ಆಧುನಿಕ ಕೃಷಿ ಪದ್ಧತಿಯಿಂದಲೇ ಪ್ರಗತಿ ಸಾಧ್ಯ: ಸಚಿವ ಚೆಲುವರಾಯ ಸ್ವಾಮಿ‌

Pratheek
3 Min Read

ಪಬ್ಲಿಕ್ ಅಲರ್ಟ್


ಮೈಸೂರು: ಆಧುನಿಕ ಕೃಷಿ ಪದ್ಧತಿಯಲ್ಲಿ ತಂತ್ರಜ್ಞಾನ ಮತ್ತು ಯಂತ್ರೋಪಕರಣಗಳ ಬಳಕೆಯಿಂದಾಗಿ ಕೂಲಿ ಕಾರ್ಮಿಕರ ಸಮಸ್ಯೆ ಬಗೆಹರಿಸಿಕೊಳ್ಳುವುದರೊಂದಿಗೆ ಉತ್ತಮವಾದ ಫಸಲು ಪಡೆದುಕೊಳ್ಳುವ ಮೂಲಕ ಆರ್ಥಿಕವಾಗಿ ಅಭಿವೃದ್ಧಿ ಹೊಂದುವತ್ತ ನಮ್ಮ ರೈತರು ಮುಂದಾಗಬೇಕೆಂದು ಕೃಷಿ ಸಚಿವ ಎನ್.ಚೆಲುವರಾಯಸ್ವಾಮಿ ರೈತರಿಗೆ ಸಲಹೆ ನೀಡಿದರು.
ವಿಶ್ವ ವಿಖ್ಯಾತ ದಸರಾ ಮಹೋತ್ಸವದ ಅಂಗವಾಗಿ ರೈತ ದಸರಾ ಉಪ ಸಮಿತಿ ವತಿಯಿಂದ ನಗರದ ಜೆ.ಕೆ.ಮೈದಾನದ ಅಲ್ಯುಮಿನಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ರೈತ ದಸರಾ ಕಾರ್ಯಕ್ರಮವನ್ನು ಭತ್ತ ಕುಟ್ಟುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ಸರ್ಕಾರದಿಂದ ರೈತರಿಗೆ ಅವಶ್ಯಕವಿರುವ ಸೌಲಭ್ಯ ಮತ್ತು ಮಾರ್ಗದರ್ಶನಗಳನ್ನು ಸರ್ಕಾರದಿಂದ ಒದಗಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ರೈತ ದಸರಾ ಎಂಬ ಹೆಸರಿನಲ್ಲಿ ಕೃಷಿಗೆ ಸಂಬಂಧಿಸಿದ ತೋಟಗಾರಿಕೆ, ಮೀನುಗಾರಿಕೆ, ಹೈನುಗಾರಿಕೆ, ರೇಷ್ಮೆ ಸೇರಿದಂತೆ ಇನ್ನಿತರೆ ವಿಷಯಗಳ ಕುರಿತು ಎಲ್ಲಾ ಇಲಾಖೆಗಳನ್ನು ಒಗ್ಗೂಡಿಸಿ ವಸ್ತು ಪ್ರದರ್ಶನವನ್ನು ಅಯೋಜಿಸಲಾಗಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು.
ದೇಶದಲ್ಲಿ ದೊಡ್ಡ ಮಟ್ಟದಲ್ಲಿ ರೈತ ಸಮುದಾಯದವರಿದ್ದು, ವಿಶ್ವ ವಿಖ್ಯಾತ ದಸರಾ ಮಹೋತ್ಸವದಲ್ಲಿ ರೈತ ದಸರಾ ಹಮ್ಮಿಕೊಳ್ಳುವುದರಿಂದ ರೈತರಿಗೆ ಗೌರವ ಸಲ್ಲಿಸಲಾಗುತ್ತಿದೆ‌‌. ಇನ್ನು ರೈತರು ಬೆಳೆಯುವ ಫಸಲಿಗೆ ಸಂಬಂಧಿಸಿದಂತೆ, ನಮ್ಮ ರೈತರಲ್ಲಿ ಕೆಲವರು ತಾವು ಸಂಗ್ರಹಿಸಿಟ್ಟುಕೊಂಡಂತಹ ಹಳೆ ತಳಿಯ ಬೀಜಗಳನ್ನೇ ಬೆಳೆ ಬೆಳೆಯಲಿ ಮುಂದಾಗುತ್ತಾರೆ. ಆದರೆ, ಸಂಗ್ರಹಿಸಲ್ಪಟ್ಟ ತಳಿಗಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವುದರಿಂದ, ರೋಗ ನಿರೋಧಕ ಶಕ್ತಿ ಹೆಚ್ಚಿರುವಂತಹ ಮತ್ತು ಆಧುನಿಕ ಪದ್ಧತಿಯಿಂದ ಸಂಸ್ಕರಿಸಲ್ಪಟ್ಟ ತಳಿಗಳ ಬೇಸಾಯ ಮಾಡುವುದರಿಂದ‌ ಉತ್ತಮ ಫಸಲನ್ನು ಬೆಳೆದು ಆರ್ಥಿಕವಾಗಿ ಅಭಿವೃದ್ಧಿಗೊಳ್ಳುವಂತೆ ಹಾಗೂ ತಂತ್ರಜ್ಞಾನದ ಮೂಲಕ ಸಮಗ್ರ ಕೃಷಿಯನ್ನು ಕೈಗೊಳ್ಳಬೇಕೆಂದು ಸಲಹೆ ನೀಡಿದರು.

