ಪಬ್ಲಿಕ್ ಅಲರ್ಟ್
ಮೈಸೂರು: ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮ ಮೈಸೂರಿನಲ್ಲಿ ಮನೆ ಮಾಡಿದ್ದು, ಮನೆ ಮನಕೆ ಬೆಳಕು ಚೆಲ್ಲುವ ಬಗೆಬಗೆಯ ಹಣತೆಗಳು, ಪಟಾಕಿ, ಅಗತ್ಯ ವಸ್ತುಗಳ ಖರೀದಿ ನಗರದ ಮಾರುಕಟ್ಟೆಗಳಲ್ಲಿ ಜೋರಾಗಿ ನಡೆಯಿತು.
ಬೆಳಕಿನ ಹಬ್ಬದ ಸಂಭ್ರಮದಲ್ಲಿರುವ ಮೈಸೂರಿಗರು ಸೋಮವಾರ ನರಕ ಚತುರ್ದಶಿಯನ್ನು ಸಂಭ್ರಮದಿಂದ ಆಚರಿಸಿದ್ದು, ಬುಧವಾರದ ಬಲಿಪಾಡ್ಯಮಿಗೆ ಸಿದ್ಧತೆ ಮಾಡಿಕೊಂಡರು. ನಗರದ ಪ್ರಮುಖ ಮಾರುಕಟ್ಟೆಗಳಾದ ದೇವರಾಜ ಮಾರುಕಟ್ಟೆ, ಮಂಡಿ ಮಾರ್ಕೆಟ್, ವಾಣಿವಿಲಾಸ ಮಾರುಕಟ್ಟೆ, ಧ್ವನಂತ್ರಿ ರಸ್ತೆ, ಅಗ್ರಹಾರ ವೃತ್ತ, ನಂಜುಮಳಿಗೆ, ಜೆಕೆ ಮೈದಾನದ ರಸ್ತೆ ಸೇರಿದಂತೆ ನಗರದ ನಾನಾ ರಸ್ತೆ ಹಾಗೂ ರಸ್ತೆ ಬದಿಗಳಲ್ಲಿ ಬೆಳಗ್ಗೆಯಿಂದಲೇ ಸಾರ್ವಜನಿಕರು ಹಬ್ಬದ ಉತ್ಸಾಹದಲ್ಲಿ ಹಬ್ಬಕ್ಕೆ ಬೇಕಾದ ಹಣ್ಣು, ಹೂವು, ತರಕಾರಿ, ಪೂಜಾ ಸಾಮಗ್ರಿ ಖರೀದಿಸಿದರು.
ಹಬ್ಬದ ವೇಳೆ ಮನೆಯನ್ನು ಬೆಳಗುವ ಹಣತೆಗಳಿಗೆ ಎಳ್ಳೆಣ್ಣೆ ಹಾಕಿ ಸಾಲು ಸಾಲಾಗಿ ಜೋಡಿಸಿ ದೀಪ ಬೆಳಗುವುದು ಸಂಪ್ರದಾಯ. ಸದ್ಯ ಮಾರುಕಟ್ಟೆಯಲ್ಲಿರುವ ಪರಿಸರ ಸ್ನೇಹಿ ಮಣ್ಣಿನ ಹಣತೆಗಳಿಗೆ ಹೆಚ್ಚಿನ ಬೇಡಿಕೆ ಇದ್ದು, ಹೆಚ್ಚಿನ ವ್ಯಾಪಾರ ವಹಿವಾಟು ನಡೆಯಿತು. ಹಬ್ಬಕ್ಕೆ ನಾಲ್ಕೈದು ದಿನ ಇರುವಾಗಲೇ ವಿವಿಧ ಬಗೆಯ ಆಕೃತಿಯ ಹಣತೆಗಳು ಮಾರುಕಟ್ಟೆಗೆ ಬಂದಿವೆ. ಪ್ರಮುಖವಾಗಿ ಶಂಖುವಿನಾಕಾರ, ಆನೆ ಮೇಲಿರುವ ಹಣತೆ, ಒಂಟೆ ಹಣತೆ, ಕುದುರೆ ಮೇಲಿರುವ ಹಣತೆ, ಗಿಳಿ ಮೇಲೆ, ನಕ್ಷತ್ರಾಕಾರ, ಬುಟ್ಟಿಯಾಕಾರ, ಕಮಲ ಹೂವಿನಾಕಾರ, ಗುಲಾಬಿಯಾಕಾರ, ಸ್ತ್ರೀಯರು ಸ್ವಾಗತಿಸುತ್ತಿರುವ ಹಣತೆ, ಪಿಂಗಾಣಿ ಹಣತೆ, ಗ್ಲಾಸ್‌ನಿಂದ ತಯಾರಿಸಿರುವ ಹಣತೆ, ಮಣ್ಣಿನ ಹಣತೆ ಹೀಗೆ ವಿವಿಧ ಬಗೆಯ ಹಣತೆಗಳು ಮಾರುಕಟ್ಟೆಯಲ್ಲಿ ಭರ್ಜರಿಯಾಗಿ ಮಾರಾಟವಾದವು.
