ಎಂದು ಹೇಳಿದರು.
ಇದೇ ವೇಳೆ ಕಾಂಗ್ರೆಸ್ ಮುಖಂಡ ಬಿ.ಎಂ.ರಾಮು, ಮಾಧ್ತಮ ವಕ್ತಾರ ಮಹೇಶ್ ಉಪಸ್ಥಿತರಿದ್ದರು.

ಬಾಕ್ಸ್:

ಸಮಾಜದಲ್ಲಿ ಅಶಾಂತಿ ಸೃಷ್ಟಿಸುತ್ತಿರುವ ಪ್ರತಾಪ್ ಸಿಂಹ ಮತ್ತು ಎಂ.ಜಿ.ಮಹೇಶ್ ವಿರುದ್ಧ  ಕ್ರಮ ಕೈಗೊಳ್ಳಿ: ಎಂ.ಲಕ್ಷ್ಮಣ್ ದೂರು
ಮೈಸೂರು,ಆ. 30:   ಹೆಸರು ಗೊತ್ತಿಲ್ಲದ ಅರ್ಚಕ ಮುಖ್ಯ ಮಂತ್ರಿಗಳ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿರುವುದರ ಬಗ್ಗೆ ಹಾಗೂ ಮಾಜಿ ಸಂಸದ  ಪ್ರತಾಪ್ ಸಿಂಹ,  ಬಿಜೆಪಿ ರಾಜ್ಯ ವಕ್ತಾರ ಎಂ.ಜಿ.ಮಹೇಶ್ ಎಂಬುವವರು ಸಮಾಜದಲ್ಲಿ ಅಶಾಂತಿ ಸೃಷ್ಟಿ ಮಾಡುತ್ತಿರುವುದರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ನಗರ ಪೊಲೂಸ್ ಅಯುಕ್ತರಿಗೆ ದೂರು ನೀಡಿದ್ದಾರೆ.

ನಗರದ ಪೊಲೀಸ್ ಆಯುಕ್ತರ ಕಚೇರಿಗೆ ಶನಿವಾರ ಕಾಂಗ್ರೆಸ್ ಮುಖಂಡರೊಟ್ಟಿಗೆ ಆಗಮಿಸಿದ ಅವರು ಡಿಸಿಪಿ ಬಿಂದುಮಣಿ ಆರ್ ಅವರಿಗೆ ದೂರಿನ ಪ್ರತಿ ನೀಡಿದರು.

ದೂರು ವಿವರ:
ಬೆಂಗಳೂರಿನ ಖಾಸಗಿ  ವಾಹಿನಿಯ  ಕನ್ನಡ ಚಾನಲ್‌ನಲ್ಲಿ ಒಬ್ಬ ಅರ್ಚಕ  ಮಂತ್ರಿ ಸಿದ್ದರಾಮಯ್ಯನವರನ್ನು ಅವಹೇಳನಕಾರಿಯಾಗಿ  ನಿಂದಿಸಿರುವುದಲ್ಲದೆ ಬೂಕರ್ ಪ್ರಶಸ್ತಿ ಪಡೆದಿರುವ ನಮ್ಮ ನಾಡಿನ ಎಮ್ಮೆಯ ಪುತ್ರಿ ಬಾನು ಮುಷ್ತಾಕ್ ಅವರನ್ನು ಸರ್ಕಾರ ದಸರಾ ಉದ್ಘಾಟನೆಗೆ ಆಹ್ವಾನಿಸಿರುವುದನ್ನು ವಿರೋಧಿಸಿ ಹಿಂದೂ-ಮುಸ್ಲಿಂ ಸಮುದಾಯದಲ್ಲಿರುವ ಶಾಂತಿಯುತ ಮನಸ್ಸನ್ನು ಕದಡಿ ಕೋಮು ಗಲಭೆ ಸೃಷ್ಟಿಸುವ ಹೇಳಿಕೆಯನ್ನು ನೀಡಿರುತ್ತಾರೆ.
ಈ ಅರ್ಚಕನ ವಿರುದ್ಧ ಕೂಡಲೇ ಎಫ್.ಐ.ಆರ್  ದಾಖಲಿಸಿ ದಸ್ತಗಿರಿ ಮಾಡಬೇಕು. ಇಲ್ಲವಾದರೆ ಸಮಾಜದಲ್ಲಿ ಅಶಾಂತಿ ಸೃಷ್ಟಿಯಾದರೆ ಪೊಲೀಸ್‌ನವರೇ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಮೈಸೂರಿನ ಮಾಜಿ ಸಂಸದ ಪ್ರತಾಪ್‌ ಸಿಂಹ ಮತ್ತು ಬಿಜೆಪಿ ವಕ್ತಾರ ಎಂ.ಜಿ.ಮಹೇಶ್ ಎಂಬ ವ್ಯಕ್ತಿ  ಮುಖ್ಯಮಂತ್ರಿ  ಹಾಗೂ ಉಪ ಮುಖ್ಯಮಂತ್ರಿಗಳನ್ನು ನಿಂದಿಸುವುದಲ್ಲದೆ, ಇವರ ವಿರುದ್ಧ ಸುಳ್ಳು ಹೇಳಿಕೆಗಳ ಮೂಲಕ ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ.  ಹಿಂದು-ಮುಸ್ಲಿಂ ಸಮುದಾಯಗಳ ನಡುವೆ ಕೋಮುಗಲಭೆ ಸೃಷ್ಟಿಸುವ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಹಾಗೂ ಬೂಕರ್ ಪ್ರಶಸ್ತಿ ತಂದುಕೊಟ್ಟ ಮಹಿಳೆಗೆ ಕೆಟ್ಟದಾಗಿ ಮಾತನಾಡುತ್ತಿದ್ದಾರೆ. ಇವರ ಉದ್ದೇಶ ಕೋಮುಗಲಭೆ ಸೃಷ್ಟಿಸಬೇಕು ಎಂಬುದಾಗಿದೆ.

ಬಿಜೆಪಿ ವಕ್ತಾರ ಎಂ.ಜಿ.ಮಹೇಶ್  ಎಂಬುವರು  ಮುಖ್ಯ ಮಂತ್ರಿಗಳಿಗೆ 24 ಗಂಟೆ ಗಡುವನ್ನು ಕೊಡುವುದಲ್ಲದೆ ಸ್ಪಷ್ಟಿಕರಣ ನೀಡಬೇಕು ಎಂದು ಹೇಳುವ ಮೂಲಕ ದಸರಾ ಕಾರ್ಯಕ್ರಮಕ್ಕೆ ಅಡಚಣೆ ಮಾಡುತ್ತೇವೆ ಎಂದು ಧಮ್ಕಿ  ಹಾಕಿರುತ್ತಾರೆ. ಆದ್ದರಿಂದ ಕೂಡಲೇ ಇವರುಗಳನ್ನು ದಸ್ತಗಿರಿ ಮಾಡಬೇಕು ಎಂದು ದೂರಿನ ಮೂಲಕ ಆಗ್ರಹಿಸಿದ್ದಾರೆ.

TAGGED:
Share This Article
Leave a Comment