ಪಬ್ಲಿಕ್ ಅಲರ್ಟ್
ಮೈಸೂರು: ವಿಶ್ವವಿಖ್ಯಾತ ದಸರಾ ಮಹೋತ್ಸವ 2025 ಅಂಗವಾಗಿ ರಾಜ್ಯ ಸರ್ಕಾರವು ದಸರಾ ವಸ್ತು ಪ್ರದರ್ಶನದಲ್ಲಿ ಅನೇಕ ಇಲಾಖೆಗಳ ಸಮಗ್ರ ಮಾಹಿತಿ, ಯೋಜನೆ ಹಾಗೂ ಸಾಧನೆಗಳನ್ನು ಅನಾವರಣಗೊಳಿಸುವ ಪ್ರಯತ್ನ ನಡೆಸಿದ್ದು, ಶನಿವಾರ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯು ಜೈವಿಕ ಇಂಧನ ಕ್ಷೇತ್ರದಲ್ಲಿ ಕೈಗೊಂಡಿರುವ ಕಾರ್ಯ ಯೋಜನೆಗಳು ಹಾಗೂ ಮುಂದಿನ ರೂಪುರೇಷೆಗಳ ಕುರಿತು ಮಾಹಿತಿ ಹಾಗೂ ಪ್ರಾತ್ಯಕ್ಷಿಕೆಗಳನ್ನು ಅನಾವರಣ ಮಾಡಲಾಯಿತು.
ನೂತನ ಮಳಿಗೆಯನ್ನು ದಸರಾ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್ ಅಧ್ಯಕ್ಷತೆಯಲ್ಲಿ ಮಂಡಳಿಯ ಅಧ್ಯಕ್ಷ ಎಸ್.ಈ.ಸುಧೀಂದ್ರ ಲೋಕಾರ್ಪಣೆಗೊಳಿಸಿದರು. ಬಳಿಕ ಮಾತನಾಡಿದ ಅವರು, ರಾಜ್ಯದಲ್ಲಿ ಬಯೋ ಡೀಸೆಲ್ ಬಿ100 ಮಾರಾಟಕ್ಕೆ ಮಂಡಳಿಯನ್ನು ನೋಡಲ್ ಏಜೆನ್ಸಿಯನ್ನಾಗಿ ಮಾಡಿರುವುದನ್ನು ಹಾಗೂ ಮುಕ್ತ ಮಾರಾಟಕ್ಕಾಗಿ ರಿಟೇಲ್ ಔಟ್ಲೆಟ್ ಗಳನ್ನು ಸ್ಥಾಪಿಸಲು ಅನುಕೂಲವಾಗುವಂತೆ ಮಾಡುವ ಕುರಿತು ಆದೇಶ ಹೊರಡಿಸುವುದರೊಂದಿಗೆ ಮಾರ್ಗಸೂಚಿಗಳನ್ನು ಸಹ ಹೊರಡಿಸಿರುವುದರ ಕುರಿತು ಪ್ರಸ್ತಾಪಿಸಿದರು. ಮೈಸೂರು ನಗರದಲ್ಲಿನ ತ್ಯಾಜ್ಯ ಸಂಗ್ರಹಣೆ, ಜೈವಿಕ ಇಂಧನ ಉತ್ಪಾದನೆ ಹಾಗೂ ವಿತರಣೆ ಕುರಿತು ದಸರಾ ವಸ್ತು ಪ್ರದರ್ಶನ ಪ್ರಾಧಿಕಾರದೊಂದಿಗೆ ಒಡಂಬಡಿಕೆ ಮಾಡಿಕೊಂಡು ಮುಂದಿನ ದಿನಗಳಲ್ಲಿ ಬಯೋಡೀಸೆಲ್, ಕಂಪ್ರೆಸ್ಡ್ ಬಯೋಗ್ಯಾಸ್ ಉತ್ಪಾದಿಸಿ ವಿತರಣೆ ಕುರಿತು ಕಾರ್ಯ ಯೋಜನೆ ರೂಪಿಸಬಹುದಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಎಲ್.ಶಿವಶಂಕರ್, ಹುಣಸೂರು ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಫಯಾಜ್, ಮಂಡಳಿಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಬಿ.ಆರ್.ಲೋಹಿತ್, ಯೋಜನಾ ಸಲಹೆಗಾರ ಡಾ.ಜಿ.ಎನ್.ದಯಾನಂದ, ಎನ್ ಐ ಇ ಕಾಲೇಜಿನ ಬಿಆರ್ ಐಡಿಸಿ ಕೇಂದ್ರದ ಸಂಯೋಜಕ ಡಾ.ಶ್ಯಾಮ್ ಸುಂದರ್, ಸಹೋದ್ಯೋಗಿಗಳಾದ ಶಿವಪ್ರಕಾಶ್, ಪ್ರಸಾದ್, ಡೀಡ್ ಸಂಸ್ಥೆಯ ಸಂಚಾಲಕ ಪ್ರಕಾಶ್ ಮುಂತಾದವರು ಭಾಗವಹಿಸಿದ್ದರು.