ಕಬ್ಬು ಕಟಾವು ಮಾಡುವ ಯಂತ್ರಕ್ಕೆ ಲಕ್ಷಾಂತರ ರೂಪಾಯಿ ಬೆಲೆ ಇದ್ದು, ಸರ್ಕಾರದಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯಗಳಿಗೆ ಶೇ.50ರಷ್ಟು ಸಬ್ಸಿಡಿ ಆಧಾರದಲ್ಲಿ ಯಂತ್ರೋಪಕರಣ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. ಈ ಹಿನ್ನೆಲೆ ಯಂತ್ರೋಪಕರಣಕ್ಕಾಗಿಯೇ ಒಂದು ಸಾವಿರಕ್ಕೂ ಹೆಚ್ಚು ಕೋಟಿ ರೂಪಾಯಿಯನ್ನು ಸರ್ಕಾರದಿಂದ ಮೀಸಲಿರಿಸಿದ್ದು, ಇದುವರೆಗೂ ಸುಮಾರು 334 ಫಲಾನುಭವಿಗಳು ಇದರ ಸೌಲಭ್ಯ ಪಡೆದುಕೊಂಡಿರುತ್ತಾರೆ. ಸರ್ಕಾರದ‌ ಯೋಜನೆಗಳು ಅದರಲ್ಲೂ ರೈತರಿಗೆ ಅನುಕೂಲವಾಗುವಂತಹ ಸಬ್ಸಿಡಿ ಕುರಿತಾಗಿ ವಿಶ್ವವಿದ್ಯಾನಿಲಯಗಳು ರೈತರಿಗೆ ಕಾಲ ಕಾಲಕ್ಕೆ ಮಾಹಿತಿ ನೀಡುವ ಮೂಲಕ ಅರಿವು ಮೂಡಿಸಬೇಕು ಎಂದರು. 
ಸಾಧಕ ರೈತರಿಗೆ ಸನ್ಮಾನ:  ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್.ಸಿ.ಮಹದೇವಪ್ಪ ಹಾಗೂ ಪಶು ಸಂಗೋಪನಾ ಮತ್ತು ರೇಷ್ಮೆ ಖಾತೆ ಸಚಿವರಾದ ಕೆ.ವೆಂಕಟೇಶ್ ಅವರು ಕೃಷಿ‌ ಮತ್ತು ಕೃಷಿ‌ ಸಂಬಂಧಿತ ಇಲಾಖೆಗಳಲ್ಲಿ ಸಾಧನೆ ಮಾಡಿರುವ ಪ್ರಗತಿ ಪರ ರೈತ ಹಾಗೂ ರೈತ ಮಹಿಳೆಯರನ್ನು ಸನ್ಮಾನಿಸಿ ಗೌರವಿಸಿದರು.
ಮೈಸೂರು ತಾಲ್ಲೂಕಿನ ವರುಣಾ ಹೋಬಳಿಯ ವರಕೋಡು ಗ್ರಾಮದ ಮುದ್ದರಾಮೇಗೌಡ, ಜಯಪುರ ಹೋಬಳಿಯ ಹಾರೋಹಳ್ಳಿ ಗ್ತಾಮದ ಮಹೇಶ ಬಿನ್ ಮಹದೇವಯ್ಯ, ತೋಟಗಾರಿಕೆ ಇಲಾಖೆಯಿಂದ ಜಯಪುರ ಹೋಬಳಿಯ ಟಿ.