ಪಬ್ಲಿಕ್ ಅಲರ್ಟ್
ಮೈಸೂರು: ಮೈಸೂರು ದಸರಾ ಮಹೋತ್ಸವ – ೨೦೨೫ರ ಹಿನ್ನೆಲೆ ನಗರದ ಮಾಲ್ ಆಫ್ ಮೈಸೂರಿನ ಐನಾಕ್ಸ್ ಮಲ್ಟಿಫ್ಲೆಕ್ಸ್ ಚಿತ್ರಮಂದಿರದಲ್ಲಿ ದಸರಾ ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡ ಕಿರುಚಿತ್ರಗಳಿಗೆ ಗುರುವಾರ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸುತನ್ ನಿರ್ದೇಶನದ ಲಕುಮಿ ಕಿರುಚಿತ್ರಕ್ಕೆ ಪ್ರಥಮ ಬಹುಮಾನ ಹಾಗೂ ೨೦ ಸಾವಿರ ರೂ.ಗಳ ಗೌರವಧನ, ಮಣಿಕಂಠ ನರ‍್ದೇಶನದ ಹಿಂಬಾಲಿಸು ಚಿತ್ರಕ್ಕೆ ಎರಡನೇ ಬಹುಮಾನ ಹಾಗೂ ೧೫ ಸಾವಿರ ರೂ.ಗಳ ಗೌರವಧನ ಮತ್ತು ಡಿ.ಎಸ್.ನಿರ್ದೇಶನದ ಶಶಿಕುಮಾರ್ ಹಬ್ಬದ ಹಸಿವು ಚಿತ್ರಕ್ಕೆ ಮೂರನೇ ಬಹುಮಾನ ಹಾಗೂ ೧೦ ಸಾವಿರ ರೂ.ಗಳ ಗೌರವಧನ ನೀಡಲಾಯಿತು. ಅತ್ಯುತ್ತಮ ಛಾಯಾಗ್ರಹಣ ವಿಭಾಗದಲ್ಲಿ ಲಕುಮಿ ಹಾಗೂ ಅತ್ಯುತ್ತಮ ಸಂಕಲನಕಗಾರ ವಿಭಾಗದಲ್ಲಿ ಹಿಂಬಾಲಿಸು ಕಿರುಚಿತ್ರಕ್ಕೆ ಪ್ರಶಸ್ತಿ ದೊರೆಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕಿರುತೆರೆ ನಟಿ ದೀಪಾ ರವಿಶಂಕರ್ ಮಾತನಾಡಿ, ಪ್ರಶಸ್ತಿ ಸಿಗದವರು ಬೇಸರಗೊಳ್ಳಬೇಡಿ, ಕಡಿಮೆ ಸಮಯದಲ್ಲಿ ಒಂದು ಸಂದೇಶ ಸಾರುವ ಕಿರುಚಿತ್ರ ಮಾಡುವುದು ಕರ‍್ಷಿಯಲ್ ಸಿನಿಮಾಗಿಂತ ಕಷ್ಟಕರ ಹಾಗೂ ಇದಕ್ಕೆ ಶ್ರಧ್ದೆ ಬಹಳ ಮುಖ್ಯವಾಗಿರುತ್ತದೆ. ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಇನ್ನೂ ಹೆಚ್ಚೆಚ್ಚು ಕಿರುಚಿತ್ರಗಳನ್ನು ಮಾಡಿ ಎಂದು ಹೊಸಬರಿಗೆ ಸಲಹೆ ನೀಡಿದರು.
ಈ ವೇಳೆ ಮುಖ್ಯ ಅತಿಥಿ ಕಿರುತೆರೆ ನಟಿ ದೀಪಾ ರವಿಶಂಕರ್ , ಕಿರುತೆರೆ ನಟ ಅಶ್ವಿನ್ ಕುಮಾರ್ ಹಾಗೂ ಹಿರಿಯ ಛಾಯಾಗ್ರಾಹಕ ಅಶ್ವತ್ ನಾರಾಯಣ ಅವರನ್ನು ಉಪ ಸಮಿತಿ ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಚಲನಚಿತ್ರ ಉಪ ಸಮಿತಿ ಉಪಾಧ್ಯಕ್ಷ ಸಿದ್ಧರಾಜು, ವಿಶೇಷಾಧಿಕಾರಿ ಹಾಗೂ ಉಪ ವಿಭಾಗಾಧಿಕಾರಿ ವಿಜಯ್ ಕುಮಾರ್, ತರ‍್ಪುಗಾರರಾದ ಕಾವಾ ಕಾಲೇಜಿನ ಪ್ರಾಧ್ಯಾಪಕಿ ಚರಿತಾ, ತಂತ್ರಜ್ಞರಾದ ಗೋಪಿನಾಥ್ ಇತರರು ಇದ್ದರು.
