ಪ್ರತಿಭಾ ಕವಿಗೋಷ್ಠಿಯಲ್ಲಿ ಜಾನಪದ ಕಲರವ

Pratheek
2 Min Read

ಪಬ್ಲಿಕ್ ಅಲರ್ಟ್


ಮೈಸೂರು: ದಸರಾ ಕವಿಗೋಷ್ಠಿಯಲ್ಲಿ ಇದೇ ಮೊದಲ ಬಾರಿಗೆ ವಿವಿಧ ಜನಪದಗಳ ಕಾವ್ಯವಾಚನ ಹಾಗೂ ಗಾಯನಕ್ಕೆ ವೇದಿಕೆ ಕಲ್ಪಿಸಿದ್ದು, ಪ್ರತಿಭಾ ಕವಿಗೋಷ್ಠಿಯಲ್ಲಿ ಈ ನೆಲದ ಮಣ್ಣಿನ ಮಕ್ಕಳು ಕಟ್ಟಿದ ಜಾನಪದ, ಗೀಗಿಪದ, ಲಾವಣಿ ಪದ,  ಸೋಬಾನೆ ಪದ, ಅಣಕುಪದ, ಪಾಡ್ದನಗಳ ಹದಪಾಕವೇ ಹರಿಯಿತು.  ಗೋಷ್ಠಿಗೆ ಆಗಮಿಸಿದ್ದ ಜಾನಪದ ಆರಾಧಕರು  ಇದರ ಸವಿ ಸವಿದು ಖುಷಿಪಟ್ಟರು.
ದಸರಾ ಮಹೋತ್ಸವ ಅಂಗವಾಗಿ ಮಾನಸ ಗಂಗೋತ್ರಿಯ ಕನ್ನಡ ಅಧ್ಯಯನ ಸಂಸ್ಥೆಯ ಬಿ.ಎಂ.ಶ್ರೀ ಸಭಾಂಗಣದಲ್ಲಿ  ನಡೆಯುತ್ತಿರುವ  ಪಂಚ ಕಾವ್ಯದೌತಣ ಕವಿಗೋಷ್ಠಿಯಲ್ಲಿ ನಾಲ್ಕನೇ ದಿನವಾದ ಶುಕ್ರವಾರ ಜರುಗಿದ ಪ್ರತಿಭಾ ಕವಿಗೋಷ್ಟಿಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ 16 ವಿವಿಧ ಜನಪದ ಕಾವ್ಯವಾಚಕರು ಹಾಗೂ ಗಾಯಕರು ಕಂಸಾಳೆ, ತಂಬೂರಿ, ತಾಳ, ಮದ್ದಳೆಗಳ ಸಂಗೀತದೊಂದಿಗೆ ಸರಸ-ಸಲ್ಲಾಪ, ಬಸುರಿ ಬಯಕೆ, ಜರಿವ ಪದ, ಒಗಟು ಪದ, ತುಳುನಾಡಿನ ದೈವ ಪದ, ಮಲೆ ಮಾದಪ್ಪ, ಬಿಳಿಗಿರಿರಂಗಪ್ಪನ ಮೇಲಿನ ಪದಗಳ ಜನಪದದ ವಿವಿಧ ಪ್ರಕಾರಗಳ ಗಾಯನಕ್ಕೆ ನೆರೆದಿದ್ದವರು ಕುಳಿತಲ್ಲೆ ತಲೆದೂಗಿದರು.