ಕಾಟೂರು ಗ್ರಾಮದ ಮರಂಕಯ್ಯ ಬಿನ್ ನಾಗನಾಯಕ, ನಂಜನಗೂಡು ತಾಲ್ಲೂಕಿನ ದೊಡ್ಡ ಕವಲಂದೆ ಹೋಬಳಿಯ ಹಳೇಪುರ ಗ್ರಾಮದ ಹೆಚ್.ಎಸ್.ಮಹದೇವಯ್ಯ ಬಿನ್ ಸಿದ್ದಯ್ಯ, ಪಶು ಸಂಗೋಪನೆಯಿಂದ ಪಿರಿಯಾಪಟ್ಟದ ಬೆಟ್ಟದಪುರ ಗ್ರಾಮದ ರವಿ ಬಿನ್ ಈರೇಗೌಡ, ವರುಣಾ ಹೋಬಳಿಯ ಮೇಗಳಾಪುರ ಗ್ರಾಮದ ಮಂಜುಳ ಬಿನ್ ಜಗದೀಶ್, ರೇಷ್ಮೆ‌ ಇಲಾಖೆಯಿಂದ ಹುಣಸೂರು ತಾಲ್ಲೂಕಿನಿಂದ ಬಿಳಿಕೆರೆ ಹೋಬಳಿಯ ದಾಸನಪುರ ಗ್ರಾಮದ ಮಹೇಂದ್ರ ಬಿನ್ ಸ್ವಾಮಿಗೌಡ,‌ಕೆ.ಆರ್.ನಗರ ತಾಲ್ಲೂಕಿನ ಕಾಮೇನಹಳ್ಳಿ ಗ್ರಾಮದ ಎನ್. ಶಿವರಾಮೇಗೌಡ ಬಿನ್ ಶಿವಣ್ಣ ಹಾಗೂ ಮೀನುಗಾರಿಕೆಯಿಂದ ತಿ.ನರಸೀಪುರ ತಾಲ್ಲೂಕಿನ ಕೊಡಗಳ್ಳಿ ಗ್ರಾಮದ ದೀಪಿಕಾ ಕೋಂ ಕಿರಣ್ ಕುಮಾರ್ ಅವರನ್ನು ಇದೇ ವೇಳೆ ಸನ್ಮಾನಿಸಲಾಯಿತು.
ಇದೇ ವೇಳೆ  ಗ್ರಾಮೀಣ ಭಾಗಗಳಲ್ಲಿ ಕೃಷಿಗೆ ಸಂಬಂಧಿಸಿದ ಚಟುವಟಿಕೆ ಕುರಿತ ಮಾಹಿತಿ ತಿಳಿಸುವ ಸಲುವಾಗಿ ಕೃಷಿ ಪರಿಸರ ಪ್ರವಾಸೋದ್ಯಮದ ಕೈಪಿಡಿ ಬಿಡುಗಡೆಗೊಳಿಸಲಾಯಿತು. ಕಾರ್ಯಕ್ರಮದಲ್ಲಿ ಗ್ಯಾರೆಂಟಿ ಯೋಜನೆಗಳ ಅನುಷ್ಠಾನದ ರಾಜ್ಯ ಉಪಾಧ್ಯಕ್ಷೆ ಪುಷ್ಪಾವತಿ ಅಮರನಾಥ್, ಶಾಸಕ ಕೆ.ಹರೀಶ್ ಗೌಡ, ದಸರಾ ಉಪ ಸಮಿತಿ ವಿಶೇಷಾಧಿಕಾರಿ ಭೀಮಪ್ಪ ಕೆ.ಲಾಳಿ, ಕಾರ್ಯಾಧ್ಯಕ್ಷ ಕೆ.ಹೆಚ್.ರವಿ, ಅಧ್ಯಕ್ಷ ಕೆ.ಪಿ.ಯೋಗೇಶ್, ಉಪಾಧ್ಯಕ್ಷ ಹರೀಶ್ ಮೊಗಣ್ಣ, ಗೋವಿಂದ ಶೆಟ್ಟಿ, ಶ್ರೀನಿವಾಸ್, ರಘು, ಕೆ.ಎಸ್.ಕೃಷ್ಣಮೂರ್ತಿ, ಉಪ ಕೃಷಿ‌ ನಿರ್ದೇಶಕ ಡಾ.ಬಿ.ಎನ್.ಧನಂಜಯ ಸೇರಿ ಇನ್ನಿತರರು ಪಾಲ್ಗೊಂಡಿದ್ದರು.

Share This Article
Leave a Comment