ಪಬ್ಲಿಕ್ ಅಲರ್ಟ್
ಮೈಸೂರು: ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನು ಮುಷ್ತಾಕ್ ಓರ್ವ ಮಹಿಳಾ ಸಾದಕಿ, ರೈತ, ದಲಿತ,ಮಹಿಳೆಯರ ಪರ ಹೋರಾಟ ಮಾಡಿದವರು, ಪತ್ರಕರ್ತೆ, ವಕೀಲರಾಗಿ ಕೆಲಸ ಮಾಡಿದ್ದಾರೆ. ಇಡೀ ನಾಡು ಅವರನ್ನು ಗೌರವಿಸಿದೆ. ಅಂತಹವರು ದಸರಾ ಉದ್ಘಾಟನೆ ಮಾಡುವುದನ್ನು ಕೆಲವರು ವಿರೋಧಿಸುತ್ತಿರುವುದು ನಾಗರೀಕ ಸಮಾಜದ ಲಕ್ಷಣ ಅಲ್ಲ ಎಂದು ಬಿಜೆಪಿ ವಿಧಾನಪರಿಷತ್ ಸದ್ಯಸ್ಯ ಎಚ್.ವಿಶ್ವನಾಥ್ ವಾಗ್ದಾಳಿ ನಡೆಸಿದರು.
ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಮ್ಮದು ಬಹುತ್ವ ಭಾರತ, ಜಾತ್ಯಾತೀತ ರಾಷ್ಟ್ರ. ಅಂತಹದರಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಮಾಜಿ ಸಂಸದ ಪ್ರತಾಪ್ ಸಿಂಹ ಅಂತವರು ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನು ಮುಷ್ತಾಕ್ ಅವರು ದಸರಾ ಉದ್ಘಾಟನೆ ಮಾಡುವುದನ್ನು ಬಾಯಿಗೆ ಬಂದಹಾಗೆ ಮಾತನಾಡುವುದು ಸರಿಯಲ್ಲ ಎಂದು ಹೇಳಿದರು.
ಬೂಕರ್ ಬಾನು ಮುಷ್ತಾಕ್ ಅವರಿಗೆ ಬಂದಿದೆ. ಪ್ರತಾಪಿಯಾಗಿ ಮಾತನಾಡುವ ಪ್ರತಾಪ್ ಸಿಂಹ ನೀನು ಬರೆಯುತ್ತಿದ್ದಲ್ಲ ಬೆತ್ತಲೆ ಪ್ರಪಂಚಕ್ಕೆ ಬೂಕರ್ ಬಂತ. ಹೊಟ್ಟೆ ಕಿಚ್ಚಿಗೆ ಏನೇನೋ ಮಾತನಾಡುವುದಲ್ಲ. ನಿನ್ನ ಪ್ರತಾಪಕ್ಕೆ ಬಿಜೆಪಿ ಹೈಕಮಾಂಡ್ ಸೀಟೆ ಇಲ್ಲದಂಗೆ ಮಾಡಿದರು ಎಂದು ಮಾಜಿ ಸಂಸದ ಪ್ರತಾಪ್ ಅವರ ವಿರುದ್ಧ ಹರಿಹಾಯ್ದರು.
ಶೋಭಾ ಕರಂದ್ಲಾಜೆ ಭಾರತ ಸರ್ಕಾರದ ಮಂತ್ರಿ. ಇವರು ಚಾಮುಂಡಿ ಬೆಟ್ಟದ ಮೆಟ್ಟಿಲುಗಳನ್ನು ಹತ್ತಲು ಬಿಡುವುದಿಲ್ಲ ಎಂದು ಹೇಳುತ್ತಾರೆ. ಚಾಮುಂಡಿ ಬೆಟ್ಟವನ್ನು ನಿಮಗೆ ಯಾರು ಬರೆದುಕೊಟ್ಟವರು? ಹೀಗೆ ಹೇಳಲು ಅಧಿಕಾರ ಕೊಟ್ಟವರು ಯಾರು? ಇದು ಜನರ ಪ್ರಭುತ್ವ, ಜಾತಿ-ಪಂಥದ ಶರಾ ಬರೆದಿಲ್ಲ. ಇದು ಎಲ್ಲರ ದಸರಾ ಎಂದು ಹೇಳಿದರು.
