ಪಬ್ಲಿಕ್ ಅಲರ್ಟ್
ಮೈಸೂರು: ದಸರಾ ಸಡಗರ ಎಲ್ಲೆಡೆ ಮನೆಮಾತಾಗಿದ್ದರೆ ಇತ್ತ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ಫಲಪುಷ್ಪ ಪ್ರದರ್ಶನದಲ್ಲಿ ಬಾಡಿ ಹಾಗೂ ಕಿತ್ತು ಹೋದ ಹೂಗಳ ದರ್ಶನ ಆಗುತ್ತಿದ್ದರೂ ಈ ಬಗ್ಗೆ ಹೇಳೋರು, ಕೇಳೋರೆ ಇಲ್ಲದಂತಾಗಿದೆ.
ದಸರೆಗೆ ಅಧಿಕಾರೇತರ ಉಪಸಮಿತಿಗಳನ್ನು ನೇಮಿಸುವ ಮೂಲಕ ಜನರ ಆಶೋತ್ತರಗಳಿಗೆ ಸ್ಪಂದಿಸಲು ಸರ್ಕಾರ ಸೌಲಭ್ಯ ಕಲ್ಪಿಸುತ್ತದೆ. ಆದರೆ, ಈ ಬಾರಿ ಫಲಪುಷ್ಪ ಪ್ರದರ್ಶನ ಸಮಿತಿಗೆ ಅಧಿಕಾರೇತರ ಸದಸ್ಯರ ನೇಮಕ ಆಗಿಲ್ಲ. ಮಾತ್ರವಲ್ಲದೆ ಅಂಬಾರಿ ಆನೆ ವಿರಳ ಹೂಗಳನ್ನು ಕಾಟಾಚಾರಕ್ಕೆ ಅಂಟಿಸಿರುವುದನ್ನು ನೋಡಬಹುದಾಗಿದೆ. ಅಷ್ಟೇ ಅಲ್ಲದೇ ಈಗಾಗಲೇ ಬಹುತೇಕ ಹೂಗಳು ಬಾಡಿ ಒಣಗಿವೆ. ಹಿಂದೆಯೆಲ್ಲಾ ಹೂಗಳನ್ನು ಮೂರು ದಿನಕ್ಕೊಮ್ಮೆ ಬದಲಾಯಿಸುವ ಕೆಲಸ ಒಮ್ಮೆಲೆ ಮಾಡುತ್ತಿದ್ದರು. ಆದರೆ, ಈ ಬಾರಿ ಆ ಬಗ್ಗೆ ಕೇಳೂವವರೂ ಇಲ್ಲ ಹೇಳುವವರೂ ಇಲ್ಲದಂತಾಗಿದೆ.

ಈ ಹಿನ್ನೆಲೆಯಲ್ಲಿ ಹಿಂದಿಗಿಂತಲೂ ಹೆಚ್ಚಿನ 50 ರೂ. ಕೊಟ್ಟು ಬರುವ ಜನರಿಗೆ ಕೇವಲ ನಿರಾಸೆ ತರಿಸಿದೆ. ಮಾತ್ರವಲ್ಲದೆ, ಉದ್ಯಾನವನದಲ್ಲಿ ವೀರಯೋಧರ ಗೌರವಾರ್ಥ ಮಾಡಿರುವ ಪ್ರತಿಮೆಗಳ ಬಾಗಿ ಹೋಗಿ ಅವರಿಗೆ ಅಗೌರವ ತೋರುತ್ತಿರುವಂತಿದೆ. ಬಾಡಿದ ಹೂಗಳು ಶೀಘ್ರ ಮುಕ್ತಿ ನೀಡಿ ಅ.2ರವರೆಗೆ ಮತ್ತೊಮ್ಮೆ ಹೊಸ ಹೂ ಗಳ ಜೋಡಣೆ ಮಾಡಲಿ ಎಂಬುದು ಪ್ರೇಕ್ಷಕರ ಒತ್ತಾಸೆಯಾಗಿದ್ದು, ಇನ್ನಾದರೂ ಸಂಬಂಧ ಪಟ್ಟ ತೋಟಗಾರಿಕೆ ಇಲಾಖೆಯವರು ಗಮನ ಹರಿಸಲಿ ಎಂಬುದೇ ಸಾರ್ವಜನಿಕರ ಆಗ್ರಹವೂ ಆಗಿದೆ.
