ಪಬ್ಲಿಕ್ ಅಲರ್ಟ್
ಮೈಸೂರು: ಚಾಮುಂಡಿಗೆ ಜೈ, ಚಾಮುಂಡಮ್ಮನಿಗೆ ಜೈ ಹೀಗೆ ಗಜಪಡೆಯ ನಾಯಕ ಅಭಿಮನ್ಯು 750 ಕೆಜಿ ತೂಕದ ಚಿನ್ನದ ಅಂಬಾರಿಯಲ್ಲಿನ ನಾಡಿನ ಅಧಿದೇವತೆ ಚಾಮುಂಡೇಶ್ವರಿ ದೇವಿಯನ್ನು ಹೊತ್ತು ಸಾಗುವ ಅಪರೂಪದ ಕ್ಷಣವನ್ನು ಕಣ್ತುಂಬಿಕೊಂಡ ಭಕ್ತ ಸಮೂಹದ ಜಯಘೋಷದೊಂದಿಗೆ ಜಂಬೂ ಸವಾರಿ ಯಶಸ್ವಿಯಾಯಿತು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮ.1ರಿಂದ 1.10ರ ಶುಭ ಧನುರ್ ಲಗ್ನದ ಶುಭ ಮುಹೂರ್ತದಲ್ಲಿ ಕೋಟೆ ಆಂಜನೇಯ ಸ್ವಾಮಿ ದೇಗುಲದ ಬಳಿ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ಅರಮನೆಯೊಳಗೆ ತೆರೆದ ವಾಹನದಲ್ಲಿ ಅರಮನೆ ಆವರಣ ಪ್ರವೇಶಿಸಿ, ಬಳಿಕ ಮೆರವಣಿಗೆಗೆ ಚಾಲನೆ ನೀಡಿದರು.
ಕುಂಭ ಲಗ್ನದಲ್ಲಿ ಪುಷ್ಪಾರ್ಚನೆ: ಸಂಜೆ.4.42ರ ಕುಂಭ ಲಗ್ನ ಶುಭ ಮುಹೂರ್ತದಲ್ಲಿ ಚಿನ್ನದ ಅಂಬಾರಿಯಲ್ಲಿ ಆಸೀನಳಾಗಿರುವ ಚಾಮುಂಡೇಶ್ವರಿ ತಾಯಿಗೆ ಸಿಎಂ ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂ ಸವಾರಿ ಅಧಿಕೃತ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ರಾಷ್ಟ್ರಗೀತೆಯನ್ನು ನುಡಿಸಿ, ಪಿರಂಗಿ ದಳವು 21 ಸುತ್ತು ಕುಶಾಲತೋಪುಗಳನ್ನು ಸಿಡಿಸಿದವು. 6ನೇ ಬಾರಿಗೆ ಅಭಿಮನ್ಯು ಚಿನ್ನದ ಅಂಬಾರಿಯನ್ನು ಹೊತ್ತರೆ, ಅಭಿಮನ್ಯುಗೆ ಕುಮ್ಕಿ ಆನೆಗಳಾಗಿ ಕಾವೇರಿ ಮತ್ತು ರೂಪಾ ಸಾಥ್ ನೀಡಿದವು.
ವಿಜಯದಶಮಿ ಮೆರವಣಿಗೆಯಲ್ಲಿ58 ಸ್ತಬ್ಧಚಿತ್ರಗಳು, 125ಕ್ಕೂ ಹೆಚ್ಚು ಕಲಾತಂಡಗಳು ಹಾಗೂ 14 ಆನೆಗಳ ಗಜಪಡೆ, ಅಶ್ವಾರೋಹಿ ಪಡೆ ಹಾಗೂ ಪೊಲೀಸ್ ಬ್ಯಾಂಡ್‌ಗಳು ಭಾಗವಹಿಸಿದ್ದವು. 6ನೇ ಬಾರಿ ಕ್ಯಾಪ್ಟನ್ ‘ಅಭಿಮನ್ಯು’ ಅಂಬಾರಿ ಹೊತ್ತು ಕೆ.ಆರ್.ವೃತ್ತ, ಸಯ್ಯಾಜಿರಾವ್ ರಸ್ತೆ, ಆಯುರ್ವೇದಿಕ್ ವೃತ್ತ, ಬಂಬೂ ಬಜಾರ್ ಮೂಲಕ ಬನ್ನಿಮಂಟಪದವರೆಗೆ ಸುಮಾರು 5 ಕಿ.ಮೀ. ದೂರ ಸಾಗಿ ಯಶಸ್ವಿಯಾಯಿತು. ನಿಶಾನೆ ಆನೆಯಾಗಿ ಧನಂಜಯ ಹಾಗೂ ನೌಪತ್ ಆನೆಯಾಗಿ ಗೋಪಿ ಕಾರ್ಯ ನಿರ್ವಹಿಸಿದವು.
