ಮೈಸೂರಲ್ಲಿ ಭ್ರೂಣ ಲಿಂಗ ಹತ್ಯೆ ಜಾಲ: ಏಳು ಮಂದಿ ವಿರುದ್ಧ ಎಫ್ ಐಆರ್
ಡಿಎಚ್ ಒ ನೇತೃತ್ವದಲ್ಲಿ ಯಶಸ್ವಿ ದಾಳಿ, ಆರೋಗ್ಯ ಸಚಿವರಿಂದಲೂ ಘಟನೆ ಖಂಡನೆ

Pratheek
3 Min Read

ಪಬ್ಲಿಕ್ ಅಲರ್ಟ್

ಮೈಸೂರು: ಜಿಲ್ಲೆಯಲ್ಲಿ ಭ್ರೂಣ ಲಿಂಗ ಪತ್ತೆ ಮತ್ತು ಹತ್ಯೆ ಕುಕೃತ್ಯ ಬೆಳಕಿಗೆ ಬಂದಿದೆ. ತಾಲೂಕಿನ ಹನುಗನಹಳ್ಳಿ ಹೆದ್ದಾರಿ ಬಳಿಯ ಫಾರಂ ಹೌಸ್ವೊಂದರಲ್ಲಿ ಭ್ರೂಣ ಲಿಂಗ ಪತ್ತೆ ಮಾಡುತ್ತಿದ್ದ ಜಾಲವೊಂದರ ಮೇಲೆ ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳೀಯ ಪೊಲೀಸರೊಂದಿಗೆ ಗರ್ಭಿಣಿಯ ತಪಾಸಣೆ ಮಾಡಿಸುವ ಸೋಗಿನಲ್ಲಿ ದಾಳಿ ನಡೆಸುವ ಮೂಲಕ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹನುಗನಹಳ್ಳಿ ಬಳಿಯ ಫಾರಂ ಹೌಸ್ನಲ್ಲಿ ಭ್ರೂಣ ಪತ್ತೆ ಕಾರ್ಯ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಆರೋಗ್ಯ ಇಲಾಖೆ ಹಾಗೂ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದು, ಪ್ರಕರಣಕ್ಕೆ ಸಂಬಂಧಪಟ್ಟಂತೆ ಏಳು ಜನರ ಮೇಲೆ ಎಫ್ಐಆರ್ ದಾಖಲಿಸಿಕೊಂಡಿದ್ದು, ಐವರನ್ನು ಬಂಧಿಸಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮೈಸೂರಿನ ಶ್ಯಾಮಲಿ, ಕಾರ್ತಿಕ್, ಸ್ವಾಮಿ, ಗೋವಿಂದರಾಜು, ಕೆ.ಸಾಲುಂಡಿಯ ಶಿವಕುಮಾರ್, ಪುಟ್ಟರಾಜು ಹಾಗೂ ಕೆ.ಆರ್.ನಗರದ ಹರೀಶ್ ನಾಯಕ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಭ್ರೂಣಲಿಂಗ ಪತ್ತೆಯ ಸ್ಕ್ಯಾನಿಂಗ್ ಯಂತ್ರ ಹಾಗೂ ಈ ಕೃತ್ಯಕ್ಕೆ ಬಳಸಿದ್ದ ಹಣವನ್ನು ವಶಕ್ಕೆ ಪಡೆಯಲಾಗಿದೆ. ಏಳು ಜನರ ಪೈಕಿ ಇನ್ನಿಬ್ಬರು ನಾಪತ್ತೆಯಾಗಿದ್ದು, ಅವರ ಪತ್ತೆಗೆ ವರುಣಾ ಠಾಣೆ ಪೊಲೀಸರು ಬಲೆ ಬೀಸಿದ್ದಾರೆ.

ಐಷಾರಾಮಿ ಮನೆಯಲ್ಲಿ ಕೃತ್ಯ ಎಸಗುತ್ತಿದ್ದ ಕಿಡಿಗೇಡಿಗಳು ಗ್ರಾಮೀಣ ಭಾಗದ ಮಹಿಳೆಯರನ್ನು ಟಾರ್ಗೆಟ್ ಮಾಡಿದ್ದರು. ಲಕ್ಷ ಲಕ್ಷ ಹಣ ಪಡೆದು ಸ್ಕ್ಯಾನಿಂಗ್ ಮಾಡುತ್ತಿದ್ದ ತಂಡವು, ಹೊಟ್ಟೆಯಲ್ಲಿರುವ ಭ್ರೂಣದ ಲಿಂಗವನ್ನು ಬಹಿರಂಗಪಡಿಸುತ್ತಿದ್ದರು. ನಂತರ ಹೆಣ್ಣು ಭ್ರೂಣವಾದರೆ ಗರ್ಭಪಾತ ಮಾಡುವ ಕೃತ್ಯ ನಡೆಯುತ್ತಿತ್ತು‌‌. ಕೃತ್ಯಕ್ಕೆ ಬಳಸಿದ್ದ ಪರಿಕರಗಳ ಸಮೇತ ವಶ ಪಡಿಸಿಕೊಳ್ಳಲಾಗಿದೆ.