ಏರಿಕೆಯಾಗದ ಹೂವಿನ ದರ: ಸಾಮಾನ್ಯವಾಗಿ ಹಬ್ಬಗಳು ಬಂತೆಂದರೆ ಹೂವಿನ ದರ ಗಗನಕ್ಕೇರುತ್ತದೆ. ಆದರೆ, ದೀಪಾವಳಿಗೆ ಹೆಚ್ಚಾಗಿ ಹೂವನ್ನು ಬಳಸದಿರುವುದರಿಂದ ದರ ಹೆಚ್ಚು ಏರಿಕೆಯಾಗಿಲ್ಲ. ಸೇವಂತಿಗೆ ಒಂದು ಮಾರಿಗೆ ೫೦-೮೦ ರೂ, ಚಂಡು ಹೂ ಕೆಜಿಗೆ ೪೦, ಕನಕಾಂಬರ ಮಾರಿಗೆ ೧೫೦, ಕಾಕಡ ೫೦ ರೂ, ಮಲ್ಲಿಗೆ ೧೫೦ ರೂ, ಗುಲಾಬಿ ಕೆಜಿಗೆ ೨೦೦ ರೂ, ತಾವರೆ ೨ಕ್ಕೆ ೫೦ ರೂಗೆ ಮಾರಾಟವಾಯಿತು. ತರಕಾರಿ ದರವೂ ಏರಿಕೆಯಾಗಿರಲಿಲ್ಲ. ತೆಂಗಿನಕಾಯಿ ೩೦-೪೦ ರೂ, ಬೀನ್ಸ್ ೬೦, ಕ್ಯಾರೆಟ್ ೪೦, ಬೀಟ್ರೋಟ್ ೪೦, ಬದನೆಕಾಯಿ ೪೦, ಕೋಸು ೨೦, ಕ್ಯಾಪ್ಸಿಕಂ ೬೦, ನುಗ್ಗೆ ೧೦೦ ರಿಂದ ೧೨೦, ಹುಳಿ ಟೊಮೆಟೊ ೩೦ ರೂಗೆ ಮಾರಾಟವಾಯಿತು.
ಪಟಾಕಿ ಖರೀದಿ ಜೋರು: ಬೆಲೆ ಏರಿಕೆ ನಡುವೆಯೂ ಪಟಾಕಿ ಖರೀದಿ ಜೋರಾಗಿ ನಡೆಯುತ್ತಿದೆ. ನಗರದ ಹೆಬ್ಬಾಳು ಕೈಗಾರಿಕಾ ಪ್ರದೇಶ, ಜೆಕೆ ಮೈದಾನ, ಇಟ್ಟಿಗೆಗೂಡು, ಸರಸ್ವತಿಪುರಂ, ಪಡುವಾರಹಳ್ಳಿ, ಚಾಮುಂಡಿಪುರಂ, ನಂಜುಮಳಿಗೆ, ರಾಮಕೃಷ್ಣನಗರ, ಕುವೆಂಪುನಗರ, ಅಕ್ಷಯಭಂಡಾರ, ಕುಂಬಾರಕೊಪ್ಪಲು ಸೇರಿದಂತೆ ನಗರದ ವಿವಿಧೆಡೆ ತೆರೆದಿರುವ ಮಳಿಗೆಗಳಲ್ಲಿ ಪಟಾಕಿಯ ವ್ಯಾಪಾರ ಭರ್ಜರಿಯಾಗಿ ನಡೆಯಿತು.
ಬಾಕ್ಸ್
ಪೌರಕಾರ್ಮಿಕರಿಗೆ ದೀಪ ವಿತರಣೆ
ಚಾಮುಂಡಿಪುರಂನಲ್ಲಿ ನಗರಪಾಲಿಕೆ ಮಾಜಿ ಸದಸ್ಯ ಮಾ.ವಿ.ರಾಮಪ್ರಸಾದ್ ೫೫ರ ತಗಡೂರು ರಾಮಚಂದ್ರ ರಾವ್ ಉದ್ಯಾನವನದಲ್ಲಿ, ಪೌರಕಾರ್ಮಿಕರಿಗೆ ದೀಪಗಳನ್ನು ವಿತರಿಸುವ ಮೂಲಕ ವಿಶಿಷ್ಟ ರೀತಿಯಲ್ಲಿ ದೀಪಾವಳಿ ಹಬ್ಬ ಆಚರಿಸಿದರು. ನಂತರ ಮಾತನಾಡಿದ ಅವರು, ಯಾವ ಹಬ್ಬವಿದ್ದರೂ ನಮ್ಮ ಪೌರಕಾರ್ಮಿಕರು ಮೊದಲು ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಾರೆ. ಅವರು ನಗರವನ್ನು ಸ್ವಚ್ಛಗೊಳಿಸಿ, ಹಬ್ಬದ ವಾತಾವರಣ ಸೃಷ್ಟಿಸಿದ ನಂತರವೇ ತಮ್ಮ ಮನೆಯಲ್ಲಿ ಹಬ್ಬ ಆಚರಿಸುತ್ತಾರೆ. ಅವರು ತಮ್ಮ ಕೆಲಸದಲ್ಲಿಯೇ ದೇವರನ್ನು ಕಾಣುತ್ತಾರೆ. ಇಂತಹ ನಿಸ್ವಾರ್ಥ ಸೇವಕರೊಂದಿಗೆ ದೀಪಾವಳಿ ಹಬ್ಬ ಆಚರಣೆ ಮಾಡಿದ್ದು ನಮಗೆ ಸಂತಸ ತಂದಿದೆ ಎಂದು ತಿಳಿಸಿದರು. ಶ್ರೀ ರಾಮ ಗೆಳೆಯರ ಬಳಗದ ಅಧ್ಯಕ್ಷ ಸಿ.ಸಂದೀಪ್ ವಾರ್ಡ್ ನಂ ಭಾನುಕುಮಾರ್, ಮಧುಸೂಧನ್, ಪಾರ್ವತಿ, ಸುರೇಶ್ ಉಪಸ್ಥಿತರಿದ್ದರು.