48 ಸಾವಿರ ಆಸನ ವ್ಯವಸ್ಥೆ: ಬೆಂಗಳೂರಿನಲ್ಲಿಆರ್‌ಸಿಬಿ ವಿಜಯೋತ್ಸವದಲ್ಲಿಕಾಲ್ತುಳಿತ ಪ್ರಕರಣ ನಡೆದಿರುವುದರಿಂದ ಈ ಬಾರಿ ಎಚ್ಚೆತ್ತುಕೊಂಡು ಆಸನಕ್ಕೆ ತಕ್ಕಂತೆ ಪಾಸ್ ವ್ಯವಸ್ಥೆ ಮಾಡಲಾಗಿತ್ತು. ಅರಮನೆ ಆವರಣದಲ್ಲಿ48 ಸಾವಿರ ಮಂದಿ ಕೂರಲು ಆಸನ ವ್ಯವಸ್ಥೆ ಮಾಡಲಾಗಿತ್ತು. ಕಳೆದ ಬಾರಿ 59,600 ಆಸನ ವ್ಯವಸ್ಥೆ ಕಲ್ಪಿಸಲಾಗಿತ್ತು. ಈ ಬಾರಿ 11,600 ಆಸನ ವ್ಯವಸ್ಥೆ ಕಡಿತಗೊಳಿಸಿ, ಜಂಬೂ ಸವಾರಿ ಸಾಗುವ ಮಾರ್ಗದಲ್ಲಿರಸ್ತೆ, ಇಕ್ಕೆಲಗಳಲ್ಲಿಪೆಂಡಾಲ್ ಹಾಕಿ ಆಸನದ ವ್ಯವಸ್ಥೆ ಮಾಡಲಾಗಿದೆ. ಗೋಲ್ಡ್ ಕಾರ್ಡ್, ವಿವಿಐಪಿ, ವಿಐಪಿ ಪಾಸ್‌ವುಳ್ಳವರಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿತ್ತು
ಪೊಲೀಸರ ಹರಸಾಹಸ: ಜಂಬೂ ಸವಾರಿ ಭದ್ರತೆಗೆ ಒಟ್ಟು 6184 ಮಂದಿ ನಿಯೋಜನೆ ಮಾಡಲಾಗಿತ್ತು. ಈ ಪೈಕಿ ಐದು ಎಸ್ಪಿ, 35 ಡಿವೈಎಸ್ಪಿ, 140 ಸರ್ಕಲ್ ಇನ್‌ಸ್ಪೆಕ್ಟರ್, 35 ಕೆಎಸ್‌ಆರ್‌ಪಿ, 15 ಸಿಎಆರ್, ಡಿಎಆರ್, 29 ಎಎಸ್ಸಿ ತಂಡ, 1 ಗರುಡ ಪೊಲೀಸ್, 1 ಆರ್‌ಎಎಫ್, 1700 ಹೋಂ ಗಾರ್ಡ್‌ಗಳನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ಅರಮನೆಯ ಭದ್ರತಾ ದೃಷ್ಟಿಯಿಂದ ಕಮಾಂಡೋ ಪಡೆ ತುಕಡಿಗಳನ್ನು ನೇಮಿಸಲಾಗಿತ್ತು. ಆದರೆ, ಜಂಬೂ ಸವಾರಿ ವೀಕ್ಷಣೆಗೆ ನಿರೀಕ್ಷೆಗೂ ಮೀರಿದ ಜನಸಂದಣಿ ಸೇರಿದ ಹಿನ್ನೆಲೆಯಲ್ಲಿ ರಸ್ತೆಯೂದ್ದಕ್ಕೂ ಜನರನ್ನು ಪೊಲೀಸರು ನಿಯಂತ್ರಿಸಲು ಹರಸಾಹಸ ಪಟ್ಟರು. ಅಲ್ಲದೆ, ಕೋಟೆ ಆಂಜನೇಯ ಸ್ವಾಮಿ ದೇವಾಲಯದ ವೃತ್ತ, ನಾಲ್ವಡಿ ವೃತ್ತ, ಆಯುರ್ವೇದಿಕ್ ವೃತ್ತಕ್ಕೆ ಚಾಮುಂಡೇಶ್ವರಿಯ ಉತ್ಸವಮೂರ್ತಿಯನ್ನು ಹೊತ್ತ ಅಭಿಮನ್ಯು ಬರುತ್ತಿದ್ದಂತೆ ಜನಸಮೂಹವೇ ನುಗ್ಗಲಾರಂಭಿಸಿತು. ಈ ವೇಳೆ ಪೊಲೀಸರು ಅವರನ್ನು ನಿಯಂತ್ರಿಸಲು ಪರದಾಡಿದರು.