ಕಾರ್ಯಾಚರಣೆಯಲ್ಲಿ ಪಿಸಿಪಿಎನ್‌ಡಿಟಿ ಉಪನಿರ್ದೇಶಕ ವಿವೇಕ್ ದೊರೈ, ಮಂಡ್ಯ ಡಿಹೆಚ್ಒ ಮೋಹನ್ ಕುಮಾರ್, ಕುಟುಂಬ ಕಲ್ಯಾಣಾಧಿಕಾರಿ ಡಾ.ಬೆಟ್ಟಸ್ವಾಮಿ, ಮೈಸೂರು ಡಿಹೆಚ್ಒ ಡಾ. ಪಿ.ಸಿ.ಕುಮಾರಸ್ವಾಮಿ ರೇಡಿಯೊಲಾಜಿಸ್ಟ್ ವಿಜಯಶರಧಿ, ಸಿಬ್ಬಂದಿಗಳಾದ ಅನಿಲ್ ಪಿ.ಥಾಪಸ್, ಎನ್.ಅರುಣ್ ಕುರ್ಮಾ, ಬಿ.ಮಂಗಳಾ, ಪುಟ್ಟಸಿದ್ದಮ್ಮ ಪಾಲ್ಗೊಂಡಿದ್ದರು.

ಬಾಕ್ಸ್
ಜಿಲ್ಲಾ ಆರೋಗ್ಯ ಅಧಿಕಾರಿಗಳ ಪ್ರಕಟಣೆ
ಬನ್ನೂರು ಹೈವೇ ವ್ಯಾಪ್ತಿಯ ಆಸುಪಾಸಿನಲ್ಲಿ ಭ್ರೂಣಲಿಂಗ ಪತ್ತೆ ಕಾರ್ಯ ನಡೆಯುತ್ತಿರುವ ಮಾಹಿತಿಯ ಮೇರೆಗೆ ಕಳೆದ ಎರಡು ತಿಂಗಳಿಂದ ಕಣ್ಗಾವಲು ಇಟ್ಟಿದ್ದ ಮೈಸೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ಬುಧವಾರ ಬೆಳಗ್ಗೆ ಕಾರ್ಯಾಚರಣೆ ನಡೆಸಿ, ಈ ಜಾಲವನ್ನು ಪತ್ತೆ ಹಚ್ಚಿದ್ದಾರೆ.
ಬೆಳಗ್ಗೆ 6.30ಗಂಟೆ ಡಿಕ್ಲೋನ್ ಕಾರ್ಯಾಚರಣೆಯಲ್ಲಿ ಒಂದು ಗರ್ಭಿಣಿಯ ಮೂಲಕ ಬನ್ನೂರು ಹೈವೇಗೆ ಹೊಂದಿಕೊಂಡಿರುವಂತೆ ಹುಣಗನಹಳ್ಳಿ ವ್ಯಾಪ್ತಿಯ ಫಾರಂ ಹೌಸ್ ಒಂದರಲ್ಲಿ ಲಿಂಗ ಭ್ರೂಣ ಪತ್ತೆ ಕಾರ್ಯಚಟುವಟಿಕೆ ನಡೆಸುತ್ತಿರುವುದನ್ನು ಪತ್ತೆ ಮಾಡಲಾಯಿತು.
ಈ ಸಂದರ್ಭದಲ್ಲಿ ಸುಮಾರು ನಾಲ್ವರು ಗರ್ಭಿಣಿಯರು ಲಿಂಗ ಭ್ರೂಣ ಪತ್ತೆಗೆ ಹಾಜರಿರುವುದು ಹಾಗೂ ಸ್ಕ್ಯಾನಿಂಗ್ ಬಳಕೆ ಮಾಡುವ ಉಪಕರಣವು ಕಂಡು ಬಂದಿರುವ ಹಿನ್ನೆಲೆಯಲ್ಲಿ ಹೆರಿಗೆ ಪೂರ್ವ ಭ್ರೂಣ ಲಿಂಗಪತ್ತೆ (ಪಿ.ಸಿ.ಪಿ‌.ಎನ್.ಡಿ.ಟಿ) ಕಾಯ್ದೆ ಅಡಿ ಪ್ರಕರಣವನ್ನು ದಾಖಲು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಪಿ.ಸಿ.ಕುಮಾರಸ್ವಾಮಿ  ತಿಳಿಸಿದ್ದಾರೆ.