ವಿರೋಧ ಮಾಡುವುದು ನಾಗರೀಕವಾಗಿರಬೇಕೆ ಹೊರತು ಅಸಹ್ಯಕರವಾಗಿರಬಾರದು. ಬಾನು ಮುಷ್ತಾಕ್ ದನದ ಮಾಂಸ ತಿಂದು ಬರುತ್ತಾರೆ ಎನ್ನುವ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರೆ, ಗೋವಾ, ಗುಜರಾತ್, ಒರಿಸ್ಸಾದಲ್ಲಿ ದನದ ಮಾಂಸ ಮಾರಾಟ ಮಾಡುತ್ತಿರುವವರು ಬಿಜೆಪಿಯವರು. ಬೀಫ್ ಎಕ್ಸ್ ಪೋಟ್೯ ನಲ್ಲಿ ಗುಜರಾತ್ ನಂ.1 ರಲ್ಲಿದೆ. ಸುಮ್ಮನೆ ಬಾಯಿಗೆ ಬಂದ ಹಾಗೆ ಮಾತನಾಡಬಾರದು ನಿಮ್ಮ ಸ್ಥಾನಕ್ಕೆ ಗೌರವ ತರುವುದಿಲ್ಲ ಎಂದರು.
ಇಡೀ ಜಗತ್ತು ಜನಾಂಗೀಯ ದ್ವೇಷದ ವಿರುದ್ಧ ಹೋರಾಡುತ್ತಿರುವ ಸಂದರ್ಭದಲ್ಲಿ ಮೈಸೂರಿನಲ್ಲಿ ಜನಾಂಗೀಯ ದ್ವೇಷದ ರೀತಿಯ ಮಾತುಗಳು ಬರುತ್ತಿರುವುದು ಸರಿಯಲ್ಲ. ಕುವೆಂಪು ಅವರು ಹೇಳಿದ ಹಾಗೆ ಸರ್ವಜನಾಂಗದ ತೋಟವಾಗಬೇಕು, ಸೌಹಾರ್ದತೆ ಇರಬೇಕು. ಹಿಂದೂ, ಮುಸ್ಲಿಮ್ ಕ್ರುಶ್ಚಿಯನ್ ಎಲ್ಲರೂ ಒಂದೆ ಎಂದು ಹೇಳಿದರು.
ಬಂಡಾಯ ಸಾಹಿತಿ ಬರಗೂರು ರಾಮಚಂದ್ರಪ್ಪ ದೇವರನ್ನು ಒಪ್ಪಲ್ಲ ಅಂದರು. ಅವರು ಉದ್ಘಾಟನೆ ಮಾಡಲಿಲ್ಲವೆ? ಬಾನು ಮುಷ್ತಾಕ್ ಗರ್ಭಗುಡಿ ಒಳಗಡೆ ಹೋಗಿ ಪೂಜೆ ಮಾಡುತ್ತಾರ? ಪುರೋಹಿತರು ಮಂಗಳಾರತಿ ಕೊಡುತ್ತಾರೆ ಅದನ್ನು ಸ್ವೀಕರಿಸಿ ದೀಪ ಹಚ್ಚಿ ಉದ್ಘಾಟನೆ ಮಾಡುತ್ತಾರೆ. ಅದನ್ನೇ ವಿರೋಧಿಸುವುದೆ? ಹಿಂದುಗಳು ಎನ್ನುವ ನಿಮ್ಮನ್ನು ಪುರೋಹಿತರು ಗರ್ಭಗುಡಿಯೊಳಗೆ ಬಿಟ್ಟುಕೊಳ್ಳುತ್ತಾರ ಎಂದು ಪ್ರಶ್ನಿಸಿದರು.
ಕನ್ನಡಮ್ಮನ ಬಗ್ಗೆ ಏನೋ ಮಾತನಾಡಿದರು ಎಂದರೆ ತಾಯಿ ಮಗನ ಬಗ್ಗೆ ಮಗ ತಾಯಿ ಬಗ್ಗೆ ಮಾತನಾಡಿದ ಹಾಗೆ. ಈಗಾಗಲೇ ಬಾನುಮುಷ್ತಾಕ್ ಅವರು ಭುವನೇಶ್ವರಿ ಬಗ್ಗೆ ಮಾತನಾಡಿರುವ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಆಗ ಅವಮಾನ ಮಾಡಿದ್ದರು ಈಗ ಸನ್ಮಾನ ಆಗಿದೆ. ಅಲ್ಲಿಗೆ ಎಲ್ಲವೂ ಮುಗಿದಂತೆ. ಬೂಕರ್ ಅಂತ ಪ್ರಶಸ್ತಿಯನ್ನು ಬೇರೆ ಯಾರು ತಂದುಕೊಟ್ಟಿದ್ದಾರೆ ಎಙದಯ ಕೇಳಿದರು.
