ಭಾನುಮುಷ್ತಾಕ್‌ ಅವರಿಂದಲೇ ದಸರಾ ಉದ್ಘಾಟನೆ: ಸಚಿವ ಮಹದೇವಪ್ಪ

Pratheek
1 Min Read

ಪಬ್ಲಿಕ್ ಅಲರ್ಟ್


ಮೈಸೂರು: ಬಾನು ಮುಷ್ತಾಕ್ ಅವರನ್ನು ದಸರಾ ಉದ್ಘಾಟನೆ ಮಾಡಲು ಆಹ್ವಾನ ಮಾಡಿದ್ದೇವೆ. ಅವರು ಗೌರವಯುತವಾಗಿ ಬಂದು ದಸರಾ ಉದ್ಘಾಟನೆ ಮಾಡಲಿದ್ದಾರೆ ಎಂದು ದಸರಾ ಉದ್ಘಾಟಕರ ಬದಲಾವಣೆ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್.ಸಿ.ಮಹದೇವಪ್ಪ ಪ್ರತಿಕ್ರಿಯಿಸಿದರು.
ಮೈಸೂರಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ದಸರಾ ಎಂದಿನಂತೆ ಸುಗಮವಾಗಿ, ಸುಲಲಿತವಾಗಿ ಮೈಸೂರಿನ ಸಮಸ್ತ ಜನರ ಸಹಭಾಗಿತ್ವದಲ್ಲಿ ನಡೆಯುತ್ತದೆ. ಬಾನು ಮುಷ್ತಾಕ್ ಅವರನ್ನು ಗೌರವಯುತವಾಗಿ ದಸರಾ ಉದ್ಘಾಟನೆ ಮಾಡಲು ಆಹ್ವಾನಿಸಿದ್ದೇವೆ. ಅವರು ಕೂಡ ಅಷ್ಟೇ ಗೌರವಯುತವಾಗಿ ಬಂದು ದಸರಾವನ್ನು ಉದ್ಘಾಟನೆ ಮಾಡುತ್ತಾರೆ ಎಂದಿದ್ದಾರೆ. ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಬರುವುದು ವಿವಾದದಕ್ಕೀಡಾಗಿದೆ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕಾರ್ಮೋಡಗಳು ಚಲಿಸಿ ಮಾಯವಾಗಲೇಬೇಕು, 22ನೇ ತಾರೀಖಿನಂದು ಅವರು ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.
ವಿರೋಧಿಸುವವರ ಕುರಿತು ನೀವು ಏನು ಹೇಳುವಿರಿ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅದೆಲ್ಲವನ್ನೂ ಬಿಟ್ಟು, ದಸರಾ ಜನರ ಉತ್ಸವ, ಈ ಜನರ ಉತ್ಸವದಲ್ಲಿ ಎಲ್ಲಾ ಸಂಘಟನೆಗಳು, ಧಾರ್ಮಿಕ ಗುಂಪುಗಳು ಮತ್ತು ರಾಜಕೀಯ ಪಕ್ಷಗಳು ಎಲ್ಲರೂ ಸೇರಿ ಸಂತೋಷದಿಂದ ದಸರಾವನ್ನು ಆಚರಣೆ ಮಾಡೋಣ. ಒಂದು ಒಳ್ಳೆ ಸಂದೇಶ ಕಳಿಸೋಣ. ಉದ್ಘಾಟಕರನ್ನು ಬದಲಾಯಿಸುವ ಕೆಲಸ ಏನಾದ್ರು ಆಗಲಿದೆಯೇ? ಇದರ ಬಗ್ಗೆ ವಿಪಕ್ಷದವರೊಂದಿಗೆ ಏನಾದ್ರು ಮಾತುಕತೆ ನಡೆಯುತ್ತಿದೆಯೇ? ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಯಾರೂ ಏನೂ ಮಾತನಾಡಿಲ್ಲ, ಕೆಲವರು ಆ ರೀತಿ ಮಾತನಾಡುತ್ತಾರೆ. ಯಾರೋ ಕೆಲವರು ಹೇಳ್ತಾರೆ, ಅವರು ಹೇಳಿದ ತಕ್ಷಣ ಆ ರೀತಿ ಮಾಡಲು ಆಗುತ್ತಾ? ಎಂದಿದ್ದಾರೆ.
ಕೊನೆ ಕ್ಷಣದಲ್ಲಿ ಅವರನ್ನು ಬದಲಾಯಿಸುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿವೆ ಎಂಬ ಮಾಧ್ಯಮದವರ ಪ್ರಶ್ನೆಗೆ, ಸರ್ಕಾರ ಬಾನು ಮುಷ್ತಾಕ್ ಅವರನ್ನು ಆಹ್ವಾನ ಮಾಡಿದೆ. ಅವರು 22ರಂದು ಉದ್ಘಾಟನೆ ಮಾಡುತ್ತಾರೆ ಎಂದು ಸ್ಪಷ್ಟಪಡಿಸಿದ್ದಾರೆ.

Share This Article
Leave a Comment