ಈರೇಗೌಡಗೆ ದೀಪಾವಳಿ ಊಡುಗೊರೆ 
ಮೈಮುಲ್‌ ನಾಳೆಯೇ ಅವಿರೋಧ ಆಯ್ಕೆ, ಐದು ತಿಂಗಳ ಅವಧಿಗೆ ಅಧಿಕಾರ

Pratheek
2 Min Read

ಪಬ್ಲಿಕ್ ಅಲರ್ಟ್

ಮೈಸೂರು: ಮೈಸೂರು ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ನಿಯಮಿತದ ಅಧ್ಯಕ್ಷಗಾದಿ ವಿಚಾರವಾಗಿ ಸರ್ಕಾರ ಈರೇಗೌಡರಿಗೆ ದೀಪವಾಳಿ ಊಡುಗೊರೆ ನೀಡಿದ್ದು, ನಾಳೆ ನಡೆಯುವ ಮೈಮುಲ್‌ ಚುನಾವಣೆಯಲ್ಲಿ ಮುಂದಿನ ಐದು ತಿಂಗಳಿಗೆ ಅಧ್ಯಕ್ಷರಾಗಿ ಈರೇಗೌಡರು ಅಧ್ಯಕ್ಷರಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.
2021ರಲ್ಲಿ ನಡೆದಿದ್ದ ಮೈಮುಲ್‌ ನಿರ್ದೇಶಕರ ಚುನಾವಣೆಯಲ್ಲಿ ಜಿ.ಟಿ.ದೇವೇಗೌಡ ಬಣ ಗೆಲುವು ಸಾಧಿಸಿತ್ತು. ನಂತರ ನಡೆದ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಪಿರಿಯಾಪಟ್ಟಣ ಶಾಸಕರಾಗಿದ್ದ ಕೆ.ಮಹದೇವ ಅವರ ಪುತ್ರ ಪಿ. ಎಂ.ಪ್ರಸನ್ನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದರು. ಆದರೆ, ಆಂತರಿಕ ವಿಚಾರ ಮುಂದಿಟ್ಟು 2024ರ ಆಗಸ್ಟ್‌ನಲ್ಲಿ ಪ್ರಸನ್ನ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು.
ತೆರವಾದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಆರ್.ಚಲುವರಾಜು ಆ.೨೭ರಂದು ಅವಿರೋಧವಾಗಿ ಆಯ್ಕೆಯಾಗಿದ್ದರು. ಈ ವೇಳೆ ಆರ್‌. ಚಲುವರಾಜು ಹಾಗೂ ಕೆ.ಈರೇಗೌಡರ ನಡುವೆ ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ಉಂಟಾಗಿದ್ದರಿಂದ ವರಿಷ್ಠರು ಅಧಿಕಾರ ಹಂಚಿಕೆ ಸೂತ್ರ ರಚನೆ ಮಾಡಿದ್ದರು. ಹೀಗಾಗಿ ಸೆ.9ರಂದು ಆರ್. ಚಲುವರಾಜು ರಾಜೀನಾಮೆ ನೀಡಿದ್ದರಿಂದ ಅಧ್ಯಕ್ಷ ಸ್ಥಾನ ಖಾಲಿ ಉಳಿದಿತ್ತು.
ಸಿಎಂ ತೀರ್ಮಾನ: ನಗರದ ಖಾಸಗಿ ಹೋಟೆಲ್‌ನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ನಿರ್ದೇಶಕರ ಸಭೆಯಲ್ಲಿ ಚರ್ಚಿಸಿದ ಬಳಿಕ, ಅಧಿಕಾರದ ಹಂಚಿಕೆ ಒಪ್ಪಂದದ ಪ್ರಕಾರ ಉಳಿದ ಅವಧಿಗೆ ಕೆ.ಈರೇಗೌಡರನ್ನು ಅಧ್ಯಕ್ಷರನ್ನಾಗಿಸಲು ತೀರ್ಮಾನಿಸಲಾಯಿತು.
ಸಭೆಯಲ್ಲಿ ಮಾತನಾಡಿದ ಎಚ್.ಡಿ.ಕೋಟೆ ಕ್ಷೇತ್ರದ ಶಾಸಕ ಅನಿಲ್ ಚಿಕ್ಕಮಾದು ಅವರು, ಕಳೆದ ಬಾರಿ ಚುನಾವಣೆ ನಡೆದಾಗ ಈರೇಗೌಡರು ಪ್ರಬಲ ಆಕಾಂಕ್ಷಿಯಾಗಿದ್ದರು. ಆದರೆ ಅವಕಾಶ ಸಿಗದಿದ್ದರಿಂದ ಅಧಿಕಾರ ಹಂಚಿಕೆ ಮಾಡಲಾಗಿತ್ತು. ಈಗ ಅವರಿಗೆ ಅಧಿಕಾರ ಬಿಟ್ಟುಕೊಡಬೇಕು. ನಿರ್ದೇಶಕರು ಒಗ್ಗಟ್ಟಿನಿಂದ ಅವರನ್ನು ಆಯ್ಕೆ ಮಾಡಬೇಕು ಎಂದು ಕೋರಿದರು. ನಿರ್ದೇಶಕರು ತಮ್ಮ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು.
ಸಚಿವ ಡಾ.ಎಚ್.ಸಿ.ಮಹದೇವಪ್ಪ, ಈ ಹಿಂದೆ ಆಗಿರುವ ಒಪ್ಪಂದದಂತೆ ಕೆ. ಈರೇಗೌಡರಿಗೆ ಅವಕಾಶ ಮಾಡಿಕೊಡ ಬೇಕಾಗಿದೆ. ಸಿಎಂ ಸಿದ್ದರಾಮಯ್ಯ ಕೂಡ ಮುಂದೆ ಈರೇಗೌಡರಿಗೆ ಅವಕಾಶ ನೀಡಬೇಕು. 
ಎಂದು ಸೂಚಿಸಿದ್ದರು. ಇದಕ್ಕೆ ಎಲ್ಲ ನಿರ್ದೇಶಕರೂ ಒಪ್ಪಿ ಕೊಂಡಿದ್ದರು. ಹಾಗಾಗಿ ಯಾವುದೇ ಗೊಂದಲಕ್ಕೆ ಅವಕಾಶ ಇಲ್ಲದಂತೆ ಈರೇಗೌಡರ ಅವಿರೋಧ ಆಯ್ಕೆಗೆ ಸಹಕರಿಸಬೇಕೆಂದು ಸಲಹೆ ನೀಡಿದರು. ಮೈಮುಲ್ ಮಾಜಿ ಅಧ್ಯಕ್ಷರಾದ ಆರ್. ಚೆಲುವರಾಜು, ಸಿ.ಓಂಪ್ರಕಾಶ್, ಕೆ.ಜಿ.ಮಹೇಶ್, ನಿರ್ದೇಶಕರಾದ ಕೆ.ಈರೇಗೌಡ, ಮೈಸೂರು ತಾಲ್ಲೂಕಿನ ಬಿ.ಗುರುಸ್ವಾಮಿ, ಕೆ.ಆರ್.ನಗರ ತಾಲ್ಲೂಕಿನ ಮಲ್ಲಿಕಾ ರವಿಕುಮಾರ್, ಪಿರಿಯಾಪಟ್ಟಣದ ಪ್ರಕಾಶ್, ನೀಲಾಂಬಿಕೆ ಮಹೇಶ್ ಮೊದಲಾದವರೆಲ್ಲರೂ ಉಪಸ್ಥಿತರಿದ್ದರು. 

