ಪಬ್ಲಿಕ್ ಅಲರ್ಟ್
ಮೈಸೂರು: ಮಾಜಿ ಸಚಿವ ಸಾ.ರಾ.ಮಹೇಶ್ ಅವರ ಪುತ್ರ ಸಾ.ರಾ.ಜಯಂತ್ ಅವರ ಕುದುರೆ ‘ರೋಲೆಕ್ಸ್’ ಬೆಂಗಳೂರಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕುದುರೆ ಪ್ರದರ್ಶನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಗಳಿಸಿದ್ದು, ಬಹುಮಾನದ ಮೊತ್ತ 1 ಲಕ್ಷ ರೂ.ಗಳನ್ನು ಅತ್ಯಾಚಾರ, ಕೊಲೆಯಾದ ಬಾಲಕಿ ಕುಟುಂಬಕ್ಕೆ ನೀಡಲಾಯಿತು.
ದಟ್ಟಗಳ್ಳಿಯ ತೋಟದ ಮನೆಯಲ್ಲಿ ಕುದುರೆ ರೋಲೆಕ್ಸ್, ಟ್ರೋಫಿ ಪ್ರದರ್ಶನ ಮಾಡಿದ ಕುಟುಂಬದವರು, ಅಲೆಮಾರಿ ಸಮುದಾಯದ ಹೋರಾಟಗಾರ ನಿಂಗರಾಜ ಮಲ್ಲಾಡಿ ಅವರಿಗೆ 1 ಲಕ್ಷ ರೂ. ಡಿಡಿ ಹಸ್ತಾಂತರ ಮಾಡಿದರು.
ಈ ವೇಳೆ ಮಾತನಾಡಿದ ಸಾ.ರಾ.ಮಹೇಶ್, ಮನುಷ್ಯ ಮತ್ತೊಬ್ಬ ಮನುಷ್ಯನನ್ನ ಪ್ರೀತಿಸಿದರೆ ಸ್ವಾರ್ಥ ಇರುತ್ತದೆ. ಆದರೆ ಪ್ರಾಣಿಗಳ ಪ್ರೀತಿಯಲ್ಲಿ ಸ್ವಾರ್ಥವಿಲ್ಲ. ನನ್ನ ಮಗನಿಗೆ ಪ್ರಾಣಿಗಳ ಮೇಲೆ ಪ್ರೀತಿ. ಆತ ಫಲಗಿಸಿದ್ದ ಕುದುರೆ ‘ರೋಲೆಕ್ಸ್’ ಬೆಂಗಳೂರಿನಲ್ಲಿ ನಡೆದ ರಾಯಲ್ಟಿ ಹಾರ್ಸ್ ಶೋ-2025ರಲ್ಲಿ ಅಗ್ರಸ್ಥಾನ ದೊರಕಿದೆ. ಬಹುಮಾನದ ರೂಪದಲ್ಲಿ ಬಂದ ಹಣವನ್ನು ಮೈಸೂರಿನಲ್ಲಿ ಅತ್ಯಾಚಾರ, ಕೊಲೆಯಾದ ಅಪ್ರಾಪ್ತ ಬಾಲಕಿ ಕುಟುಂಬಕ್ಕೆ ನೀಡುತ್ತಿದ್ದೇವೆ ಎಂದರು.
ಪುತ್ರ ಸಾ.ರಾ.ಜಯಂತ್ ಮಾತನಾಡಿ, ರೋಲೆಕ್ಸ್ ಹಿಂದೆ ರಾಜರು ಬಳಸುತ್ತಿದ್ದ ಮಾರ್ವಾರಿ ತಳಿಯ ಕುದುರೆಯಾಗಿದೆ. 6 ತಿಂಗಳ ಮರಿಯಾಗಿದ್ದ ಸಂದರ್ಭದಲ್ಲಿ ರಾಜಸ್ತಾನದಿಂದ ಖರೀದಿ ಮಾಡಿ ಸಾಕಿದ್ದೇವೆ. ಈಗ 28 ತಿಂಗಳಾಗಿದ್ದು, ಏಷ್ಯದಲ್ಲೇ ಎರಡನೇ ಅತಿದೊಡ್ಡ ಹಾರ್ಸ್ ಶೋ ಎನಿಸಿಕೊಂಡಿರುವ ರಾಯಲ್ಟಿ ಹಾರ್ಸ್ ಶೋನಲ್ಲಿ ‘ಟೂ ಟೀತ್ ಕ್ಯಾಟಗರಿ’ಯಲ್ಲಿ ಅಗ್ರಸ್ಥಾನ ಪಡೆದಿದೆ ಎಂದು ತಿಳಿಸಿದರು.
ರೋಲೆಕ್ಸ್ ಚೇಷ್ಠೆ ಸ್ವಭಾವದವನಾಗಿದ್ದು, ಬಾದಾಮಿ, ಸೇಬು, 10 ಲೀಟರ್ ಹಾಲು ಹಾಗೂ 40 ಲೀಟರ್ ನೀರು ನೀಡಿ ಪ್ರೀತಿಯಿಂದ ಸಾಕಿದ್ದೇನೆ. ನಿತ್ಯವೂ ಒಂದು ಗಂಟೆ ಶೋಗಾಗಿ ತಾಲೀಮು ನೀಡುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಪಂಚ ಕಲ್ಯಾಣ ಎಂಬ ಮತ್ತೊಂದು ಕುದುರೆಯನ್ನು ಪ್ರದರ್ಶನಕ್ಕೆ ಕರೆದೊಯ್ಯುವ ಉದ್ದೇಶವಿದೆ ಎಂದು ವಿವರಿಸಿದರು.
ಬಾಕ್ಸ್
ನಾನು ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಪಕ್ಷದಲ್ಲಿ ಜವಾಬ್ದಾರಿ ಸ್ಥಾನದಲ್ಲಿದ್ದೇನೆ. ರೇಸ್, ಜೂಜು, ಮೋಜುಗಳಿಗೆ ಅವಕಾಶ ನೀಡಿಲ್ಲ. ನನ್ನ ಮಗ ಸಾ.ರಾ.ಜಯಂತ್ ಸಾಕಿದ್ದ ಕುದುರೆ ರೋಲೆಕ್ಸ್ ಕುದುರೆ ಪ್ರದರ್ಶನದಲ್ಲಿ ಜಯಗಳಿಸಿದೆ. ಆ ಹಣವನ್ನು ನೊಂದ ಕುಟುಂಬಕ್ಕೆ ನೀಡಿದ್ದು ಸಮಾಧಾನ ನೀಡಿದೆ.
– ಸಾ.ರಾ.ಮಹೇಶ್, ಮಾಜಿ ಸಚಿವ
