ಪಬ್ಲಿಕ್ ಅಲರ್ಟ್
ಮೈಸೂರು:ಭಾರತದ ಜನರ ಜೀವನದ ಮೇಲೆ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮತ್ತು ಧಾರ್ಮಿಕ ಶಕ್ತಿಗಳನ್ನು ಸೇರಿಸುವ ಮೂಲಕ ಸಮಾಜಮುಖಿ ಕೆಲಸ ಮಾಡುತ್ತಿರುವ ಅತ್ಯಂತ ಪ್ರಭಾವಿ ಕ್ಷೇತ್ರ ಎಂದರೇ ಅದು ಚಲನಚಿತ್ರ ಕ್ಷೇತ್ರ. ತಮ್ಮ ರಚನೆ, ಸಂಗೀತ, ಸಾಹಿತ್ಯದ ಮೂಲಕ ಸಮಾಜದಲ್ಲಿ ಹೆಚ್ಚು ಜನಪ್ರಿಯತೆಯನ್ನು ಚಲನಚಿತ್ರ ಕ್ಷೇತ್ರಗಳಿಸುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಹೇಳಿದರು.
ಮಾಲ್ ಆಫ್ ಮೈಸೂರಿನ ನೆಲಮಹಡಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ದಸರಾ ಚಲನಚಿತ್ರೋತ್ಸವ-2025ವನ್ನು ಉದ್ಘಾಟಿಸಿ ಮಾತನಾಡಿದರು. ಸರೋಜಾ ದೇವಿ ಅವರು ದಕ್ಷಿಣ ಭಾರತದ ಲೇಡಿ ಸೂಪರ್ ಸ್ಟಾರ್ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚು ಹೆಸರು ಮಾಡಿ ಸಾಧನೆ ಮಾಡಿದ್ದಾರೆ. ಕನ್ನಡ, ತೆಲುಗು, ಹಿಂದಿ ಚಿತ್ರಗಳಲ್ಲಿ ತನ್ನದೇ ಆದಂತಹ ಗಂಭೀರತೆ ಮೂಲಕ ಜನರ ಮನಸನ್ನು ಗೆದ್ದಿದ್ದಾರೆ. ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಲು ತೀರ್ಮಾನ ಮಾಡಲಾಗಿದೆ ಹಾಗೂ ಡಾ.ವಿಷ್ಣುವರ್ಧನ್ ಅವರಿಗೂ ನೀಡಲು ತೀರ್ಮಾನಿಸ ಲಾಗಿದೆ.ಸಮಾಜದ ಮೇಲೆ ನಡವಳಿಕೆಯ ಮೇಲೆ ಸಾಧಕರನ್ನು ಜೀವಂತವಾಗಿ ಇಡುವಂತೆ ಮಾಡುವುದು ನಮ್ಮ ಕರ್ತವ್ಯವಾಗಿದೆ ಎಂದು ಹೇಳಿದರು.


ಭಾರತೀಯರು ಎಲ್ಲರೂ ಒಂದೇ ಎಂದು ತೋರಿಸಿ ಕೊಡುವ ಹಬ್ಬ ನಮ್ಮ ಮೈಸೂರು ದಸರಾ. ಎಲ್ಲರೂ ಒಗ್ಗಟ್ಟಿನಿಂದ ಇರುವುದಕ್ಕೆ ಈ ಹಬ್ಬ ಸಾಕ್ಷಿಯಾಗಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ದಸರಾ ಹಬ್ಬಕ್ಕೆ ಕೊಟ್ಟಿರುವಂತಹ ಕೊಡುಗೆ ಅಪಾರ ಮಹತ್ವವಾದದ್ದು. ಅದರಂತೇ ನಾವೆಲ್ಲರೂ ಒಂದಾಗಿ ನಾವೆಲ್ಲರೂ ಒಂದೇ ಎಂಬ ಸಂದೇಶವನ್ನು ನೀಡುವುದರ ಮೂಲಕ ಈ ಚಲನಚಿತ್ರವನ್ನು ಉದ್ಘಾಟನೆ ಮಾಡಿದ್ದೇನೆ. ಇಲ್ಲಿ 84 ಸಿನಿಮಾಗಳ ಪ್ರದರ್ಶನ ಮಾಡಲಾಗುತ್ತಿದ್ದು, ಪ್ರೇಕ್ಷಕರು ಪ್ರತಿ ಚಿತ್ರವನ್ನು ವೀಕ್ಷಣೆ ಮಾಡಬೇಕು. ಎಲ್ಲರೂ ಮೈಸೂರು ಪ್ರಾಂತ್ಯವನ್ನು ಎತ್ತಿ ಹಿಡಿಯುವಂತಹ ಕೆಲಸ ಮಾಡೋಣ ಎಂದು ಹೇಳಿದರು.