ಡ್ರೋನ್ ಕಣ್ಗಾವಲು: ಭದ್ರತೆ ದೃಷ್ಟಿಯಿಂದ 30,614 ಸಿಸಿ ಕ್ಯಾಮೆರಾಗಳ ಜತೆಗೆ, ಹೆಚ್ಚುವರಿಯಾಗಿ ಅರಮನೆ, ಬನ್ನಿಮಂಟಪ ಮೈದಾನ, ಮೆರವಣಿಗೆ ಮಾರ್ಗ, ಇತರ ಪ್ರಮುಖ ಸ್ಥಳಗಳಲ್ಲಿ200 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. 32 ಅಗ್ನಿಶಾಮಕ ದಳ, 26 ಆಂಬ್ಯುಲೆನ್ಸ್‌ಗಳನ್ನು ನಿಯೋಜನೆಯೊಂದಿಗೆ ಹೆಚ್ಚುವರಿ ಡ್ರೋಣ್ ಗಳ ಮೂಲಕ ಜನರ ಮೇಲೆ ಹದ್ದಿನ ಕಣ್ಣು ಇಡಲಾಗಿತ್ತು.









ಮೈಸೂರು ಕನ್ನಡ ವೇದಿಕೆ ಕಾರ್ಯಕರ್ತರು ಉಚಿತ ಮಜ್ಜಿಗೆ ನೀರು ವಿತರಿಸಿದರು. ವಾಸವಿ ಸೇವಾ ಸಂಘದಿಂದಲೂ ಬಿಸ್ಕತ್, ಜ್ಯೂಸ್ ವಿತರಿಸಿದರು. ಮೆರವಣಿಗೆಯಲ್ಲಿ ಹೆಚ್ಚುವರಿ ಅಂಬುಲೆನ್ಸ್ ಗಳನ್ನು ಇರಿಸಿಕೊಂಡು ಅಗತ್ಯ ಎಚ್ಚರಿಕೆ ಕೈಗೊಳ್ಳಲಾಯಿತು.
ಬಾಕ್ಸ್
ಕಟ್ಟಡದ ಮೇಲೆ ಕಣ್ಗಾವಲು:
ಶಿಥಿಲ ಕಟ್ಟಗಳಾದ ಲ್ಯಾನ್ಸ್ ಡೌನ್ ಕಟ್ಟಡ, ದೇವರಾಜ ಮಾರುಕಟ್ಟೆ ಸೇರಿ ಅನೇಕ ಕಟ್ಟಡಗಳ ಮೇಲೆ ಯಾರು ಸಹ ಮೇಲೆರದಂತೆ ಪೊಲೀಸರು ಮುನ್ನೆಚ್ಚರಿಕೆ ಕ್ರಮ ಕೈಗೊಂಡರು. ಜತೆಗೆ ಮೆರವಣಿಗೆಯ ಸಾಗುವ ಎರಡು ಬದಿಯಲ್ಲಿ ಹೆಚ್ಚಿನ ಜನಸಂದಣಿ ಸೇರದಂತೆ ನಾಲ್ಕು ಸುತ್ತಿನಲ್ಲೂ ಜನರ ನಿಯಂತ್ರಿಸಿದರು. ಹೀಗಾಗಿ ಯಾರು ಸಹ ಮರವೇರಲಿಲ್ಲ. ಆದರೆ, ನಗರ ಬಸ್ ನಿಲ್ದಾಣದ ಮುಂಭಾಗದಲ್ಲಿ ಕಿಕ್ಕಿರಿದು ಸೇರಿದ ಜನರನ್ನು ನಿಯಂತ್ರಿಸಲು ಪೊಲೀಸರು ಪರದಾಡಿದರು. ಜಯಚಾಮರಾಜೇಂದ್ರ ವೃತ್ತ, ನಾಲ್ವಡಿ ವೃತ್ತ, ಆಯುವೇರ್ದಿಕ್ ವೃತ್ತಗಳಲ್ಲಿ ಕೆಲ ಮಕ್ಕಳ ಅಸ್ವಸ್ಥರಾದದ್ದನ್ನು ಅರಿತು ಮಹಿಳೆಯರು, ಮಕ್ಕಳು ವೃತ್ತದೊಳಗೆ ಕೂರಲು ಅವಕಾಶ ಕಲ್ಪಿಸಿಕೊಟ್ಟರು.
