ಪಟಾಕಿ ಭರಾಟೆ ಜೋರು: ಮುಗಿಬಿದ್ದ ಮಕ್ಕಳು

Pratheek
1 Min Read

ಪಬ್ಲಿಕ್ ಅಲರ್ಟ್

ಮೈಸೂರು: ಬೆಳಕಿನ ಹಬ್ಬ ದೀಪಾವಳಿ ಸಂಭ್ರಮ ಮೈಸೂರಿನಲ್ಲಿ ಮನೆ ಮಾಡಿದೆ. ಮನೆ ಮನಗಳಿಗೆ ಬೆಳಕು ಚೆಲ್ಲುವ ಬಗೆಬಗೆಯ ಹಣತೆಗಳು, ಪಟಾಕಿ ಮಾರಾಟ ಜೋರಾಗಿದ್ದು, ಮಕ್ಕಳು, ಪೋಷಕರು, ಯುವಕರು ಹಸಿರು ಪಟಾಕಿ ಖರೀದಿಗೆ ಮುಂದಾಗಿದ್ದಾರೆ.
ಈ ಬಾರಿಯೂ ಹಸಿರು ಪಟಾಕಿ ಮಾರಾಟಕ್ಕಷ್ಟೇ ಅವಕಾಶವಿದ್ದು, ನಗರದ ಜೆ.ಕೆ.ಮೈದಾನದಲ್ಲಿ ೧೯ ಸೇರಿ ನಗರದ ವಿವಿಧೆಡೆಗಳಲ್ಲಿ ೧೫೦ಕ್ಕೂ ಹೆಚ್ಚು ಮಳಿಗೆಗಳಿಗೆ ಅನುಮತಿ ನೀಡಲಾಗಿದೆ. ೨೨ರವರೆಗೆ ಪಟಾಕಿ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಹಸಿರು ಪಟಾಕಿಗೆ ಆದ್ಯತೆ ನೀಡಲಾಗಿದೆ. ಜೆ.ಕೆ.ಮೈದಾನದ ಪಟಾಕಿ ಮೇಳದಲ್ಲಿರುವ ಎಲ್ಲ ಮಳಿಗೆಗಳ ಮುಂದೆಯೂ ರಿಯಾಯಿತಿ ದರದಲ್ಲಿ ಹಸಿರು ಪಟಾಕಿ ಮಾರಾಟ ಫಲಕ ರಾರಾಜಿಸುತ್ತಿವೆ. ಗ್ರಾಹಕರನ್ನು ಆಕರ್ಷಿಸಲು ಬಗೆಬಗೆಯ ಪಟಾಕಿಗಳನ್ನು ಜೋಡಿಸಲಾಗಿದೆ. ಬೆಲೆಯೂ ತರಹೇವಾರಿಯಾಗಿದೆ. ಬಾಕ್ಸ್ ಒಳಗಿನ ಪಟಾಕಿಗಳ ಮಾದರಿ, ಸಂಖ್ಯೆ ಆಧಾರದಲ್ಲಿ ಬೆಲೆ ನಿಗದಿಗೊಳಿಸಲಾಗಿದೆ.

೧೦೦ ರೂ.ನಿಂದ ಹಿಡಿದು ೫ ಸಾವಿರ ರೂ.ವರೆಗೂ ಪಟಾಕಿ ಬಾಕ್ಸ್ ಇದ್ದು, ಕಳೆದ ಬಾರಿಗಿಂತ ಈ ಬಾರಿಯೂ ದರದಲ್ಲಿ ಏರುಪೇರು ಕಂಡಿದೆ. ಕೆಲವು ಪಟಾಕಿಗಳ ಬೆಲೆ ಏರಿಕೆಯಾಗಿದೆ. ಈ ಬಾರಿ ಭರ್ಜರಿ ವ್ಯಾಪಾರದ ನಿರೀಕ್ಷೆಯಲ್ಲಿಯದ್ದೇವೆ ಎಂದು ಪಟಾಕಿ ಅಂಗಡಿ ಮಾಲೀಕ ಹಾಗೂ ಪಟಾಕಿ ಮಾರಾಟಗಾರರ ಸಂಘದ ಅಧ್ಯಕ್ಷ ಮರವೆಗೌಡ ತಿಳಿಸಿದರು.
ಈಗಾಗಲೇ ವ್ಯಾಪಾರ ಆರಂಭವಾಗಿದ್ದು, ಬುಧವಾರದವರೆಗೂ ನಡೆಯಲಿದೆ. ಮೊದಲ ಅಷ್ಟೊಂದು ವ್ಯಾಪಾರವಾಗುವುದಿಲ್ಲ. ಸೋಮವಾರದಿಂದ ಹಬ್ಬ ದೀಪಾವಳಿ ಹಬ್ಬ ಆರಂಭವಾಗಲಿದ್ದು, ಅಂದಿನಿಂದ ವ್ಯಾಪಾರ ಚುರುಕುಗೊಳ್ಳಲಿದೆ ಎಂದು ಮಾಹಿತಿ ನೀಡಿದರು.


ಬಾಕ್ಸ್
ಪ್ರತಿ ವರ್ಷದಂತೆ ಈ ಬಾರಿಯೂ ಪರಿಸರ ಸ್ನೇಹಿ ಪಟಾಕಿ ಮಾರಾಟ ಮಾಡುತ್ತಿದ್ದೇವೆ. ಈ ಬಾರಿ ವಿಶೇಷವಾಗಿ ಆರ್ ಸಿಬಿ ಗೆದ್ದ ಹಿನ್ನೆಲೆಯಲ್ಲಿ ಪಟಾಕಿ ಬಾಕ್ಸ್ ಮೇಲೆ ಈ ಸರಿ ಕಪ್ ನಮ್ದೆ ಎಂದೂ ಮತ್ತೊಂದು ಬಾಕ್ಸ್ ನಲ್ಲಿ ಆಪರೇಷನ್ ಸಿಂಧೂರ ಎಂದು ಹೆಸರಿಟ್ಟು ಮಾರಾಟ ಮಾಡುವ ಮೂಲಕ ಇಬ್ಬರಿಗೂ ಗೌರವ ಸೂಚಿಸುತ್ತಿದ್ದೇವೆ.
– ಶರತ್, ಪಟಾಕಿ ಮಾರಾಟಗಾರರು ಮತ್ತು ನಗರಪಾಲಿಕೆ ಮಾಜಿ ಸದಸ್ಯ

Share This Article
Leave a Comment