ಪಬ್ಲಿಕ್ ಅಲರ್ಟ್
ರಾಮನಗರ: ರಾಜ್ಯದೆಲ್ಲೆಡೆ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಗೆ ಸಂಬಂಧಿಸಿದಂತೆ ನಾನಾ ಚರ್ಚೆ, ವಾದ-ವಿವಾದಗಳು ನಡೆಯುತ್ತಿರುವ ಈ ಹೊತ್ತಿನಲ್ಲೇ ಏಳೇ ದಿನಕ್ಕೆ ತನಗೆ ನೀಡಿದ ಸಮೀಕ್ಷೆ ಪೂರ್ಣಗೊಳಿಸಿದ ಶಿಕ್ಷಕಿ ಕಾರ್ಯ ಮೆಚ್ಚಿದ ಜಿಲ್ಲಾಧಿಕಾರಿಗಳ ಸ್ವತಃ ತಮ್ಮ ಸ್ವಂತ ಖರ್ಚಿನಲ್ಲಿ ಉಡೂಗೊರೆ ನೀಡಿರುವ ಅಚ್ಚರಿ ಬೆಳವಣಿಗೆಗೆ ರಾಮನಗರ ಸಾಕ್ಷಿಯಾಗಿದೆ.
ಹೌದು ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಅಂಬಾಡಹಳ್ಳಿಯ ಯು.ಜಿ.ಎಚ್.ಪಿ.ಎಸ್ (ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ) ಯ ಸಹ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಶಾಂತಮ್ಮ ಎಂಬುವವರೇ ಇಂತಹದೊಂದು ಉಡೂಗೊರೆ ಪಡೆದವಾಗಿದ್ದಾರೆ. ರಾಜ್ಯ ಸರ್ಕಾರದಿಂದ ಕೈಗೊಳ್ಳಲಾಗಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಕಾರ್ಯವನ್ನು ಕೇವಲ 7 ದಿನಗಳಲ್ಲಿಯೇ ಪೂರ್ಣಗೊಳಿಸಿ 100ರಷ್ಟು ಸಾಧನೆ ಮಾಡಿದ್ದು, ಅವರನ್ನು ಜಿಲ್ಲಾಡಳಿತದ ವತಿಯಿಂದ ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ತಮ್ಮ ಕಚೇರಿಯಲ್ಲಿ ಅಭಿನಂದಿಸಿ, ವೈಯಕ್ತಿಕವಾಗಿ 1,001 ರೂ.ಗಳ ನಗದು ಬಹುಮಾನದ ಉಡೂಗೊರೆ ನೀಡಿ ಗೌರವಿಸಿದ್ದಾರೆ.
ಜಿಲ್ಲಾಧಿಕಾರಿಗಳ ಅಭಿನಂದನಾ ಪತ್ರದಲ್ಲಿ ಸಮೀಕ್ಷೆಗಾಗಿ ನೀಡಿದ್ದ ಚನ್ನಪಟ್ಟಣ ತಾಲ್ಲೂಕಿನ ಹೊಡಿಕೆ ಹೊಸಹಳ್ಳಿ, ಚನ್ನಂಕೇಗೌಡನದೊಡ್ಡಿ ಹಾಗೂ ಗೋವಿಂದೇಗೌಡನದೊಡ್ಡಿಯಲ್ಲಿ 86 ಮನೆಗಳ ಸಮೀಕ್ಷಾ ಕಾರ್ಯವನ್ನು ಕೇವಲ 7 ದಿನಗಳಲ್ಲಿಯೇ ಶೇ. 100 ರಷ್ಟು ಪೂರ್ಣಗೊಳಿಸಿ ನಿಗಧಿತ ಅವಧಿಗೂ ಮೊದಲೇ ಸಮೀಕ್ಷಾ ಕಾರ್ಯವನ್ನು ಪೂರ್ಣಗೊಳಿಸಿರುತ್ತೀರಿ. ಸಮೀಕ್ಷೆಯಲ್ಲಿ ನೀವು ತೋರಿದ ಆಸಕ್ತಿ, ಉತ್ಸಾಹ ಮತ್ತು ಪ್ರಾಮಾಣಿಕ ಪ್ರಯತ್ನವು ಸಮೀಕ್ಷೆ ಕಾರ್ಯ ತ್ವರಿತವಾಗಿ ಸಾಗಲು ಸಹಕಾರಿಯಾಗಿದೆ. ಸಮೀಕ್ಷಾ ಕಾರ್ಯಕ್ಕೆ ನೀವು ನೀಡಿದ ಸಹಕಾರ ಮತ್ತು ಉತ್ಸಾಹವನ್ನು ಜಿಲ್ಲಾಡಳಿತವು ಪ್ರಶಂಸಿಸುತ್ತದೆ ಹಾಗೂ ತಮ್ಮ ಈ ಕಾರ್ಯಶ್ರದ್ದೆಗೆ ನನ್ನ ಸ್ವಂತ ಹಣದಿಂದ ಸ್ವ ಇಚ್ಚೆಯಾಗಿ 1,001 ರೂ.ಗಳನ್ನು ನೀಡಿ ಶ್ಲಾಘಿಸುತ್ತದೆ ಎಂದರು.
ಸಮೀಕ್ಷಾ ಕಾರ್ಯದಲ್ಲಿ ತಾವು ತೋರಿಸಿದ ಉತ್ಸಾಹ ಮತ್ತು ಪ್ರಯತ್ನ ಇತರರಿಗೂ ಮಾದರಿಯಾಗಿದ್ದು, ತಮ್ಮ ಪ್ರಾಮಾಣಿಕ ಪ್ರಯತ್ನ ಮತ್ತು ಸಹಕಾರ ಮುಂದಿನ ದಿನಗಳಲ್ಲಿಯೂ ಇದೇ ರೀತಿಯ ಕಾರ್ಯಕ್ಷಮತೆಯನ್ನು ಜಿಲ್ಲಾಡಳಿತವು ತಮ್ಮಿಂದ ಬಯಸುತ್ತದೆ ಎಂದು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಶಿಕ್ಷಕಿಯ ಪತಿ ಶಿವರಾಜ್ ಉಪಸ್ಥಿತರಿದ್ದರು.
7ದಿನಕ್ಕೆ ಸಮೀಕ್ಷೆ ಪೂರ್ಣಗೊಳಿಸಿದ ಶಿಕ್ಷಕಿ: ಡಿಸಿಯೇ ಮೆಚ್ಚಿ ಕೊಟ್ಟರು ಉಡೂಗೊರೆ
Leave a Comment
Leave a Comment
