ಡಿಕೆಶಿಗೆ ಅವಕಾಶ ಸಿಗುವ ನಿರೀಕ್ಷೆಯಿದೆ: ವಿಶ್ವನಾಥ್‌

Pratheek
3 Min Read

ಪಬ್ಲಿಕ್ ಅಲರ್ಟ್


ಮೈಸೂರು: ರಾಜ್ಯದಲ್ಲಿ 136 ಸ್ಥಾನ ಬರಲು ಡಿ.ಕೆ.ಶಿವಕುಮಾರ್ ಪಾತ್ರ ಇದೆ. ಆದ್ದರಿಂದ ಹೈಕಮಾಂಡ್ ಡಿ.ಕೆ.ಶಿವಕುಮಾರ್ಗೆ ಅವಕಾಶ ಕೊಡುತ್ತಾರೆ ಎಂಬ ನಿರೀಕ್ಷೆ ಇದೆ ಎಂದು ವಿಧಾನ ಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌ ವಿಶ್ವಾಸ ವ್ಯಕ್ತಪಡಿಸಿದರು.
ನಗರದ ಜಲದರ್ಶಿನಿಯಲ್ಲಿ ಸುದ್ದಿಗೋಷ್ಠಿ ನಡೆಸಿ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಪಕ್ಷ ಕಟ್ಟಿಲ್ಲ. ಆದರೆ ಅಧಿಕಾರ ಅನುಭವಿಸುತ್ತಿದ್ದಾರೆ. ಹೀಗಿದ್ದರೂ ಶಾಸಕರ ಬೆಂಬಲವೇ ಮುಖ್ಯ ಎನ್ನುವ ಮೂಲಕ ಹೈಕಮಾಂಡ್ ಅನ್ನೇ ಬ್ಲಾಕ್‌ಮೇಲ್ ಮಾಡುತ್ತಿದ್ದಾರೆ. ಹಿಂದೆ ಎಸ್.ಎಂ.ಕೃಷ್ಣ ಸಿಎಂ ಆಗುತ್ತೇನೆ ಎಂದುಕೊಂಡು ಲಾರಿಗಳಲ್ಲಿ ಜನ ಕರೆಸಿದ್ದರು. ಆಗಿನ ಎಐಸಿಸಿ ಪ್ರಧಾನ ಕಾರ್ಯದರ್ಶಿ ಸಭೆಗೆ ಬಂದು 10 ನಿಮಿಷ ಭಾಷಣ ಮಾಡಿದರು. ಜೇಬಿನಲ್ಲಿದ್ದ ಚೀಟಿ ತೆಗೆದು ವೀರಪ್ಪ ಮೊಯ್ಲಿ ಸಿಎಲ್‌ಪಿ ನಾಯಕ ಎಂದು ಘೋಷಿಸಿದರು. ಎಸ್.ಎಂ.ಕೃಷ್ಣ ಅವರೂ ಮೊಯ್ಲಿ ಅವರನ್ನು ಅಪ್ಪಿ ಶುಭ ಕೋರಿದರು. ಅಂದರೆ, ಕಾಂಗ್ರೆಸ್‌ನಲ್ಲಿ ಹೈಕಮಾಂಡ್ ನಿರ್ಧಾರವೇ ಅಂತಿಮ. ಶಾಸಕರ ಅಭಿಪ್ರಾಯ, ಬೆಂಬಲವನ್ನೆಲ್ಲ ಕೇಳಿಕೊಂಡು ಕೂರಲ್ಲ ಎಂದು ಮಾರ್ಮಿಕವಾಗಿ ನುಡಿದರು. ನಾಯಕತ್ವ ಬದಲಾವಣೆ ವಿಚಾರದಲ್ಲಿ ಕಾಂಗ್ರೆಸ್ ಹೈಕಮಾಂಡ್ ನಿರ್ಧಾರ ಅಂತಿಮವಾಗಲಿದೆ. ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಬೆಳೆಸಿದ್ದು, ಅವರನ್ನು ಮುಖ್ಯಮಂತ್ರಿ ಮಾಡುವ ವಿಶ್ವಾಸ ಹೊಂದಿದ್ದೇನೆ ಎಂದರು.