ಬಾನು ಮುಷ್ತಾಕ್ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷರಾಗಿದ್ದಾರೆ. ಅವರನ್ನು ಇಷ್ಟೆಲ್ಲಾ ಟೀಕೆ ಮಾಡುತ್ತಿದ್ದರು ಕನ್ನಡ ಹೋರಾಟ ಮಾಡುವವರು ಯಾಕೆ ಮಾತನಾಡುತ್ತಿಲ್ಲ, ಕನ್ನಡ ಮಂತ್ರಿ ಜಿಲ್ಲಾ ಉಸ್ತುವಾರಿ ಮಂತ್ರಿ ಯಾಕೆ ಏನೂ ಮಾತನಾಡದೆ ಸುಮ್ಮನೆ ಕುಳಿತಿದ್ದಾರೆ. ಮುಖ್ಯಮಂತ್ರಿಗಳು ಏನು ಮಾಡುತ್ತಿದ್ದಾರೆ. ನೀವೆಲ್ಲಾ ಈಗ ಮಾತನಾಡಬೇಕು ಎಂದು ಒತ್ತಾಯಿಸಿದರು.
ಬೂಕರ್ ಪ್ರಶಸ್ತಿಯನ್ನು ಬಾನು ಮುಷ್ತಾಕ್ ಮತ್ತು ದೀಪಾ ಬಸ್ತಿ ಇಬ್ಬರು ಹಂಚಿಕೊಂಡಿದ್ದಾರೆ. ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಜೊತೆಗೆ ದೀಪಾ ಬಸ್ತಿ ಅವರನ್ನು ಕರಿಯಬೇಕಿತ್ತು. ಬಾನು ಮುಷ್ತಕ್ ನಾಡ ದಸರಾ ಉದ್ಘಾಟನೆ ಮಾಡಲಿ. ಸಂಜೆ ಅರಮನೆ ಅಂಗಳದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ದೀಪಾ ಬಸ್ತಿಯವರನ್ನು ಮುಖ್ಯಮಂತ್ರಿಗಳು ಸನ್ಮಾನಿಸಿ ಗೌರವಿಸಬೇಕು ಎಂದು ಎಚ್.ವಿಶ್ವನಾಥ್ ಆಗ್ರಹಿಸಿದರು.
ಕೋಟ್:
ಚಾಮುಂಡಿ ಬೆಟ್ಟ ಹಿಂದೂಗಳದ್ದು ಅನ್ನೋದು ತಪ್ಪು ಹಿಂದುಗಳದಲ್ಲ ಅನ್ನೋದು ತಪ್ಪು. ಇದು ಸರ್ಕಾರಕ್ಕೆ ಸೇರಿದ್ದು. ಹಾಗಾಗಿ ಎಲ್ಲರಿಗೂ ಸೇರಬೇಕು.
– ಎಚ್.ವಿಶ್ವನಾಥ್,
ವಿಧಾನಪರಿಷತ್ ಸದಸ್ಯ.
ಕೋಟ್:
ಈ ಹಿಂದೆ ದಸರಾ ಆಚರಣೆ ಜಂಬೂ ಸವಾರಿಯಲ್ಲಿ ಅಂದಿನ ಮೈಸೂರು ಮಹರಾಜರು ಎರಡು ಬಾರಿ ದಿವಾರಾಗಿದ್ದ ಮಿರ್ಜಾ ಇಸ್ಮಾಯಿಲ್ ಅವರನ್ನು ಮೆರವಣಿಗೆಯಲ್ಲಿ ಕರೆದೊಯ್ದಿರಯವುದು ಇತಿಹಾಸದಲ್ಲಿ ದಾಖಲಾಗಿದೆ. ಮಾಜಿ ಸಂಸದ ಪ್ರತಾಪ್ ಸಿಂಹ ಮೈಸೂರಿನ ಚರಿತ್ರೆ ಇತಿಹಾಸವನ್ನು ಓದಬೇಕಿದೆ.
– ಎಚ್.ವಿಶ್ವನಾಥ್,
ವಿಧಾನಪರಿಷತ್ ಸದಸ್ಯ.