ಸು ಫ್ರಂ ಸೋ ಖ್ಯಾತಿಯ ಚಲನಚಿತ್ರ ನಟಿಯಾದ ಸಂಧ್ಯಾ ಅರಕೆರೆ ಮಾತನಾಡಿ, ನಾನು ಮೈಸೂರಿನವಳಾಗಿರುವುದು ನನಗೆ ತುಂಬಾ ಸಂತೋಷವಾಗಿದೆ. ಪ್ರತಿ ಭಾರಿ ನಾನು ಮೈಸೂರಿನವರಾಗಿ ದಸರಾ ವೀಕ್ಷಣೆಮಾಡುತ್ತಿದೆ. ಆದರೆ ಈಗ ಸಿನಿಮಾರಂಗದಿoದ ಬಂದು ಈ ದಸರಾದಲ್ಲಿ ಭಾಗಿಯಾಗಿರುವುದು ನನಗೆ ತುಂಬಾ ಸಂತೋಷ ಉಂಟುಮಾಡಿದೆ ಎಂದು ಹೇಳಿದರು.
ನಟ ಪೃಥ್ವಿ ಅಂಬರ್ ಮಾತನಾಡಿ ಕೆಡುಕನ್ನು ಗೆಲ್ಲುವಂತಹ ಒಳಿತನ್ನು ಮಾಡುವಂತಹ ಒಂದು ಹಬ್ಬ ಎಂದರೆ ನಮ್ಮ ಮೈಸೂರು ದಸರಾ ಹಬ್ಬ , ಮೈಸೂರು ಎಂದರೆ ನನಗೆ ಚಿಕ್ಕ ವಯಸ್ಸಿನಿಂದಲೂ ಒಂದು ದೊಡ್ಡ ಸೆಳೆತ. ಐತಿಹಾಸಿಕವಾಗಿ, ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವ ಜಿಲ್ಲೆ ಎಂದರೆ ಮೈಸೂರು. ಮೈಸೂರು ಎಂದರೆ ನನಗೆ ಹೆಚ್ಚು ಪ್ರೀತಿ. ಪ್ರೇಕ್ಷಕರಿಗೆ ಚಲನ ಚಿತ್ರಗಳನ್ನು ಕೊಡುವುದು ಚಲನ ಚಿತ್ರೋತ್ಸವ. ಸಿನಿಮಾ ಕ್ಷೇತ್ರ ಎಂದರೇ ಒಂದು ಪ್ರಭಾವಿ ಕ್ಷೇತ್ರ. ಪ್ರತಿಯೊಂದು ಚಲನ ಚಿತ್ರಗಳು ಸಮಾಜದಲ್ಲಿ ರಚನಾತ್ಮಕ ಬದಲಾವಣೆಗಳಾಗುತ್ತದೆ. ಪ್ರೇಕ್ಷಕರು ಹೆಚ್ಚು ಸಿನಿಮಾಗಳನ್ನು ನೋಡಬೇಕು ಅದರಲ್ಲಿ ಬರುವಂತಹ ಒಳ್ಳೆಯ ವಿಚಾರಗಳನ್ನು ಪ್ರೇಕ್ಷಕರು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಹಿನ್ನೆಲೆ ಗಾಯಕ ಜಸ್ಕರನ್ ಸಿಂಗ್ ಅವರು ಕೃಷ್ಣಂ ಪ್ರಣಯ ಸಖಿ ಚಿತ್ರದ ದ್ವಾಪರ ದಾಟುತ ನನ್ನನೆ ನೋಡಲು ನನ್ನನ್ನೇ ಸೇರಲು ಬಂದ ರಾಧಿಕೆ ಎಂಬ ಹಾಡು ಹೇಳುವುದರ ಮೂಲಕ ಪ್ರೇಕ್ಷಕರನ್ನು ರಂಜಿಸಿದರು. ಸಿನಿಮಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿವಿಧ ಕಲಾವಿದರು ನಿರ್ದೇಶಕರಿಗೆ ಸನ್ಮಾನ ಮಾಡಲಾಯಿತು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಹಾಗೂ ಚಲನಚಿತ್ರೋತ್ಸವ ಸಮಿತಿಯ ಕಾರ್ಯದರ್ಶಿ ಟಿ.ಕೆ.ಹರೀಶ್ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಡಾ.ಪುಷ್ಪ ಅಮರನಾಥ್, ಕ್ಷೇತ್ರದ ಶಾಸಕರಾದ ತನ್ವೀರ್ ಸೇಠ್ , ಟಿ.ಎಸ್.ಶ್ರೀವತ್ಸ, ಡಾ.ಡಿ.ತಿಮ್ಮಯ್ಯ, ಅಪರ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜು, ಚಲನಚಿತ್ರೋತ್ಸವ ಉಪ ಸಮಿತಿ ಉಪವಿಶೇಷಾಧಿಕಾರಿ ವಿಜಯ್ ಕುಮಾರ್, ಕಾರ್ಯಾಧ್ಯಕ್ಷೆ ಕೆ.ಶೋಭಾ, ಚಲನಚಿತ್ರ ನಟಿಯಾದ ಅಂಜಲಿ, ಖ್ಯಾತ ಸಂಗೀತ ನಿರ್ದೇಶಕ ನಾಗಾರ್ಜುನ ಶರ್ಮಾ, ನೃತ್ಯ ನಿರ್ದೇಶಕ ಮುರುಗ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