“ಎಸ್ ಎಸ್ ಎಲ್ ಸಿ ಮತ್ತು ಪಿಯು ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಪಾಸ್ ಅಂಕಗಳನ್ನು ಶೇ.33ಕ್ಕೆ ಇಳಿಸಿರುವುದು ಬುದ್ದಿಗೇಡಿಗಳ ತೀರ್ಮಾನ. ಇದು ವಿದ್ಯಾರ್ಥಿಗಳ ಉತ್ಸಾಹ ಹಾಗೂ ಭವಿಷ್ಯವನ್ನು ಹಾಳು ಮಾಡುತ್ತದೆ. ಈ ಬಾರಿ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಶೇ 33 ಅಂಕ ತೆಗೆದರೆ ಪಾಸಾಗಬಹುದು ಎಂಬ ರಾಜ್ಯ ಸರ್ಕಾರದ ನಿರ್ಧಾರ ಬುದ್ದಿಗೇಡಿತನದ್ದು. ಇದರಿಂದ ವಿದ್ಯಾರ್ಥಿಗಳಲ್ಲಿ ಉತ್ಸಾಹ ಕಡಿಮೆಯಾಗುತ್ತದೆ. ಇದು ಸರಿಯಲ್ಲ. ಮುಖ್ಯವಾಗಿ ಕೆಲವು ಸರ್ಕಾರಿ ಉದ್ಯೋಗಗಳಿಗೆ ಹಾಗೂ ಖಾಸಗಿ ಉದ್ಯೋಗಗಳಿಗೆ ಅರ್ಜಿ ಹಾಕಲು ಶೇ.50ರಷ್ಟು ಅಂಕ ಪಡೆದಿರಲೇಬೇಕು ಎಂಬ ನಿಯಮವಿದೆ. ಈ ನಿಯಮದಿಂದ ಶೇ.33ರಷ್ಟು ಅಂಕ ಪಡೆಯದ ವಿದ್ಯಾರ್ಥಿಗಳ ಗತಿ ಏನು” ಎಂದು ಪ್ರಶ್ನಿಸಿದರು.
ಸರ್ವೆ ಕಾರ್ಯಕ್ರಮಗಳಿಂದ ಶಿಕ್ಷಕರು ಆ ಕಡೆ ಬ್ಯಸಿ ಆಗಿದ್ದು, ಶಾಲೆಗಳು ಬಂದ್ ಆಗಿವೆ. ಇದರಿಂದ ವಿದ್ಯಾರ್ಥಿಗಳಿಗೆ ಪಾಠ ಹಾಗೂ ಮಧ್ಯಾಹ್ನದ ಊಟ ಇಲ್ಲದೇ ತೊಂದರೆ ಆಗಿದೆ. ಈ ಸರ್ಕಾರ ಹಾಗೂ ಕಾಂಗ್ರೆಸ್ ದಿವಾಳಿ ಆಗಿದೆ. ಯಾವುದೇ ವಿಚಾರವನ್ನು ಚರ್ಚೆ ಮಾಡದೇ ತೀರ್ಮಾನ ಮಾಡುತ್ತಿದ್ದಾರೆ. ಇನ್ನು ಮುಖ್ಯಮಂತ್ರಿಗಳು ಯಾರ ಮಾತನ್ನೂ ಕೇಳುತ್ತಿಲ್ಲ. ಎಲ್ಲರೂ ದುಡ್ಡಿನ ಹಿಂದೆ ಓಡುತ್ತಿದ್ದಾರೆ. ಹೇಳುವವರು ಕೇಳುವವರು ಯಾರೂ ಇಲ್ಲ” ಎಂದು ಟೀಕಿಸಿದರು.”ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಧೂಳೀಪಟವಾಗಿದೆ. ಪೊಲೀಸರು ವರ್ಗಾವಣೆಗೆ ಹಣ ಕೊಡಬೇಕು. ಒಂದು ಎಸಿಪಿ ವರ್ಗಾವಣೆಗೆ ಒಂದು ಕೋಟಿ ರೂಪಾಯಿ ಕೊಡಬೇಕಾದ ಸ್ಥಿತಿಯಿದೆ ಎಂದರು.