ಈ ಕುರಿತು ಮಾತನಾಡಿದ ಡಿಹೆಚ್ಒ ಡಾ. ಪಿ.ಸಿ.ಕುಮಾರಸ್ವಾಮಿ, ಭ್ರೂಣಲಿಂಗ ಪತ್ತೆ ಮಾಡುತ್ತಿದ್ದ ಇಬ್ಬರು ಮಹಿಳೆಯರು ಸೇರಿದಂತೆ 7 ಮಂದಿ ಆರೋಪಿಗಳ ವಿರುದ್ಧ ದೂರು ನೀಡಲಾಗಿದೆ. ಅಲ್ಲದೇ, ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಇದರ ಹಿಂದೆ ಯಾರು ಇದ್ದಾರೆ ಎಂಬುವುದನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಆರೋಗ್ಯ ಸಚಿವರ ಪ್ರತಿಕ್ರಿಯೆ:
ಅಕ್ರಮ ಲಿಂಗ ಪತ್ತೆ ಪರೀಕ್ಷೆಗಳು ಮತ್ತು ಹೆಣ್ಣು ಭ್ರೂಣ ಹತ್ಯೆಯಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಐದು ಜನರನ್ನು ಬಂಧಿಸಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಗುರುವಾರ ತಿಳಿಸಿದ್ದಾರೆ.

ಎಕ್ಸ್ ಪೋಸ್ಟ್ ಮಾಡಿಕೊಂಡಿರುವ ಅವರು, ಬನ್ನೂರು ಹೈವೇ ಬಳಿಯ ಹುಣಗನಹಳ್ಳಿ ಫಾರಂ ಹೌಸ್ನಲ್ಲಿ ಲಿಂಗ ಭ್ರೂಣ ಪತ್ತೆ ಕಾರ್ಯ ನಡೆಯುತ್ತಿರುವುದನ್ನ ಪತ್ತೆ ಹಚ್ಚಲಾಗಿದೆ. ರಹಸ್ಯ ಕಾರ್ಯಾಚರಣೆ ಮೂಲಕ ನಮ್ಮಆರೋಗ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿ ಭ್ರೂಣ ಹಂತಕರನ್ನು ಸೆರೆಹಿಡಿದಿದ್ದಾರೆ.‌ ಗರ್ಭಿಣಿ ಮಹಿಳೆಯ ಸಹಾಯ ಪಡೆದು ಲಿಂಗ ಭ್ರೂಣ ಪತ್ತೆ ಕಾರ್ಯಚಟುವಟಿಕೆ ನಡೆಸುತ್ತಿರುವುದನ್ನು ಪತ್ತೆ ಮಾಡಲಾಗಿದೆ. ಕಾರ್ಯಾಚರಣೆ ವೇಳೆ ನಾಲ್ಕು ಗರ್ಭಿಣಿ ಸ್ತ್ರೀಯರು ಲಿಂಗ ಭ್ರೂಣ ಪತ್ತೆ ಮಾಡಿಸಿಕೊಳ್ಳಲು ಹಾಜರಿರುವುದು ಹಾಗೂ ಸ್ಕ್ಯಾನಿಂಗ್ ಬಳಕೆ ಮಾಡುವ ಉಪಕರಣವು ಕಂಡು ಬಂದಿದೆ. ಹೆರಿಗೆ ಪೂರ್ವ ಭ್ರೂಣ ಲಿಂಗಪತ್ತೆ (ಪಿ.ಸಿ.ಪಿ‌.ಎನ್.ಡಿ.ಟಿ) ಕಾಯ್ದೆ ಅಡಿ ಪ್ರಕರಣವನ್ನು ದಾಖಲು ಮಾಡಲಾಗಿದ್ದು, ಹೆಣ್ಣು ಭ್ರೂಣ ಹತ್ಯೆ ವಿರುದ್ಧ ಆರೋಗ್ಯ ಇಲಾಖೆ ನಿರಂತರ ಹೋರಾಟ ನಡೆಸುತ್ತಿದೆ. ಹೆಣ್ಣು ಭ್ರೂಣ ಹತ್ಯೆ ಒಂದು ಸಾಮಾಜಿಕ ಪಿಡುಗು.. ಸಮಾಜ ಈ ಬಗ್ಗೆ ಜಾಗೃತರಾಗಿ ಭ್ರೂಣ ಹತ್ಯೆಯ ವಿರುದ್ಧ ಸಮರ ಸಾರಲು ಮುಂದಾಗಬೇಕು. ಆರೋಗ್ಯ ಇಲಾಖೆ ಸದಾ ಭ್ರೂಣ ಹಂತಕರ ವಿರುದ್ಧ ಸಹಕರಿಸುವವರ ಜೊತೆಯಿದೆ.‌ ಯಾರು ಎಷ್ಟೇ ದೊಡ್ಡವರಿದ್ದರು, ಹೆಣ್ಣು ಭ್ರೂಣ ಹಂತಕರನ್ನು ಮಟ್ಟಹಾಕಲು ನಮ್ಮ ಸರ್ಕಾರ ಕಠಿಬದ್ಧವಾಗಿದೆ ಎಂದು ಬರೆದುಕೊಂಡಿದ್ದಾರೆ.

Share This Article
Leave a Comment