ಬಾಕ್ಸ್
ಕಾಣದ ವಿದೇಶಿಗರು
ಇದೇ ಮೊದಲ ಬಾರಿಗೆ ಜಂಬೂ ಸವಾರಿ ಮೆರವಣಿಗೆಯಲ್ಲಿ ಯಾರು ಸಹ ವಿದೇಶಿಗರು ಕಾಣ ಸಿಗಲಿಲ್ಲ. ಅಲ್ಲದೆ, ಬಹುತೇಕರು ತಾಲೀಮನ್ನೇ ನೋಡಿ ಖುಷಿ ಪಟ್ಟಿದ್ದರಿಂದ ಹಾಗೂ ಬೆಳಿಗ್ಗೆಯಿಂದ ಸಂಜೆವರೆಗೂ ಕಾಯಲು ಆಗದ ಹಿನ್ನೆಲೆಯಲ್ಲಿ ಈ ಬಾರಿ ಒಬ್ಬರೂ ವಿದೇಶಿಗರಲ್ಲದೇ ಜಂಬೂ ಸವಾರಿ ನಗುತ ಸಾಗಿತು.
ಬಾಕ್ಸ್
ಅರ್ಜುನನಿಗಿದು ಕೊನೆ ದಸರಾ
ಆರನೇ ಭಾರಿ ಯಶಸ್ವಿಯಾಗಿ ೭೫೦ ಕೆಜಿ ತೂಕದ ಅಂಬಾರಿ ಹೊತ್ತ ಅಭಿಮನ್ಯು ೬೦ ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಮುಂದಿನ ಬಾರಿ ಅಂಬಾರಿ ಹೊರುವುದು ಅನುಮಾನವಾಗಿದೆ. ಈ ಹಿನ್ನೆಲೆಯಲ್ಲಿ ಇದೇ ಆತನ ಕೊನೆ ಮೆರವಣಿಗೆಯಾಗಿತ್ತು. ಮಾವುತ ವಸಂತ ಜನರತ್ತ ತಿರುಗಿ ಕೈ ಬಿಸಿ ಚಾಮುಂಡೇಶ್ವರಿಯ ದರ್ಶನ ಮಾಡಿಸಿದರು. ಮತ್ತೊಂದೆಡೆ ನಿಶಾನೆ ಆನೆಗಳ ತಂಡದಲ್ಲಿ ಜನ ಭೀಮಾ ಭೀಮಾ ಎನ್ನುತ್ತಿದ್ದಂತೆ ಎಕಲವ್ಯನ ಆದಿಯಾಗಿ ಎಲ್ಲಾ ಆನೆಗಳು ಸೊಂಡಿಲೆತ್ತಿ ಜನರಿಗೆ ಖುಷಿ ಪಡಿಸಿದವು. ನಗರ ಬಸ್ ನಿಲ್ದಾಣದವರೆಗೂ ಬಂದ ಶ್ರೀಕಂಠ ಕೊಂಚ ಮುಂದೆ ಬರಲು ಹಿಂಜರಿದ ಅನಂತರ ಸರಾಗವಾಗಿ ಬನ್ನಿಮಂಟಪ ತಲುಪುವ ಮೂಲಕ ಎಲ್ಲಾ ೧೪ ಆನೆಗಳು ಯಶಸ್ವಿಯಾದವು.