ಬೆದರಿಕೆ ಕರೆ ಶುದ್ಧ ಸುಳ್ಳು: ರಾಜ್ಯದಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗಳನ್ನು ನಿರ್ಬಂಧಿಸುವಂತೆ ಸಿಎಂ ಸಿದ್ದರಾಮಯ್ಯಗೆ ಸಚಿವ ಪ್ರಿಯಾಂಕ್ ಖರ್ಗೆ ಪತ್ರ ಬರೆದಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಹೆಚ್.ವಿಶ್ವನಾಥ್, ಆರ್‌ಎಸ್‌ಎಸ್ ನಿಂದ ರಾಜ್ಯದಲ್ಲಿ ಯಾವ ಅನಾಹುತ ಆಗಿದೆ ಹೇಳಿ? ಹಾಗಾದರೆ ಯೂತ್ ಕಾಂಗ್ರೆಸ್ ಏನು? ಅಲ್ಲಿ ಏನೇನು ನಡೆಯುತ್ತಿದೆ? ನಿಮ್ಮಪ್ಪನಂತೆ ಒಳ್ಳೆಯ ಕೆಲಸ ಮಾಡು ಎಂದು ಜನ ನಿನ್ನನ್ನು ಗೆಲ್ಲಿಸಿದ್ದಾರೆ. ಆದರೆ ನೀನು ಕೆಲಸಕ್ಕೆ ಬಾರದ ವಿಚಾರ ಮಾತನಾಡಿಕೊಂಡು ರಾಷ್ಟ್ರೀಯ ನಾಯಕ ಎಂದು ಬಿಂಬಿಸಿಕೊಳ್ಳಲು ಹೊರಟಿದ್ದೀಯ ಎಂದು ಗುಡುಗಿದರು.
ಮಲ್ಲಿಕಾರ್ಜುನ ಖರ್ಗೆ ಮಗನಿಗೆ ಯಾರು ಬೆದರಿಕೆ ಹಾಕುತ್ತಾರೆ. ಇದು ಬರೀ ಸುಳ್ಳಿನಿಂದ ಕೂಡಿದೆ. ನಾನು ಸಹ ಸಿದ್ದರಾಮಯ್ಯ ವಿರುದ್ಧ ಎಷ್ಟೊಂದು ಟೀಕೆಗಳನ್ನು ಮಾಡಿದ್ದೇನೆ. ಆದರೆ ಇದುವರೆಗೂ ಯಾರೊಬ್ಬರೂ ನನಗೆ ಕರೆ ಮಾಡಿ ಬೆದರಿಕೆ ಹಾಕಿಲ್ಲ, ಪ್ರಶ್ನೆ ಮಾಡಿಲ್ಲ. ಆದರೆ ಪ್ರಿಯಾಂಕ್ ಖರ್ಗೆ ಬೆದರಿಕೆ ಕರೆ ಬಂದಿದೆ ಎಂದು ಹೇಳಿರುವುದು ಶುದ್ಧ ಸುಳ್ಳು ಎಂದು ವಾಗ್ದಾಳಿ ನಡೆಸಿದರು.
ಎಸಿಪಿಗೆ 1 ಕೋಟಿ ರೂ.: ಮೈಸೂರಿನಲ್ಲಿ ಮಾತ್ರವಲ್ಲ, ರಾಜ್ಯದಲೇ ಕಾನೂನು ಸುವ್ಯವಸ್ಥೆ ಹಾಳಾಗಿದೆ. ಮೈಸೂರಿಗೆ ಎಸಿಪಿ ಆಗಿ ಬರಬೇಕಾದರೆ 1 ಕೋಟಿ ರೂ. ಕೊಡಬೇಕು. ಇನ್ಸ್ಪೆಕ್ಟರ್ ಆಗಲು 75 ಲಕ್ಷ, ಐಎಸ್ ಆಗಲು 50 ಲಕ್ಷ ರೂ. ಕೊಡಬೇಕು. ಇಷ್ಟು ಹಣ ಕೊಟ್ಟು ಬಂದ ಪೊಲೀಸ್ ಅಧಿಕಾರಿ ಸಹಜವಾಗಿಯೇ ಕಳ್ಳತನ ಮಾಡಿಸಿಯೇ ಕೊಟ್ಟ ಹಣ ವಸೂಲಿ ಮಾಡಿಕೊಳ್ಳುತ್ತಾನೆ ಎಂದು ವಾಗ್ದಾಳಿ ನಡೆಸಿದರು.

Share This Article
Leave a Comment