ಬದಲಾದ ಪಟಾಕಿ ಟ್ರೆಂಡ್
ಜಾಗೃತಿಯ ಫಲವಾಗಿ ಕಳೆದ ಕೆಲ ವರ್ಷಗಳಿಂದ ಜನರೇ ಹಸಿರು ಪಟಾಕಿಗಳನ್ನು ಮಾರುಕಟ್ಟೆಯಲ್ಲಿ ಕೇಳುತ್ತಿದ್ದಾರೆ. ಆಕಾಶಬುಟ್ಟಿ, ಕಲರ್‌ಫುಲ್, ಸೌಂಡ್‌ಲೆಸ್ ಪಟಾಕಿಗಳಿಗೆ ಬೇಡಿಕೆ ಬಂದಿದೆ. ಫ್ಲವರ್ ಪಾಟ್, ಕೃಷ್ಣಚಕ್ರ, ಸುರ್‌ಸುರ್ ಬತ್ತಿಯಂತಹ ಪಟಾಕಿಗಳನ್ನೇ ವಿಶೇಷವಾಗಿ ಗಿಫ್ಟ್ ಪ್ಯಾಕ್ ರೂಪದಲ್ಲಿ ಮಾರಾಟ ಮಾಡಲಾಗುತ್ತಿದೆ. ಇದಲ್ಲದೇ ಇತ್ತೀಚೆಗೆ ಆಕಾಶಬುಟ್ಟಿಗೆ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ಮಾರುಕಟ್ಟೆಯಲ್ಲಿಯೂ ಬಣ್ಣ ಬಣ್ಣದ ಆಕಾಶಬುಟ್ಟಿಗಳು ರಾರಾಜಿಸುತ್ತಿವೆ.
ಬಾಕ್ಸ್
ಕೆಆರ್ ಆಸ್ಪತ್ರೆಯಲ್ಲಿ ೧೫ ಹಾಸಿಗೆ
ದೀಪಾವಳಿ ಹಿನ್ನೆಲೆಯಲ್ಲಿ ಪಟಾಕಿ ಸಿಡಿಸಿದ ಸಂದರ್ಭದಲ್ಲಿ ಅನಾಹುತವಾದಲ್ಲಿ ನಗರದ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಇದಕ್ಕಾಗಿ ಆಸ್ಪತ್ರೆಯ ಕಲ್ಲು ಕಟ್ಟಡದ ಸುಟ್ಟಗಾಯಗಳ ವಿಭಾಗದಲ್ಲಿ ೧೫ ಹಾಸಿಗೆಗಳನ್ನು ಮೀಸಲಿರಿಸಲಾಗಿದೆ. ದಿನದ ೨೪ ಗಂಟೆಯೂ ವೈದ್ಯರು ಲಭ್ಯವಿರಲಿದ್ದಾರೆ. ಕಳೆದ ೪ ವರ್ಷಗಳಿಂದ ಪಟಾಕಿ ಅನಾಹುತದ ಒಂದೆರಡು ಪ್ರಕರಣಗಳನ್ನು ಬಿಟ್ಟರೆ ಹೆಚ್ಚಿನ ಪ್ರಕರಣಗಳು ದಾಖಲಾಗಿಲ್ಲ. ಪಟಾಕಿ ಸಿಡಿಸುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿರುವುದರಿಂದ ಅನಾಹುತಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಆದರೂ ಗಾಯಗೊಂಡವರಿಗಾಗಿ ಚಿಕಿತ್ಸೆ ನೀಡಲು ಆಸ್ಪತ್ರೆಯಲ್ಲಿ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ.ಶೋಭಾ ತಿಳಿಸಿದರು.
ಬೆಳಕಿನ ಹಬ್ಬ ಸ್ವಾಗತಿಸಿದ ಮೈಸೂರು
Leave a Comment
Leave a Comment