ಬಾಕ್ಸ್‌
ಮೈಮುಲ್ ಅಧ್ಯಕ್ಷ ಸ್ಥಾನದ ಚುನಾವಣೆಗೆ ಸಂಬಂಧಿಸಿದಂತೆ ನಿರ್ದೇಶಕರ ಸಭೆ ಕರೆದು ಚರ್ಚಿಸಲಾಗಿದೆ. ಈ ಮೊದಲು ಆಗಿರುವ ಒಪ್ಪಂದದಂತೆ ಕೆ. ಈರೇಗೌಡರಿಗೆ ಅಧ್ಯಕ್ಷ ಸ್ಥಾನ ಬಿಟ್ಟುಕೊಡುವಂತೆ ತೀರ್ಮಾನಿಸಿ ಅವಿರೋಧವಾಗಿ ಆಯ್ಕೆ ಮಾಡುವಂತೆ ಸೂಚಿಸಲಾಗಿದೆ.
-ಡಾ.ಎಚ್.ಸಿ.ಮಹದೇವಪ್ಪ, ಸಮಾಜ ಕಲ್ಯಾಣ ಸಚಿವರು

ನಾಳೆ ಚುನಾವಣೆ 
ಮೈಮುಲ್‌ ನಲ್ಲಿ ಈಗಾಗಲೇ ಅ.೨೩ರಂದು ಚುನಾವಣೆ ನಿಗಧಿಯಾಗಿದ್ದು, ಅಂತಿಮವಾಗಿ ಈರೇಗೌಡರೊಬ್ಬರೇ ನಾಮಪತ್ರ ಸಲ್ಲಿಸಿ ಅವಿರೋಧವಾಗಿ ಆಯ್ಕೆಯಾಗುವುದು ಬಹುತೇಕ ಕಚಿತವಾಗಿದೆ. ಮಾತ್ರವಲ್ಲದೆ, ನಾಮ ನಿರ್ದೇಶಿತ ಸದಸ್ಯರಾದ ಬಿ.ಗುರುಸ್ವಾಮಿ ಸಹ ಆಕಾಂಕ್ಷಿಯಾಗಿದ್ದರು. ಆದರೆ, ನಾಮ ನಿರ್ದೇಶಿತರ ಆಯ್ಕೆ ಮಾಡಿ ಹೊಸ ಸಂಪ್ರದಾಯ ಬರೆಯುವುದು ಬೇಡವೆಂಬ ಹಿತದೃಷ್ಠಿಯಿಂದ ಇವರ ಮನವೊಲಿಸಿದ್ದಾರೆನ್ನಲಾಗಿದೆ. ೨೦೨೬ ಮಾರ್ಚ್‌ ವೇಳೆ ಎಲ್ಲರ ಅಧಿಕಾರವಧಿ ಮುಗಿಯಲಿದ್ದು, ಹೀಗಾಗಿ ಐದು ತಿಂಗಳ ಕಾಲ ಅಧ್ಯಕ್ಷರಾಗಿ ಉಳಿಯಲಿದ್ದಾರೆನ್ನಲಾಗಿದೆ. 

Share This Article
Leave a Comment