ನಂಜನಗೂಡಿನ ಲೇಖಕಿ ಡಾ.ಎನ್. ಕೆಂಪಮ್ಮ  ಸರಸ-ಸಲ್ಲಾಪ ಕುರಿತ  ‘ ಸೆರಗ ಬಿಡು ರಂಗಯಗ್ಯಾ.. ರಂಗ …, ಕೃಷ್ಣೇಗೌಡ ಕಿಲಾರ ರವರ “ಬಸುರಿ ಬಯಕೆ’ ಕುರಿತ ಜಾನಪದ, ಕುಮಾರ ರವರ ‘ಎಂತಾ ಕುದುರೆಯ ನಾ.. ಕೊಂಡುಕೊಂಡೆ…, ಜಯಂತಿರವರು ತುಳುನಾಡಿನ ದೈವಗಳ ಹುಟ್ಟಿನ ಸಂದಿ ಪಾಡ್ದನ ‘ಡೆನ್ನಾನೋ… ಡೆನ್ನಾನೊ…’, ಡಾ.ಜೀವನಸಾಬ ವಾಲೀಕರ ರವರು ಹಾಡಿದ ಬಸವಣ್ಣನವರ ಕುರಿತು ತಾಯಿಯೊಬ್ಬಳು ಕಟ್ಟಿ ಹಾಡಿದ ಲಾವಣಿ ಪದವು  ಮನರಂಜಿಸಿತು.
ಕಿರುತೆರೆಯ ಸರಿಗಮಪ ಸಂಗೀತ ಕಾರ್ಯಕ್ರಮದ ಜೂರಿಯಾಗಿರುವ ಹಾಗೂ ನಾಟಕ ನಿರ್ದೇಶಕರಾದ ದೇವಾನಂದ ವರಪ್ರಸಾದ ರವರು ಕನ್ನಡದ ಪ್ರಸಿದ್ದ ಗಾದೆಗಳನ್ನು ಪದವಾಗಿಸಿದ ಗೀತೆ,  ನರಸಿಂಹಮೂರ್ತಿ ರವರು ಮಲೆಮಹದೇಶ್ವರ ಕುರಿತ ‘ ಮಾದಪ್ಪನ ಬೆಟ್ಡಕ್ಕೆ ಹೊಗೋಣ ಬನ್ನಿ… ಮಾದಪ್ಪನ ಸೇವೆ ಮಾಡೋಣ ಬನ್ನಿ … ‘ ಗಾಯನಕ್ಕೆ ಪ್ರೇಕ್ಷಕರ ಕಡೆಯಿಂದ  ಉಘೇ ಮಾದಪ್ಪ… ಎಂಬ ಘೋಷವಾಕ್ಯ, ಶಿಳ್ಳೆ, ಚಪ್ಪಾಳೆಗಳ ಸುರಿಮಳೆಯಾಯಿತು.
ಕಹಳೆ ಊದುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜನಪದ ವಿದ್ವಾಂಸ ಹಾಗೂ ಪ್ರಸಾರಂಗ ನಿರ್ದೇಶಕ ಪ್ರೊ.ನಂಜಯ್ಯ ಹೊಂಗನೂರು, ಜ್ಞಾನ, ವಿಜ್ಞಾನ, ತಂತ್ರಜ್ಞಾನದ ಮೂಲ ಜನಪದವೇ ಆಗಿದೆ.  ಜನಪದಗಳು ಸರಳ, ಸ್ಪಷ್ಟ ಹಾಗೂ ನೇರವಾಗಿರುತ್ತದೆ. ಜನಪದ ಹಾಡುಗಾರರು ಈ  ನೆಲದ ಅರಿವನ್ನು ವಿಸ್ತರಿಸುತ್ತಾರೆ. ಇವರಿಗೆ ಈ ಹಿಂದೆ ವೇದಿಕೆ ಇರಲಿಲ್ಲ, ಗ್ರಾಮದ ಓಣಿ, ಯಾರದೋ ಮನೆ ಜಗುಲಿ, ಅರಳಿ ಕಟ್ಟೆಯೇ ವೇದಿಯಾಗಿತ್ತು. ಜನರು ಜೋಳಿಗೆಗೆ ಹಾಕುವ ರಾಗಿ, ಜೋಳ, ಅಕ್ಕಿಯೆ ಸಂಭಾವನೆಯಾಗಿತ್ತು. ಆದರೆ 20 ವರ್ಷದಿಂದೇಚೆಗೆ ಜನಪದ ಹಾಡುಗಾರಿಗೆ ವಿದೇಶದಲ್ಲೂ ವೇದಿಕೆ ಸಿಗುತ್ತಿವೆ. ಆಕರ್ಷಕ ಸಂಭಾವನೆ ಜೊತೆಗೆ ಸ್ಥಾನ ಮಾನವೂ ಸಿಗುತ್ತಿರುವುದು ಖುಷಿಯ ವಿಚಾರ ಎಂದರು.
ಕಾರ್ಯಕ್ರಮದಲ್ಲಿ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಪ್ರೊ.ಡಿ.ಕೆ.ರಾಜೇಂದ್ರವಹಿಸಿ, ಮುಖ್ಯ ಅತಿಥಿಯಾಗಿ ಪ್ರೊ. ಶೈಲಜಾ ಹಿರೇಮಠ್, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಹಾಗೂ ಕವಿಗೋಷ್ಟಿಯ ಉಪಸಮಿತಿಯ ಕಾರ್ಯದರ್ಶಿ ಪ್ರೊ. ಎನ್.ಕೆ.ಲೋಲಾಕ್ಷಿ, ಕಾರ್ಯದರ್ಶಿಗಳಾದ ಚೇತನ್ ಕುಮಾರ್, ಅಧಿಕಾರೇತರ ಸಮಿತಿಯ ಅಧ್ಯಕ್ಷ ಸುರೇಶ್, ಉಪಾಧ್ಯಕ್ಷೆ ಮನೋನ್ಮಣಿ ಸೇರಿ ಇತರರು ಹಾಜರಿದ್ದರು.

Share This Article
Leave a Comment